April 2, 2025
ಮುಂಬಯಿ

ಮುಂಬಯಿ ಕನ್ನಡ ಸಂಘದ ದತ್ತಿ ಉಪನ್ಯಾಸ ಕಾರ್ಯಕ್ರಮ


ಒಂದು ಸಂಘವನ್ನು ಕಟ್ಟುವುದು ಸುಲಭ ಆದರೆ ಅದನ್ನು ಮುನ್ನಡೆಸುವುದುಕಷ್ಟದ ಕೆಲಸ : ಎಸ್‌.ನಳಿನಾ ಪ್ರಸಾದ್‌

ವರದಿ : ಸೋಮನಾಥ ಎಸ್‌.ಕರ್ಕೇರ


“ ಸಂಘವನ್ನು ಕಟ್ಟುವುದು ಸುಲಭ ಆದರೆ ಅದನ್ನು ಮುನ್ನಡೆಸಲು ತುಂಬಾ ಶ್ರಮ ಪಡಬೇಕಾಗುತ್ತದೆ. ಏಕೆಂದರೆ ಸಂಘವು ಸಾಗುವ ದಾರಿಯಲ್ಲಿ ಅನೇಕ ಎಡರು ತೊಡರುಗಳನ್ನು ಎದುರಿಸಬೇಕಾಗುತ್ತದೆ. ಮುಂಬಯಿ ಕನ್ನಡ ಸಂಘವು ಕಳೆದ ಎಂಟು ದಶಕಕ್ಕೂ ಹೆಚ್ಚು ಸಮಯದಿಂದ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಂತು ಈಗ ತೊಂಬತ್ತನೇ ವರ್ಷಕ್ಕೆ ಕಾಲಿರಿಸಲು ಅಣಿಯಾಗುತ್ತಿರುವುದುಸಂತೋಷದ ಸಂಗತಿ “ ಹೀಗಂದವರು ರಂಗ ಕಲಾವಿದೆ, ಕವಯಿತ್ರಿ ಮತ್ತು ಸಂಘಟಕಿ ಎಸ್‌.ನಳಿನಾ ಪ್ರಸಾದ್‌. ಅವರು ಮಾಟುಂಗಾ[ ಪೂರ್ವ] ದ ಮುಂಬಯಿ ಕನ್ಡಡ ಸಂಘದ ವತಿಯಿಂದ ಶನಿವಾರ ದಿನಾಂಕ 21/12/24 ರಂದು ಏರ್ಪಡಿಸಲಾದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಅವರು ಮುಂದುವರಿಯುತ್ತಾ, ಮುಂಬಯಿಯಲ್ಲಿರುವ ನೂರಾರು ಕನ್ನಡ ಸಂಘಗಳು ಈ ನಗರದಲ್ಲಿ ಕನ್ನಡದ ಪರಿಚಾರಿಕೆಯನ್ನು ಮಾಡುತ್ತಿದ್ದು ಇದರ ಜೊತೆಯಲ್ಲಿ ಮುಂಬಯಿ ವಿಶ್ವವಿದ್ಯಾಲದ ಕನ್ನಡ ವಿಭಾಗವು ಅದರ ಮುಖ್ಯಸ್ಥರಾದ ಡಾ. ಜಿ.ಎನ್‌, ಉಪಾಧ್ಯರ ಸಾರಥ್ಯದಲ್ಲಿ ಅನೇಕ ಕನ್ನಡ ಪರ ಕಾರ್ಯಕ್ರಮಗಳನ್ನು ಜರಗಿಸುವ ಹಾಗೂ ಮೌಲಿಕ ಕೃತಿಗಳನ್ನು ಪ್ರಕಟಿಸುವ ಮೂಲಕ ಕನ್ನಡಮ್ಮನ ಸೇವೆ ಮಾಡುತ್ತಿದೆ ಎಂದರಲ್ಲದೆ ಮುಂಬಯಿಯ ಕನ್ನಡ ಸಂಸ್ಥೆಗಳು ನಾಟಕ, ನೃತ್ಯ ಮುಂತಾದ ಕಲೆಗಳನ್ನೂ ಪ್ರೋತ್ಸಾಹಿಸುತ್ತಿವೆ ಎಂದು ಖಾರ್ಘರ್‌ ಕನ್ರಾಟಕ ಸಂಘದ ಗೌರವ ಅಧ್ಯಕ್ಷರೂ ಆಗಿರುವ ನಳಿನಾ ಪ್ರಸಾದ್‌ ನುಡಿದರು.


ಖಾಲ್ಸಾ ಕಾಲೇಜು ಕನ್ನಡ ಪ್ರೇಮಿ ಮಂಡಳಿ ದತ್ತಿ ನಿಧಿಯ ಉಪನ್ಯಾಸಕರಾಗಿ ‘ ಮುಂಬಯಿಯಲ್ಲಿ ಕನ್ನಡದ ಭವಿಷ್ಯ’ ಎಂಬ ವಿಷಯದ ಮೇಲೆ ಕವಯಿತ್ರಿ , ಲೇಖಕಿ ಶ್ರೀಮತಿ ಗಾಯತ್ರಿ ನಾಗೇಶ ಅವರು ಮಾತನಾಡುತ್ತಾ ಮುಂಬಯಿ ಒಂದು ಬಹು ಭಾಷಾ ನಗರ. ಮುಖ್ಯವಾಗಿ ಉದ್ಯೋಗ ನಿಮಿತ್ತ ಮುಂಬೈಗೆ ಕನ್ನಡಿಗರು ವಲಸೆ ಬರುತ್ತಿದ್ದುದರಿಂದ ಈ ನಗರದಲ್ಲಿ ಕನ್ನಡದ ವಾತಾವರಣವಿದೆ ಕನ್ನಡ ಎಂಬುದು ಕೇವಲ ಭಾಷೆ ಅಷ್ಟೇ ಅಲ್ಲ ಅದೊಂದು ಬದುಕಿನ ಕ್ರಮವೂ ಆಗಿದೆ. ಕನ್ನಡಕ್ಕೆ 2000 ವರ್ಷಗಳ ಇತಿಹಾಸವಿದೆ. .ಮುಂಬೈಯ ಯಾಂತ್ರಿಕ ಜೀವನದ ನಡುವೆಯೂ ಕನ್ನಡಿಗರು ಕನ್ನಡ ಸಂಘ -ಸಂಸ್ಥೆಗಳನ್ನು ಕಟ್ಟುವುದರ ಜೊತೆಗೆ ಕನ್ನಡ ಉಳಿಸಿ ಬೆಳೆಸುತ್ತಿದ್ದಾರೆ. . ಮುಂಬೈ ಕನ್ನಡಿಗರು ಹಗಲು ಮತ್ತು ರಾತ್ರಿ ಶಾಲೆಗಳನ್ನು ನಡೆಸುವುದರ ಮೂಲಕ ಕನ್ನಡ ಭಾಷೆಯ ಜೀವಂತಿಕೆಗೆ ಸಾಕ್ಷಿಯಾಗಿದ್ದಾರೆ ಎಂದರಲ್ಲದೆ ಪ್ರಕಾಶ್‌ ಭಂಢಾರಿಯವರು ತಮ್ಮ ಚಿಣ್ಣರ ಬಿಂಬ ಸಂಸ್ಥೆಯ ಮೂಲಕ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವ ಕನ್ನಡಿಗರ ಮಕ್ಕಳನ್ನೂ ಮುಂಬಯಿಯಲ್ಲಿ ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ . ಈ ಎಲ್ಲಾ ಬೆಳವಣಿಗೆಯನ್ನು ಕಾಣುವಾಗ ಮುಂಬಯಿಯಲ್ಲಿ ಕನ್ನಡಕ್ಕೆ ಉಜ್ವಲ ಭವಿಷ್ಯವಿರುವುದು ಖಂಡಿತ ಎಂದು ಅಭಿಪ್ರಾಯಪಟ್ಟರು.

ದಿ. ಜಿ.ವಿ. ರಂಗಸ್ವಾಮಿ ದತ್ತಿ ಉಪನ್ಯಾಸದಲ್ಲಿ “ ರಂಗ ಭೂಮಿ- ಕಲಾ ವೈಭವ” ಎಂಬ ವಿಷಯದ ಕುರಿತು ನಟ ನಿರ್ದೇಶಕ, ಲೇಖಕ, ಯಕ್ಷಗಾನ ಕಲಾವಿದ ಉಡುಪಿ ಗುಣಪಾಲರು ಮಾತನಾಡುತ್ತಾ ಕಲೆ ಎಂಬುದು
ದಿವ್ಯವಾಗಿದೆ. ಕಲೆಯನ್ನು ಶೃದ್ದೆಯಿಂದ ಆರಾಧಿಸಬೇಕು, ದಿವ್ಯ ಚೇತನವೇ ಅಭಿನಯ., ಭಾವನೆಗಳ ಅಭಿವ್ಯಕ್ತಿಯೇ ಅಭಿನಯ. .ಯಕ್ಷಗಾನ ರಂಗಭೂಮಿಗೆ ಶ್ರೇಷ್ಠ ಕಲಾವಿದರ ತಮ್ಮದೇ ಆದ ಕೊಡುಗೆ ಇದೆ.ಆದರ್ಶವಾದ ಪ್ರತಿಬಿಂಬವೇ ಕಲೆಯಾಗಿ ಹೊಮ್ಮತ್ತದೆ. ಮಾನವನ ಜೀವನದಲ್ಲಿ ಜಾನಪದ ಹಾಡುಗಳು, ಕಥಕ್ಕಳಿ ಮುಂತಾದ ಕಲೆಗಳು ನೈಜ ಬದುಕನ್ನು ಕಟ್ಟಿ ಕೊಡುತ್ತವೆ.ಎಂದು ಕಲೆಯ ವಿವಿಧ ಆಯಾಮಗಳಬಗ್ಗೆ ವಿವರವಾಗಿ ತಿಳಿಸಿದರು .ಕಲಾವಿದನಾದವನು ಯಾವುದೇ ಪಾತ್ರ ಸಿಕ್ಕರೂ ಆ ಪಾತ್ರದ ಒಳಹೊಕ್ಕು ತನ್ನ ಸಂಪೂರ್ಣ ಪ್ರತಿಭೆಯನ್ನುಪಾತ್ರಕ್ಕೆ ಧಾರೆ ಎರೆಯಬೇಕು ಎಂದರು . ಮಾತಿನ ಮಧ್ಯೆ ಭಾವುಕರಾದ ಅವರು ತಮ್ಮ ಮೆಚ್ಚಿನ ‘ನಟಸಾಮ್ರಾಟ’ ನಾಟಕದ ಕೆಲವು ಸಂಭಾಷಣೆಯನ್ನು ಪ್ರಸುತ್ತಪಡಿಸಿದರು.
ಸಂಘದ ಉಪಾಧ್ಯಕ್ಷರಾದ ಡಾ.ಎಸ್‌.ಕೆ ಭವಾನಿಯವರು ಮಾತನಾಡಿ ಕನ್ನಡ ಸಂಘಕ್ಕೆ ಅನೇಕ ಮಹನಿಯರು ಕಾಲಕಾಲಕ್ಕೆ ಭೇಟಿ ಇತ್ತು ಸಂಘದ ಕಾರ್ಯಕಲಾಪಗಳನ್ನು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ ಎಂದರಲ್ಲದೆ ಇನ್ನು ಮುಂದೆಯೂ ಸಂಘದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಘವನ್ನು ಪ್ರೋತ್ಸಾಹಿಸುತ್ತಿರಬೇಕೆಂದು ನೆರೆದರನ್ನು ವಿನಂತಿಸಿಕೊಂಡರು.
ಇದೇ ಸಂದರ್ಭದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕಳೆದ ಶೈಕ್ಷಣಿಕ ವರ್ಷದಲ್ಲಿ ನಡೆಸಲಾದ ಕನ್ನಡ ಎಂ.ಎ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಗಳಿಸಿದ ವಿದ್ಯಾ ರಾಮಕೃಷ್ಣ ಇವರನ್ನು ಮುಂಬಯಿ ಕನ್ನಡ ಸಂಘದ ವತಿಯಿಂದ ಉಪಾಧ್ಯಕ್ಷರಾದ ಡಾ.ಎಸ್‌.ಕೆ.ಭವಾನಿಯವರು ನಗದು ಪುರಸ್ಕಾರವನ್ನು ನೀಡಿ ಗೌರವಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಗುರುರಾಜ್ಎಸ್‌.ನಾಯಕ್‌ ಸಂಘದ ಸ್ಥಾಪನೆಯಾದಂದಿನಿಂದ ಈ ವರೆಗೆ ನಡೆದು ಬಂದ ದಾರಿಯ ಮೇಲೆ ಬೆಳಕು ಚೆಲ್ಲಿ ಮಾತನಾಡಿ ಸಂಘದ ನೂತನ ಕಾರ್ಯಾಲಯದ ಪುನರ್‌ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದ್ದು ಬೇಗನೆ ಸಂಘವು ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದರು.
ಲೇಖಕಿ ಸುರೇಖಾ ದೇವಾಡಿಗರು ನಳಿನಾ ಪ್ರಸಾದರನ್ನು ಪರಿಚಯಿಸಿ ಮುಂಬಯಿ ಕನ್ನಡ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಜನಿ ಪೈ, ಅವರಿಗೆ ಶಾಲು ಹೊದಿಸಿ ಪುಷ್ಟಗುಚ್ಛ ನೀಡಿ ಗೌರವಿಸಿದರು . ಲೇಖಕಿ ಹಾಗೂ ಚೆಂಬೂರು ಕರ್ನಾಟಕ ಹೈಸ್ಕೂಲ್‌ ಮತ್ತು ಜ್ಯೂನಿಯರ್‌ ಕಾಲೇಜಿನ ಉಪ ಪ್ರಾಂಶುಪಾಲೆ ಅರ್ಚನಾ ಪೂಜಾರಿಯವರು ಗಾಯತ್ರಿ ನಾಗೇಶ್‌ರನ್ನು ಪರಿಚಯಿಸಿದರು ಮತ್ತು ಸಂಧ್ಯಾ ಪ್ರಭು ಅವರನ್ನು ಗೌರವಿಸಿದರು. ಸಂಘದ ಜೊತೆ ಕಾರ್ಯದರ್ಶಿ ಮಲ್ಲಿಕಾರ್ಜುನ ಬಡಿಗೇರರು ಉಡುಪಿ ಗುಣಪಾಲರನ್ನು ಪರಿಚಯಿಸಿ ನಾಗೇಶ್‌ ಕುಂದರ್‌ ಅವರನ್ನು ಸನ್ಮಾನಿಸಿದರು.
ಎಸ್‌.ಕೆ ಪದ್ಮನಾಭರಿಂದ ಪ್ರಾರ್ಥನೆಯಾದ ಬಳಿಕ ಗುರುರಾಜ್‌ ನಾಯಕ್‌ ಎಲ್ಲರಿಗೂ ಸ್ವಾಗತ ಬಯಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಧಾಕರ ಸಿ.ಪೂಜಾರಿ ವಂದನಾರ್ಪಣೆ ಗೈದರು. ಪ್ರಧಾನ ಕಾರ್ಯದರ್ಶಿ ಸೋಮನಾಥ ಎಸ್‌.ಕರ್ಕೇರರು ಕಾರ್ಯಕ್ರಮದ ನಿರೂಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಅಕ್ಷಯ ಮಾಸಿಕದ ಪ್ರಧಾನ ಸಂಪಾದಕ ಡಾ.ಈಶ್ವರ ಅಲೆವೂರು, ಸಾಹಿತ್ಯ ಬಳಗದ ಎಸ್‌.ಕೆ. ಸುಂದರ್‌, ಸಯಾನ್‌ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಜಿ,ಪಿ.ಕುಸುಮಾ ,ಮುಂಬಯಿ ವಿಶ್ವವಿದ್ಯಾಲಯದ ಆಶಾ ಸುವರ್ಣ ಮುಂತಾದವರು ಉಪಸ್ಥಿತರಿದ್ದರು. ಎಸ್‌.ಕೆ. ಪದ್ಮನಾಭ, ನಾರಾಯಣ ರಾವ್‌, ನಾಗೇಶ್‌ ಕುಂದರ್‌ ಮತ್ತು ಪುರಂದರ ಸಾಲ್ಯಾನ್‌ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕೊನೆಯಲ್ಲಿ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
-ಸೋಮನಾಥ ಎಸ್‌.ಕರ್ಕೇರ, 9819321186

Related posts

ಅಂಧೇರಿ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ವತಿಯಿಂದ ಒಡಿಯೂರು ಶ್ರೀ ಗಳಿಗೆ ಗುರುವಂದನೆ

Mumbai News Desk

ಮಹಾರಾಷ್ಟ್ರ ಚುಣಾವಣಾ ಸಹ ಪ್ರಮುಖರಾದ ಅಶ್ವಿನಿ ಎಮ್. ಎಲ್. ಮುಂಬಯಿ ಪ್ರವಾಸ

Mumbai News Desk

ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ (ರಿ).ಇದರ ವಿಹಾರಕೂಟದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯವತಿಯಿಂದಸಮಾಜದ ಮಹಿಳೆಯರಿಗಾಗಿ ಆಯೋಜಿಸಿದ ಹೂವಿನ ರಂಗೋಲಿ ಸ್ಪರ್ಧೆ :

Mumbai News Desk

ಅಭಿನಯ ಮಂಟಪ ( ರಿ.) ಮುಂಬಯಿ ಎರಡು ನಾಟಕಗಳ ಮುಹೂರ್ತ

Mumbai News Desk

ಡೊಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ ಮಹಾಶಿವರಾತ್ರಿ ಉತ್ಸವ

Mumbai News Desk