ಕನ್ನಡ, ಹಿಂದಿ, ಪಂಜಾಬಿ, ಮತ್ತು ಗುಜರಾತಿ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿ ಸಿನಿಮಾ ಲೋಕದಲ್ಲಿ ಹೆಸರು ಮಾಡಿದ್ದ ರೀಟಾ ರಾಧಾಕೃಷ್ಣ ಅಂಚನ್ (68) ಇಂದು ಅಲ್ಪಕಾಲದ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಇವರು, ಎಟ್ ಎನದರ್, ಬದ್ ನಾಮ್, ಲಡ್ಕೀ ಜವಾನ್ ಹೋಗಯ, ಆತ್ಮಾ, ಫರ್ಜ್ ಓರ್ ಪ್ಯಾರ್ ಮತ್ತು ಕನ್ನಡದಲ್ಲಿ ಪರಸಂಗದ ಗೆಂಡೆತಿಮ್ಮ, ಕರಾವಳಿ, ಗಿರೀಶ್ ಕಾರ್ನಾಡ್ ಅವರ ಕನಕಾಂಬರ ಮುಂತಾದ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪರಸಂಗದ ಗೆಂಡೆತಿಮ್ಮ ಚಲನಚಿತ್ರ ಇವರಿಗೆ ಹಲವಾರು ಪ್ರಶಸ್ತಿಗಳನ್ನು ತಂದು ಕೊಟ್ಟಿದೆ. ಬಹುಭಾಷಾ ನಟಿಯಾದ ಇವರು ಕಲಾತ್ಮಕ ಮತ್ತು ಪ್ರಯೋಗಾತ್ಮಕ ಚಲನ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದರು.
ಬಿಲ್ಲವರ ಎಸೋಸಿಯೇಶನ್ ನ ಮಾಜಿ ಅಧ್ಯಕ್ಷರು ಹಾಗೂ ಟಾಟಾ ಕಂಪೆನಿಯಲ್ಲಿ ಹಿರಿಯ ಅಧಿಕಾರಿಯಾಗಿದ್ದ ಬಿ. ಟಿ. ಅಂಚನ್ ಅವರ ಪುತ್ರಿ ರೀಟಾ ಅಂಚನ್ ಅವರು ವಿವಾಹವಾದ ನಂತರ ರಾಧಾಕೃಷ್ಣ ಮಂಚಿಗಯ್ಯನವರೊಂದಿಗೆ ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಮೈಸೂರಿನ ಮಹಾರಾಜ ಚಾಮರಾಜ ಒಡೆಯರಿಂದ ರೀಟಾ ಅಂಚನ್ ಅವರ ಅತ್ತೆಗೆ (ರಾಧಾಕೃಷ್ಣ ಮಂಚಿಗಯ್ಯನವರ ತಾಯಿ) ಬಳುವಳಿಯಾಗಿ ಬಂದ ವನಿತಾ ಸಮಾಜದ ಮೂಲಕ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರ ಅಗಲಿಕೆ ಸಮಸ್ತ ಅಭಿಮಾನಿಗಳಿಗೆ ನೋವು ತಂದಿದೆ. ರೀಟಾ ಅಂಚನ್ ಇವರು ಪತಿ, ಓರ್ವ ಪುತ್ರ, ಓರ್ವ ಪುತ್ರಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.