‘ಫೆಂಗಲ್’ ಚಂಡಮಾರುತದ ಆರ್ಭಟ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹೆಚ್ಚಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಗಡಿಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ‘ಫೆಂಗಲ್’ ಚಂಡಮಾರುತದಿಂದಾಗಿ ಕರ್ನಾಟಕ-ಕೇರಳ ಗಡಿಯಲ್ಲಿ ಭಾರೀ ಮಳೆಯಾಗುತ್ತಿದೆ. ಕುಂಬ್ಳೆ ಬಳಿ ರಸ್ತೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಮಂಗಳೂರಿನಲ್ಲಿ ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ, ಸಮುದ್ರ ತೀರಗಳಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಪ್ರಕೃತಿ ವಿಕೋಪ ಉಂಟಾದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ಬಂಗಾಲ ಕೊಲ್ಲಿಯಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ ಹೆಚ್ಚಾಗಿರುವುದರಿಂದ ಉಡುಪಿ ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇಂದು ರಾತ್ರಿ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ, ಹೀಗಾಗಿ ನದಿ, ಸಮುದ್ರ ಪಾತ್ರದ ಜನ ಮುನ್ನೆಚ್ಚರಿಕೆ ವಹಿಸುವಂತೆ ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ ಮೀನುಗಾರರು ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.
ಪೆಂಗಲ್ ಚಂಡಮಾರುತದ ಪರಿಣಾಮವಾಗಿ ಭಾರಿ ಮಳೆ ಆಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತವು ಎಲ್ಲ ಅಂಗನವಾಡಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜು ವರೆಗೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಡಿಸೆಂಬರ್ 3ರಂದು (ಮಂಗಳವಾರ )ರಜೆ ಘೋಷಿಸಿದೆ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ರಜೆ ಘೋಷಿಸಿ ಆದೇಶ ನೀಡಿದ್ದಾರೆ ಈಗಾಗಲೇ ಸಾರ್ವಜನಿಕರು ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.
ಭಾರಿ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ ಜಿಲ್ಲಾಡಳಿತವು ಎಲ್ಲಾ ಅಂಗನವಾಡಿ, ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜು ವರೆಗೆ ನಾಳೆ( ಡಿ.3)ರಜೆ ಘೋಷಿಸಿದ್ದಾರೆ.
