ಥಾಣೆ ಜಿಲ್ಲೆಯ ಕಲ್ವಾದಲ್ಲಿ ನ್ಯೂ ಇಂಗ್ಲೀಷ್ ಹೈಸ್ಕೂಲ್ ಹಾಗೂ ನವಿ ಮುಂಬೈಯ ಐರೋಲಿಯಲ್ಲಿ ಮೆಹ್ತಾ ಡಿಗ್ರಿ ಕಾಲೇಜ್ ಮುನ್ನಡೆಸುತ್ತಿರುವ ಜ್ಞಾನ ವಿಕಾಸ ಮಂಡಳ ಕಲ್ವಾ ಇದರ ನೂತನ ಆಡಳಿತ ಮಂಡಳಿಯ ಚುನಾವಣೆ ಇತ್ತೀಚಿಗೆ ನಡೆಯಿತು. ಚುನಾವಣೆಯಲ್ಲಿ ವಿ ಎನ್ ಹೆಗಡೆ ಅಧ್ಯಕ್ಷರಾಗಿ , ಕಾರ್ಯಾಧ್ಯಕ್ಷರಾಗಿ ಕೃಷ್ಣಾ ದೇಶಪಾಂಡೆ, ಉಪಾಧ್ಯಕ್ಷರಾಗಿ ಸದಾನಂದ ಕುಲಕರ್ಣಿ ಅವಿರೋಧವಾಗಿ ಮರು ಆಯ್ಕೆಗೊಂಡರು. ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ವ್ಯಾಸಮೂರ್ತಿ ಮುಗಳಿ, ಜೊತೆ ಕಾರ್ಯದರ್ಶಿಯಾಗಿ ಜಾನ್ ಪಿ ಥಾಮಸ್ ಹಾಗು ಕೋಶಾಧಿಕಾರಿಯಾಗಿ ಅವಿನಾಶ ಖೀಲಾರಿ ಅವರು ಬಹುಮತಗಳಿಂದ ವಿಜೇತರಾದರು. ಒಂಬತ್ತು ಜನ ಆಡಳಿತ ಮಂಡಳಿಯ ಸದಸ್ಯರು ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಮೇಶ ಪಾಟೀಲ, ಅಜೀತ ಪುರಾಣಿಕ, ಪಾಂಡುರಂಗ ಮಿರ್ಜಿ, ರಾಹುಲ ಮಾಂಗಲೆ, ಅವಧೂತ ಅಕ್ಲೇಖರ, ಆರ್.ಜೆ.ಪಾಟೀಲ, ಸಮರ ಟಂಕಸಾಲಿ, ಸತೀಶ್ ಖಿಲಾರಿ ಹಾಗು ರೋಹಿಣಿ ಹೊಸಕೇರಿ ಇವರೆಲ್ಲರೂ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ. ಕೇವಲ ಒಂಬತ್ತು ವಿದ್ಯಾರ್ಥಿಗಳಿಂದ 1974ರಲ್ಲಿ ಪ್ರಾರಂಭಿಸಿದ ಈ ಸಂಸ್ತೆಯಲ್ಲಿ ಇಂದು ಒಂಬತ್ತು ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಜ್ಞಾನ ವಿಕಾಸ ಮಂಡಲವು ಎರಡು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಪೂರ್ವ ಪ್ರಾಥಮಿಕ ತರಗತಿಯಿಂದ ಉನ್ನತ ಶಿಕ್ಷಣ ತರಗತಿಯವರೆಗೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸುಸಜ್ಜಿತ ಕಟ್ಟಡದೊಂದಿಗೆ ಗ್ರಂಥಾಲಯ, ಹಲವಾರು ಕಂಪ್ಯೂಟರ್ ಲ್ಯಾಭಗಳ ವ್ಯವಸ್ಥೆ, ಒಳಾಂಗಣ ಆಟದ ವ್ಯವಸ್ಥೆ ಇತ್ಯಾದಿ ಸೌಲಭ್ಯಗಳನ್ನು ಜ್ಞಾನ ವಿಕಾಸ ಮಂಡಲವು ಕಲ್ಪಿಸಿದೆ. ಕಲ್ವಾದಲ್ಲಿ ನ್ಯೂ ಇಂಗ್ಲೀಷ ಸ್ಕೂಲ್ ( NES) ಮತ್ತು ಪದ್ಮಶ್ರೀ ಆರ್. ಟಿ.ದೋಷಿ ಜೂನಿಯರ್ ಕಾಲೇಜ್ ಸುಸಜ್ಜಿತ ಕಟ್ಟಡದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಕಲ್ವಾ ಹಾಗು ಸುತ್ತಮುತ್ತಲಿನ ಸ್ಥಳಗಳಲ್ಲಿ ವಾಸಿಸುವ ಜನರು ತಮ್ಮ ತಮ್ಮ ಮಕ್ಕಳನ್ನು ಜ್ಞಾನ ವಿಕಾಸ ಮಂಡಳದ ಶಾಲೆಗೆ ಸೇರಿಸಲು ಪ್ರಥಮ ಆದ್ಯತೆಯನ್ನು ನೀಡುತ್ತಿದ್ದಾರೆ. ಇನ್ನೊಂದು ಸಂಸ್ಥೆ ಐರೋಲಿ ಯಲ್ಲಿ ಜ್ಞಾನ ವಿಕಾಸ ಮಂಡಲ ದ ಮೆಹತಾ ಡಿಗ್ರಿ ಕಾಲೇಜು ಮತ್ತು ಜೂನಿಯರ್ ಕಾಲೇಜ್ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಹೆಸರುವಾಸಿಯಾಗಿದೆ. ಮೆಹತಾ ಕಾಲೇಜು ನ್ಯಾಕ್ A+ ಗ್ರೆಡ್ ಪಡೆದಿದ್ದು ನವಿ ಮುಂಬಯಿ ಪರಿಸರದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಜ್ಞಾನ ವಿಕಾಸ ಮಂಡಲವು ಕನ್ನಡ ಭಾಷೆ ಅಲ್ಪಸಂಖ್ಯಾಕ ಮಾನ್ಯತೆ ಸಹ ಪಡೆದಿದೆ ಮತ್ತು ಕನ್ನಡ ಭಾಷೆ ಹಾಗು ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಸಹ ಮೇಲಿಂದ ಮೇಲೆ ಹಮ್ಮಿಕೊಂಡು ಕನ್ನಡ ಸಂಸ್ಕೃತಿ, ಸಾಹಿತ್ಯ, ಕಲೆ ಆಚಾರ ಹಾಗು ವಿಚಾರಗಳ ಬೆಳವಣಿಗೆಗೆ ಪ್ರೋತ್ಸಾಹನಿಸುತ್ತಿದೆ. ಜ್ಞಾನ ವಿಕಾಸ ಮಂಡಳದ ಮೆಹತಾ ಡಿಗ್ರಿ ಕಾಲೇಜಿನ ಪ್ರಾಚಾರ್ಯ ಹಾಗು ಚುನಾವಣಾಧಿಕಾರಿ ಡಾ. ಬಿ ಆರ್ ದೇಶಪಾಂಡೆ ಮತ್ತು ಏನ್ ಇ ಎಸ್ ಹಾಗು ಪದ್ಮಶ್ರೀ ಆರ್ ಟಿ ದೋಷಿ ಜೂನಿಯರ್ ಕಾಲೇಜು ಕಲ್ವಾದ ಉಪಪ್ರಾಚಾರ್ಯ ಹಾಗು ಸಹಾಯಕ ಚುನಾವಣಾ ಅಧಿಕಾರಿ ನೇತ್ರಾ ಗಾವಂಕರ ಇವರು ಚುನಾವಣೆ ಫಲಿತಾಂಶ ಘೋಷಿಸಿ ಆಯ್ಕೆಯಾದ ಎಲ್ಲಾ ಪದಾಧಿಕಾರಿ ಹಾಗು ಸದಸ್ಯರನ್ನು ಅಭಿನಂದಿಸಿದರು. ಜ್ಞಾನ ವಿಕಾಸ ಮಂಡಳದ ಸದಸ್ಯರು ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡುತ್ತಾ ನೂತನ ಪದಾಧಿಕಾರಿಗಳು ಬರುವ ಮೂರು ವರುಷ ಅಂದರೆ 2025 ರಿಂದ 2028 ರವರೆಗೆ ಉತ್ತಮ ಅಭಿವ್ರದ್ಧಿ ಕಾರ್ಯಗಳನ್ನು ಮಾಡಲಿ, ಜ್ಞಾನ ವಿಕಾಸ ಮಂಡಳದ ಶಿಕ್ಷಣ ಸಂಸ್ಥೆಗಳು ರಾಜ್ಯ ಹಾಗು ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸಲಿ ಎಂದು ಹಾರೈಸಿದರು.