
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆಬ್ರವರಿ 25 ರಿಂದ ಮಾರ್ಚ್ 5ರವರೆಗೆ ನಡೆಯಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವ ಸಿದ್ಧತೆಗಳು ಪೂರ್ಣಗೊಂಡಿವೆ. ಇಂದಿನಿಂದ 9 ದಿನಗಳ ಕಾಲ ನಿತ್ಯ ನಿರಂತರ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಹಗಲು, ರಾತ್ರಿ ಅನ್ನ ಸಂತರ್ಪಣೆಗೂ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯ, ರಾಷ್ಟ್ರ ಮತ್ತು ಪ್ರಪಂಚದಾದ್ಯಂತ ವಿವಿಧ ಸಮಿತಿಗಳ ಸದಸ್ಯರು, ಸಂಘ ಸಂಸ್ಥೆಯ ಪ್ರತಿನಿಧಿಗಳು, ಸಾರ್ವಜನಿಕರು ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಸೇವೆ ಸಲ್ಲಿಸಲು ಸಾವಿರಾರು ಸ್ವಯಂ ಸೇವಕರು ತಯಾರಾಗಿದ್ದು, ಕಾಪುವಿನಲ್ಲಿ ಉತ್ಸವದ ಕಳೆ ಕಂಡುಬರುತ್ತಿದೆ.
ಕಾಪವಿನ ಅಮ್ಮನ ಬ್ರಹ್ಮಕಲಶೋತ್ಸವದಲ್ಲಿ ಪ್ರಪಂಚದಾದ್ಯಂತ ಭಕ್ತರು ಭಾಗವಹಿಸಲಿದ್ದು, ಕಾಪು ಪರಿಸರದಲ್ಲಿ ನಗರ ಸೌಂದರ್ಯವನ್ನು ವೃದ್ಧಿಸಲು ಪೇಟೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿಶೇಷ ವಿದ್ಯುತ್ ದೀಪ ಅಲಂಕಾರ, ತಳಿರು,ತೋರಣಗಳಿಂದ ಅಲಂಕರಿಸುವಂತೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ ಕೆ ಪ್ರಕಾಶ್ ಶೆಟ್ಟಿ ಮತ್ತು ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಪ್ರತಿದಿನ ಕನಿಷ್ಠ 20 ಸಾವಿರ ಮಂದಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದ್ದು, ಮಾರಿಗುಡಿ ಮತ್ತು ಜನಾರ್ಧನ ದೇಗುಲದಲ್ಲಿ ಪಾಕ ಶಾಲೆ ಸಿದ್ದಗೊಂಡಿದೆ. ಒಂದು ಬಾರಿ 2500 ಜನ ಊಟ ಮಾಡಲು ಅವಕಾಶವಿದೆ.
ಸರತಿ ಸಾಲಿನಲ್ಲಿ ನೂತನ ದೇಗುಲ, ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಪ್ರತಿದಿನ ಬೆಳಿಗ್ಗೆ 7ರಿಂದ
10,ಸಂಜೆ 4 ರಿಂದ 7 ರವರೆಗೆ ಉಪಹಾರ, ಮಧ್ಯಾಹ್ನ 11:30 ರಿಂದ ಸಂಜೆ 4 ,ರಾತ್ರಿ 7ರಿಂದ 11ಗಂಟೆ ತನಕ ಅನ್ನದಾನ, ಕೋತಲಕಟ್ಟೆಯಿಂದ ಕೊಪ್ಪಲಂಗಡಿ ತನಕ 23 ಜಾಗದಲ್ಲಿ, 3000ಕ್ಕೂ ಅಧಿಕ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿಯಿಂದ ಉದ್ಯಾವರದ ವರೆಗೆ ರಸ್ತೆಯ ಇಕ್ಕಲೆಗಳಲ್ಲಿ ಬ್ಯಾನರ್, ಬಂಟಿಂಗ್ಸ್ ಅಳವಡಿಕೆ, ವಿದ್ಯುತ್ ದೀಪಾಲಂಕಾರ, ರಸ್ತೆಯಲ್ಲಿ ನೆರಳಿಗಾಗಿ ಶಾಮಿಯಾನ ಅಳವಡಿಸಲಾಗಿದೆ.