ಮಹಾರಾಷ್ಟ್ರ ವಿಧಾನಸಭೆಯ ಅವಧಿ ಮಂಗಳವಾರ ಅಂತ್ಯಗೊಳ್ಳುತ್ತಿದ್ದಂತೆ ಏಕನಾಥ್ ಶಿಂದೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ರಾಜ್ಯಪಾಲ ಸಿ ಪಿ ರಾಧಾಕೃಷ್ಣನ್ ಅವರಿಗೆ ಸಲ್ಲಿಸಿದ್ದಾರೆ. ಅದಾಗ್ಯೂ, ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವವರೆಗೆ ಹಂಗಾಮಿ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಲು ರಾಜ್ಯಪಾಲರು ಶಿಂದೆ ಅವರನ್ನು ಕೇಳಿ ಕೊಂಡಿದ್ದಾರೆ.
ಮಹಾಯುತಿ ಮೈತ್ರಿಕೂಟ ರಾಜ್ಯದಲ್ಲಿ ಭಾರಿ ಗೆಲುವಿನ ನಂತರ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಇನ್ನೂ ನಿರ್ಧರಿಸಿಲ್ಲ.
ಮಹಾರಾಷ್ಟ್ರದ ಮತದಾರರು ಮಹಾಯುತಿಗೆ ನಿರ್ಣಾಯಕ ವಿಜಯವನ್ನು ನೀಡಿದ್ದರೂ, ಮುಂದಿನ ಮುಖ್ಯಮಂತ್ರಿ ಬಗ್ಗೆ ಅನಿಶ್ಚತೆ ಉಳಿದಿದೆ.ರಾಜ್ಯದ ನಾಯಕತ್ವವನ್ನು ನಿರ್ಧರಿಸಲು ಹಿರಿಯ ಮಹಾಯುತಿ ನಾಯಕರು ಪ್ರಸ್ತುತ ಚರ್ಚೆಯಲ್ಲಿದ್ದಾರೆ. ಉಪಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ಅವರು ಈ ಹುದ್ದೆಗೆ ಮುಂಚೂಣಿಯಲ್ಲಿ ಇದ್ದರೂ ಶಿವಸೇನೆಯು ಏಕನಾಥ ಶಿಂದೆ ಅವರನ್ನು ಮುಖ್ಯಮಂತ್ರಿಯಾಗಿ ಉಳಿಸಿಕೊಳ್ಳುವುದನ್ನು ಬೆಂಬಲಿಸುತಿದೆ.
ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಚುನಾವಣಾ ಪ್ರಚಾರದಲ್ಲಿ ವಿಶೇಷ ಪಾತ್ರ ವಹಿಸಿದ್ದು, ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಆದರೆ ಶಿವಸೇನಾ ನಾಯಕರು ಶಿಂಧೆ ಮುಖ್ಯಮಂತ್ರಿಯಾಗಿ ಉಳಿಯಲು ತಮ್ಮ ಒಲವನ್ನು ವ್ಯಕ್ತಪಡಿಸಿದೆ. ಮಹಾಯುತಿಯ ಮೂರನೇ ಪಾಲುದಾರ ಎನ್ ಸಿ ಪಿ ಯ ನೇತಾರ ಅಜಿತ್ ಪವಾರ್ ಪಡ್ನವಿಸ್ ಮುಖ್ಯಮಂತ್ರಿ ಆಗುವಲ್ಲಿ ತಮ್ಮ ಅಭ್ಯಂತರ ಇಲ್ಲಾ ಎಂದಿದ್ದು, ಇನ್ನೋರ್ವ ಹಿರಿಯ ನಾಯಕ ಛಗನ್ ಭುಜಬಲ್ ಅವರು ಪಡ್ನವಿಸ್ ಅವರಿಗೆ ಸ್ವೀಕಾರಾರ್ಹ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ.
ಈ ನಡುವೆ ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ಮುಖ್ಯಮಂತ್ರಿಯ ಹೆಸರು ಘೋಷಣೆಯಾಗಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು 288 ಸದಸ್ಯ ಬಲದ ವಿಧಾನಸಭೆಯಲ್ಲಿ 235 ಸ್ಥಾನಗಳನ್ನು ಗೆದ್ದು ಗಣನೀಯ ಜಯ ಸಾಧಿಸಿದೆ. ಬಿಜೆಪಿ 135 ಸ್ಥಾನಗಳನ್ನು, ಅವರ ಮಿತ್ರಪಕ್ಷಗಳಾದ ಶಿವಸೇನೆ ಮತ್ತು ಎನ್ ಸಿ ಪಿ ಕ್ರಮವಾಗಿ 57 ಮತ್ತು 41 ಸ್ಥಾನ ಗಳಿಸಿದೆ.
