
ಬಂಟ್ವಾಳ : ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಪರಂಗಿಪೇಟೆ ಕಿದೆಬೆಟ್ಟು ನಿವಾಸಿ ಪದ್ಮನಾಭ ಎಂಬವರ ಪುತ್ರ ದಿಗಂತ್ (17) ನಾಪತ್ತೆಯಾಗಿ 3 ದಿನ ಕಳೆದರೂ, ಆತನ ಬಗ್ಗೆ ಇನ್ನೂ ಯಾವುದೇ ಸುಳಿವು ಪತ್ತೆಯಾಗದಿರುವ ಕಾರಣ ಸ್ಥಳೀಯ ಗ್ರಾಮಸ್ಥರು ದಿಡೀರ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ಸಂದರ್ಭ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು ಮುಂದಿನ 24 ಗಂಟೆಯೊಳಗೆ ಬಾಲಕನನ್ನು ಪತ್ತೆ ಮಾಡದಿದ್ದರೆ ಮಾರ್ಚ್ ಒಂದರಂದು, ಶನಿವಾರ ಪರಂಗಿಪೇಟೆಯ ಎಲ್ಲಾ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆ ಮಾಡುವುದಾಗಿ ತೀರ್ಮಾನಿಸಿದರು.
ದಿಗಂತ್ ಫೆಬ್ರವರಿ 25ರಂದು ಸಂಜೆ ದೇವಸ್ಥಾನಕ್ಕೆ ಹೋಗುವುದಾಗಿ ಮನೆಯಲ್ಲಿ ತಿಳಿಸಿದ್ದು, ಆದರೆ ದೇವಸ್ಥಾನಕ್ಕೆ ಹೋಗದೆ ಮನೆಗೂ ಬಾರದೆ, ನಾಪತ್ತೆಯಾಗಿದ್ದು ಆತನ ಚಪ್ಪಲಿ ,ಮೊಬೈಲ್ ರೈಲ್ವೆ ಹಳಿಯಲ್ಲಿ ಬಿದ್ದುಕೊಂಡಿರುವುದು ಪತ್ತೆಯಾಗಿದೆ.
ರೈಲ್ವೆ ಹಳಿಯ ಸುಮಾರು ಮೂರು ಕಿಲೋಮೀಟರ್ ವರೆಗೆ ಪೊಲೀಸರ ತಂಡ ಹಾಗೂ ಸಾರ್ವಜನಿಕರು ಹುಡುಕಾಟ ನಡೆಸಿದರೂ,ಯಾವುದೇ ಮಾಹಿತಿ ಲಭ್ಯವಾಗಿಲ್ಲ.ಇದೀಗ ಈತನ ಪತ್ತೆಗಾಗಿ ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ ಆದರೂ ಇವರೆಗೆ ಸಣ್ಣ ಸುಳಿವು ಕೂಡ ಇಲಾಖೆಗೆ ಲಭ್ಯವಾಗದೆ ಇರುವುದು ಆತಂಕವನ್ನುಂಟು ಮಾಡಿದೆ.
ದಿಗಂತ್ ನಾಪತ್ತೆಯಾದ ಘಟನೆಯ ಬಗ್ಗೆ ಪೊಲೀಸ್ ಇಲಾಖೆಗೆ ಈವರೆಗೆ ಯಾವುದೇ ಸುಳಿವು ಸಿಗದಿರುವುದು ಕೂಡ ಪ್ರಕರಣ ಬೇರೆ ಬೇರೆ ರೂಪವನ್ನು ಪಡೆಯಬಹುದು ಎಂಬ ಆತಂಕ ಕೂಡ ವ್ಯಕ್ತವಾಗಿದೆ.