ಕರ್ನಾಟಕದ ಜನರಿಗೆ ರಾಜ್ಯ ಸರ್ಕಾರ ಮತ್ತೊಂದು ದರ ಏರಿಕೆ ಶಾಖ್ ನೀಡಿದೆ. ಬಸ್, ಮೆಟ್ರೋ, ವಿದ್ಯುತ್ ಬಳಿಕ ಕೆಎಂಎಫ್ ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡಿದೆ. ಈ ಬಾರಿ ಪ್ರತಿ ಲೀಟರ್ ಹಾಲಿನ ದರ ಬರೋಬ್ಬರಿ 4 ರೂಪಾಯಿ ಏರಿಕೆಯಾಗಿದೆ. ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ.ಈ ಮೂಲಕ ರಾಜ್ಯದ ಜನರಿಗೆ ಸರ್ಕಾರ ಮತ್ತೊಮ್ಮೆ ಶಾಕ್ ನೀಡಿದೆ.
ಹಾಲಿನ ದರ ಏರಿಕೆ ಬೇಡಿಕೆ ಹಲವು ಸಮಯಗಳಿಂದ ಇತ್ತು, ಆದರೆ ಈಗಾಗಲೇ ಇತರ ವಸ್ತುಗಳ ಏರಿಕೆಯಿಂದ ಜನರು ಕಂಗಾಲಾಗಿದ್ದು ರೈತರಿಗೆ ಇದರಿಂದ ಅನುಕೂಲ ಆದರೂ, ಗ್ರಾಹಕರಿಗೆ ಇದೊಂದು ಬರೆಯಾಗಿದೆ, ಹೀಗಾಗಿ ಸಂಪುಟ ಸಭೆಯಲ್ಲಿ ದರ ಏರಿಕೆ ಬಗ್ಗೆ ಗೊಂದಲ ಇದ್ದವು, ಆದರೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹಾಲು ಒಕ್ಕೂಟ ಹಾಗೂ ರೈತರಿಂದ ಹಾಲು ದರ ಹೆಚ್ಚಳಕ್ಕೆ ಬೇಡಿಕೆ ನಿರಂತರವಾಗಿ ಹೆಚ್ಚಿದ ಹಿನ್ನೆಲೆ ಪ್ರತಿ ಲೀಟರ್ ಹಾಲಿನ ದರ 5 ರೂಪಾಯಿ ಹೆಚ್ಚಳ ಮಾಡಬೇಕೆಂದು ಒಕ್ಕೂಟಗಳು ಸಿಎಂ ಸಿದ್ದರಾಮಯ್ಯ ಗೆ ಮನವಿ ಮಾಡಿದ್ದರು. ಆದರೆ ಇದೀಗ ಸಚಿವ ಸಂಪುಟ 4 ರೂಪಾಯಿ ಏರಿಕೆಗೆ ಒಪ್ಪಿಗೆ ನೀಡಿದೆ.
ದರ ಏರಿಕೆ ವಿವರ :
ನೀಲಿ ಪ್ಯಾಕೆಟ್ ಹಾಲು – 44 ರೂ. ನಿಂದ 48 ರೂ. (ಪ್ರತಿ ಲೀಟರ್)
ಆರೆಂಜ್ ಪ್ಯಾಕೆಟ್ ಹಾಲು – 54 ರೂ. ನಿಂದ 58 ರೂ.
ಸಮೃದ್ಧಿ ಹಾಲಿನ ಪ್ಯಾಕೆಟ್ – 56 ರೂ. ನಿಂದ 60 ರೂ.
ಗ್ರೀನ್ ಸ್ಪೆಷಲ್ ಹಾಲು – 54 ರೂ. ನಿಂದ ರಿಂದ 58 ರೂ.
ನಾರ್ಮಲ್ ಗ್ರೀನ್ ಹಾಲು – 52 ರೂ. ನಿಂದ 56 ರೂ.
ಇದರೊಂದಿಗೆ ಒಂದೇ ವರ್ಷದಲ್ಲಿ ಎರಡು ಬಾರಿಗೆ ಹಾಲಿನ ದರ ಏರಿಕೆ ಮಾಡಿದಂತಾಗಿದೆ, ಇದೇ ಫೆಬ್ರವರಿಯಲ್ಲಿ ಪ್ರತಿ ಲೀಟರ್ ಗೆ ರೂ. 2 ಏರಿಕೆ ಮಾಡಲಾಗಿತ್ತು, ಆದರೆ ಇದೀಗ ಲೀಟರ್ ಗೆ ಬರೋಬ್ಬರಿ ನಾಲ್ಕು ರೂಪಾಯಿ ಏರಿಕೆ ಮಾಡಲಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುವ ರಾಜ್ಯದ ಜನರಿಗೆ ಹಾಲಿನ ಏರಿಕೆ ದೊಡ್ಡ ಹೊರೆಯಾದಂತಾಗಿದೆ.
