ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಉಚ್ಛಾಟಿಸಿ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ಆದೇಶ ಹೊರಡಿಸಿದೆ. ಬಿಜೆಪಿ ಶಿಸ್ತು ಸಮಿತಿ ಎರಡು ಶೋಕಾಸ್ ನೋಟಿಸ್ ನೀಡಿದ್ದರೂ, ಪದೇ ಪದೇ ಪಕ್ಷದ ವಿರೋಧಿ ಚಟುವಟಿಕೆ, ಪಕ್ಷದ ಶಿಸ್ತು ಉಲ್ಲಂಘನೆ ಮಾಡುತಿದ್ದ ಬಸನಗೌಡ ಯತ್ನಾಳ್ ಫೆಬ್ರವರಿ 10ರಂದು ಶೋಕಾಸ್ ನೋಟಿಸಿಗೆ ಉತ್ತರ ನೀಡಿದ್ದರು.ಆದರೆ ಯತ್ನಾಳ್ ಅವರ ಉತ್ತರ, ಸ್ಪಷ್ಟನೆ ಒಪ್ಪದ ಕೇಂದ್ರ ಶಿಸ್ತು ಸಮಿತಿ ಇಂದು(ಮಾ. 26) ಈ ನಿರ್ಧಾರ ಕೈಗೊಂಡಿದೆ, ಅಲ್ಲದೆ ಇತರ ರೆಬಲ್ ನಾಯಕರಿಗೂ ಪರೋಕ್ಷ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ತಕ್ಷಣದಿಂದ ಜಾರಿಗೆ ಬರುವಂತೆ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಅವಧಿಗೆ ಅವರನ್ನು ಉಚ್ಛಾಟನೆ ಮಾಡಲಾಗಿದೆ ಎಂದು ಬಿಜೆಪಿ ಕೇಂದ್ರ ಸುಸ್ತು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
