ಧಾರವಾಹಿ 49
ಮಾರ್ಗರೆಟ್, ಮುಂಬೈಗೆ ಹಿಂದಿರುಗಿದ ಎರಡು ತಿಂಗಳ ನಂತರ ಶಾರದಾ ಊರಿಗೆ ಬಂದಳು. ರೌಡಿಗಳಂತಿದ್ದ ಮೂವರು ಯುವಕರು ಅವಳೊಂದಿಗಿದ್ದರು. ಲಕ್ಷ್ಮಣನಿಗೆ ಮಗಳ ಕಥೆ ಗೊತ್ತಿರಲಿಲ್ಲ. ಗೊತ್ತಾಗುತ್ತಿದ್ದರೂ ಏನೂ ಪ್ರಯೋಜನವಿರಲ್ಲಿಲ್ಲ. ಅವನಾಗಲೇ ತನ್ನ ಸಂಸಾರದ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ಎಷ್ಟೋ ಕಾಲವಾಗಿತ್ತು. ಮೂರು ಹೊತ್ತೂ ಕುಡಿಯುತ್ತ ಕಾಲ ಕಳೆಯುತ್ತಿದ್ದ. ಇಂದು ಮಗಳ ಕೊರಳು ಮತ್ತು ಕೈಕಾಲುಗಳಲ್ಲಿ ಮಿಂಚುತ್ತಿದ್ದ ಬೆಳ್ಳಿ, ಬಂಗಾರಗಳನ್ನು ಕಂಡವನು ಹೆಮ್ಮೆಯಿಂದ ಬೀಗಿಬಿಟ್ಟ. ಆದರೆ ಅವಳ ಸಂಪಾದನೆಯ ಮೂಲ ಯಾವುದೆಂದು ಕೇಳುವ ಮನಸ್ಸು ಮಾಡಲಿಲ್ಲ. ಶಾರದಾ ತನ್ನೊಂದಿಗೆ ಬಂದಿದ್ದವರಲ್ಲೊಬ್ಬ ಕುಳ್ಳಗಿನ, ಎಣ್ಣೆಗಪ್ಪಿನ ಯುವಕನನ್ನು ತನ್ನ ‘ಗಂಡ’ ಎಂದು ಅಪ್ಪನಿಗೆ ಅಳುಕುತ್ತ ಪರಿಚಯಿಸಿದಳು. ಆಗ ಮಾತ್ರ ಅವನು ಅವಕ್ಕಾದ. ಬಳಿಕ ಏನೋ ಯೋಚಿಸಿ ಸುಮ್ಮನಾದ. ಆದರೆ ಆ ಕುರಿತು ಆಗಲೂ ಚಕಾರವೆತ್ತಲಿಲ್ಲ. ಅಕ್ಕನನ್ನು ಕಂಡ ಪ್ರಮೀಳಾಳಿಗೆ ಸಂತಸದಿoದ ಮಾತೇ ಹೊರಡಲಿಲ್ಲ. ಅವಳನ್ನು ಬಿಗಿಯಾಗಿ ಅಪ್ಪಿಕೊಂಡು ಖುಷಿಪಟ್ಟಳು. ಅವಳೂ ಇತ್ತೀಚೆಗೆ ಮೈನೆರೆದು ಚೆಂದದ ಹುಡುಗಿಯಾಗಿದ್ದಳು. ಆದ್ದರಿಂದ ಶಾರದಾಳೊಡನೆ ಬಂದಿದ್ದ ಯುವಕನೊಬ್ಬನ ವಕ್ರದೃಷ್ಟಿಯು ಅದಾಗಲೇ ಅವಳ ಮೇಲೆ ಬಿದ್ದಿತ್ತು. ಅವನ ಕಿರಾತಕ ನೋಟ ತನ್ನನ್ನು ಅಡಿಯಿಂದ ಮುಡಿಯವರೆಗೆ ಚುಚ್ಚಿ ಜೊಲ್ಲು ಸುರಿಸುತ್ತ ಹಿಂಬಾಲಿಸುತ್ತಿದ್ದುದನ್ನು ಕಂಡವಳಲ್ಲಿ ಅಸಹ್ಯ ಮೂಡಿತ್ತು. ಹಾಗಾಗಿ ಅವಳು ಆದಷ್ಟು ಅವನ ದೃಷ್ಟಿಯಿಂದ ತಪ್ಪಿಸಿಕೊಳ್ಳುತ್ತ ಅಕ್ಕನೊಂದಿಗೆ ಬೆರೆಯುತ್ತಿದ್ದಳು.
‘ಅಕ್ಕ, ನೀನು ಮರಳಿ ಬೊಂಬಾಯಿಗೆ ಹೋಗುವುದು ಬೇಡಕ್ಕಾ, ಇಲ್ಲೇ ಇರಕ್ಕಾ…!’ ಎಂದು ಗೋಗರೆಯುತ್ತಿದ್ದಳು. ಆದರೆ ಅಕ್ಕನಿಗೆ ಊರೆಂದರೆ ಸಾವಿರ ಮೈಲು ದೂರವಾಗಿತ್ತು ಎಂಬುದು ಆ ಮುಗ್ಧೆಗೆ ಹೇಗೆ ತಿಳಿಯಬೇಕು?
‘ಅಯ್ಯೋ, ನಾನೀಗ ಮದುವೆಯಾದವಳು ಮಾರಾಯ್ತೀ. ಗಂಡನ ಮನೆಯಲ್ಲೇ ಇರಬೇಕಲ್ಲವಾ. ಆದರೂ ಆಗಾಗ ಬಂದು ಹೋಗುತ್ತ, ಹಣವನ್ನೂ ಕಳುಹಿಸುತ್ತಿರುತ್ತೇನೆ. ನೀನು ಚೆನ್ನಾಗಿ ಓದಿಕೊಳ್ಳಬೇಕು ಆಯ್ತಾ? ಕಾಲೇಜು ಮುಗಿದ ಮೇಲೆ ಎಲ್ಲರೂ ಬೊಂಬಾಯಿಗೆ ಬಂದು ನನ್ನೊಂದಿಗೇ ಇರುವ ವ್ಯವಸ್ಥೆ ಮಾಡುತ್ತೇನೆ!’ ಎಂದು ಗತ್ತಿನಿಂದ ಹೇಳಿ ತಂಗಿಯ ಮನಸ್ಸಿಗೆ ಮುದ ನೀಡಿದಳು. ಪ್ರಮೀಳಾಳಿಗೂ ಮೇರೆ ಮೀರಿದ ಆನಂದವಾಯಿತು. ಆದರೆ ಶಾರದಾ ಮಾತ್ರ ಆ ದಿನ ಬೆಳಗ್ಗಿನಿಂದ ಸಂಜೆಯವರೆಗೆ ಚಡಪಡಿಸುತ್ತಲೇ ಕಳೆದಳು. ‘ಇನ್ನೊಂದೆರಡು ದಿನ ಇದ್ದು ಹೋಗಮ್ಮಾ…!’ ಎಂದು ಸರೋಜ ಮಮತೆಯಿಂದ ಅಂದಳು. ‘ಅಯ್ಯಯ್ಯೋ ಇಲ್ಲಮ್ಮಾ…! ನಮ್ಮವರಿಗೆ ಇಂಥ ಕಡೆಯೆಲ್ಲ ಇದ್ದು ಅಭ್ಯಾಸವಿಲ್ಲ. ಅದಕ್ಕಾಗಿಯೇ ಶಿವಕಂಡಿಕೆಯ ಲಾಡ್ಜ್ವೊಂದರಲ್ಲಿ ಉಳಿದುಕೊಂಡಿದ್ದೇವೆ. ಅವರಿಗೆ ಮುಂಬೈಯಲ್ಲಿ ದೊಡ್ಡ ಜವಾಬ್ದಾರಿಯಿದೆ. ನಾಳೆ ಒಂದು ದಿನ ಶಿವಕಂಡಿಕೆಯನ್ನು ನೋಡಿಕೊಂಡು ರಾತ್ರಿಯೇ ಹೊರಡಬೇಕು!’ ಎಂದು ಅವಸರಿಸಿದಳು. ಸರೋಜಾಳಿಗೆ ನಿರಾಶೆಯಾಯಿತು. ಆದರೂ ಮಗಳು ಸುಖವಾಗಿದ್ದರೆ ಸಾಕು ಎಂದುಕೊoಡು ಸುಮ್ಮನಾದಳು. ಅದಕ್ಕೆ ಸರಿಯಾಗಿ ಶಾರದಳೊಂದಿಗಿದ್ದ ಯುವಕರು ಕೂಡಾ ಗಂಗರಬೀಡಿನ ಸಣ್ಣ ಪೇಟೆಯನ್ನು ಅಪರಾಹ್ನದ ಹೊತ್ತಿಗೆ ಸುತ್ತಾಡಿ ಬಂದವರು ಉದಾಸೀನರಾಗಿ ಕೂಡಲೇ ಹೊರಡುವಂತೆ ಶಾರದಳೊಡನೆ ಸಿಡಿಮಿಡಿ ಗುಟ್ಟತೊಡಗಿದರು. ಅವಳೂ ಅದೇ ನೆಪವನ್ನಿಟ್ಟುಕೊಂಡು ಅಪ್ಪ, ಅಮ್ಮನ ಕೈಗೆ ಒಂದಿಷ್ಟು ರೂಪಾಯಿಗಳನ್ನು ತುರುಕಿಸಿ, ‘ನೀವು ಯಾವುದಕ್ಕೂ ಚಿಂತಿಸಬಾರದು. ಆಗಾಗ ಪತ್ರ ಬರೆಯುತ್ತಿರುತ್ತೇನೆ. ಪ್ರತಿ ತಿಂಗಳು ಹಣನೂ ಕಳುಹಿಸುತ್ತೇನೆ. ಪ್ರಮೀಳಾಳನ್ನು ಚೆನ್ನಾಗಿ ಓದಿಸಿ!’ ಎಂದು ಆತುರಾತುರವಾಗಿ ಹೇಳಿ ಕೂಡಲೇ ಹೊರಟು ಹೋದಳು.
ಆ ವರ್ಷದ ಚಳಿಗಾಲವು ತಣ್ಣಗೆ ಆರಂಭವಾಗಿತ್ತು. ಅದು ಶ್ರೀಧರ ಶೆಟ್ಟರ ತೋಟದ ಬಹುತೇಕ ಮರಮಟ್ಟುಗಳ ವಿರಾಮದ ಕಾಲವೂ ಆಗಿತ್ತು. ಅವುಗಳೆಲ್ಲ ತಂತಮ್ಮ ನಿತ್ಯದ ಚೈತನ್ಯಪೂರ್ಣ ಚಟುವಟಿಕೆಗಳನ್ನು ಮಂದಗೊಳಿಸುತ್ತ ದಟ್ಟ ಎಲೆಗಳನ್ನುದುರಿಸಿಕೊಂಡು ಬೋಳು ಬೋಳಾಗಿ ವಿಶ್ರಾಂತಿಗೆ ಜಾರಿದ್ದವು. ಬಾಳೆ, ಅಡಕೆ ಮತ್ತು ತೆಂಗಿನಮರಗಳು ತಂತಮ್ಮ ಹಸಿರನ್ನು ನಸು ಹಳದಿಗೆ ಬದಲಾಯಿಸಿಕೊಂಡು ಜಡವಾಗಿ ಉಸಿರಾಡುತ್ತ ಕಾಲ ಕಳೆಯುತ್ತಿದ್ದವು. ಅತ್ತ ಶೆಟ್ಟರು ಕೂಡಾ ಘಟ್ಟದ ಮೇಲಿನ ಎಸ್ಟೇಟಿನಲ್ಲಿ ಶೀತಕಾಲದ ಸವಿಯನ್ನು ಬೆಚ್ಚಗೆ ಅನುಭವಿಸುತ್ತ ಕುಳಿತಿದ್ದರು. ಗಂಗರಬೀಡಿನ ತೋಟದ ಮನೆಯಲ್ಲೀಗ ಮಗ ಜಯಂತ ಮತ್ತವನ ಒಂದಷ್ಟು ಶ್ರೀಮಂತ ಗೆಳೆಯರ ಕಾರೋಬಾರು ನಡೆಯುತ್ತಿತ್ತು. ದಿನನಿತ್ಯ ಅಂದ ಚಂದದ, ತೆಳ್ಳನೆ ಬೆಳ್ಳನೆಯ ಲಲನೆಯರ ಓಡಾಟ ಮತ್ತು ಫಾರಿನ್ ಶರಾಬುಗಳ ಸರಬರಾಜು ಹಾಗೂ ಗೌಜಿಗದ್ದಲಗಳು ಇಡೀ ತೋಟವನ್ನು ಆವರಿಸಿಬಿಟ್ಟಿದ್ದವು. ಬಂಗಲೆಯೊಳಗಿನ ಈಜುಕೊಳವು ಹಗಲು ರಾತ್ರಿಯೆನ್ನದೇ ಜಯಂತನ ತಂಡದ ಜಲಕ್ರೀಡೆಗಳಿಗೆ ಶಕ್ತಿ ಮೀರಿ ಸಾಥ್ ನೀಡುತ್ತಿತ್ತು. ಆದರೂ ಆಗಾಗ ಮಲಿನಗೊಳ್ಳುತ್ತ ತನ್ನೊಳಗಿನ ಹಳೆಯ ನೀರನ್ನು ಚೆಲ್ಲಿಕೊಂಡು ಹೊಸತು ತುಂಬಿಕೊಳ್ಳುತ್ತ ಶುದ್ಧವಾಗಿರಲು ಹೆಣಗುತ್ತಿತ್ತು. ತೋಟದ ಆಳುಗಳು ವಾರಕ್ಕೆ ಒಂದೆರಡು ಬಾರಿ ಬರುತ್ತಿದ್ದವರು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತ ಮರಗಳ ನೆರಳಲ್ಲಿ ಕುಳಿತು ಪಟ್ಟಾಂಗ ಹೊಡೆದು ಸಂಜೆಯಾಗುತ್ತ ಹೊರಟು ಹೋಗುತ್ತಿದ್ದರು.
ಇತ್ತ ಲಕ್ಷ್ಮಣ ದುಡಿತಕ್ಕೆ ದೂರವಾಗಿ ಕುಡಿತಕ್ಕೆ ಹತ್ತಿರವಾಗಿ ಬದುಕುತ್ತಿದ್ದ. ಸರೋಜಾಳೊಬ್ಬಳೇ ಸಂಸಾರದ ಜವಾಬ್ದಾರಿಯನ್ನು ಹೊತ್ತು ಬಸವಳಿದು ಬಿಟ್ಟಿದ್ದಳು. ಸೊಸೈಟಿಯ ಅಕ್ಕಿ ಗೋಧಿ, ಸಕ್ಕರೆ ಮತ್ತು ಸೀಮೆಎಣ್ಣೆಗಳೇ ಅವಳಿಗೀಗ ಆಸರೆಯಾಗಿದ್ದವು. ತಿಂಗಳಿಗೊಮ್ಮೆ ನ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರ ಹೊತ್ತು ತಂದು ಮನೆ ಖರ್ಚಿಗೆ ಬೇಕಾಗುವಷ್ಟನ್ನು ಇಟ್ಟುಕೊಂಡು ಹೆಚ್ಚಿನದ್ದನ್ನು ಅಕ್ಕಪಕ್ಕದ ಕಿರಿಸ್ತಾನರಿಗೆ ಅಧಿಕ ಬೆಲೆಗೆ ಮಾರುತ್ತ ಮನೆಗೆ ಬೇಕಾದ ಇತರ ಸಾಮಾನುಗಳನ್ನು ತರುತ್ತಿದ್ದಳು. ತೋಟದ ಕೆಲಸವೂ ಕಡಿಮೆಯಿತ್ತು. ಬೀಡಿಯೂ ಸರಿಯಾಗಿ ಬ್ರಾಂಚಿಗೆ ಹೋಗುತ್ತಿರಲಿಲ್ಲ. ಹೀಗಾಗಿ ಅವಳ ಕುಟುಂಬದ ಈ ಚಳಿಗಾಲದ ಹೆಚ್ಚಿನ ದಿನಗಳು ಅರೆಬರೆ ಹೊಟ್ಟೆಯಲ್ಲೋ ಅವಲಕ್ಕಿ, ಬ್ರೆಡ್ಡು ಬನ್ನುಗಳಿಂದಲೋ ಅಥವಾ ಕಿರಿಸ್ತಾರರ ಮನೆಗಳಲ್ಲಿ ಮಿಕ್ಕುವ ಊಟ ತಿಂಡಿಗಳಿoದಲೋ ಕಳೆಯುತ್ತಿದ್ದವು. ಆವತ್ತು ಸಂಜೆ ಸೂರ್ಯ ಮುಳುಗುತ್ತ ಹದವಾದ ಚಳಿ ಆರಂಭವಾಯಿತು. ಹುಣ್ಣಿಮೆಯ ಮೃದು ಬೆಳದಿಂಗಳು ಗಂಗರಬೀಡುವನ್ನು ಕೋಮಲವಾಗಿ ಆವರಿಸತೊಡಗಿತು. ಲಕ್ಷ್ಮಣ ಮತ್ತು ಸರೋಜಾಳ ಮನಸ್ಸುಗಳು ಬಹಳ ಕಾಲದ ನಂತರ ಯಾವುದೋ ಹೊಸ ಚೈತನ್ಯದಿಂದ ಅರಳಿ ತೊನೆಯುತ್ತಿದ್ದವು. ಇಂಥ ಸೊಬಗಿನ ಇರುಳಿನಲ್ಲಿ ಮದಿರೆಯ ಸಾಂಗತ್ಯವಿಲ್ಲದ್ದರೆ ಜೀವನಕ್ಕೇನು ಅರ್ಥವಿದೆ? ಎಂದು ಇಬ್ಬರಿಗೂ ಅನ್ನಿಸುತ್ತಿತ್ತು. ಆದರೆ ಕೈಯಲ್ಲಿ ಚಿಕ್ಕಾಸೂ ಇರಲಿಲ್ಲ. ಹಾಗಾಗಿ ಮಗಳೊಂದಿಗೆ ಅಂಗಳದಲ್ಲಿ ಕುಳಿತು ನಿರಾಸಕ್ತಿಯಿಂದ ಹರಟುತ್ತ ಚಡಪಡಿಸುತ್ತಿದ್ದರು. ಅಷ್ಟೊತ್ತಿಗೆ ಪ್ರಮೀಳಾ, ‘ಅಮ್ಮಾ ಹಸಿವಾಗುತ್ತಿದೆ. ಬಡಿಸಮ್ಮಾ…!’ ಎಂದಳು.
‘ಅಯ್ಯೋ, ನೀನೇ ಹೋಗಿ ಬಡಿಸಿಕೊಂಡು ಉಣ್ಣು ಮಾರಾಯ್ತಿ…! ಹಾಗೇ ನಮಗೂ ಸ್ವಲ್ಪ ಒಣ ಮೀನು ಒಲೆಗೆ ಹಾಕಿ ಸುಟ್ಟಿಡು’ಎಂದಳು ಸರೋಜ ಬೇಸರದಿಂದ. ಮಗಳು ಉದಾಸೀನದಿಂದ ಎದ್ದು ಹೋದಳು. ಇತ್ತ ಲಕ್ಷ್ಮಣನಿಗೆ ಏನಾದರಾಗಲಿ ಈ ಹೊತ್ತು ಸ್ವಲ್ಪವಾದರೂ ಕುಡಿಯಲೇಬೇಕು ಎಂದೆನಿಸಿಬಿಟ್ಟಿತು.
ಆದ್ದರಿಂದ ಅವನು, ‘ಸರೂ…!’ ಎಂದ ಮೃದುವಾಗಿ.
‘ಏನೂ…?’ ಎಂದಳವಳು ಅದೇ ಧಾಟಿಯಲ್ಲಿ.
‘ಅಲ್ಲ, ನಾವು ಹೀಗೆ ನೆಮ್ಮದಿಯಿಂದ ಕುಳಿತು ಮಾತಾಡದೆ ಎಷ್ಟು ಕಾಲವಾಯ್ತಲ್ಲ ಮಾರಾಯ್ತೀ…?’ ಎಂದ ನಗುತ್ತ.
ಅವಳು, ‘ಹ್ಞೂಂ ಹೌದು!’ ಎಂದಳು ಅನ್ಯಮನಸ್ಕಳಾಗಿ.
‘ತಿಂಗಳ ಬೆಳಕು ಎಷ್ಟು ಚೆನ್ನಾಗಿದೆ ಅಲ್ಲವಾ…?’
‘ಹ್ಞೂಂ…!’
‘ಸ್ವಲ್ಪ ಕುಡಿಯಬೇಕೆನಿಸುವುದಿಲ್ಲವಾ…?’ ಲಕ್ಷ್ಮಣ ನಿಧಾನವಾಗುಸುರಿದ.
ಅವಳೂ ಅದೇ ಧ್ಯಾನದಲ್ಲಿದ್ದವಳು, ‘ಹ್ಞೂಂ…ಹೌದು ಮಾರಾಯ್ರೇ…! ಆದರೆ ಹಣವೆಲ್ಲಿದೆ ಹೇಳಿ? ಆಂಥೋನಿಗೂ ಒಂದು ವಾರದ ಬಾಕಿ ಕೊಡಲಿಕ್ಕಿದೆ ಗೊತ್ತುಂಟಾ!’ ಎಂದಳು ಅಸಹನೆಯಿಂದ.
‘ತಾಮಸನ ಹತ್ರ ಕೇಳು. ಅವನು ಕೊಡಬಹುದು…!’ ಎಂದ ಲಕ್ಷ್ಮಣ ರಪ್ಪನೆ. ಆಗ ಅವಳಿಗೂ ‘ಹೌದಲ್ಲವಾ…?’ ಎಂದೆನಿಸಿತು. ಆದರೆ ಅವನನ್ನು ನೆನೆದವಳು ಒಂಥರಾ ಬೆವರಿದಳು. ಅವಳು ಅವನ ಮನೆಗೆ ಹೋದಾಗಲೆಲ್ಲ ಅವನು ನೋಡುತ್ತಿದ್ದ ರೀತಿ ಮತ್ತು ಬೇಕು ಬೇಕೆಂದೇ ಅವನು ಕೆಲಸದಾಳುಗಳೊಡನೆ ದ್ವಂದ್ವಾರ್ಥದಲ್ಲಿ ಆಡುತ್ತಿದ್ದ ತಮಾಷೆಯ ಅಶ್ಲೀಲ ಮಾತುಗಳು ಅವಳಿಗೂ ಅರ್ಥವಾಗುತ್ತಿತ್ತು. ಹೆಣ್ಣುಮಕ್ಕಳ ವಿಷಯದಲ್ಲಿ ಅವನ ಒರಟುತನವನ್ನೂ, ರಾಸಲೀಲೆಗಳನ್ನೂ ಇಡೀ ಊರಿಗೂರೇ ಆಡಿಕೊಳ್ಳುತ್ತ ಛೀಮಾರಿ ಹಾಕುತ್ತಿದ್ದುದು ಕೂಡಾ ಅವಳಿಗೆ ತಿಳಿದಿತ್ತು. ಹಾಗಾಗಿ ಕೆಲವೊಮ್ಮೆ ಅವನ ಮೇಲೆ ತನ್ನೊಳಗೂ ಎಂಥದ್ದೋ ಉದ್ವಿಗ್ನ ಭಾವವೊಂದು ಮಿಂಚಿ ಮರೆಯಾಗುತ್ತಿದ್ದುದನ್ನು ಅವಳೂ ಗಮನಿಸಿ ಭಯಪಟ್ಟಿದ್ದಳು. ಈಗ ಅದನ್ನೆಲ್ಲ ನೆನೆದವಳು, ‘ಥೂ! ಅವನ ಹತ್ರ ಬೇಡ ಮಾರಾಯ್ರೆ. ಬಾಯಮ್ಮನ ಹತ್ರ ಕೇಳುತ್ತೇನೆ!’ ಎನ್ನುತ್ತ ಎದ್ದಳು. ಲಕ್ಷ್ಮಣನಿಗೆ ಹೋದ ಜೀವ ಬಂದoತಾಯಿತು. ನೀನು ಯಾರ ಹತ್ರನಾದರೂ ಕೇಳು ಮಾರಾಯ್ತೀ ನನಗೇನು? ಒಟ್ಟಾರೆ ನನ್ನ ಹೊಟ್ಟೆಗೊಂದಿಷ್ಟು ಗಂಗಸರ ಬಿದ್ದರೆ ಅಷ್ಟೇ ಸಾಕು! ಎಂದುಕೊಳ್ಳುತ್ತ ಅವನು ಎದ್ದು ಹೋಗಿ ಕಪ್ಪುಗಟ್ಟಿದ ಸ್ಟೀಲಿನ ಚೆಂಬೊoದನ್ನು ತಂದು ಹೆಂಡತಿಯ ಕೈಗಿತ್ತ. ಅವಳು ಅದನ್ನು ಹಿಡಿದುಕೊಂಡು ತಿಂಗಳ ಬೆಳಕಿನಲ್ಲಿ ವಿಶಾಲ ಗುಡ್ಡೆಯ ಆಚೆಗಿನ ಆಂಥೋನಿಯ ಮನೆಗೆ ಹೊರಟಳು.
ಆವತ್ತು ರಾತ್ರಿ ಗಂಗರಬೀಡಿನ ಇಗರ್ಜಿಯಲ್ಲಿ ವಿಶೇಷ ಪೂಜೆಯಿತ್ತು. ಆದಕಾರಣ ಜೆಸಿಂತಾಬಾಯಿ ಮತ್ತವರ ಮನೆಮಂದಿಯೆಲ್ಲ ಅಲ್ಲಿಗೆ ಹೋಗಿದ್ದರು. ಆದರೆ ನಿತ್ಯದ ಸಾರಾಯಿ ವ್ಯಾಪಾರಕ್ಕೆ ಧಕ್ಕೆ ಬರಬಾರದೆಂದು ತಾಮಸನೊಬ್ಬನೇ ಮನೆಯಲ್ಲಿದ್ದ. ಸರೋಜ ಅಲ್ಲಿಗೆ ಬರುವ ಹೊತ್ತಿಗೆ ಅವನೊಂದು ಖಾಕಿ ಬಣ್ಣದ ದೊಗಳೆ ಚಡ್ಡಿ ತೊಟ್ಟು, ಕೆಂಪಗಿನ ತನ್ನ ಹರವಾದ ಎದೆಯನ್ನು ಗಾಳಿಗೆ ಒಡ್ಡಿಕೊಂಡು ಅಂಗಳದಲ್ಲಿ ಕುಳಿತು ಬೀಡಿ ಸೇದುತ್ತಿದ್ದ. ಮನೆಯ ಮೂರು ಕಾಟು ನಾಯಿಗಳು ಅವನ ಸುತ್ತ ಕುಳಿತಿದ್ದವು. ಅವನು ಅವುಗಳನ್ನು ಕಾಲಿನಿಂದ ತಿವಿತಿವಿದು ಒದ್ದು ಚಿವುಟುತ್ತ ನೋವು ನೀಡಿ ಅವು ಕೆಟ್ಟದಾಗಿ ಅರಚುವಂತೆ ಮಾಡಿ ಖುಷಿಪಡುತ್ತಿದ್ದ. ಅವುಗಳು ಕೂಡಾ ಯಜಮಾನನ ಹಿಂಸೆಯನ್ನೇ ಪ್ರೀತಿಯೆಂದು ಭ್ರಮಿಸಿ ಮತ್ತೆ ಮತ್ತೆ ಅವನೊಡನೆ ಆಟವಾಡಲು ಹವಣಿಸುತ್ತಿದ್ದವು. ಅದರ ನಡುವೆಯೂ ಅವು ಸರೋಜ ಬರುತ್ತಿರುವುದನ್ನು ಗ್ರಹಿಸಿದವು, ಕರ್ಣಕಠೋರವಾಗಿ ಬೊಗಳುತ್ತ ಅವಳತ್ತ ನುಗ್ಗಿದವು. ಆದರೆ ಅವಳನ್ನು ಸಮೀಪಿಸುತ್ತ ಗುರುತು ಹತ್ತಿದ್ದರಿಂದ ತಟ್ಟನೆ ಬೊಗಳುವುದನ್ನು ನಿಲ್ಲಿಸಿ ಬಾಲ ಅಲ್ಲಾಡಿಸುತ್ತ ಮರಳಿ ಯಜಮಾನತ್ತ ತಿರುಗಿದವು. ಸರೋಜಾಳನ್ನು ಕಂಡ ತಾಮಸನು ತಟ್ಟನೆ ನೆಟ್ಟಗೆ ಕುಳಿತುಕೊಂಡು ಮೆಲುವಾಗಿ ನಕ್ಕ. ಸರೋಜಾಳೂ ಪ್ರತಿಯಾಗಿ ನಕ್ಕಳು. ಆದರೆ ಅವಳಲ್ಲಿ ಸಣ್ಣಗೆ ನಡುಕವೆದ್ದಿತು. ಅದನ್ನು ಮರೆಮಾಚುತ್ತ, ‘ಬಾಯಮ್ಮ ಇಲ್ಲವಾ…?’ ಎಂದಳು.
‘ಇಲ್ಲ ಮಾರಾಯ್ತಿ. ಮಾಯಿ ಇಗರ್ಜಿಗೆ ಹೋಗಿದ್ದಾರೆ. ನೀನೇನು ಇಷ್ಟು ಹೊತ್ತಲ್ಲಿ…?’ ಎಂದ ಆತ್ಮೀಯವಾಗಿ.
‘ಒಂಟಿ ಹೆಣ್ಣು ಸಿಕ್ಕರೆ ಆ ಬೇವರ್ಸಿ ಸುಮ್ಮನೆ ಬಿಡುವವನಲ್ಲ!’ ಎಂದು ಪ್ರೇಮಾಳೋ ಅಥವಾ ಬೇರೆ ಯಾರೋ ಹೇಳಿದ್ದ ಮಾತುಗಳು ಈಗ ರಪ್ಪನೆ ಅವಳ ಕಿವಿಯಲ್ಲಿ ಗುಂಯ್ಯ್ಗುಟ್ಟಿದವು. ಆದರೆ ನಾನು, ಇಬ್ಬರು ಬೆಳೆದ ಹೆಣ್ಣು ಮಕ್ಕಳ ತಾಯಿ. ಹೀಗಿರುವಾಗ ಇವನು ನನ್ನನ್ನೇನು ಮಾಡಿಯಾನು? ಎಂದುಕೊoಡವಳು, ‘ಇವರಿಗೆ ಸ್ವಲ್ಪ ಗಂಗಸರ ಬೇಕಿತ್ತಂತೆ. ದುಡ್ಡಿಲ್ಲ ಅಂದರೆ ಕೇಳುವುದಿಲ್ಲ. ಆಂಥೋನಿಯಣ್ಣನ ಬಾಕಿಯೂ ಇದೆ. ಇದನ್ನೂ ಅದಕ್ಕೆ ಸೇರಿಸಿಕೊಂಡು ಸ್ವಲ್ಪ ಕೊಡಬಹುದಾ…?’ ಎಂದು ತನ್ನ ಬೆಳ್ಳಗಿನ ಹಲ್ಲಪಂಕ್ತಿಯನ್ನು ತುಸು ಹೆಚ್ಚೇ ಪ್ರದರ್ಶಿಸುತ್ತ ಕೇಳಿದಳು. ಆದರೆ ಯೌವನದ ಪರಾಕಾಷ್ಟೆಯಲ್ಲಿ ಮೆರೆಯುತ್ತ ಸಿಕ್ಕಿ ಸಿಕ್ಕಿದ್ದನ್ನೆಲ್ಲ ಭೋಗಿಸುವ ದುರಾಸೆಯಲ್ಲಿದ್ದ ತಾಮಸನಿಗೆ ನಡುವಯಸ್ಸಿನ ಸರೋಜಾಳ ಮೋಹಕ ನಗು ಮತ್ತು ಹದವಾದ ಮೈಕಟ್ಟು ಜೇನು ಸುರಿದಷ್ಟು ಉನ್ಮಾದವನ್ನೆಬ್ಬಿಸಿತು. ಆದರೂ ತೋರ್ಪಡಿಕೆಯ ಗತ್ತಿನಿಂದ, ‘ಹೌದು ಹೌದು. ಲಕ್ಷ್ಮಣನಿಗೆ ಸಾಲ ಕೊಡಕೂಡದು ಅಂತ ಅಣ್ಣ ಹೇಳಿದ್ದಾನೆ. ಹಾಗಾಗಿ ಅವನಿಗಿಲ್ಲ. ನಿನಗೆ ಬೇಕಿದ್ದರೆ ಕೊಡುತ್ತೇನೆ. ಆದರೆ ನಾನು ಕೊಟ್ಟೆನೆಂದು ಮನೆಯವರಲ್ಲಿ ನೀನು ಯಾರಲ್ಲೂ ಹೇಳಕೂಡದು ಆಗಬಹುದಾ…?’ ಎಂದ ಏನೋ ಆಸೆಯಿಂದ. ಸರೋಜಾಳಿಗೆ ಅವನ ಮಾತಿನ ಒಳಮರ್ಮವು ಅರ್ಥವಾಗಿ ಮುಜುಗರವಾಯಿತು. ಆದರೂ ಸಾರಾಯಿ ಸಿಗುತ್ತದೆ ಎಂದ ಕೂಡಲೇ ಸಂಕೋಚ ಮಾರು ದೂರ ಓಡಿ ಹೋಯಿತು. ‘ಆಯ್ತು ಹೇಳುವುದಿಲ್ಲ!’ ಎಂದಳು ನಾಚುತ್ತ.
‘ಹ್ಞೂಂ. ಹಾಗಾದರೆ, ಒಳಗೆ ಬಾ…!’ ಎಂದ ತಾಮಸ ಅವಳು ನೋಡಲೆಂದೇ ಎದ್ದು ಒರಟಾಗಿ ಮೈಮುರಿಯುತ್ತ ಒಳಗೆ ನಡೆದ. ಆದರೆ ಸರೋಜಾಳಿಗೆ ಒಳಗೆ ಹೋಗಲು ಭಯವಾಯಿತು. ‘ಇಲ್ಲೇ ಇರುತ್ತೇನೆ ತಂದುಕೊಡಿ. ನಿಮ್ಮ ಮನೆಯವರು ಬಂದರೆ ಚೆನ್ನಾಗಿರುವುದಿಲ್ಲ!’ ಎಂದಳು ಅಳುಕುತ್ತ. ತಾಮಸನಿಗೆ ತಟ್ಟನೆ ಯಾವುದೋ ಹಸಿರು ನಿಶಾನೆ ದೊರಕಿದಂತಾಯಿತು.
‘ಮನೆಯವರು ಬರುವುದು ಏನಿದ್ದರೂ ಹತ್ತೂವರೆಯ ನಂತರವೇ ಮಾರಾಯ್ತೀ. ಅದಕ್ಕಿನ್ನೂ ತುಂಬಾ ಹೊತ್ತಿದೆ. ಒಳಗೆ ಬಾ. ಹಂದಿ ಮಾಂಸದ ಪದಾರ್ಥವಿದೆ. ಊಟ ಮಾಡ್ತೀಯಾ…?’ ಎಂದು ತಾಮಸ ಸಹಜವಾಗಿ ಎಂಬoತೆ ಅನ್ನುತ್ತ ಒಳಗೆ ಹೋದ. ಅವನ ಕೊನೆಯ ವಾಕ್ಯ ಕೇಳಿದ ಸರೋಜಾಳಿಗೆ ಸ್ವಲ್ಪ ನಿರಾಳವಾಯಿತು.
‘ಇಲ್ಲ. ಮನೆಯಲ್ಲಿ ಅವರು ಕಾಯುತ್ತಿದ್ದಾರೆ…!’ ಎನ್ನುತ್ತ ಒಳಗಡಿಯಿಟ್ಟು ಚಾವಡಿಗೆ ಹೋಗಿ ನಿಂತಳು.
‘ಹಾಗಾದರೆ ಕುಳಿತು ಕೋ. ಸ್ವಲ್ಪ ಪದಾರ್ಥ ಕೊಡುತ್ತೇನೆ. ತಿಂದು ಹೋಗು…!’ ಎಂದು ಆಪ್ತವಾಗಿ ಅಂದ ತಾಮಸ ಅಡುಗೆ ಕೋಣೆ ಹೊಕ್ಕವನು ಕೆಲವು ಕ್ಷಣದ ಬಳಿಕ, ‘ಸರೋಜಾ ಇಲ್ಲಿ ಬಾ ಮಾರಾಯ್ತಿ…!’ ಎಂದು ಮತ್ತೊಮ್ಮೆ ಕೂಗಿದ. ಬಾಯಮ್ಮನ ಹಂದಿ ಪದಾರ್ಥದ ರುಚಿಯನ್ನು ಈ ಹಿಂದೆ ಕೆಲವು ಬಾರಿ ಕಂಡಿದ್ದ ಸರೋಜಾಳ ಬಾಯಲ್ಲಿ ನೀರೂರಿತು. ಆದರೂ ಅವಳು ಒಳಗೆ ಹೋಗಲಿಲ್ಲ. ತಾಮಸ ಮತ್ತೂ ಸ್ವಲ್ಪಹೊತ್ತು ಚಡಪಡಿಸುತ್ತ ಕಾದ. ಅವಳು ಒಳಗೆ ಬರುವ ಸೂಚನೆ ಕಾಣದಿದ್ದಾಗ ರಪ್ಪನೆ ಹೊರಗೆ ಬಂದವನು, ‘ನೀನೆಂಥದು ಮಾರಾಯ್ತೀ…! ನಾನೇನು ನಿನ್ನನ್ನು ನುಂಗಿ ಬಿಡುತ್ತೇನಾ! ಸಣ್ಣ ಹುಡುಗಿಯಾ ನೀನು…? ಅಷ್ಟೆಲ್ಲ ಭಯಪಡುವಂಥದ್ದೇನಿದೆ? ಪದಾರ್ಥ ಬೇಡವಾದರೆ ಬಿಡು. ಒಳ್ಳೆಯ ಕಂಟ್ರಿ ಉಪ್ಪರಿಗೆಯ ಮೇಲಿದೆ. ಅಲ್ಲಿಗಾದರೂ ಬರುತ್ತೀಯಾ ಅಥವಾ ಅದನ್ನೂ ನಾನೇ ತಂದು ಕೊಡಬೇಕಾ…?’ ಎಂದು ತನ್ನ ಮುನಿಸಿಗೆ ನಗೆಯ ಲೇಪವನ್ನು ಹಚ್ಚಿ ಅಂದವನು ಉಪ್ಪರಿಗೆಯ ಮಣ್ಣಿನ ಮೆಟ್ಟಿಲುಗಳನ್ನು ದಡದಡ ಸದ್ದೆಬ್ಬಿಸುತ್ತ ಹತ್ತಿ ಹೋದ. ಸುಮಾರು ಆರೇಳು ದಶಕಗಳಷ್ಟು ಪುರಾತನವಾದ ಈ ಮನೆಗೆ ಸರೋಜ ಅನೇಕ ಬಾರಿ ಬಂದಿದ್ದಳು. ಕೆಲವೊಮ್ಮೆ ಬಾಯಮ್ಮ ಕರೆದಾಗ ಅಡುಗೆ ಕೋಣೆಯವರೆಗೆ ಹೋಗಿದ್ದಳೇ ಹೊರತು ಇತರ ಕೋಣೆಗಳಿಗೆ ಪ್ರವೇಶಿಸಿದವಳಲ್ಲ. ಈಗ ಅದನ್ನೇ ಯೋಚಿಸುತ್ತಿದ್ದವಳನ್ನು ಉಪ್ಪರಿಗೆಯ ಮೇಲಿಂದ ತಾಮಸನ ಗಡಸು ಧ್ವನಿಯು ಮತ್ತೆ ಕೂಗಿ ಕರೆಯಿತು. ಮರಳಿ ಅವಳಲ್ಲಿ ಭಯವೆದ್ದು ವಿವೇಕವು ಹೋಗಬೇಡವೆಂದಿತು. ಆದರೆ ಸಾರಾಯಿಯ ಆಸೆಗೆ ಬಿದ್ದಿದ್ದ ಅವಳ ಮನಸ್ಸು, ‘ಹ್ಞೂಂ, ಹೋಗು ಹೋಗು. ಅವನೇನು ಕೊಂದು ಬಿಡುತ್ತಾನಾ ನಿನ್ನನ್ನು!’ ಎಂದು ಗದರಿಸಿ ಅವಳಿಗೆ ದೃಢತೆಯನ್ನಿತ್ತು ಮುಂದೆ ತಳ್ಳಿತು. ಹಾಗಾಗಿ ಅವಳು ಮೆಲ್ಲನೆ ಉಪ್ಪರಿಗೆಯನ್ನೇರತೊಡಗಿದಳು.
ಉಪ್ಪರಿಗೆಯ ಮೆಟ್ಟಿಲುಗಳನ್ನು ಮೃದುವಾಗಿ ಹತ್ತಿ ಬರುತ್ತಿದ್ದ ಸರೋಜಾಳ ಹೆಜ್ಜೆಗಳ ಸಪ್ಪಳ ಥಾಮಸನಿಗೆ ತನ್ನೊಳಗಿನ ತಾಮಸ ಕೇಳಿಗೆ ತಾಳ ಮೇಳಗಳನ್ನು ತಟ್ಟುತ್ತಿರುವಂತೆ ಭಾಸವಾಯಿತು. ಅಷ್ಟೊತ್ತಿಗೆ ಮೇಲೆ ಬಂದ ಸರೋಜಾಳನ್ನು ಮಬ್ಬುಗತ್ತಲ ಕೋಣೆಯೊಂದು ಬಾಯ್ತೆರೆದು ನುಂಗುವoತೆಯೇ ಭಾಸವಾಯಿತು. ಅವಳು ತಟ್ಟನೆ ಸಾವರಿಸಿಕೊಂಡವಳು ತಡಕಾಡುತ್ತ ಆ ಕೋಣೆಯನ್ನು ದಾಟಿ ಮುಂದೆ ನಡೆದಳು. ಎರಡನೆಯ ಕೋಣೆಯು ಸಮೀಪಿಸುತ್ತ ಕಳ್ಳಭಟ್ಟಿಯ ತೀಕ್ಷ÷್ಣ ಕಂಪಿನೊoದಿಗೆ ಬೀಡಿ, ಸಿಗರೇಟು ಮತ್ತು ಗಂಡಸಿನ ಕಟು ಬೆವರಿನ ವಾಸನೆ ಅವಳ ಮೂಗಿಗೆ ಬಡಿದು ಮೂಗು ಮುಚ್ಚಿಕೊಳ್ಳುವಂತಾಯಿತು. ಆದರೆ ಆ ದುರ್ಗಂಧವು ತನ್ನ ಮನೆಯ ಹಸಿ ಬೀಡಿ ಮತ್ತು ಗಂಡನ ದೇಹದ ವಾಸನೆಗಳಿಗಿಂತ ಭಿನ್ನವಾಗಿ, ಆಪ್ಯಾಯಮಾನವಾಗಿ ಕಂಡಿತು. ಅಲ್ಲಿ ಕೋಣೆಯ ಮೂಲೆಯೊಂದರಲ್ಲಿ ಕಂಚಿನ ಚಿಮಿಣಿ ದೀಪದ ಮಂದ ಬೆಳಕು ಹದವಾದ ಗಾಳಿಗೆ ತೊನೆದಾಡುತ್ತಿತ್ತು. ಅಲ್ಲಿ ತಾಮಸನು ವಿಶೇಷ ಕೆತ್ತನೆಯ ಚಿತ್ತಾರವಿದ್ದ ಹಳೆಯ ಮಂಚದ ಮೇಲೆ ಎಡಗಾಲನ್ನು ಮಡಚಿ ಮೇಲಿಟ್ಟು ಮೊಣಗಂಟಿನ ಮೇಲೆ ಕೈಯನ್ನಿಳಿಯಬಿಟ್ಟು ಬಲಗಾಲನ್ನಾಡಿಸುತ್ತ ಕಟ್ಟುಮಸ್ತಾದ ತನ್ನ ಮೈಸಿರಿಯನ್ನು ಪ್ರದರ್ಶಿಸುತ್ತ ಕುಳಿತು ನಗುತ್ತಿದ್ದ. ಅದನ್ನು ಕಂಡ ಸರೋಜಾಳ ಮನಸ್ಸು ಒಂದು ಕ್ಷಣ ಎತ್ತೆತ್ತಲೋ ಹೊಯ್ದಾಡಿತಾದರೂ ಅವಳು ತಟ್ಟನೆ ಜಾಗ್ರತಳಾಗಿ, ‘ಬೇಗ ಕೊಡಿ. ಮನೆಗೆ ಹೋಗಬೇಕು. ಇನ್ನೂ ಅವರ ಊಟವಾಗಿಲ್ಲ…!’ ಎಂದು ಅವ್ಯಕ್ತ ಭಯದಿಂದ ಉಸುರಿಸಿದಳು.
‘ಅಲ್ಲ ಮಾರಾಯ್ತೀ…, ನೀನು ಹತ್ತಿರ ಬಂದರೆ ತಾನೇ ಕೊಡುವುದು..!’ ಎಂದು ತಾಮಸ ಮೋಹದಿಂದ ಅಂದವನು ಮಂಚದ ಆಚೆಗಿದ್ದ ಪ್ಲಾಸ್ಟಿಕ್ ಡ್ರಮ್ಮಿನತ್ತ ಸಾಗಿದ. ಸರೋಜಾಳೂ ಅವನ ಹತ್ತಿರ ಹೋಗಿ ನಿಂತುಕೊoಡು ಚೆಂಬನ್ನು ನೀಡಿದಳು. ಅದನ್ನು ತೆಗೆದುಕೊಳ್ಳುವ ಸಂಧಿಯಲ್ಲೇ ಅವನು ಅವಳ ಕೈಗಳನ್ನು ನವಿರಾಗಿ ಸ್ಪರ್ಶಿಸಿದವನು ಅವಳ ಕಣ್ಣಲ್ಲಿ ಕಣ್ಣಿಟ್ಟು ನಗುತ್ತ ನಾಲಿಗೆಯಿಂದ ತನ್ನ ಒಣ ತುಟಿಗಳನ್ನು ಮೃದುವಾಗಿ ಸವರಿಕೊಂಡ. ಸರೋಜಾಳಿಗೆ ಭಯದಿಂದಲೋ, ಅವನ ಸ್ಪರ್ಶದಿಂದಲೋ ಮೈಯಿಡೀ ಕಂಪಿಸಿತು. ಅದನ್ನು ಸೂಕ್ಷö್ಮವಾಗಿ ಗ್ರಹಿಸಿದ ತಾಮಸನು ಅವಳನ್ನು ಬಾಚಿ ತಬ್ಬಿಕೊಂಡ. ಮರುಕ್ಷಣ ಅವನ ರೋಮ ತುಂಬಿದ ವಿಶಾಲ ಎದೆಗೆ ತನ್ನ ಮುಖ ಅಪ್ಪಳಿಸಿ ಬಿಗಿದುಕೊಂಡಾಗ ಸರೋಜಾಳಿಗೆ ಉಸಿರುಗಟ್ಟಿದಂತಾಯಿತು. ಆದರೆ ಅಂಥ ಬಿಗಿತವನ್ನು ಎಂದೂ ಅನುಭವಿಸದಿದ್ದ ಅವಳು ತನಗರಿವಿಲ್ಲದೆಯೇ ಅವನ ತೋಳತೆಕ್ಕೆಯಲ್ಲಿ ಹೂವಾಗಿಬಿಟ್ಟಳು. ಸುಮಾರು ಹೊತ್ತಿನ ನಂತರ ಎರಡು ದೇಹಗಳ ತೀವ್ರ ಬೇಗುದಿಯು ತಣ್ಣಗಾಯಿತು. ತಾಮಸನ ತೆಕ್ಕೆಯಿಂದ ಮೆಲ್ಲನೆ ಬಿಡಿಸಿಕೊಂಡ ಸರೋಜ ಅವನು ಮನಸಾರೆ ತುಂಬಿಸಿಕೊಟ್ಟ ಒಂದು ತೊಟ್ಟೆ ಹಂದಿ ಪದಾರ್ಥವನ್ನೂ, ಚೆಂಬಿನ ತುಂಬ ಸಾರಾಯಿಯನ್ನೂ ಹಿಡಿದುಕೊಂಡು ಉಲ್ಲಾಸದಿಂದ ಮನೆಯತ್ತ ಹೆಜ್ಜೆ ಹಾಕಿದಳು.
ಇತ್ತ ಲಕ್ಷ್ಮಣ ಅಸಹನೆಯಿಂದ ಚಡಪಡಿಸುತ್ತಿದ್ದವನು, ಈ ದರಿದ್ರದವಳು ಇಷ್ಟು ಹೊತ್ತಾದರೂ ಇನ್ನೂ ಯಾಕೆ ಬರಲಿಲ್ಲ…? ಆ ಬಾಯಮ್ಮನೊಡನೆ ಪಂಚಾತಿಕೆ ಹೊಡೆಯುತ್ತ ಬಿದ್ದಿರಬೇಕು ನಾಯಿ! ಗಂಡನಿಲ್ಲಿ ಹಸಿವಿನಿಂದ ಸತ್ತು ಹೋದರೂ ಅವಳಿಗೇನೂ ಬಿದ್ದು ಹೋಗಲಿಕ್ಕಿಲ್ಲ! ಎನ್ನುತ್ತ ಸಿಡಿಮಿಡಿಗುಟ್ಟುತ್ತಿದ್ದ. ಅಷ್ಟರಲ್ಲಿ ಸರೋಜ ಒಳಗಡಿಯಿಟ್ಟಳು. ಅವಳನ್ನು ಕಂಡು ಕೆಟ್ಟದಾಗಿ ಬೈಯ್ಯಲೆಂದು ಮುಂದಾದ. ಆದರೆ ಅಷ್ಟರಲ್ಲಿ ಅವನ ಒರಟು ಮೂಗಿಗೆ ಹಂದಿ ಮಾಂಸದ ಘಮವೂ, ದೇಸಿ ಸಾರಾಯಿ ವಾಸನೆಯೂ ಬಡಿದಾಗ ಬೈಯ್ಯಲು ತೆರೆದ ಬಾಯಿಯು ಹಾಗೆಯೇ ಮುಚ್ಚಿಕೊಂಡಿತು. ಸರೋಜ ಏನೂ ಅರಿಯದವಳಂತೆ ಒಳಗೆ ಬಂದವಳು, ‘ಬಾಯಮ್ಮ ಪದಾರ್ಥ ಮಾಡುತ್ತಿದ್ದರು. ಸ್ವಲ್ಪ ಹೊತ್ತು ನಿಂತು, ಕೊಂಡು ಹೋಗು!’ ಅಂದರು. ಅದಕ್ಕೆ ತಡವಾಯ್ತು. ಬನ್ನಿ ಊಟ ಮಾಡುವ…!’ ಎನ್ನುತ್ತ ಅವಸರವಸರವಾಗಿ ಬಚ್ಚಲು ಹೊಕ್ಕು ಮೈತಿಕ್ಕಿ ಸ್ನಾನ ಮಾಡಿದಳು. ಬಳಿಕ ಮಗಳನ್ನೆಬ್ಬಿಸಿ ಬ್ರೆಡ್ಡಿನ ತುಂಡುಗಳೊoದಿಗೆ ಹಂದಿ ಪದಾರ್ಥವನ್ನು ಬಡಿಸಿ ಕೊಟ್ಟಳು.
ಲಕ್ಷ್ಮಣ ಆತುರಾತುರವಾಗಿ ಎರಡು ಲೋಟ ಸಾರಾಯಿಯನ್ನು ಬಗ್ಗಿಸಿದ. ನಂತರ ಹೆಂಡತಿ ಬಡಿಸಿದ ಗಂಜಿಯೊoದಿಗೆ ಹಂದಿ ಮಾಂಸದ ಮುಖವನ್ನೇ ಕಾಣದವನಂತೆ ಗಬಗಬನೆ ತಿಂದು ಗಟ್ಟಿಯಾಗಿ ತೇಗಿದ. ಹೊರಗೆ ಹೋಗಿ ಅಂಗಳದ ತಿಂಗಳ ಬೆಳಕಿನಲ್ಲಿ ಕುಕ್ಕರಗಾಲಲ್ಲಿ ಕುಳಿತು ಎರಡು ಬೀಡಿಗಳನ್ನು ಸೇದಿದ. ಅಷ್ಟರಲ್ಲಿ ಮಗಳು ಉಂಡು ಮತ್ತೆ ನಿದ್ದೆಗೆ ಜಾರಿದಳು. ಲಕ್ಷ್ಮಣನಿಗೆ ಅಮಲೇರಿತು. ಎದ್ದು ತೂರಾಡುತ್ತ ಹೋಗಿ ಚಾಪೆ ಹಾಸಿ ಗೊಣಗುತ್ತ ನಿದ್ದೆ ಹೋದ. ಸರೋಜಾಳೂ ಕುಡಿದುಂಡು ಮತ್ತಳಾಗಿ ಚಾಪೆಗೊರಗಿದವಳು ತಾಮಸ ನೀಡಿದ ಮಧುರ ಸುಖವನ್ನು ಮೆಲುಕು ಹಾಕುತ್ತ ಮಂಪರಿಗೆ ಜಾರಿದಳು.
(ಮುಂದುವರೆಯುವುದು)