
ರಾಜ್ಯ ಅಬಕಾರಿ ಇಲಾಖೆಯು ಧಾರವಿಯಲ್ಲಿ ನಕಲಿ ಸ್ಕಾಚ್, ಜಾನಿ ವಾಕರ್ ವಿಸ್ಕಿಯನ್ನು ಉನ್ನತ ದರ್ಜೆಯ ವಿದೇಶಿ ಬ್ರಾಂಡುಗಳ ಬಾಟಲಿಗಳಲ್ಲಿ ಉತ್ಪಾದಿಸಿ ಮಾರಾಟ ಮಾಡುತ್ತಿದ್ದ ಮದ್ಯದ ನಕಲಿ ಜಾಲವನ್ನು ಭೇದಿಸಿದ್ದಾರೆ. ಪೊಲೀಸರು ಸುಮಾರು 5 ಲಕ್ಷ ಮೌಲ್ಯದ ಮಧ್ಯದ ಬಾಟಲಿಗಳು ಮತ್ತು ಅಧಿಕೃತ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಸುಳಿವು ದೊರೆತ ಆಧಾರದ ಮೇರೆಗೆ ಇನ್ಸ್ಪೆಕ್ಟರ್ ರಿಯಾಜ್ ಖಾನ್ ಮತ್ತು ಸಂತೋಷ್ ಶಿವಪುರ್ಕರ್ ನೇತ್ರತ್ವದ ತಂಡ ಸಂತ ಕಕ್ಕಯ್ಯ ಮಾರ್ಗದ ಶಿವಶಕ್ತಿ ನಗರ ಚಾಲ್ ನಲ್ಲಿರುವ ಒಂದು ಕೋಣೆಯ ಮೇಲೆ ದಾಳಿ ನಡೆಸಿದಾಗ ಒಬ್ಬ ಯುವಕ ಪ್ರೀಮಿಯಂ ಸ್ಕಾಚ್ ವಿಸ್ಕಿ ಬ್ರಾಂಡುಗಳ ಖಾಲಿ ಬಾಟಲ್ ಗಳನ್ನು ಸ್ಥಳೀಯವಾಗಿ ತಯಾರಿಸಿದ ಮದ್ಯದಿಂದ ತುಂಬಿಸುತ್ತಿರುವುದು ಕಂಡು ಬಂದಿದೆ. ವಿಚಾರಣೆ ನಂತರ ಅವನು ಅದೇ ಪ್ರದೇಶದಲ್ಲಿ ವಾಸಿಸುವ 23 ವರ್ಷದ ಅನಿಕೇತ್ ಕಾಶಿದ್ ಎಂದು ಗುರುತಿಸಿಕೊಂಡಿದ್ದಾನೆ. ಕಾಶಿದ್ ನನ್ನು ಈಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಾನಿ ವಾಕರ್, ಡಬಲ್ ಬ್ಲಾಕ್ ಮತ್ತು ರೆಡ್ ಲೇಬಲ್ ಸ್ಕಾಚ್ ನ ನಾಲ್ಕು ಸೀಲ್ ಮಾಡಿದ ಬಾಟಲಿಗಳನ್ನು ಹೊಂದಿರುವ ನೀಲಿ ಪ್ಲಾಸ್ಟಿಕ್ ಚೀಲವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ, ಜೊತೆಗೆ ವಿವಿಧ ವಿದೇಶಿ ಬ್ರ್ಯಾಂಡ್ ಗಳ ಹಲವಾರು ಖಾಲಿ ಬಾಟಲ್ ಗಳು ಮತ್ತು ನಕಲಿ ಲೇಬಲ್ ಗಳು ಮತ್ತು ಅಧಿಕೃತ ಪ್ಯಾಕೇಜಿಂಗ್ ಅನ್ನು ನಕಲು ಮಾಡಲು ಬಳಸುವ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಶೀದ್ ತಪ್ಪೊಪ್ಪಿಗೆಯ ನಂತರ ಅಧಿಕಾರಿಗಳು ಅಣ್ಣಾ ನಗರದ ಲಕ್ಷ್ಮಿ ಚಾಲ್ ನ ಒಂದು ಕೋಣೆ ತೆರೆದಾಗ ದೊಡ್ಡ ದಾಸ್ತಾನು ಅಲ್ಲಿ ಕಂಡುಬಂದಿದೆ. ವಿವಿಧ ಪ್ರೀಮಿಯಂ ಸ್ಕಾಚ್ ಗಳ 33 ಸೀಲ್ ಬಾಟಲಿಗಳು,ಜೊತೆಗೆ ಒಟ್ಟು 3,77,000 ರೂ. ಮೌಲ್ಯದ ಖಾಲಿ ಬಾಟಲ್ ಗಳು, ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳ ಚೀಲಗಳು, ಲೇಬಲ್ ಗಳನ್ನು ಪೊಲೀಸರು ವಶ ಪಡಿಸಿದ್ದಾರೆ. ನಕಲಿ ಮದ್ಯದ ಕಚ್ಚಾ ವಸ್ತುಗಳು ಮತ್ತು ಪ್ಯಾಕೇಜಿಂಗ್ನ ಪ್ರಮುಖ ಪೂರೈಕೆದಾರ ಎಂದು ಗುರುತಿಸಲ್ಪಟ್ಟ ವಘೇಲಾ ಇನ್ನೂ ಪರಾರಿಯಾಗಿದ್ದಾನೆ. ಈ ದಂಧೆಯು ಗ್ರಾಹಕರಿಗೆ ಗಂಭೀರ ಆರೋಗ್ಯದ ಅಪಾಯವನ್ನುಂಟು ಮಾಡಿದ್ದಲ್ಲದೆ, ಮಹಾರಾಷ್ಟ್ರ ಸರ್ಕಾರಕ್ಕೆ ಗಮನಾರ್ಹ ತೆರಿಗೆ ಆದಾಯದ ನಷ್ಟವನ್ನುಂಟು ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ