
ಮುಂಬಯಿ ಉಪ ನಗರ ಘಾಟ್ಕೋಪರ್ ಪಶ್ಚಿಮದ ಜಗದುಶಾ ನಗರದ ಶ್ರೀ ಭವಾನಿ ಶನೀಶ್ವರ ದೇವಸ್ಥಾನದ 45ನೇ ವಾರ್ಷಿಕ ಮಹಾಪೂಜಾ ಉತ್ಸವವು 2025ರ, ಜನವರಿ 4ರಂದು ಭಕ್ತಿ ಶ್ರದ್ಧೆಯೊಂದಿಗೆ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ಪ್ರಧಾನ ಅರ್ಚಕರಾದ ಪವಿತ್ರ ಭಟ್ ಅವರ ನೇತೃತ್ವದಲ್ಲಿ ಸ್ವಸ್ತಿ ಪುಣ್ಯಾಹ, ನಿತ್ಯ ಪೂಜೆ, ನವಕ ಕಲಶ ಪೂಜೆ, ಗಣ ಹೋಮ, ನವಗ್ರಹ ಶಾಂತಿ, ಕಲಶಾಭಿಷೇಕ ನಡೆಯಿತು. ಈ ಸಂದರ್ಭದಲ್ಲಿ ದೇವರಿಗೆ ಬೆಳ್ಳಿಯ ಮುಖ ಕವಚವನ್ನು ಸಮರ್ಪಿಸಲಾಯಿತು.
ನಂತರ ಸಂತೋಷ್ ಪುರೋಹಿತ್ ಅವರ ಪೌರೋಹಿತ್ಯದಲ್ಲಿ
ವಿನು ನಾರಾಯಣ್ ಪೂಜಾರಿ, ಮಲ್ಲಿಕಾ ವಿನು ಪೂಜಾರಿ
ಅನಂತ್ ಮಾಯಕರ್, ಅಂಜಲಿ ಮಯಕರ್ ದಂಪತಿಗಳ ಸಂಕಲ್ಪದಲ್ಲಿ ಶ್ರೀ ಸತ್ಯ ನಾರಾಯಣ ಮಹಾಪೂಜೆ ನಡೆಯಿತು.
ಮಧ್ಯಾಹ್ನ ಶ್ರೀ ಶನಿಶ್ವರ ಗ್ರಂಥ ಪಾರಾಯಣ ಪ್ರಾರಂಭವಾಗಿ
ನಂತರ ಯಕ್ಷಗಾನ ತಾಳಮದ್ದಲೆ ರೂಪದಲ್ಲಿ ಪಾರಾಯಣ ಮುಂದುವರಿಯಿತು.ಮಹಾನಗರದ ಪ್ರಸಿದ್ಧ ವಾಚಕರು, ಭಾಗವತರು, ಅರ್ಥದಾರಿಗಳು, ಹಿಮ್ಮೇಳ ಕಲಾವಿದರು ಪಾರಯಣದಲ್ಲಿ ಪಾಲು ಪಡೆದರು.
ಈ ಮಧ್ಯೆ ಸ್ಥಳೀಯ ಶಾಸಕರಾದ ರಾಮ್ ಕದಂ ಹಾಗೂ ಇನ್ನಿತರ ರಾಜಕೀಯ ನೇತಾರರು ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿ ಆದ್ಯಾತ್ಮ ಮತ್ತು ಸನಾತನ ಧರ್ಮದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.



ಬಳಿಕ ಪಲ್ಲ ಪೂಜೆ, ಭಜನೆ ನಡೆದು, ಶ್ರೀ ಮಹಾಗಣಪತಿ, ಶ್ರೀ ಶನೀಶ್ವರ ಮತ್ತು ಶ್ರೀ ಜೈ ಭವಾನಿ ದೇವರಿಗೆ ಮಹಾ ಮಂಗಳಾರತಿ ನಡೆಯಿತು.
ನೂರಾರು ಭಕ್ತರು ಮಧ್ಯಾನ್ಹ ಮತ್ತು ಸಂಜೆ ಪೂಜೆಯಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿ ಅನ್ನ ಸಂತರ್ಪಣೆ ಯಲ್ಲಿ ಪಾಲ್ಗೊಂಡರು.



ಕಳೆದ 45 ವರ್ಷಗಳಿಂದ ಘಾಟ್ಕೋಪರ್ ಪರಿಸರದಲ್ಲಿ ವಿವಿಧ ಧಾರ್ಮಿಕ ಸಾಮಾಜಿಕ ಕಾರ್ಯಗಳೊಂದಿಗೆ ಶ್ರೀಮಹಾಗಣಪತಿ, ಶ್ರೀ ಶನೀಶ್ವರ, ಶ್ರೀ ಜೈ ಭವಾನಿ ದೇವರನ್ನು ಆರಾಧಿಸಿಕೊಂಡು ಬರುತ್ತಿದ್ದು, ಇದೀಗ ಅಧ್ಯಕ್ಷರಾದ ಶಂಕರ್ ಎನ್ ಪೂಜಾರಿಯವರ ಮುಂದಾಳತ್ವದಲ್ಲಿ 45 ನೆಯ ಪೂಜಾ ಉತ್ಸವವು ಸಮಿತಿಯ ಕಾರ್ಯಧ್ಯಕ್ಷರಾದ ಸಂತೋಷ್ ಸಾಬ್ಳೆ, ಉಪ ಕಾರ್ಯಧ್ಯಕ್ಷರಾದ ಜಿ ಕೂಸಪ್ಪ, ಗೌರವ ಪ್ರಧಾನ ಕಾರ್ಯದರ್ಶಿ ಪುಷ್ಪ ಕೆ ಕೋಟ್ಯಾನ್, ಗೌರವ ಕೋಶಾಧಿಕಾರಿ ಪ್ರಕಾಶ್ ಎಸ್ ಪೂಜಾರಿ, ಉಪಾಧ್ಯಕ್ಷರಾದ ಸೋಮನಾಥ್ ಜೆ ಪೂಜಾರಿ, ಜೊತೆ ಕಾರ್ಯದರ್ಶಿ ಪ್ರಮೋದ್ ಎಸ್ ಪೂಜಾರಿ, ಜೊತೆ ಕೋಶಾಧಿಕಾರಿ ಯಶೋದ ಎಸ್ ಪೂಜಾರಿ, ಪ್ರಧಾನ ಅರ್ಚಕರಾದ ಪವಿತ್ರ ಭಟ್ ಮತ್ತು ಎಲ್ಲಾ ಸದಸ್ಯರ ಹಾಗೂ ಸ್ಥಳೀಯರ ಸಹಕಾರದೊಂದಿಗೆ ವಿಜೃಂಭಣೆಯಿಂದ ನೆರವೇರಿತು.