September 6, 2026
Mumbai News Kannada
ಲೇಖನ

ಶತಮಾನೋತ್ಸವ ಸಂಭ್ರಮದಲ್ಲಿ ಮುಲ್ಕಿ ಮಾನಂಪಾಡಿ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ.





ಬರಹ:ಉಮೇಶ್ ಕೆ. ಅಂಚನ್

ಪುಣ್ಯಕ್ಷೇತ್ರ ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಸಮೀಪದಲ್ಲಿರುವ ಮಾನಂಪಾಡಿ ಶಾಲೆಯೆಂದೇ ಹೆಸರು ಪಡೆದ ಮುಲ್ಕಿ ಮಾನಂಪಾಡಿ ದಕ್ಷಿಣ ಕನ್ನಡ ಜಿಲ್ಲಾ ಪಂ.ಶಾಲೆಯು ಶತಮಾನ ಪೂರೈಸಿದ್ದು ಇದರ ಸಮಾರಂಭವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಬರುವ ಡಿಸೆಂಬರ್ 6ರಂದು ದಿನಪೂರ್ತಿ ವಿಜ್ರಂಭಣೆಯಿಂದ ಆಚರಿಸಲು ಅಣಿಯಾಗಿದೆ.
ಪರಿಸರದ ಮಕ್ಕಳಿಗೆ ಸಮೀಪದಲ್ಲಿ ವಿದ್ಯೆ ಪಡೆಯಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಮುಲ್ಕಿ ಮಾನಂಪಾಡಿ ಗ್ರಾಮದ ನಿವಾಸಿ ಸುಬ್ಬಿ ಸೇರಿಗಾರ್ತಿಯವರು ತಮ್ಮ ಹುಲ್ಲಿನ ಮನೆಯಲ್ಲಿ ಶಾಲೆಯನ್ನು 1925ರಲ್ಲಿ ಆರಂಭಿಸಿದರು.ಈ ಶಾಲೆಯು ಅದೆಷ್ಟೋ ಊರಿನ ಬಡ ಜನರ ಮಕ್ಕಳ ದಾರಿದೀಪವಾಗಿ ಬೆಳೆದು ಇಲ್ಲಿ ಓದಿದ ಸಹಸ್ರ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಪಡೆದು ದೇಶವಿದೇಶದಲ್ಲಿ ಉತ್ತಮ ರೀತಿಯಲ್ಲಿ ತಮ್ಮ ಭವಿಷ್ಯವನ್ನು ಕಂಡು ಕೊಂಡಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಾಗ ಸೇರಿಗಾರ್ತಿಯವರ ಮನೆಯಲ್ಲಿ ಜಾಗದ ತೊಂದರೆಯಾದಾಗ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಊರಿನ ಜನರ ಸಹಕಾರದಿಂದ ಶಾಲೆಗೆ ಸ್ವಂತ ಕಟ್ಟಡ ನಿರ್ಮಿಸಲಾಯಿತು.
ಒಂದನೇ ತರಗತಿಯಿಂದ ಏಳನೇ ತರಗತಿ ತನಕ ಯತಾರೀತಿ ಕನ್ನಡ ಮಾಧ್ಯಮದಲ್ಲಿ ಶಾಲೆಯು ನಡೆಯುತ್ತಿದ್ದು ಶಾಲೆಯಲ್ಲಿ ಈಗಾಗಲೇ ಉಚಿತವಾಗಿ ಎಲ್ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿ ಮತ್ತು ಎರಡನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವು ಸರಕಾರದ ಅನುಮತಿಯಿಂದ ನಡೆಯುತ್ತಿದೆ. ಶಾಲೆಯು ಇನ್ನೂ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಅಗತ್ಯವಾದ ಕೆಲವೊಂದು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ .ಮಕ್ಕಳ ದಾಖಲಾತಿ ಹೆಚ್ಚಿಸಲು ದೂರದ ವಿದ್ಯಾರ್ಥಿಗಳನ್ನು ಕರೆತರುವ ವಾಹನದ ವ್ಯವಸ್ಥೆಯು ಅನಿವಾರ್ಯವಾಗಿದೆ .ಇದಕ್ಕಾಗಿ ಶಾಲಾ ಎಸ್.ಡಿ.ಎಮ್.ಸಿ ಶಿಕ್ಷಕರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಬಹಳಷ್ಟು ಶ್ರಮ ವಹಿಸುತ್ತಿದ್ದಾರೆ .ಈ ನಿಟ್ಟಿನಲ್ಲಿ ಶತಮಾನೋತ್ಸವ ಸಮಿತಿಯು ಶತಮಾನೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಿ ಶಾಲೆಯ ಅಭಿವೃದ್ಧಿಗಾಗಿ “ವಿದ್ಯಾನಿಧಿಯ” ಸಂಗ್ರಹದ ನಿರ್ಧಾರವನ್ನು ಮಾಡಿದೆ. ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ಜನಪ್ರತಿನಿಧಿಗಳು ದಾನಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಈ ಕೆಲಸದಲ್ಲಿ ಕೈಜೋಡಿಸಿ ಸಮಿತಿಯ ಕನಸನ್ನು ನನಸಾಗಿಸಲು ಸಹಕರಿಸಲು ವಿನಂತಿಸಲಾಗಿದೆ.
ಶತಮಾನೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತ ಪ್ರಯಾಣದ ವ್ಯವಸ್ಥೆ ಹಾಗೂ ಇತರ ಸವಲತ್ತುಗಳಿಗಾಗಿ ವಿದ್ಯಾನಿಧಿಯನ್ನು ಪ್ರಾರಂಭಿಸುವ ಉದ್ದೇಶದ ಮನವಿ ಪತ್ರವನ್ನು ದಿನಾಂಕ 31.08.2025 ರಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರ ದಿವ್ಯ ಹಸ್ತದಿಂದ ಬಿಡುಗಡೆ ಮಾಡಲಾಗಿದೆ. ಶತಮಾನೋತ್ಸವದ ಅಂಗವಾಗಿ ದಿನಾಂಕ 12.10.2025 ರಂದು ಲಯನ್ಸ್ ಕ್ಲಬ್ ನ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣೆ ,ಕನ್ನಡಕ ವಿತರಣೆ ಹಾಗೂ ಸಕ್ಕರೆ ಕಾಯಿಲೆ ಪರೀಕ್ಷಾ ಶಿಬಿರವನ್ನು ನಡೆಸಲಾಗಿದ್ದು ಇದರಲ್ಲಿ ಸುಮಾರು 200 ಮಿಕ್ಕಿ ಊರಿನ ಜನರು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
ದಿನಾಂಕ 23.11.2025 ರಂದು ರವಿವಾರ ಬೆಳಗ್ಗೆ 9 ಗಂಟೆಗೆ ಹಳೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಊರಿನ ಕ್ರೀಡಾಭಿಮಾನಿಗಳಿಗೆ ಹಾಗೂ ಸ್ಪರ್ಧಿಗಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವನ್ನು ನೀಡಲಾಗಿದೆ.
ಡಿಸೆಂಬರ್ 6ರ ಬೆಳಗ್ಗೆ ಅತಿಥಿ ಗಣ್ಯರ ಸಮ್ಮುಖದಲ್ಲಿ ಎಂ ಆರ್ ಪಿ ಎಲ್ ನ ಸಿ.ಎಸ್.ಆರ್ ಅನುದಾನದಲ್ಲಿ ನಿರ್ಮಾಣವಾದ ಶತಮಾನೋತ್ಸವ ಕಟ್ಟಡದ ಉದ್ಘಾಟನೆ ನಡೆಯಲಿದೆ. ತದನಂತರ 9.30 ಕ್ಕೆ ಸರಿಯಾಗಿ ಹಳೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಛದ್ಮವೇಷ ಸ್ಪರ್ಧೆ,ಸಂಜೆ ಗಂಟೆ 4 ರಿಂದ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ತದನಂತರ ಶಾಲೆಯ ಹಳೆ ವಿದ್ಯಾರ್ಥಿಗಳಿಂದ, ಗ್ರಾಮಸ್ಥರಿಂದ ಮಾನಾಡಿ ಫ್ರೆಂಡ್ಸ್ ಕ್ಲಬ್ ಹಾಗೂ ಮಹಿಳಾ ಮಂಡಳಿಯವರಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ. ಸಂಜೆ ಏಳು ಗಂಟೆಗೆ ಗಣ್ಯರ ಉಪಸ್ಥಿತಿಯಲ್ಲಿ ಶತಮಾನೋತ್ಸವದ ಸಭಾ ಕಾರ್ಯಕ್ರಮದ ಉದ್ಘಾಟನೆಯು ನಡೆಯಲಿದ್ದು ಈ ಸಂದರ್ಭದಲ್ಲಿ ಸಾಧಕ ಹಳೆ ವಿದ್ಯಾರ್ಥಿಗಳಿಗೆ ಹಾಗೂ ಸೇವೆ ಸಲ್ಲಿಸಿದ ಗುರುಗಳಿಗೆ ಗೌರವಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಊರ ಪರವೂರ ಗಣ್ಯರು ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರು ಉದ್ಘಾಟಿಸಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕರಾದ ಉಮಾನಾಥ ಕೋಟ್ಯಾನ್ ಅವರು ವಹಿಸಿಕೊಳ್ಳಲಿದ್ದಾರೆ. ಸುರತ್ಕಲ್ ನ ಮಧ್ಯ ಗ್ರಾಮದ ಸರಕಾರಿ ಶಾಲೆಯನ್ನು ಮಾದರಿ ಶಾಲೆಯಾಗಿ ಪರಿವರ್ತಿಸಿ ಶಿಕ್ಷಣ ಕ್ಷೇತ್ರಕ್ಕೆ ಆದರ್ಶರಾಗಿರುವ ಉದ್ಯಮಿ ಸನ್ಮಾನ್ಯ ಶ್ರೀ ಕೆಎಂ ಶೆಟ್ಟಿ ಇವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು . ಮನೋರಂಜನಾ ಕಾರ್ಯಕ್ರಮವಾಗಿ ರಾತ್ರಿ ಗಂಟೆ 10ರಿಂದ ವಿಜಯ ಕಲಾವಿದರು ಕಿನ್ನಿಗೋಳಿ ಇವರಿಂದ ಬೈರಸ್ ಭಾಸ್ಕರೆ ಎನ್ನುವ ತುಳು ಹಾಸ್ಯಮಯ ನಾಟಕದ ಪ್ರದರ್ಶನ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳು, ದೇಶವಿದೇಶಗಳಲ್ಲಿ ನೆಲೆಸಿರುವ ಮುಲ್ಕಿ ಮಾನಂಪಾಡಿ ಆಸುಪಾಸಿನ ಗ್ರಾಮಸ್ಥರು, ಶಿಕ್ಷಣ ಪ್ರಿಯರು ಆಗಮಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿಬೇಕಾಗಿ ಎಸ್.ಡಿ.ಎಮ್ ಅಧ್ಯಕ್ಷರು ಮತ್ತು ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ
ಶತಮಾನೋತ್ಸವ ಸಮಿತಿಯ ಗೌರವಧ್ಯಕ್ಷರಾದ ಸತೀಶ್ ಅಂಚನ್(9535204350) ಹಾಗೂ ಅಧ್ಯಕ್ಷರಾದ ನವೀನ್ ಶೆಟ್ಟಿ ಪರ್ಮರ್ ಗುತ್ತು (9611651445) ಇವರನ್ನು ಸಂಪರ್ಕಿಸಬಹುದೆಂದು ಕೋರಲಾಗಿದೆ.



Related posts

ರಾಜಪ್ರಭುತ್ವದ ಕನ್ನಡಿಯಲ್ಲಿ ಕಂಡ ‘ಕಾಮಾಗ್ನಿಮಿತ್ರ’

Chandrahas

ಉಡುಪಿ ಜಿಲ್ಲೆಯ ಗರೋಡಿಗಳಲ್ಲಿ ಅಗೆಲು ಸೇವೆ ದಿವಸ ಹೌಂದೆ ರಾಯನ ಓಲಗ ವಿಶೇಷ.

Mumbai News Desk

ಇರಾನ್-ಇಸ್ರೇಲ್ ಸಂಘರ್ಷ: ಕಾರಣಗಳು, ಇತ್ತೀಚಿನ ಬೆಳವಣಿಗೆ ಮತ್ತು ಭಾರತದ ಮೇಲಿನ ಪ್ರಭಾವ

Mumbai News Desk

ದೇಶದೆಲ್ಲಿಡೆ ಜನರನ್ನು ಕಾಡುತ್ತಿರುವ ‘ಗ್ಯಾಸ್ ಟ್ರಬಲ್’ : ಕಾರಣಗಳು ಮತ್ತು ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳು

Mumbai News Desk

ಮಂಗಳೂರು 2010ರ ವಿಮಾನ ದುರಂತ: ಒಂದು ವಿಶ್ಲೇಷಣಾತ್ಮಕ ವರದಿ

Mumbai News Desk

ದುಬೈನಲ್ಲಿ ಟೀಮ್ ಇಂಡಿಯಾದ ಐವರು ಸ್ಪಿನ್ನರ್ ಗಳ ರಣನೀತಿಯ ‘ಯಶಸ್ಸಿನ ರೂವಾರಿ ’ವರುಣ್ ಚಕ್ರವರ್ತಿ

Mumbai News Desk