
ಮಂಗಳೂರು: ಕಲಾಭಿ(ರಿ) ಮತ್ತು ಅರೆಹೊಳೆ ಪ್ರತಿಷ್ಠಾನವು ಜಂಟಿಯಾಗಿ ಮಂಗಳೂರಿನ ಬೊಂದೆಲ್ ನಲ್ಲಿ ಕಲಾಗ್ರಾಮ ಎಂಬ ನೂತನ ಕಲಾ ವೇದಿಕೆಯ ಉದ್ಘಾಟನೆಗೆ ಸಜ್ಜಾಗಿದೆ. ಈ ರಂಗ ಮಂದಿರವು ಕಲಾತ್ಮಕ ಪ್ರತಿಭೆಗಳಿಗೆ ಹೊಸ ತಳಹದಿಯನ್ನು ಒದಗಿಸುವುದರ ಜೊತೆಗೆ, ನಾಟಕ, ಯಕ್ಷಗಾನ, ಜನಪದ ಕಲೆ, ಸಂಗೀತ, ನೃತ್ಯ ಮತ್ತು ಇತರ ಕಲಾ ಪ್ರಕಾರಗಳಿಗೆ ಪ್ರೋತ್ಸಾಹ ನೀಡುವ ಮಹತ್ವದ ಕೇಂದ್ರವಾಗಿ ರೂಪುಗೊಳ್ಳಲಿದೆ.
ಇದರ ಉದ್ಘಾಟನಾ ಸಮಾರಂಭವು ವಿಶ್ವ ರಂಗಭೂಮಿ ದಿನವಾದ ಮಾರ್ಚ್ 27, 2025, ಗುರುವಾರದಂದು ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ಕಲಾಭಿ(ರಿ) ತಂಡದ ಕಲಾವಿದರಿಂದ ವಿಭಿನ್ನ ರಂಗ ಪ್ರಯೋಗವಾದ ಎ ಫ್ರೆಂಡ್ ಬಿಯೊಂಡ್ ದಿ ಫೆನ್ಸ್ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕವು ಈಗಾಗಲೇ ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ನಾಟಕೋತ್ಸವಗಳ್ಳಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಗಳಿಸಿದೆ.
ಈ ನೂತನ ಕಲಾ ಕೇಂದ್ರವು ಯುವ ಕಲಾ ಪ್ರತಿಭೆಗಳಿಗೆ ಒಟ್ಟಾರೆಯಾಗಿ ಪ್ರೋತ್ಸಾಹ ನೀಡಲು, ರಂಗಭೂಮಿ ಅಭ್ಯಾಸದ ಹೊಸ ಆಯಾಮಗಳನ್ನು ಅನ್ವೇಷಿಸಿ ಪ್ರಾಯೋಗಿಸಲು ಹಾಗೂ ಕಲಾತ್ಮಕ ಸಂಸ್ಕೃತಿಯನ್ನು ಬೆಳೆಸಲು ಸಹಕಾರಿಯಾಗಲಿದೆ.