ಘಾಟ್ ಕೋಪರ್ ಪಶ್ಚಿಮ ಚಿರಾಗ್ ನಗರದಲ್ಲಿ ನಿನ್ನೆ (ಡಿ. 27) ತಡ ಸಂಜೆ ವೇಗವಾಗಿ ಬಂದ ಟೆಂಪೋ ಪಾದಾಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ 35 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಆಕೆಯ 65 ವರ್ಷದ ತಾಯಿ ಮತ್ತು ಇತರ ನಾಲ್ವರು ಗಾಯಗೊಂಡಿದ್ದಾರೆ.
ಮೃತ ಮಹಿಳೆಯನ್ನು ಪ್ರೀತಿ ರಿತೇಶ್ ಪಟೇಲ್ ಎಂದು ಗುರುತಿಸಲಾಗಿದ್ದು ವಾರ್ಶಿವಾಡಿಯ ಭಾಗೀರಥಿ ಚಾಲ್ ನಿವಾಸಿಯಾಗಿದ್ದು, ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ನಂತರ ಟೆಂಪೋ ಚಾಲಕ 25 ವರ್ಷದ ಉತ್ತಮ್ ಬಬನ್ ಖಾರತ್ ನನ್ನು ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಕಳುಹಿಸಿದ್ದಾರೆ. ಪೊಲೀಸರ ಪ್ರಕಾರ ಶುಕ್ರವಾರ ಸಂಜೆ 6:55ರ ಸುಮಾರಿಗೆ ಚಿರಾಗ್ ನಗರದ ಮೀನು ಮಾರುಕಟ್ಟೆ ರಸ್ತೆಯಲ್ಲಿರುವ ಅಜಾದ ಮಸಾಲಾ ಅಂಗಡಿಯ ಮುಂದೆ ಈ ಘಟನೆ ಸಂಭವಿಸಿದೆ, ಕಿರಿದಾದ ರಸ್ತೆಯಲ್ಲಿ ಜನರು ತರಕಾರಿ ಖರೀದಿಸುತ್ತಿದ್ದಾಗ ಮಾರುಕಟ್ಟೆಗೆ ಕೆಲವು ಉತ್ಪನ್ನಗಳನ್ನು ತಲುಪಿಸಿದ ಖಾರತ್ ಚಾಲನೆ ಮಾಡುತಿದ್ದ ಟೆಂಪೋ ನಿಯಂತ್ರಣ ಕಳೆದುಕೊಂಡು ಆರು ಪಾದಚಾರಿಗಳ ಮೇಲೆ ಡಿಕ್ಕಿ ಹೊಡೆದಿದೆ.
ಖಾರತ್ ವಾಹನ ಚಲಿಸುವಾಗ ಮೂರ್ಛೆ ಹೊಂದಿದ್ದು ಸ್ಟಿರಿಂಗ್ ನಿಯಂತ್ರಣ ತಪ್ಪಿದಂತಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ಡಿಸೇಂಬರ್ 10ರಂದು ಕುರ್ಲಾ ಪಶ್ಚಿಮದಲ್ಲಿ ಬೆಸ್ಟ್ ಬಸ್ ಚಾಲಕನ ನಿಯಂತ್ರಣ ಕಳಕೊಂಡು ಹಾರಾಟ ನಡೆಸಿ, 8 ಜನರು ಸಾವನಪ್ಪಿ, 49 ಜನರು ಗಂಭೀರ ಗಾಯಗೊಂಡ ಘಟನೆ ಇನ್ನೂ ಮಾಸದಿರುವ ಮುನ್ನವೇ, ಘಾಟ್ ಕೋಪರ್ ನ ಟೆಂಪೋ ಅಪಘಾತ ಜನರನ್ನು ಗಾಬರಿಗೊಳಿಸಿದೆ.

previous post