
ಸಂಪೂರ್ಣವಾಗಿ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆಯಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಇಂದು (ಜ. 27) ಬೆಳಿಗ್ಗೆ ಚಪ್ಪರ ಮುಹೂರ್ತ ನಡೆಯಿತು.

ಕ್ಷೇತ್ರದ ಪ್ರಧಾನ ತಂತ್ರಿ ಜ್ಯೋತಿಷ್ಯ ವಿದ್ವಾನ್ ಕೆ ಪಿ ಕುಮಾರ ಗುರು ತಂತ್ರಿ, ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಇವರ ಉಪಸ್ಥಿತಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬಳಿಕ ಚಪ್ಪರ ಮಹೂರ್ತ ನೆರವೇರಿಸಲಾಯಿತು.

ಬ್ರಹ್ಮಕಲಶೋತ್ಸವ ಪ್ರಯುಕ್ತ ನವದುರ್ಗಾ ಲೇಖನ ಯಜ್ಞ ಆಯೋಜಿಸಲಾಗಿದ್ದು, ಚಪ್ಪರ ಮುಹೂರ್ತದ ಬಳಿಕ ಪೂರ್ವಭಾವಿ ಸಭೆ ನಡೆಯಿತು.ಈ ಸಂದರ್ಭದಲ್ಲಿ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಕಾರ್ಯ ಅಧ್ಯಕ್ಷ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಗೌರವ ಅಧ್ಯಕ್ಷ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ನವದುರ್ಗ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಮಾಜಿ ಶಾಸಕ, ಕೆ ರಘುಪತಿ ಭಟ್, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನಡಿಕೆರೆ ರತ್ನಾಕರ್ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಕೆ ರವಿಕಿರಣ್, ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ವಿವಿಧ ಸಮಿತಿಗಳ ಪದಾಧಿಕಾರಿಗಳು ಕಾಪು ಗ್ರಾಮದ ಭಗವದ್ಭಕ್ತರು ಪಾಲ್ಗೊಂಡಿದ್ದರು.

ದೇವಸ್ಥಾನದಲ್ಲಿ ಫೆಬ್ರವರಿ 4ರಂದು ನವದುರ್ಗ ಲೇಖನ ಯಜ್ಞ ಸಮರ್ಪಣಪೂರ್ವಕವಾಗಿ ನವಚಂಡಿಯಾಗ, ಫೆಬ್ರವರಿ 9ರಂದು ಸ್ವರ್ಣ ಗದ್ದುಗೆ, ರಜತ ರಥ ಪುರಪ್ರವೇಶ, ಫೆಬ್ರವರಿ 22 ಮತ್ತು 23 ರಂದು ಬೃಹತ್ ಹೊರೆ ಕಾಣಿಕೆ ಸಮರ್ಪಣೆ ಹಾಗೂ ಫೆಬ್ರವರಿ 25 ರಿಂದ ಮಾರ್ಚ್ 5 ರ ತನಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಆ ನಿಮಿತ್ತ ನಡೆಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಹಾ ಅನ್ನಸಂತರ್ಪಣೆಯ ಉದ್ದೇಶಕ್ಕಾಗಿ ಇಂದು ಚಪ್ಪರಮಹೂರ್ತ ನೆರವೇರಿಸಲಾಗಿದೆ.