ಉಡುಪಿ: ಅರಣ್ಯ ಕುರಿತಾದ ಅತ್ಯುತ್ತಮ ವರದಿಗಾಗಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಆರ್. ಎಲ್ ವಾಸುದೇವ ರಾವ್ ಪ್ರಶಸ್ತಿಗೆ ವಿಜಯವಾಣಿಯ ಕಾರ್ಕಳ ತಾಲೂಕು ವರದಿಗಾರ ಹರಿಪ್ರಸಾದ್ ನಂದಳಿಕೆ ಆಯ್ಕೆಗೊಂಡಿದ್ದು ಭಾನುವಾರ ತುಮಕೂರಿನಲ್ಲಿ ನಡೆದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.ಕಳೆದ ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಕಾರ್ಕಳ ತಾಲೂಕು ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ವಿಜಯವಾಣಿಯಲ್ಲಿ ಅರಣ್ಯ ಕುರಿತಾಗಿ ಮಾಡಿದ ವಿಶೇಷ ವರದಿಗಾಗಿ ಈ ಪ್ರಶಸ್ತಿ ಲಭಿಸಿದೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್, ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಉಡುಪಿ ಜಿಲ್ಲಾ ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ಬಹುಮುಖ ಪ್ರತಿಭೆ : ಹರಿಪ್ರಸಾದ್ ನಂದಳಿಕೆ ಕಳೆದ 15 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ದುಡಿಯುತ್ತಿದ್ದು ದೃಶ್ಯ ಮಾದ್ಯಮ ಸೇರಿದಂತೆ ವಿವಿಧ ಸಂಸ್ಥೆಯಲ್ಲಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಅಲ್ಲದೆ ಓರ್ವ ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿರುವ ಇವರು ನಾನಾ ನಾಟಕ ತಂಡದಲ್ಲಿ ಪ್ರದಾನ ಪಾತ್ರವನ್ನು ಮಾಡಿ ಕಲಾಭಿಮಾನಿಗಳ ಮನ ರಂಜಿಸಿದ್ದಾರೆ. ಇತ್ತಿಚಿನ ಕೆಲ ವರ್ಷಗಳಿಂದ ತುಳುವ ಸಿರಿ ಕಲಾವಿದರು ನಂದಳಿಕೆ ನಾಟಕ ತಂಡವನ್ನು ಕಟ್ಟಿಕೊಂಡು ನಾಟಕ ರಚನೆ, ನಿರ್ದೇಶನದ ಜೊತೆಗೆ ಕಲಾವಿದರಿಗೆ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. ನಂದಳಿಕೆಯ ಗುರುದುರ್ಗಾ ಮಿತ್ರ ಮಂಡಳಿಯ ಮಾಜಿ ಅಧ್ಯಕ್ಷರಾಗಿ, ಪತ್ರಕರ್ತರ ಸಂಘಟನೆಗಳ ತಾಲೂಕು ಹಾಗೂ ಜಿಲ್ಲಾ ಸದಸ್ಯರಾಗಿದ್ದು, ಉಡುಪಿ ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟದ ಜೊತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ರಂಗಭೂಮಿಯ ಸಾಧನೆಗಾಗಿ 2021 ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಯುವ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅಲ್ಲದೆ ಹತ್ತು ಹಲವು ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ.