
ಡಾ. ಹರಿಶ್ಚಂದ್ರ. ಪಿ. ಸಾಲಿಯಾನ್ ಮೂಲ್ಕಿ, 9448490860
ಮೂಲ್ಕಿಯಲ್ಲಿ ಶ್ರೀ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ ಐತಿಹಾಸಿಕ ಪ್ರಸಿದ್ಧವಾಗಿದೆ. ಮೂಲ್ಕಿ ಸುತ್ತಮುತ್ತ ಹಲವಾರು ದೇವಸ್ಥಾನಗಳು ಇದೆ. ಮೂಲ್ಕಿಯ ಕಾರ್ನಾಡ್ ಹರಿಹರ ಕ್ಷೇತ್ರವು ದೇವಸ್ಥಾನದಲ್ಲಿ ದೊರೆತ ಶಾಸನದ ಸ್ಥಿರ ಫಲಕದ ಮೇಲೆ ವಿಷ್ಣುಮೂರ್ತಿಯ ಶಿಲ್ಪ ಕೆತ್ತನೆ ಅಕ್ಷರಗಳ ರಚನಾ ಕ್ರಮ ಹೊಯ್ಸಳರ ಕಾಲದಲ್ಲಿ 12 ನೇ ಶತಮಾನದ ಅಂತ್ಯಕ್ಕೆ ಸರಿಹೊಂದುದಾಗಿ ಅಧ್ಯಾಯನಕಾರರು ಬರೆದಿದ್ದಾರೆ.
ಪುರಾತನ ಕಾಲದಲ್ಲಿ ಮೂಲ್ಕಿಯ ಕಾರ್ನಾಡು ಪೋರ್ಚುಗೀಸರ ದಾಖಲೆಗಳಂತೆ ಹೆಸರು “ಕಾರ್ನಾಟು” ಎಂದಿತ್ತು. ಇದರ ಸುತ್ತಲೂ ನದಿ ಹರಿಯುತ್ತಿದ್ದು ಈ ನದಿಯು ಇಲ್ಲಿನ ಜಲಯಾನ ವ್ಯಾಪರಕ್ಕೆ ಅನುವು ಮಾಡಿಕೊಟ್ಟಿತು. ಇದರಿಂದಾಗಿ ಕಾರ್ನಾಟು ಕರಾವಳಿ ಕರ್ನಾಟಕದ ರೇವ್ ಗಳಲ್ಲಿ ಒಂದಾಗಿತ್ತು ಎಂದು ಕ್ರಿ.ಶ. 1502ರ ಪೋರ್ಚುಗೀಸ್ ದಾಖಲೆಗಳಲ್ಲಿದೆ. ಹಿಂದುಳಿದ ಪೋರ್ಚುಗೀಸ್ ದಾಖಲೆಗಳಂತೆ ಈ ನಗರದ ಸುತ್ತಲೂ ಕೋಟೆಗಳಿದ್ದು ಕಾರ್ನಾಟು ರೇವಿನಿಂದ ಪ್ರತಿ ವರ್ಷ 800 (ಗುದ್ದಲಿ) ಅಕ್ಕಿ ಮುಡಿ ಗೋವದಲ್ಲಿರುವ ಪೋರ್ಚುಗೀಸರಿಗೆ ರಫ್ತಾಗುತ್ತಿತ್ತು. ಎಂದು ಇತಿಹಾಸಕಾರರ ಅಭಿಪ್ರಾಯ.

ಕಾರ್ನಾಡಿನ ಹರಿಹರೇಶ್ವರ ದೇವಾಲಯದಲ್ಲಿರುವ ಮೂರು ಶಾಸನಗಳು ಈ ಸ್ಥಳದ ಕುರಿತಾಗಿ ಕೆಲವು ಅಪರೂಪದ ಐತಿಹಾಸಿಕ ಸಂಗತಿಗಳನ್ನು ತಿಳಿಸುತ್ತದೆ. ಹರಿಹರ ದೇವಾಲಯದ ಪಶ್ಚಿಮಕ್ಕೆ ಸುಮಾರು 80 ಗಜಗಳ ದೂರದಲ್ಲಿ ವಿಷ್ಣು ದೇವರ ಗುಡಿ ಇದೆ. ಈ ದೇವಾಲಯದ ಮಧ್ಯದಲ್ಲಿ ಒಂದು ವಿಶಾಲವಾದ ಸರೋವರ ಇದೆ. ಈ ಸರೋವರವನ್ನು ಕಳೆದ ವರ್ಷ ಸರಕಾರದ ವತಿಯಿಂದ ದುರಸ್ಥಿ ಮಾಡಲಾಗಿದೆ. ವಿಷ್ಣುಮೂರ್ತಿಯ ಶಿಲ್ಪದ ರಚನೆ ಹೊಯ್ಸಳರ ಕಾಲದೆಂದು (ಕಿ.ಶ 11ರಿಂದ 14 ನೇ ಶತಮಾನ)ಸೂಚಿಸುದಾದರ ಅಭಿಪ್ರಾಯ.ಇದು ಯಾವಾಗ ಇಲ್ಲಿ ಸ್ಥಾಪಿತವಾಗಿದೆ ಎಂದು ತಿಳಿಸುವ ದಾಖಲೆಗಳು ಇನ್ನೂ ಸಿಕ್ಕಿಲ್ಲ. ಹಳೆಯದಾದ ವಿಷ್ಣುಮೂರ್ತಿ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಿ 2001ರಲ್ಲಿ ಬ್ರಹ್ಮಕಲಶಾಭಿಷೇಕ ನಡೆಯಿತು. ಈ ವರ್ಷ 16.02.2025ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ.
ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳ ಗ್ರಾಮ ದೇವಸ್ಥಾನ ಸೀಮೆ ದೇವಸ್ಥಾನಗಳು ಇವೆ. ಕೆಲವು ದೇವಸ್ಥಾನಗಳು ಹಿಂದಿನ ಕಾಲದಲ್ಲಿ ಪ್ರಸಿದ್ಧಿಯನ್ನು ಹೊಂದಿವೆ. ಕೆಲವು ದೇವಸ್ಥಾನಗಳು ಇತ್ತೀಚೆಗೆ ಪ್ರಸಿದ್ದಿಯನ್ನು ಪಡೆದಿವೆ. ಬೇರೆ ಬೇರೆ ಹೆಸರಿನ ಶಕ್ತಿಗಳನ್ನು ಆಯಾಯ ಪ್ರದೇಶದ ಇತಿಹಾಸವನ್ನು ಪಡೆದುಕೊಂಡಿದೆ. ಜನ ಮರಳೋ, ಜಾತ್ರೆ ಮರಳೋ ಎಂಬಂತೆ ಆಯಾಯ ಪ್ರದೇಶದ ದೇವಸ್ಥಾನವು ಪ್ರಸಿದ್ಧಿಯನ್ನು ಪಡೆಯಬೇಕಾದರೆ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳ ಪ್ರಯತ್ನವೇ ಕಾರಣವಾಗಿದೆ. ಮೂಲ್ಕಿ ಹರಿಹರ ಕ್ಷೇತ್ರವು ಪುರಾತನವಾಗಿದೆ. ದೇವಸ್ಥಾನದ ಅಭಿವೃದ್ದಿಯನ್ನು ಅರವಿಂದರ ಪೂರ್ವಜರ ಮನೆತನದವರು ಮಾಡಿಕೊಂಡು ಬಂದಿದ್ದಾರೆ. 2001ರಲ್ಲಿ ವಿಷ್ಣುಮೂರ್ತಿ ದೇವಳದ ಸಮಸ್ತ ನವೀಕರಣ ಅಷ್ಟ ಬಂಧ ಬ್ರಹ್ಮಕಲಶೋತ್ಸವನ್ನು ಆಗಿನ ಆಡಳಿತ ಮೊಕ್ತೇಸರಾದ ಶ್ರೀ ಎಮ್.ಆರ್ ಹರಿಪೂಂಜರ ನೇತೃತ್ವದಲ್ಲಿ ನಡೆದಿದೆ. 23 ವರ್ಷಗಳ ನಂತರ ದೇವಸ್ಥಾನದಲ್ಲಿ ಅಷ್ಟ ಬಂಧ ಬ್ರಹ್ಮಕಲಶ ನಡೆಯುವ ಸುಮುಹೂರ್ತ ಈಗ ಬಂದಿದೆ.
ಶ್ರೀಹರಿಯಾದ ವಿಷ್ಣು ಮತ್ತು ಶ್ರೀ ಹರನಾದ ಈಶ್ವರ ಈ ಎರಡು ದೇವಸ್ಥಾನಗಳು ಒಂದಕ್ಕೊಂದು ಎದುರುಬದುರಾಗಿ ಸ್ಥಾಪಿತವಾಗಿರುವುದರಿಂದ ಇದೊಂದು ಅಪರೂಪದ ಪುಣ್ಯಕ್ಷೇತ್ರವಾಗಿದೆ. ಹರಿಹರ ದೇವಸ್ಥಾನದಲ್ಲಿ ಮಹಾಪೂಜೆ ನಡೆಯುವಾಗ ಒಂದು ಅರತಿಯನ್ನು ಎದುರಿನ ವಿಷ್ಣು ದೇವರಿಗೂ ವಿಷ್ಣು ದೇವರ ಮಹಾಪೂಜೆ ನಡೆಯುವಾಗ ಶಿವನಿಗೂ ಆರತಿ ಮಾಡುವ ಕ್ರಮ ಇದೆ.ಈ ದೇವಸ್ಥಾನವು ಕಾರ್ನಾಡು ಗ್ರಾಮದಲ್ಲಿದ್ದರೂ ಇದು ಮೂಲ್ಕಿಯ ನಾಲ್ಕು ಗ್ರಾಮಗಳಿಗೆ ಸಂಬಂಧ ಇದೆ. ಯಾವುದೇ ಶುಭ ಕೆಲಸವಾದರೂ ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಮತ್ತು ಹರಿಹರ ಕ್ಷೇತ್ರದ ಶಿವ ದೇವರನ್ನು ಮುಂದಿಡುವ ಕ್ರಮ. ಹಿರಿಯರ ಕಾಲದಲ್ಲಿ ಹರಿಹರ ದೇವರ ಕ್ಷೇತ್ರಕ್ಕೆ ಹೋಗಿ ಪ್ರಾರ್ಥನೆ ಮಾಡಲು ಹೇಳುತ್ತಿದ್ದರು.
ಅಷ್ಟ ಬಂಧ ಬ್ರಹ್ಮಕಲಶವು ಫೆಬ್ರವರಿ 12ರಿಂದ ಆರಂಭವಾಗಿದ್ದು ಫೆ.17ರವರೆಗೆ ನಡೆಯಲಿದೆ. ಈಗಾಗಲೇ ಆಡಳಿತ ಮೊಕ್ತೇಸರಾದ ಅರವಿಂದ ಪೂಂಜರ ನೇತೃತ್ವದಲ್ಲಿ ಬೇರೆ ಬೇರೆ ಸಮಿತಿಯನ್ನು ಮಾಡಿದ್ದಾರೆ. ಸುಮಾರು 50ಲಕ್ಷ ರೂಪಾಯಿ ವೆಚ್ಚದಲ್ಲಿ ಅಷ್ಟ ಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ಈಗಾಗಲೇ ಚಪ್ಪರ ಮುಹೂರ್ತವನ್ನು ಮಾಡಿ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಬ್ರಹ್ಮಕಲಶೋತ್ಸವ ನಡೆಯಲು ವೇದಿಕೆ ವಿಶಾಲ ಸ್ಥಳವನ್ನು ಶುಚಿತ್ವವನ್ನು ಮಾಡಿ ಸಜ್ಜುಗೊಳಿಸಲಾಗಿದೆ. ಬ್ರಹ್ಮಕಲಶದ ಸಮಿತಿಯ ಸಭೆಯನ್ನು ನಡೆಸಿ ಮುಂದಿನ ಕಾರ್ಯಕ್ರಮ ಯಶಸ್ವಿಯಾಗುವಂತೆ ಎಲ್ಲರ ಸಹಕಾರ ಕೋರಿದ್ದಾರೆ.
ದೇವಸ್ಥಾನದಲ್ಲಿ ನಡೆಯುವ ಅನ್ನದಾನಕ್ಕೆ ಬೇಕಾಗುವ ಅಕ್ಕಿ, ತರಕಾರಿ ಇನ್ನಿತ್ತರ ಸಾಮಾಗ್ರಿಯನ್ನು ತರಲು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಭಕ್ತರಿಂದ ಸಂಗ್ರಹಿಸಿದ ಹೊರಕಾಣಿಕೆಯನ್ನು ದಿನಾಂಕ 12ರಂದು ಮೆರವಣಿಗೆಯಲ್ಲಿ ಹರಿಹರ ಕ್ಷೇತ್ರಕ್ಕೆ ತರಲಾಯಿತು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರಾದ ತಾವೆಲ್ಲರೂ ಉಪಸ್ಥಿತರಿದ್ದು ಸಹಕರಿಸಬೇಕಾಗಿ ದೇವಸ್ಥಾನದ ಆಡಳಿತ ಸಮಿತಿಯ ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.