
“ಕರ್ನಾಟಕ ನಮ್ಮ ರಾಷ್ಟ್ರದ ಹೆಮ್ಮೆಯ ರಾಜ್ಯ- ಪ್ರಕಾಶ್ ಪಾಂಡುರಂಗಿ.”
ವರದಿ : ಗುರುರಾಜ್ ಪೊಟ್ನಿಸ್
ನಮ್ಮ ಸನಾತನ ಧರ್ಮ ಸಂಸ್ಕೃತಿಯ ತವರು, ಗುಡಿದೇಗುಲಗಳ ನಾಡು ನಮ್ಮ ಕರ್ನಾಟಕ ರಾಜ್ಯ ಇಂದು ರಾಷ್ಟದ ಮಾದರಿ ರಾಜ್ಯವಾಗಿದೆ ಎಂದು ಎಂದು ನಿವೃತ್ತ ಹಿರಿಯ ಸೇನಾಧಿಕಾರಿ ಕರ್ನಲ್ ಪ್ರಕಾಶ್ ಪಾಂಡುರಂಗಿಯವರು ಹೇಳಿದ್ದಾರೆ. ಅವರು ನವೆಂಬರ್ 16ರಂದು ಸಂಜೆ ಕಲ್ಯಾಣ ಪಶ್ಚಿಮದ ಗಿರೀಜಾ ಪಯ್ಯಾಡೆ ಸಭಾಗೃಹದಲ್ಲಿ ಕಲ್ಯಾಣ ಪರಿಸರದ ಹೊರನಾಡ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಕಲ್ಯಾಣ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಸಂಘದ 22ನೇಯ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.ದೇಶದ ಎಲ್ಲ ಭಾಷೆಗಳಲ್ಲಿ ಕನ್ನಡ ಭಾಷೆ ಅಗ್ರ ಸ್ಥಾನದಲ್ಲಿದ್ದು ರನ್ನ, ಪಂಪ,ಜನ್ನರ ಸಾಹಿತ್ಯದ ಪರಂಪರೆ ನಮ್ಮ ಕನ್ನಡ ನಾಡಿನದ್ದಾಗಿದ್ದು, ಕೃಷಿ ಹಾಗೂ ಕೈಗಾರಿಕೆಗಳಲ್ಲೂ ಮುಂಚೂಣಿಯಲ್ಲಿದೆ. ಅನೇಕ ತೀರ್ಥ ಕ್ಷೇತ್ರಗಳ ಪವಿತ್ರವಾದ ಕನ್ನಡದ ಮಣ್ಣಿನ ಮಕ್ಕಳಾಗಿದ್ದು ನಮ್ಮ ಅಹೋ ಭಾಗ್ಯವೇ ಆಗಿದೆ ಎಂದು ಹೇಳಿದ ಕರ್ನಲ್ ಪ್ರಕಾಶ ಪಾಂಡುರಂಗಿಯವರು ನಾವು ಉತ್ತಮ ಬದುಕು ಕಟ್ಟಿಕೊಳ್ಳಲು ವಿಶ್ವದಾದ್ಯಂತ ತಲುಪಿದರೂ ಸಹಿತ ಜನ್ಮಭೂಮಿಯ ಜೊತೆಗೆ ಕರ್ಮಭೂಮಿಯನ್ನು ಗೌರವಿಸುವ ಪರಂಪರೆಯನ್ನು ಮುಂದುವರೆಸಿ ಕೊಂಡು ಬಂದಿದ್ದೇವೆ. ಇದಕ್ಕೆ ಕಲ್ಯಾಣ ಕರ್ನಾಟಕ ಸಂಘದ ಕಾರ್ಯ ವೈಖರಿ ಒಂದು ಉದಾಹರಣೆಯಾಗಿದೆ ಎಂದು ಹೇಳಿದ ಕರ್ನಲ್ ಪಾಂಡುರಂಗಿಯವರು ಇಂದಿನ ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದು ನನ್ನ ಅಹೋ ಭಾಗ್ಯವೇ ಆಗಿದೆ. ಮುಂಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಸಂಘ ಕನ್ನಡದ ರಾಯಭಾರಿಯಂತೆ ಕಾರ್ಯ ನಿರ್ವಹಿಸುವದರ ಜೊತೆಗೆ ಬಾನೆತ್ತರಕ್ಕೆ ಬೆಳೆಯಲಿ ಎಂದು ಹೇಳಿ ಶುಭಕೋರಿದರು.

ಗೌ.ಅತಿಥಿ ಹಾಗೂ ನವಿ ಮುಂಬಯಿ ಕನ್ನಡ ಸಂಘದ ಕಾರ್ಯಾಧ್ಯಕ್ಷ ಬಿ.ಎಚ್ ಕಟ್ಟಿಯವರು ಮಾತನಾಡಿ ಆಲೂರ ವೆಂಕಟರಾಯರಂತಹ ಅನೇಕ ಕನ್ನಡಾಅಭಿಮಾನಿಗಳ ಹೊರಾಟದ ಫಲವಾಗಿ ಹರಿದು ಹಂಚಿ ಹೋಗಿದ್ದ ನಮ್ಮ ಕನ್ನಡ ನಾಡು ಒಂದಾಗಿ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು, ಕರ್ನಾಟಕ ರಾಜ್ಯೋತ್ಸವವನ್ನು ಇಂದು ಸಪ್ತಸಾಗರದಾಚೆಯೂ ನೆಲಸಿದ ಕನ್ನಡ ಮನಸ್ಸುಗಳು ಆಚರಿಸುವ ಮೂಲಕ ಕನ್ನಡದ ಕಂಪನ್ನು ನಿರಂತರವಾಗಿ ಪಸರಿಸುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದ ಬಿ.ಎಚ್ ಕಟ್ಟಿ ಅವರು ಕಳೆದ 22ವರ್ಷಗಳಿಂದ ಕಲ್ಯಾಣ ಕರ್ನಾಟಕ ಸಂಘ ಕನ್ನಡದ ರಾಯಭಾರಿಯಂತೆ ಕಾರ್ಯ ನಿರ್ವಹಿಸುತ್ತಿರುವದು ಹೆಮ್ಮೆಯ ವಿಷಯವಾಗಿದ್ದು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಸಮಸ್ತ ಕನ್ನಡ ಮನಸ್ಸುಗಳು ಮುಂದೆ ಬರಬೇಕು ಎಂದು ಕರೆ ನೀಡಿ ಶುಭಕೋರಿದರು.

ಸ್ವಾಗತ ಹಾಗೂ ಪ್ರಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಎನ್. ಸತೀಶ್ ರವರು 22 ವರ್ಷಗಳ ಹಿಂದೆ ನಮ್ಮ ಹಿರಿಯರು ಕಟ್ಟಿದ ಕಲ್ಯಾಣ ಕರ್ನಾಟಕ ಸಂಘ ಕಲ್ಯಾಣ ಪರಿಸರದಲ್ಲಿ ಕನ್ನಡದ ಕಂಪನ್ನು ಬೀರುವದರ ಜೊತೆಗೆ ಸಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿಯೂ ಮುಂಚೂಣಿಯಲ್ಲಿದ್ದು ಇದಕ್ಕೆ ಸಂಘದ ಪದಾಧಿಕಾರಿಗಳು ಹಾಗೂ ಕೊಡುಗೈ ದಾನಿಗಳ ಅಮೂಲ್ಯ ಸಹಕಾರವೇ ಕಾರಣವಾಗಿದ್ದು, ಸಂಘದ ಸಾಧನೆಗೆ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ದಿ.ನಂದಾ ಶೆಟ್ಟಿ ಹಾಗೂ ಪೂರ್ವ ಅಧ್ಯಕ್ಷ ದಿ.ಟಿ.ಎಸ್ ಉಪಾಧ್ಯಾಯ ರವರಂತಹ ಹಿರಿಯ ಜೀವಿಗಳ ಮಾರ್ಗದರ್ಶನ ಮರೆಯುವಂತಿಲ್ಲ ಎಂದು ಹೇಳಿದ ಕೆ.ಎನ್.ಸತೀಶ್ ಸಂಘದ ಅಭಿವೃದ್ಧಿ ಹಾಗೂ ಕನ್ನಡದ ಕೈಂಕರ್ಯಕ್ಕೆ ಬದ್ಧರಾಗಲು ಸಮಸ್ತ ಕನ್ನಡ ಮನಸ್ಸುಗಳು ವಿಶೇಷವಾಗಿ ಯುವ ಪೀಳಿಗೆ ಮುಂದೆ ಬರಬೇಕು ಎಂದು ಕರೆ ನೀಡಿ ಶುಭ ಕೋರಿದರು.


ಇದೇ ಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಇಂ.ಸತೀಶ್ ಅಲಗೂರ ದಂಪತಿ, ಹೋಟೆಲ್ ಉದ್ಯಮದಲ್ಲಿ ಗಣನೀಯ ಸಾಧನೆಗೈದ ಹರೀಶ್ ಪ್ರಭು ದಂಪತಿ ಹಾಗೂ ಸಂಘದ ಏಳ್ಗೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ವೀಣಾ ಕಾಮತ್ ಅವರನ್ನು ಗಣ್ಯರು ಶಾಲು ಶ್ರೀಫಲ ಪುಷ್ಪಗುಚ್ಛ ಹಾಗೂ ಸ್ಮರಣಿಕೆ ನೀಡಿ ಆತ್ಮೀಯವಾಗಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಇಂ.ಸತೀಶ್ ಅಲಗೂರ ಅವರು “ಕಳೆದ ಎರಡು ದಶಕಗಳಿಂದ ಕಲ್ಯಾಣ ಪರಿಸರದಲ್ಲಿ ಕನ್ನಡದ ಕೈಂಕರ್ಯಕ್ಕೆ ಬದ್ದವಾಗಿದ್ದ ಕಲ್ಯಾಣ ಕರ್ನಾಟಕ ಸಂಘದ ಕಾರ್ಯ ಅಭಿನಂದನೀಯ ಹಾಗೂ ಅನುಕರಣನೀಯವಾಗಿದ್ದು, ನಾವು ಹೊರನಾಡ ಕನ್ನಡಿಗರು ಕನ್ನಡ ಭಾಷೆಯನ್ನು ಬಳಸಿದರೆ ಮಾತ್ರ ಕನ್ನಡ ಭಾಷೆ ಉಳಿದು ಬೆಳೆಯಲು ಸಾಧ್ಯ. ಆದ್ದರಿಂದ ನಾವೆಲ್ಲರೂ ನಮ್ಮ ನಮ್ಮ ಮನೆಗಳಲ್ಲಾದರೂ ನಮ್ಮ ಕುಟುಂಬ ಪರಿವಾರ ಜೊತೆಗೆ ಕನ್ನಡದಲ್ಲಿಯೇ ಮಾತನಾಡೋಣ” ಎಂದು ಹೇಳಿದ ಇಂ.ಸತೀಶ್ ಅಲಗೂರ್ ನನ್ನ ಸಮಾಜ ಸೇವೆಯನ್ನು ಗುರುತಿಸಿ ಕಲ್ಯಾಣ ಕರ್ನಾಟಕ ಸಂಘ ನೀಡಿದ ಈ ಹೃದಯಸ್ಪರ್ಶಿ ಸನ್ಮಾನವನ್ನು ಸ್ವೀಕರಿಸಲು ಹೃದಯ ತುಂಬಿ ಬಂದಿದೆ ಎಂದು ಹೇಳಿ ಶುಭಕೋರಿದರು. ಇನ್ನೋರ್ವ ಸನ್ಮಾನಿತೆ ವೀಣಾ ಕಾಮತ್ ಅವರು ಮಾತನಾಡಿ “ಸಂಘ ನನ್ನ ಅಳಿಲ ಸೇವೆಯನ್ನು ಗುರುತಿಸಿ ಅನಿರೀಕ್ಷಿತ ವಾಗಿ ನೀಡಿದ ಈ ಸನ್ಮಾನವನ್ನು ಹೃದಯಪೂರ್ವಕವಾಗಿ ಸ್ವೀಕರಿಸಿದ್ದೇನೆ. ನಾನು ಸಂಘಕ್ಕಾಗಿ ಮಾಡಿದ ಸೇವೆಗೆ ನನ್ನ ಪರಿವಾರ ಹಾಗೂ ಸಂಘದ ಪದಾಧಿಕಾರಿಗಳ ಅವಿರತ ಪರಿಶ್ರಮವೇ ಕಾರಣವಾಗಿದ್ದು, ನಿಮ್ಮೆಲ್ಲರ ಪ್ರೋತ್ಸಾಹದ ಶ್ರೀರಕ್ಷೆ ಸದಾ ನನ್ನ ಜೊತೆಗೆ ಇರಲಿ ಎಂದು ಆಶಿಸಿ ಶುಭಕೋರಿದರು.ಇದೇ ಸಂದರ್ಭದಲ್ಲಿ ವೇದಿಕೆಯ ಮೇಲಿನ ಗಣ್ಯರು ಕಲ್ಯಾಣ ಕರ್ನಾಟಕ ಸಂಘದ “ಸ್ಮರಣ ಸಂಚಿಕೆ(2024)”ಯನ್ನು ಬಿಡುಗಡೆ ಮಾಡಿದರು.ಸಂಘದ ಮಾಜಿ ಅಧ್ಯಕ್ಷ ಗೋಪಾಲ್ ಹೆಗ್ಡೆ ಅವರು “ಹರಿದು ಹಂಚಿ ಹೋಗಿದ್ದ ಜಾತಿ ಸಂಘಟನೆಗಳು ಕನ್ನಡ ನಾಡು ನುಡಿಗಾಗಿ ಒಗ್ಗೂಡ ಬೇಕು” ಎಂದು ಹೇಳುವದರ ಜೊತೆಗೆ ತಮ್ಮ ಅನೇಕ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು. ಸಂಘದ ಗೌ ಕಾರ್ಯದರ್ಶಿ ಜಯಂತ ದೇಶಮುಖ ಸಂಘದ ವಾರ್ಷಿಕ ವರದಿಯನ್ನು ಪ್ರಸ್ತುತ ಪಡಿಸಿದರು. ಶ್ರೀಧರ ಹಿಂದೂಪೂರ, ಉಪಾಧ್ಯಕ್ಷೆ ಜಯಂತಿ ಹೆಗ್ಡೆ ಯವರು ಗಣ್ಯರನ್ನು ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ದೈವಾಧೀನರಾದ ಸಂಘದ ಸಂಸ್ಥಾಪಕ ಅಧ್ಯಕ್ಷ ದಿ.ನಂದಾ ಶೆಟ್ಟಿ, ಪೂರ್ವ ಅಧ್ಯಕ್ಷ ಟಿ.ಎಸ್ ಉಪಾಧ್ಯಾಯ ಹಾಗೂ ಇತರ ಸದಸ್ಯರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ವೇದಿಕೆಯ ಮೇಲೆ ಗಣ್ಯರಾದ ಪ್ರಕಾಶ್ ಪಾಂಡುರಂಗಿ, ಬಿ.ಎಚ್ ಕಟ್ಟಿ, ಅಧ್ಯಕ್ಷ ಕೆ.ಎನ್.ಸತೀಶ್, ಗೌರವ ಕಾರ್ಯದರ್ಶಿ ಜಯಂತ ದೇಶಮುಖ,ಪೂರ್ವ ಅಧ್ಯಕ್ಷ ಗೋಪಾಲ್ ಹೆಗ್ಡೆ, ಉಪಾಧ್ಯಕ್ಷ ವಿಜಯ ಹುಣಸವಾಡಕರ, ಮಹಿಳಾಧ್ಯಕ್ಷೆ ವೀಣಾ ಕಾಮತ್, ಕೋಶಾಧಿಕಾರಿ ಗಣೇಶ್ ಪೈ ಮೊದಲಾದವರು ಉಪಸ್ತಿತರಿದ್ದರು. ಆಶಾ ನಾಯಕ, ಉಮಾ ನಾಯಕ ಹಾಗೂ ಜಯಂತಿ ಹೆಗ್ಡೆ ಅವರ ಪ್ರಾರ್ಥನೆ ಹಾಗೂ ನಾಡಗೀತೆಯೊಂದಿಗೆ ಗಣ್ಯರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ನಿರೂಪಣೆಗೈದ ಖ್ಯಾತ ನಿರೂಪಕಿ ಸವಿತಾ ಕುಲಕರ್ಣಿಯವರನ್ನು ವೇದಿಕೆಯ ಗಣ್ಯರು ಹೂ ಸ್ಮರಣಿಕೆಯನ್ನಿತ್ತು ಗೌರವಿಸಿದರು. ಸಮಾರಂಭದಲ್ಲಿ ಗಣ್ಯರಾದ ರಮೇಶ್ ಡಿ.ಶೆಟ್ಟಿ, ಕರ್ನಾಟಕ ಬ್ಯಾಂಕ್ ಹಿರಿಯ ಅಧಿಕಾರಿಗಳಾದ ರಾಜಗೋಪಾಲ್ ಹಾಗೂ ಓಂಕಾರ್ ಕುಲಕರ್ಣಿ ಮುಂತಾದವರು ಉಪಸ್ತಿತರಿದ್ದರು.

ಕರ್ನಾಟಕ ರಾಜ್ಯೋತ್ಸವ ಹಾಗೂ ಸಂಘದ ವಾರ್ಷಿಕೋತ್ಸವ ನಿಮಿತ್ತ ಆಯೋಜಿಸಿದ್ದ ಕನ್ನಡ ನಾಡು ನುಡಿ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಚಿಣ್ಣರ ವೇಷಭೂಷಣ ಸ್ಪರ್ಧೆ ಗಮನ ಸೆಳೆದವು.ಸಂಘದ ಕೋಶಾಧಿಕಾರಿ ಗಣೇಶ ಪೈಯವರ ವಂದನಾರ್ಪಣೆ ಹಾಗೂ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
