
ಕ್ರೀಡಾ ಸ್ಫೂರ್ತಿ, ಸಮಾಜದ ಬಗ್ಗೆ ಅಭಿಮಾನ ಕಂಡು ಹೆಮ್ಮೆಯಾಗುತ್ತಿದೆ – ಸುರೇಶ್ ಕಾಂಚನ್
ಮುಂಬಯಿಯ ಪ್ರತಿಷ್ಟಿತ ಸಾಮಾಜಿಕ ಸಂಘಟನೆಗಳಲ್ಲಿ ಒಂದಾದ ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ ಇದರ 82ನೇ ವಾರ್ಷಿಕ ಕ್ರೀಡಾಕೂಟವು ಡಿಸೆಂಬರ್ 1ರ ಆದಿತ್ಯವಾರ, ಬೆಳಿಗ್ಗೆ ಚರ್ಚ್ ಗೇಟ್ ಬಳಿಯ ಕರ್ನಾಟಕ ಸ್ಪೋರ್ಟಿಂಗ್ ಎಸೋಸಿಯೇಶನ್ ಮೈದಾನದಲ್ಲಿ ಜರಗಿತು.
ಪ್ರಾರಂಭದಲ್ಲಿ ಕುಲಮಾತೆ ಶ್ರೀ ಮಹಿಷಾಮರ್ದಿನಿ ಅಮ್ಮನವರಿಗೆ ಪೂಜೆ ಸಲ್ಲಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಬಳಿಕ ಸಂಘದ ಗೌರವ ಅಧ್ಯಕ್ಷ ಸುರೇಶ್ ಆರ್ ಕಾಂಚನ್ ಅವರು ತೆಂಗಿನಕಾಯಿ ಓಡೆದು, ಬಣ್ಣ ಬಣ್ಣದ ಬೆಲೂನ್ ಆಕಾಶಕ್ಕೆ ಹಾರಿಸಿ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಿದರು.

ಬಳಿಕ ಸಮಾಜ ಭಾಂದವರನ್ನುದ್ದೇಶಿಸಿ ಮಾತನಾಡಿದ ಸುರೇಶ್ ಕಾಂಚನ್ “ಇಲ್ಲಿ ಇಂದು ಹಬ್ಬದ ವಾತಾವರಣ ರೂಪುಗೊಂಡಿದೆ, ಇದರ ಹಿಂದೆ ಸಂಘದ ಪದಾಧಿಕಾರಿಗಳ, ಕ್ರೀಡಾ ಸಮಿತಿಯ ಎಲ್ಲರ ಪರಿಶ್ರಮವಿದೆ. ಸಂಘದ ಯಾವುದೇ ಕಾರ್ಯಕ್ರಮ ಆಯೋಜಿಸುವುದು ಸುಲಭವಲ್ಲ, ಇದರ ಹಿಂದೆ ಆಯೋಜಕರ ಅಪಾರ ಶ್ರಮವಿದೆ. ಇಂದು ಇಷ್ಟು ಬೆಳಿಗ್ಗೆ ದೂರದ ಉಪನಗರಗಳಿಂದ ದೊಡ್ಡ ಸಂಖ್ಯೆಯಲ್ಲಿ ನಿಮ್ಮೆಲ್ಲರ ಉಪಸ್ಥಿತಿ ಕಂಡು ಸಂತಸವಾಯಿತು. ನಿಮ್ಮ ಕ್ರೀಡಾ ಸ್ಫೂರ್ತಿ, ಸಮಾಜದ ಬಗ್ಗೆ ಅಭಿಮಾನ ಕಂಡು ಹೆಮ್ಮೆ ಅನಿಸುತ್ತದೆ.ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಎಲ್ಲರೂ ಇಲ್ಲಿ ಒಟ್ಟು ಸೇರಿರುವುದೇ ಅಪರೂಪದ ಸನ್ನಿವೇಶ, ಎಲ್ಲರಿಗೂ ಶ್ರೀ ಮಹಿಷಾಮರ್ದಿನಿ ತಾಯಿಯ ಅನುಗ್ರಹವಿರಲಿ” ಎಂದರು.
ಗೌರವ ಅತಿಥಿ, ಸಂಘದ ಮಾಜಿ ಅಧ್ಯಕ್ಷ ಮಹಾಬಲ ಕುಂದರ್ ತನ್ನ ಅನಿಸಿಕೆ ತಿಳಿಸುತ್ತಾ “ಸಂಫದ ಕ್ರೀಡಾಕೂಟದಲ್ಲಿ ಇಷ್ಟು ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಒಟ್ಟಾಗಿರುವುದು ಇದೇ ಮೊದಲು, ಇದೇ ಉತ್ಸಹ ಸಂಘದ ಇತರ ಚಟುವಟಿಕೆಗಳ್ಳಲ್ಲಿ ತೋರಿಬರಲಿ. ಕ್ರೀಡಾ ಸ್ಫೂರ್ತಿಯಿಂದ ಎಲ್ಲರೂ ಭಾಗವಹಿಸಿ, ನಿರ್ಣಾಯಕರ ತೀರ್ಪನ್ನು ಮನ್ನಿಸಿ” ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ ಅವರು ಮಾತನಾಡುತ್ತಾ “ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ನಿಮ್ಮೆಲ್ಲರ ಉಪಸ್ಥಿತಿ ನಿಜಕ್ಕೂ ಸಂತಸ ತಂದಿದೆ.ಎಲ್ಲರೂ ಆಸಕ್ತಿಯಿಂದ ಕ್ರೀಡೆಗಳಲ್ಲಿ ಭಾಗವಹಿಸಿ, ಸೋಲು-ಗೆಲುವಿನ ಬಗ್ಗೆ ಚಿಂತೆ ಬೇಡ, ಭಾಗವಹಿಸುವುದು ಮುಖ್ಯ” ಎಂದರು.
ಗೌರವ ಅತಿಥಿ, ಎಸ್ ಎ ಗ್ರೂಪ್ ನ ಸಿ ಎಂ ಡಿ ಸಂತೋಷ್ ಪುತ್ರನ್, ಸಂಘದ ಉಪಾಧ್ಯಕ್ಷರುಗಳಾದ ರಾಜೇಂದ್ರ ಚಂದನ್, ಸುರೇಶ್ ತೋಳಾರ್, ಗೌರವ ಕಾರ್ಯದರ್ಶಿ ಗಣೇಶ್ ಮೆಂಡನ್, ಗೌರವ ಕೋಶಾಧಿಕಾರಿ ಸತೀಶ್ ಶ್ರೀಯಾನ್, ಡೊಂಬಿವಲಿ ಸಮಿತಿಯ ಗೌರವ ಕಾರ್ಯಧ್ಯಕ್ಷ ಭಾಸ್ಕರ್ ಕಾಂಚನ್, ಕಾರ್ಯಧ್ಯಕ್ಷ ರಾಜು ಮೊಗವೀರ, ಥಾಣೆ ಸಮಿತಿಯ ಗೌರವ ಕಾರ್ಯಧ್ಯಕ್ಷ ಗೋಪಾಲ ಮೊಗವೀರ ಬಗ್ವಾಡಿ, ಕಾರ್ಯಧ್ಯಕ್ಷ ಗೋಪಾಲ ಚಂದನ್, ಮೀರಾ ರೋಡ್ ಸಮಿತಿಯ ಕಾರ್ಯಧ್ಯಕ್ಷ ರಘುರಾಮ್ ಚಂದನ್, ಮಹಿಳಾ ವಿಭಾಗದ ಗೌರವ ಕಾರ್ಯಧ್ಯಕ್ಷೆ ಸುಚಿತ್ರ ಎಸ್ ಪುತ್ರನ್, ಕಾರ್ಯಧ್ಯಕ್ಷೆ ಡಾ. ಸುದೀಪ ಎಂ ಕುಂದರ್, ಕ್ರೀಡಾ ಕಾರ್ಯದರ್ಶಿಗಳಾದ ಅಶೋಕ್ ಮೆಂಡನ್, ಉಮೇಶ್ ಮೊಗವೀರ ವೇದಿಕೆಯಲ್ಲಿ ಉಪಸ್ಥಿತರಿದ್ದರು.




ಸೇವಾದಾಳದ ಕ್ಯಾಪ್ಟನ್ ಮಾಧವ ಸುವರ್ಣ, ಉಪ ಕ್ಯಾಪ್ಟನ್ ದಿನೇಶ್ ಹೆಮ್ಮಾಡಿ ಕ್ರೀಡಾ ಜ್ಯೋತಿಯನ್ನು ಕ್ರೀಡಾ ಮೈದಾನಕ್ಕೆ ತಂದು ಸುರೇಶ್ ಕಾಂಚನ್ ಅವರಿಗೆ ಹಸ್ತಾಂತರಿಸಿದರು.
ಸುರೇಶ್ ತೋಳಾರ್ ಕ್ರೀಡಾಕೂಟದ ನಿಯಮವನ್ನು ವಿವರಿಸಿದರು.
ಪ್ರಾರಂಭದಲ್ಲಿ ರಾಘವೇಂದ್ರ ಮೊಗವೀರ ಪ್ರಾರ್ಥನೆ ಮಾಡಿದರು.
ಗೌರವ ಕಾರ್ಯದರ್ಶಿ ಗಣೇಶ್ ಮೆಂಡನ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ಕ್ರೀಡಾಕೂಟದ ಉದ್ಘಾಟನೆಯಾದ ಬಳಿಕ ನಡೆದ ಪಥ ಸಂಚಲನದಲ್ಲಿ ಸಂಘದ ಕೇಂದ್ರ ಕಛೇರಿ, ಡೊಂಬಿವಲಿ ಸಮಿತಿ, ಥಾಣೆ ಸಮಿತಿ, ಮೀರಾ ರೋಡ್ ಸಮಿತಿ, ಕುಂದಾಪುರ ಶಾಖೆ, ಮತ್ತು ಮಹಿಳಾ ವಿಭಾಗದ ಸದಸ್ಯರು ಪಾಲ್ಗೊಂಡರು. ಮೀನುಗಾರರ ವೇಷ-ಭೂಷಣದೊಂದಿಗೆ, ಮೀನುಗಾರಿಕೆಗೆ ಸಂಬಂಧಪಟ್ಟ ಪರಿಕರಗಳ ಪಥ ಸಂಚಲನ ಎಲ್ಲರನ್ನೂ ಆಕರ್ಷಿಸಿತು.
ಬಳಿಕ ಮಕ್ಕಳು, ಯುವಕರು, ಮಹಿಳೆಯರು ತಮ್ಮ ತಮ್ಮ ವಯೋಗುಣಗನುಸಾರವಾಗಿ ವಿವಧ ಕ್ರೀಡೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಿದರು.
ಉದ್ಘಾಟನಾ ಸಮಾರಂಭ ಶ್ರೀಮತಿ ಸಿದ್ದು ರಾಮ ಕಾಂಚನ್ ವೇದಿಕೆಯಲ್ಲಿ ನಡೆಯಿತು.