
ಚಿತ್ರ ವರದಿ : ಪಿ.ಆರ್.ರವಿಶಂಕರ್
ಬಡಗುತಿಟ್ಟು ಯಕ್ಷಗಾನ ಕಲಾವಿದನಾಗಿದ್ದು ಹಲವಾರು ವರ್ಷ ವಿವಿಧ ವೇಷಗಳಲ್ಲಿ ಅರ್ಥಧಾರಿಯಾಗಿ ಮಿಂಚಿದ ಮುಂಬೈ ದಹಿಸರ್ ನ ದಿ. ಕುಕ್ಕೆಹಳ್ಳಿ ವಿಠಲ ಪ್ರಭು ಇವರ ಸ್ಮರಣಾರ್ಥ ಫೆಬ್ರುವರಿ ತಾ. 01 ಶನಿವಾರದಂದು ಡೊಂಬಿವಿಲಿಯ ಪೂರ್ವದಲ್ಲಿನ ಶ್ರೀ ವರದ ಸಿದ್ಧಿವಿನಾಯಕ ಸಭಾಭವನದಲ್ಲಿ ” ಭೀಷ್ಮ ವಿಜಯ ” ಯಕ್ಷಗಾನ ಪ್ರದರ್ಶನ ನಡೆಯಿತು . ಅಪರಾಹ್ನ ಮೂರು ಘಂಟೆಗೆ ಜರಗಿದ ಕಿರುಸಭಾ ಕಾರ್ಯಕ್ರಮವು ಕು| ಸಾನ್ವಿ ಎಸ್.ನಾಯಕ್ ಮತ್ತು ಕು| ದ್ರುವಿಕಾ ಡಿ. ಭಟ್ ಭರತ ಇವರ ವಿಘ್ನೇಶ್ವರ ಸ್ತುತಿ ಭರತ ನಾಟ್ಯದೊಂದಿಗೆ ಆರಂಭಗೊಂಡಿತು.
ಸಂಪೂರ್ಣ ಕಾರ್ಯಕ್ರಮ ನಿರೂಪಿಸಿದ ಪತ್ರಕರ್ತ ಪಿ.ಆರ್.ರವಿಶಂಕರ್ ( ಡಹಾಣೂ ಕನ್ನಡಿಗರ ಬಳಗದ ) ” ಗಂಡು ಮೆಟ್ಟಿನ ಕಲೆ ಎಂದೇ ಪ್ರಸಿದ್ಧಿ ಪಡೆದ ಪರಶುರಾಮ ಸೃಷ್ಟಿಯ ಮಣ್ಣಿನ ಶ್ರೇಷ್ಟ ಕಲೆಯು ಮನೋರಂಜನೆಯೊಂದಿಗೆ ಅಧ್ಯಾತ್ಮಿಕ ಭಕ್ತಿ ಭಾವವನ್ನು ಬೆಳೆಸುವ ಈ ಯಕ್ಷಕಲೆಯನ್ನು ಮುಂಬೈನ ಕಲಾರಸಿಕರು ಸದಾ ಬರಮಾಡಿಕೊಂಡು ಇಲ್ಲಿನ ಕಲಾರಸಿಕರಿಗೆ ಸದಭಿರುಚಿಯನ್ನು ಬೆಳೆಸುತ್ತಿರುವ ಬಗ್ಗೆ ” ವಿವರಿಸಿ ಕುಕ್ಕೇಹಳ್ಳಿ ವಿಠಲ ಪ್ರಭುಗಳು ಮುಂಬೈ ವಾಸ್ತವ್ಯದ ತನ್ನ ಸುದೀರ್ಘ ಪಯಣದಲ್ಲಿ ಅರ್ಥಧಾರಿ , ಭಾಗವತ ಹಾಗೂ ಯಕ್ಷಗುರುವಾಗಿ ಸಾಗಿಬಂದ ದಿನಗಳ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯ ಯಕ್ಷ ಕಲಾವಿದರಾದ ಉಡುಪಿ ರಘುನಾಥ್ ನಾಯಕ್ , ಎಳ್ಳಾರೆ ಶಂಕರ್ ನಾಯಕ್ ಭಾಗವತರು ( ಯಕ್ಷಕಲಾವೈಭವ ಮಕ್ಕಳ ಮೇಳ ) , ಕಲಾವಿದ ರಾಮಚಂದ್ರ ಬಿ.ನಾಯಕ್ ( ಅಧ್ಯಕ್ಷರು ಸಚ್ಚಿದಾನಂದ ಸರಸ್ವತೀ ಕೃಪಾಪೋಷಿತ ಯಕ್ಷಗಾನ ಮಂಡಲಿ) , ರಾಜಾಪುರ ಸಾರಸ್ವತ ಸಂಘದ ಮಾಜಿ ಅಧ್ಯಕ್ಷ ಪ್ರಭಾಕರ್. ಡಿ.ಬೋರ್ಕರ್ ” ಅಗಲಿದ ವಿಟ್ಠಲ್ ಪ್ರಭುಗಳ ಸಾತ್ವಿಕ ಗುಣ , ಪ್ರಚಾರವಿಲ್ಲದೆಯೇ ಮಾಡಿದ ಸಮಾಜ ಸಹಾಯ ಕಾರ್ಯಗಳು , ಒಬ್ಬ ಗುರುವಾಗಿ ಮುಂಬೈ ನೆಲದಲ್ಲಿ ಹಲವಾರು ಮಕ್ಕಳಿಗೆ ಕಲಿಸಿ ಅವರ ಕಲಾಭಿರುಚಿಯನ್ನು ಬೆಳೆಸಿದ ಬಗ್ಗೆ ತಮ್ಮ ಅನುಭವಗಳನ್ನು ಸಭೆಯಲ್ಲಿ ವಿವರಿಸಿ ಯಕ್ಷಕಲೆಯನ್ನು ತುಂಬಾ ಪ್ರೀತಿಸಿ ಸತತ ಪ್ರದರ್ಶನ ನೀಡುತ್ತಾ ಕಲಾವೇದಿಕೆಯಲ್ಲಿಯೇ ಜೀವನ ಪಯಣ ಅಂತ್ಯಗೊಳಿಸಿದ ಬಗೆಯ ತಮ್ನ ಅನುಭವಗಳನ್ನು ಹಂಚಿಕೊಂಡರು.
ಅಂದಿನ ಸಭಾಧ್ಯಕ್ಷರಾದ ಮಾಧವ್ ಪಿ.ನಾಯಕ್ ( ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಲದ ಅಧ್ಯಕ್ಷರು ) ” ಹಲವು ವರ್ಷಗಳಿಂದ ನಮ್ಮ ಒಡನಾಟದಲ್ಲಿದ್ದ ಈ ಶ್ರೇಷ್ಟ ಕಲಾವಿದನ ಈಗ ನಮ್ಮನ್ನಗಲಿದರೂ ಅವರ ನೀಡಿದ ಅಪ್ರತಿಮ ಕಲಾಸೇವೆಯನ್ನು ನಾವೆಲ್ಲರೂ ಸದಾ ಸ್ಮರಿಸುತ್ತೇವೆ. ” ಎನ್ನುತ್ತಾ ಅವರ ಹಲವು ಪ್ರದರ್ಶನಗಳಿಗೆ , ಕಲಿಕಾ ಶಿಬಿರಗಳಿಗೆ ಸಹಾಯ ಮಾಡಿದ ತೃಪ್ತಿ ನಮಗೆ ಇದೆ. ” ಎನ್ನುತ್ತಾ ವೇದಿಕೆಯಲ್ಲಿದ್ದ ಅವರ ಪುತ್ರನ ಭವಿಷ್ಯಕ್ಕೆ ಸಿದ್ಧಿವಿನಾಯಕನಲ್ಲಿ ಪ್ರಾರ್ಥಿಸಿದರು..
ಆರಂಭದಲ್ಲಿ ದಿ.ಪ್ರಭುಗಳ ಭಾವಚಿತ್ರಕ್ಕೆ ಅತಿಥಿ ಗಣ್ಯರು ಪುಷ್ಪ ನಮನ ಅರ್ಪಿಸಿ ಬಳಿಕ ಸಭಿಕರೆಲ್ಲರೂ ಮೌನಪ್ರಾರ್ಥನೆಯೊಂದಿಗೆ ಶೃದ್ಧಾಂಜಲಿ ಅರ್ಪಿಸಿದರು. ವೇದಿಕೆಯಲ್ಲಿನ ಅತಿಥಿಗಳೊಂದಿಗೆ ವರದಸಿದ್ಧಿವಿನಾಯಕ ಮಂಡಲದ ಕಾರ್ಯದರ್ಶಿ ಅಶೋಕ್ ಪಾಟ್ಕರ್ ಮತ್ತು ಸಂದೇಶ್ ವಿಠಲ್ ಪ್ರಭು ಸಹ ಉಪಸ್ಥಿತರಿದ್ದರು.
ಬಳಿಕ ವರದ ಸಿದ್ಧಿವಿನಾಯಕ ಸೇವಾಮಂಡಲ ಹಾಗೂ ಸಚ್ಚಿದಾನಂದ ಕೃಪಾಪೋಷಿತ ಯಕ್ಷಗಾನ ಮಂಡಲಿ ಜಂಟಿ ಪ್ರಾಯೋಜಕತ್ವದಲ್ಲಿ ” ಭೀಷ್ಮ ವಿಜಯ” ಬಡಗುತಿಟ್ಟು ಪ್ರದರ್ಶನ ಜರಗಿದ್ದು , ವಿಟ್ಟಲ ಪ್ರಭುಗಳಲ್ಲಿ ಹೆಜ್ಜೆ ಕಲಿತ ಕು.ಅಪೂರ್ವ ನಾಯಕ್ ಮತ್ತು ಕು.ಶ್ರೇಯಾ ನಾಯಕ್ ಕೂಡಾ ಪಾತ್ರವಹಿಸಿದ್ದರು. ಡೊಂಬಿವಿಲಿ ಪರಿಸರದ ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು..
ಚಿತ್ರ ಮತ್ತು ವರದಿ : ಪಿ.ಆರ್.ರವಿಶಂಕರ್ 8483980035