



*ಮಕ್ಕಳ ಪ್ರತಿಭೆ ಅರಳಿಸುವ ಕಾಯಕ ಮಾಡುತ್ತಿದೆ ಚಿಣ್ಣರಬಿಂಬ*
ಎಲ್ಲಿ ಸಂಸ್ಕೃತಿ, ಸಂಸ್ಕಾರ ಇರುತ್ತದೋ ಅಲ್ಲಿ ಮಾನವೀಯತೆಯ ಮೌಲ್ಯಗಳು ಮೊಳೆಯುತ್ತವೆ. ಎಲ್ಲಿ ಮಾನವೀಯ ತತ್ವ, ಮೌಲ್ಯಗಳಿರುತ್ತದೋ ಅಲ್ಲಿ ಮನುಷ್ಯತ್ವ ಅಂಕುರಿಸಿ ಒಳ್ಳೆಯ ಜೀವನ ಸಾಗಿಸಲು ಅವಶ್ಯಕವಾಗಿ ಬೇಕಾದ ಉತ್ತಮ ಗುಣನಡತೆಗಳ ಗೊಂಚಲು ಬೆಳೆಯುತ್ತವೆ. ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದೆ ಮಕ್ಕಳ ಹಿತಾಸಕ್ತಿಯ ಬಗ್ಗೆ ಯೋಚಿಸುತ್ತಾ ,ಅವರ ಬಾಳ ಭವಿಷ್ಯದ ಬಗ್ಗೆ ಚಿಂತಿಸುತ್ತಾ ಪ್ರಕಾಶ್ ಭಂಡಾರಿಯವರ ನೇತೃತ್ವದಲ್ಲಿ, ಸುರೇಂದ್ರಕುಮಾರ್ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಚಿಣ್ಣರಬಿಂಬ ಸಂಸ್ಥೆಯು ಉದಯವಾಗಿ ಇಂದು ಮುಂಬಯಿಯಲ್ಲಿ ಮಹಾಕ್ರಾಂತಿಯನ್ನು ಮಾಡುತ್ತಿದೆ. ಆರರಿಂದ ಹದಿನಾಲ್ಕು ವರ್ಷದವರೆಗಿನ ಮಕ್ಕಳಿಗೆ ಜೀವನದ ಮೌಲ್ಯಗಳನ್ನು ತಿಳಿಸಿ, ಅವರ ಆಂತರ್ಯದಲ್ಲಿ ಸುವಿಚಾರಗಳನ್ನು ಗಟ್ಟಿಯಾಗಿ ಬೇರೂರಿಸಿ ಬಾಳ ಭವಿಷ್ಯದ ಹಾದಿಯು ಸರಿಯಾಗಿ ಕ್ರಮಿಸುವಂತೆ ಮಾಡುವುದೇ ಇದರ ಮುಖ್ಯ ಧ್ಯೇಯವೆಂಬುವುದು ಉತ್ಪ್ರೇಕ್ಷೆಯ ಮಾತಲ್ಲ. ಇಂದು ರೂವಾರಿಗಳಾದ ಪ್ರಕಾಶ್ ಭಂಡಾರಿಯವರ ಕನಸು ಸಾಕಾರಗೊಳ್ಳುತ್ತಾ ಇದರ ಯಶಸ್ಸಿನ ತೇರು ಮುಂದೆ ಸಾಗುತ್ತಿರುವುದನ್ನು ನೋಡಿದಾಗ ಚಿಣ್ಣರಬಿಂಬದ ಸಾಧನೆ ಎಷ್ಟರ ಮಟ್ಟಿಗೆ ಗಣನೀಯವಾಗಿ ಬೆಳೆದಿದೆ ಎಂಬುವುದನ್ನು ಅಂದಾಜಿಸಬಹುದು. ಈ ಸಂಸ್ಥೆಯ ಕಾರ್ಯವೈಖರಿಯು ಮುಂಬಯಿಯಿಂದ ಕರ್ನಾಟಕದವರೆಗಿನ ತುಳು ಕನ್ನಡಿಗರ ಮನೆ ಮನದಲ್ಲಿ ವಿರಾಜಿಸುವುದರ ಜೊತೆಗೆ ಮಕ್ಕಳ ಮಾನಸಿಕ ಮನೋಬಲ ಆತ್ಮವಿಶ್ವಾಸ, ಆತ್ಮಸ್ಥೈರ್ಯವನ್ನು ಸದೃಢಗೊಳಿಸುತ್ತಿದ್ದು ಸರ್ವಾಂಗೀಣ ಬೆಳವಣಿಗೆಗೆ ಕಾರಣೀಭೂತವಾಗುತ್ತಿದೆ ಎಂದು ಈ ಮೊದಲೇ ಗಣ್ಯಾತಿಗಣ್ಯರು ಉದ್ಗರಿಸಿದ್ದರು. ಇದು ಚಿಣ್ಣರಬಿಂಬದ ಕೈಂಕರ್ಯಕ್ಕೆ, ಸೇವೆಗೆ, ಮಹತ್ಸಾಧನೆಗೆ ಸಿಕ್ಕಿದ ಪ್ರಶಂಸೆಯ ಸುರಿಮಳೆ ಎನ್ನುವುದು ಶ್ಲಾಘನೀಯ.
ಚಿಣ್ಣರಬಿಂಬದ ಮುಖೇನ ಕರ್ನಾಟಕದ ನಾಡು, ನುಡಿ, ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ, ಸಂಪ್ರದಾಯ, ಶಿಸ್ತು, ಹೊಂದಾಣಿಕೆ, ಸದಾಚಾರ, ಪರಂಪರೆ, ಹಬ್ಬ ಹರಿದಿನ, ಜಾತ್ರೆ ಜಾನಪದ ಕಲೆ, ಯಕ್ಷಗಾನ ಇವೆಲ್ಲವನ್ನು ಮುಂಬಯಿಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಪರಿಚಯಿಸಿ ತಾವೂ ಕೂಡಾ ತುಳು ಕನ್ನಡದ ಒಂದು ಭಾಗ ಎಂದು ಮಕ್ಕಳಿಗೆ ಮನದಟ್ಟು ಮಾಡಿಸುವಲ್ಲಿ ನಿರಂತರ ಶ್ರಮಿಕೆಯ ಫಲವೆಂಬಂತೆ 2023 ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಪುರಸ್ಕಾರ ಚಿಣ್ಣರಬಿಂಬದ ಮುಡಿಗೇರಿ ಮುಕುಟದ ಮಣಿಯಂತೆ ಮಿನುಗಿ ರಾರಾಜಿಸಿದ್ದು ಇದರ ಸಾಧನೆಯ ಹಿರಿಮೆಗೊಂದು ಗರಿಯಾಗಿದೆ ಎಂದರೂ ಅತಿಶಯೋಕ್ತಿಯಾಗಲಾರದು.
22 ರ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಚಿಣ್ಣರಬಿಂಬವು ಇನ್ನು ಕೇವಲ ಮೂರೇ ವರ್ಷಕ್ಕೆ ಕಾಲು ಶತಮಾನವನ್ನು ಪೂರೈಸಿ ಬೆಳ್ಳಿ ಹಬ್ಬದ ಓಘದತ್ತ ಸಾಗುತ್ತಿರುವುದು ಚಿಣ್ಣರಬಿಂಬದ ಸಫಲತೆಗಾಗಿ ಅಹರ್ನಿಶಿ ದುಡಿಯುತ್ತಿರುವವರೆಲ್ಲರ ಮನದಲ್ಲಿ ಸಂತಸದ ಪುಳಕ, ಹೇಳಲಾಗದ ಆನಂದ. ವಿವರಿಸಲು ಪದಗಳೇ ಇಲ್ಲವೇನು ಎಂಬುವಷ್ಟರ ಮಟ್ಟಿಗೆ ಮನದಲ್ಲಿ ತುಡಿತ. ಈ ಸಂಭ್ರಮದ ಪರ್ವವು ಮಕ್ಕಳ ಕಲರವದಲ್ಲಿ , ಪಾಲಕ ಪೋಷಕರ ಹರ್ಷೋದ್ಗಾರದಲ್ಲಿ, ರೂವಾರಿಗಳು, ಪದಾಧಿಕಾರಿಗಳು, ಶಿಕ್ಷಕರ ಅವಿರತ ಶ್ರಮಕ್ಕೆ ಸಾಕ್ಷಿಯೆಂಬಂತೆ ಜಯದ ರಥವೇರಿ, ಉತ್ತುಂಗದ ಶಿಖರವೇರಿ ವಿಜೃಂಭಿಸಬೇಕೆಂಬುವುದೇ ಎಲ್ಲರ ಕನಸಾಗಿದೆ.
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಭಾಷೆಯ ಜೊತೆಗೆ ಸಂಸ್ಕಾರವೂ ಅತ್ಯಗತ್ಯ .ಅದಕ್ಕಾಗಿ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಉತ್ತಮ ಜೀವನದ ಪಾಠಗಳನ್ನು ಹೇಳಿಕೊಟ್ಟು ಅವರನ್ನು ಮಾನಸಿಕವಾಗಿ ಸುಶಿಕ್ಷಿತರನ್ನಾಗಿ ಮಾಡಿ ಹೊಂದಾಣಿಕೆ, ಸಾಮರಸ್ಯದಿಂದ ಜೀವನದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬ ನೀತಿಯನ್ನು ತಿಳಿಸಲಾಗುತ್ತದೆ. ಅಲ್ಲದೆ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ವರ್ಷ ವಿಶೇಷವಾಗಿ ನಾಟಕೋತ್ಸವ, ಯಕ್ಷಗಾನೋತ್ಸವೊಗಳನ್ನು ಸ್ಪರ್ಧೆಗಳ ಮುಖೇನ ಸಂಯೋಜಿಸಿ ಮಕ್ಕಳಿಗೆ ಪೌರಾಣಿಕ, ಸಾಮಾಜಿಕ ಕಥೆಗಳನ್ನು ತಿಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದೆ. ಇಂದು ಜಂಗಮವಾಣಿ ಯುಗವಾಗುತ್ತಿರುವ ಸಮಯದಲ್ಲಿ ನಾಟಕ, ಯಕ್ಷಗಾನದ ಅಭಿರುಚಿಯನ್ನು ಮಕ್ಕಳಲ್ಲಿ ತುಂಬಿಸಿ, ಸುಲಲಿತವಾಗಿ ಪ್ರದರ್ಶಿಸಲು ಪ್ರಸಿದ್ಧ ಯಕ್ಷಗುರುಗಳಿಂದ, ಖ್ಯಾತ ನಾಟಕ ನಿರ್ದೇಶಕರಿಂದ ತರಬೇತಿಯನ್ನು ನೀಡಲಾಗುತ್ತದೆ. ಈ ವಿಶೇಷವಾದ ಆಯೋಜನೆಯಿಂದ ಚಿಣ್ಣರು ವೇದಿಕೆಯಲ್ಲಿ ಪ್ರಬುದ್ಧ ಅಭಿನಯವನ್ನು ನೀಡಿ, ಕರುನಾಡಿನ ಜಾನಪದ ಕಲೆಯಾದ ಯಕ್ಷಗಾನವನ್ನು ನವರಸಗಳಿಂದ ಪ್ರದರ್ಶಿಸುತ್ತಾ ನೆರೆದ ಸಭಿಕರನ್ನು, ಗಣ್ಯಾತಿಗಣ್ಣರನ್ನು ಮಂತ್ರಮುಗ್ಧಗೊಳಿಸುವುದರಲ್ಲಿ ಅಚ್ಚರಿಯೇನಿಲ್ಲ. ಚಿಣ್ಣರಬಿಂಬದಲ್ಲಿ ಕಂಗೊಳಿಪ ಚಿಣ್ಣರ ಪ್ರತಿಭೆಯನ್ನು ಕಣ್ತುಂಬಿಸಿಕೊಳ್ಳುವ ಸದಾವಕಾಶ ಎಲ್ಲಾ ತುಳು ಕನ್ನಡಿಗರಿಗೆ ಸಿಕ್ಕಿರುವುದು ಭಾಗ್ಯವೇ ಸರಿ.
ನವೆಂಬರ್ 29 ರಂದು ಚಿಣ್ಣರ ನಾಟಕೋತ್ಸವ ನವಂಬರ್ 30 ರಂದು ಯಕ್ಷಗಾನದ ಸ್ಪರ್ಧೆಯು ಮೈಸೂರು ಅಸೋಸಿಯೇಷನ್ ನಲ್ಲಿ ನಡೆಯಲಿದೆ. ಮಕ್ಕಳ ಅಮೋಘ ಪ್ರದರ್ಶನವು ಗಣ್ಯರ, ಕಲಾರಸಿಕರ, ಕಲಾಪೋಷಕರ, ಕಲಾಭಿಮಾನಿಗಳ ಕರತಾಡನಕ್ಕೆ ಸಾಕ್ಷಿಯಾಗಿ ಮಕ್ಕಳ ಪ್ರತಿಭೋತ್ಸವವಾಗುವುದರಲ್ಲಿ ಸಂಶಯವಿಲ್ಲ.
ಡಿಸೆಂಬರ್ 1ರಂದು ಕುರ್ಲಾ ಬಂಟರ ಸಂಘದಲ್ಲಿ ಮಕ್ಕಳ ಕಲರವದಲ್ಲಿ 22 ನೇ ವಾರ್ಷಿಕೋತ್ಸವವು ಬಹು ಅದ್ದೂರಿಯಿಂದ ಜರಗಲಿದೆ. ಪುಟಾಣಿಗಳು ಭಜನೆಯನ್ನು ಭಕ್ತಿಭಾವದಿಂದ ಹಾಡುತ್ತಾ, ಭಕ್ತಿರಸವನ್ನು ಸ್ಪುರಿಸುತ್ತಾ ತಲ್ಲೀನಗೊಳಿಸುವ ಪರಿ, ಜಾನಪದ ನೃತ್ಯದ ವಿಜೃಂಭಣೆಯ ವೈಭವ, ಹಾಡುಗಳ ಸೊಗಸು, ಜಾನಪದ ಸೊಗಡನ್ನು ಚಿತ್ರಿಸುವ ಪಾಲಕರ ಸಮೂಹಗಾನ ಇವೆಲ್ಲವನ್ನು ಶಬ್ಧದಲ್ಲಿ ವಿವರಿಸಲು ಸಾಧ್ಯವಾಗದು. ನೋಡಿ ಹರ್ಷಿಸಬೇಕು, ಕೇಳಿ ಕರ್ಣ ತಂಪಾಗಿಸಬೇಕು, ಅನುಭವಿಸಿ ಮನ ಪ್ರಪುಲ್ಲವಾಗಬೇಕು ಎಂಬುವಲ್ಲಿ ಚಿಣ್ಣರ ಪ್ರತಿಭೆ ಸಾಕ್ಷಿಯಾಗಿ ಚಿಣ್ಣರಬಿಂಬದ ಸೃಷ್ಟಿಗೆ ಸಾರ್ಥಕ್ಯದ ಭಾವವನ್ನು ತರಲಿದೆ. ಈ ಮೂರು ದಿವಸ ಮಹಾರಾಷ್ಟ್ರದಲ್ಲಿರುವ ಕನ್ನಡದ ಜನತೆಗೆ ವಿಜೃಂಭಣೆಯ ಮಹಾಮೇಳದ ವಾತಾವರಣವನ್ನು ಸೃಷ್ಟಿಸಿ ಅಮೋಘ ಸನ್ನಿವೇಶಕ್ಕೆ ಕಾರಣೀಭೂತವಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.
ಚಿಣ್ಣರಬಿಂಬವು ಅನ್ಯರಾಜ್ಯದಲ್ಲಿ ಕನ್ನಡದ ಡಿಂಡಿಮವನ್ನು ಬಾರಿಸುತ್ತಾ, ಮಹಾರಾಷ್ಟ್ರದಲ್ಲಿ ಮಕ್ಕಳ ಮುಖೇನ ಕನ್ನಡದ ಕಲರವವನ್ನು ಮಾಡುತ್ತಾ, ತುಳು ಕನ್ನಡಿಗರ ಸಂಸ್ಕೃತಿಯ ನ್ನು ಪಸರಿಸಿ ಇಡೀ ಮಹಾರಾಷ್ಟವನ್ನೇ ಕನ್ನಡಮಯವಾಗಿಸಿದೆ ಎನ್ನುವುದು ತುಳು ಕನ್ನಡಿಗರು ಕಂಡುಕೊಂಡ ಸತ್ಯ. ಚಿಣ್ಣರಬಿಂಬವು ಇನ್ನು ಕೇವಲ ಮೂರು ವರ್ಷಕ್ಕೆ ರಜತ ಮಹೋತ್ಸವವನ್ನು ಆಚರಿಸುವ ಸಂಭ್ರಮದಲ್ಲಿದೆ. ದಕ್ಷ ನಾಯಕತ್ವದ ಚುಕ್ಕಾಣಿ ಹಿಡಿದು ಸಮರ್ಪಕವಾಗಿ ಈ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಚಿಣ್ಣರಬಿಂಬದ ರೂವಾರಿ ಪ್ರಕಾಶ್ ಭಂಡಾರಿ, ರೇಣುಕಾ ಭಂಡಾರಿ, ಸ್ಥಾಪಕಾಧ್ಯಕ್ಷೆ ಪೂಜಾ ಭಂಡಾರಿ, ಕಾರ್ಯಾಧ್ಯಕ್ಷೆ ನೈನಾ ಭಂಡಾರಿಯವರ ಕನಸಿನ ಗೋಪುರಕ್ಕೆ ಬೆಳ್ಳಿ ಹಬ್ಬದ ಸಿಂಚನವು ತಾರೆಗಳಂತೆ ಮಿಂಚಿ, ಪರ್ವದೋಪಾದಿಯಲ್ಲಿ ಸಡಗರದಿಂದ ಅಚರಿಸುವ ಸಮಯಕ್ಕೆ ಸನ್ನಹಿತವಾಗುತ್ತಿದೆ ಎಂಬುವುದೇ ಸಂತಸದ ವಿಚಾರ. ಸುರೇಂದ್ರಕುಮಾರ್ ಹೆಗ್ಡೆ, ಗೀತಾ ಹೇರಳ, ಪೂರ್ಣಿಮಾ ಶೆಟ್ಟಿ, ಭಾಸ್ಕರ್ ಶೆಟ್ಟಿ ತಾಳಿಪಾಡಿಗುತ್ತು, ಅಶೋಕ್ ಪಕ್ಕಳ, ರಮೇಶ್ ರೈ, ಆಶಾಲತಾ ಕೊಠಾರಿ, ಸುಮಿತ್ರಾ ದೇವಾಡಿಗ ಇವರ ಸಂಧರ್ಭೋಚಿತ ಸಮಾಲೋಚನೆ, ಕೇಂದ್ರ ಸಮಿತಿ, ಶಿಬಿರ ಮುಖ್ಯಸ್ಥರ, ಸಾಂಸ್ಕೃತಿಕ ಮುಖ್ಯಸ್ಥರ, ಸ್ವಯಂಸೇವಕರ, ಪಾಲಕರ ಪರಿಶ್ರಮ, ಶಿಕ್ಷಕಿಯರು ಮಕ್ಕಳಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ತಿಳಿಸುವ ಸುವಿಚಾರಗಳು ಚಿಣ್ಣರಬಿಂಬದ ಯಶಸ್ವಿಗೆ ಕಾರಣವಾಗಿವೆ. ಈ ಸಂಸ್ಥೆಯು ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಿ ವಿಶ್ವದಾದ್ಯಂತ ಕೀರ್ತಿಯು ಉತ್ತುಂಗ ಶಿಖರಕ್ಕೇರಲಿ ಎಂಬ ಶುಭ ಹಾರೈಕೆ.
—–
*ಶೋಭಾ ಎಸ್.ಶೆಟ್ಟಿ ನೆಲ್ಲಿದಡಿಗುತ್ತು*