
ಮಹಿಳೆಯರೆಲ್ಲರೂ ಒಗ್ಗಟ್ಟಾದಾಗ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ: ನಿಶಿತಾ ಸೂರ್ಯಕಾಂತ್ ಸುವರ್ಣ
ಜಯ ಸುವರ್ಣ ಅಭಿಮಾನಿಗಳ ಪ್ರಾಯೋಜಕತ್ವದಲ್ಲಿ ಮುಂಬೈ ಬಿಲ್ಲವರು ಆಯೋಜಿಸಿದ ಅರಶಿನ ಕುಂಕುಮ ಕಾರ್ಯಕ್ರಮ ಫೆ.1 ರಂದು ಗೊರೇಗಾವ್ ಪೂರ್ವದ ಜಯಲೀಲಾ ಬ್ಯಾಂಕ್ವೇಟ್ ಹಾಲ್ ನಲ್ಲಿ ಜರಗಿತು.
ಅಪರಾಹ್ನದಿಂದ ಸಂಜೆ ತನಕ ನಗರದ ವಿವಿಧ ಉಪನಗರಗಳಿಂದ ಆಗಮಿಸಿದ ಮಹಿಳೆಯರಿಂದ ಭಜನಾ ಸಂಕೀರ್ತನ ಜರಗಿತು. ತದ ನಂತರ ಅರಶಿನ ಕುಂಕುಮದ ಸಭಾ ಕಾರ್ಯಕ್ರಮವನ್ನು ಭಾರತ್ ಬ್ಯಾಂಕಿನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣರ ಪತ್ನಿ ,ರಾಜ್ಯಮಟ್ಟದ ಸೌಂದರ್ಯ ಸ್ಪರ್ಧೆ ವ್ಯವಸ್ಥಾಪಕಿ ನಿಶಿತಾ ಸೂರ್ಯಕಾಂತ್ ಸುವರ್ಣ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಬಹಳ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೀರಿ, ಇದನ್ನು ಕಂಡಾಗ ಸಂತೋಷವಾಗುತ್ತದೆ, ನಾವೆಲ್ಲರೂ ಒಗ್ಗಟ್ಟಾಗಿ ಸಮಾಜವನ್ನು ಬಲಿಷ್ಠ ಗೊಳಿಸಬೇಕಾಗಿದೆ, ಅದಕ್ಕಾಗಿ ಮುಂದೆ ಮಹಿಳೆಯರೆಲ್ಲರೂ ಒಗ್ಗಟ್ಟಾಗಿ ಮಹಿಳಾ ದಿನಾಚರಣೆ ಮತ್ತಿತರ ಕಾರ್ಯಕ್ರಮಗಳನ್ನು ಒಗ್ಗಟ್ಟಿನಿಂದ ಆಚರಿಸೋಣ. ಇದು ನಿಮ್ಮೆಲ್ಲರ ಪ್ರೋತ್ಸಾಹ ಸಹಕಾರದಿಂದ ಸಾಧ್ಯವಾಗುತ್ತದೆ, ಸಮಾಜ ಸೇವೆಯನ್ನು ನಾವೆಲ್ಲರೂ ಹೊಂದಾಣಿಕೆಯಿಂದ ಮಾಡೋಣ, ಮಹಿಳೆಯರ ಸಂಘಟನಾ ಚತುರತೆಗೆ ವೇದಿಕೆ ನಿರ್ಮಿಸೋಣ ಎಂದು ನುಡಿದರು




ಈ ಸಂದರ್ಭದಲ್ಲಿ ಅತಿಥಿಗಳಾದ ಶೋಭಾ ದಯಾನಂದ್, ಪ್ರಭಾ ಎನ್ ಸುವರ್ಣ, ಸುಕೇಶಿನಿ ವೈ ಪೂಜಾರಿ, ಸಭಿತಾ ಜಿ ಪೂಜಾರಿ, ಕುಮುದಾ ಪೂಜಾರಿ, ಮಮತಾ ಎಸ್ ಪೂಜಾರಿ, ವನಿತಾ ಎ ಕುಕ್ಯಾನ್, ಮಾಲತಿ ಬಂಗೇರ, ಹೇಮಲತಾ ಪೂಜಾರಿ, ದೇವಕಿ ಎಸ್ ಕರ್ಕೇರ ಹಾಗೂ ಶಶಿಕಲಾ ಕೋಟ್ಯಾನ್ ದೀಪ ಬೆಳಗಿಸಿದರು.
ಮುತ್ತೈದೆಯರ ಅರಶಿನ ಕುಂಕುಮ ಮಹತ್ವದ ಕುರಿತು ಬಬಿತ ಡಿ ಪೂಜಾರಿ ಮಾತನಾಡಿದರು, ಕಾರ್ಯಕ್ರಮದಲ್ಲಿ 23 ವಿಧವೆಯರಿಗೆ ಸೀರೆ ಮತ್ತು ಧನ ಸಹಾಯ ನೀಡಿ ಮತ್ತೈದೆಯರು ಹಾಗೂ ಹಿರಿಯ ಗಣ್ಯ ವ್ಯಕ್ತಿಗಳು ಗೌರವಿಸಿದರು.
ಕಾರ್ಯಕ್ರಮದಲ್ಲಿ ಮುಂಬೈಯ ವಿವಿಧ ಉಪನಗರಗಳಿಂದ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು . ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ದಾನಿಗಳಿಗೆ ಹಾಗೂ ಪಾಲ್ಗೊಂಡ ಎಲ್ಲರಿಗೂ ಜಯ ಸುವರ್ಣ ಅಭಿಮಾನಿಗಳಿಂದ, ಮುಂಬೈ ಬಿಲ್ಲವರಿಂದ ಧನ್ಯವಾದ ಸಮರ್ಪಸಲಾಯಿತು.