
ಜಿಲ್ಲೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಮಿತಿಗೆ ನನ್ನ ಬೆಂಬಲ ಸದಾ ಇದೆ – ಪ್ರವೀಣ್ ಭೋಜ ಶೆಟ್ಟಿ
ಇಂದು ಇಲ್ಲಿ ಎಲ್ಲ ಸಮುದಾಯದ ಗಣ್ಯರು ಉಪಸ್ಥಿತರಿದ್ದಾರೆ, ಇದು ಈ ಸಮಿತಿಯ ವಿಶೇಷತೆ, 25 ವರ್ಷಗಳ ಹಿಂದೆ ನಮ್ಮ ಊರಿನ ಅಭಿವೃದ್ಧಿಗಾಗಿ ಆರಂಭಿಸಿದ ಸಂಸ್ಥೆಯ ಇಂದಿನ ತನಕದ ಸಾಧನೆ ನಿಜಕ್ಕೂ ಮೆಚ್ಚುಗೆ ಮೂಡಿಸಿದೆ. ಪರಿಸರದ ರಕ್ಷಣೆಯೊಂದಿಗೆ ಅಭಿವೃದ್ಧಿಯೂ ಅಗತ್ಯವಿದೆ. ನಮ್ಮ ಜಿಲ್ಲೆಗಳಲ್ಲಿ ಉದ್ದಿಮೆಗಳು ಆರಂಭಿಸುವಾಗ, ಧಾರ್ಮಿಕ, ಶ್ರದ್ದಾ ಕೇಂದ್ರಗಳಿಗೆ ಯಾವುದೇ ತೊಂದರೆ ಆಗದಂತೆ ಸಮಿತಿ ಎಚ್ಚರಿಕೆ ವಹಿಸಬೇಕಿದೆ. ನಮ್ಮ ಪೂರ್ವಜರು ನಂಬಿ ಕೊಂಡು ಬಂದ ದೈವ -ದೇವರುಗಳನ್ನು ಬೇರೆ ಕಡೆ ಸ್ಥಳಾಂತರಿಸುವುದು ಸರಿಯಲ್ಲ. ಸಮಿತಿಯು ಹಮ್ಮಿಕೊಂಡಿರುವ ವನಮಹೋತ್ಸವ, ನದಿ ನೀರಿನ ಸಂರಕ್ಷಣೆ, ಸಮುದ್ರ ತೀರದಲ್ಲಿ ಸ್ವಚ್ಛತೆಯ ಕಾರ್ಯಗಳು ಅಗತ್ಯವಿದೆ. ಸಮಿತಿಯ 25ನೇ ವರ್ಷದ ಸಮಾರಂಭಕ್ಕೆ ನನ್ನ ಸಂಪೂರ್ಣ ಸಹಕಾರವಿದೆ. ಇದೊಂದು ಜಾತಿ, ಮತ ಭೇದವಿಲ್ಲದ ಸಂಸ್ಥೆ, ಪರಿಸರ ರಕ್ಷಣೆಯೊಂದಿಗೆ, ಉಭಯ ಜಿಲ್ಲೆಗಳ ಅಭಿವೃದ್ಧಿಗಾಗಿ ಶ್ರಮಿಸುತಿರುವ ಸಮಿತಿಯ ನಾನು ಪ್ರಾರಂಭದ ದಿನದಿಂದಲೂ ಅಭಿಮಾನಿ, ನನ್ನನ್ನು ಸಮಿತಿಯ ಸಲಹೆಗಾರನಾಗಿ ಮಾಡಿದಕ್ಕೆ ಎಲ್ಲರಿಗೂ ವಂದನೆಗಳು, ಸಮಿತಿಗೆ ನನ್ನ ಬೆಂಬಲ ಸದಾ ಇದೆ ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷ, ಸಮಿತಿಯ ಸಲಹೆಗಾರರಾದ ಪ್ರವೀಣ್ ಭೋಜ ಶೆಟ್ಟಿ ನುಡಿದರು.
ಅವರು ಸೇ. 7ರಂದು ಸಂಜೆ ಸಾಕಿನಾಕದ ಪೆನಿಂನ್ಸುಲಾ ಹೋಟೆಲ್ ನಲ್ಲಿ ನಡೆದ, ನವಂಬರ್ ತಿಂಗಳಲ್ಲಿ ತನ್ನ ಬೆಳ್ಳಿಹಬ್ಬ ಸಮಾರಂಭವನ್ನು ಆಚರಿಸಲಿರುವ ಕರ್ನಾಟಕದ ಕರಾವಳಿ ಜಿಲ್ಲೆಗಳ ಅಭಿವೃದ್ಧಿಗಾಗಿ ದುಡಿಯುತ್ತಿರುವ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಷ್ಣ ಪರಿಸರ ಪ್ರೇಮಿ ಸಮಿತಿಯ ವಿಶೇಷ ಸಭೆಯಲ್ಲಿ ಸಮಿತಿಯ ಗೌರವ ಸ್ವೀಕರಿಸಿ ಮಾತನಾಡುತ್ತಾ ಸಮಿತಿಯ ಸಂಸ್ಥಾಪಕರು 25 ಸಂಭ್ರಮದಲ್ಲಿರುವ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಗೆ ಬಹಳ ದೊಡ್ಡ ಮೊತ್ತವನ್ನು ಇಂದು ನೀಡಿದ್ದು ನನಗೂ ಇದಕ್ಕೂ ದೊಡ್ಡ ಮಟ್ಟದ ಮೊತ್ತವನ್ನು ನೀಡುವ ಮನಸಾಗುತ್ತಿದೆ, ನಾನು ಬಂಟರ ಸಂಘ ಮುಂಬಯಿಯ ಅಧ್ಯಕ್ಷನಾಗಿದ್ದು ಸಮಿತಿಗೆ ಹೆಚ್ಚಿನ ಸಮಯವಕಾಶ ನೀಡಲು ಈಗ ಅಸಾಧ್ಯವಾದರೂ, ಮುಂದೆ ನಾನು ಈ ಸಮಿತಿಯಲ್ಲಿ ಸಂಪೂರ್ಣವಾಗಿ ಕ್ರಿಯೆಶೀಲನಾಗಬಲ್ಲೆ ಬಂಟರ ಸಂಘವು ಸೇರಿ, ನಾವೆಲ್ಲರೂ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬೆಳ್ಳಿ ಹಬ್ಬ ಸಮಾರಂಭವನ್ನು ಅದ್ದೂರಿಯಾಗಿ ನಡೆಸಿ, ತುಳುನಾಡಿನ ನಮ್ಮ ಜಿಲ್ಲೆಗಳ ಅಭಿವೃದ್ಧಿಗಾಗಿ ಸಮಿತಿಯನ್ನು ಪ್ರೋತ್ಸಾಹಿಸೋಣ ಎಂದರು.

ಅಧ್ಯಕ್ಷತೆ ವಹಿಸಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ ಕೋಟ್ಯಾನ್ ಮಾತನಾಡುತ್ತಾ ನಮಗೆ ಇದೀಗ ಜಿಲ್ಲೆಯಲ್ಲಿ ಘಟನೆಯಂತೆ ಸಮಿತಿಯ ಪ್ರಮುಖರ ನೇಮಕವಾಗಬೇಕಿದೆ. ಹಾಗೂ ಜಿಲ್ಲಾ ಸಮಿತಿಯನ್ನು ಇನ್ನಷ್ಟು ಬಲಪಡಿಸಬೇಕಾಗಿದೆ. ಮೇ ತಿಂಗಳಲ್ಲಿ ಊರಿಗೆ ಹೋಗಿ ತೋನ್ಸೆಯಲ್ಲಿ ವಲಯ ಸಮಿತಿಯನ್ನು ರಚಿಸುವ ಉದ್ದೇಶವಿದೆ, ನಂತರ ತಿಂಗಳಲ್ಲಿ ವನಮಹೋತ್ಸವ, ಸಮುದ್ರ ತೀರದ ಸ್ವಚ್ಛತೆ, ನದಿ ನೀರಿನ ಸಂರಕ್ಷಣೆ ಬಗ್ಗೆ ಕಾರ್ಯಕ್ರಮಗಳನ್ನು ಸಮಿತಿಯು ಹಮ್ಮಿಕೊಂಡಿದ್ದು ಅದನ್ನು ಕಾರ್ಯರೂಪಕ್ಕೆ ತರಲಿದ್ದೇವೆ. ಬೆಳ್ಳಿ ಹಬ್ಬ ಸಮಾರಂಭದಲ್ಲಿ ಕೆಲವು ಸನ್ಮಾನ ಕಾರ್ಯಕ್ರಮಗಳನ್ನು ಹಾಗೂ 25 ವರ್ಷಗಳ ಸಮಿತಿಯ ಕಾರ್ಯ ಚಟುವಟಿಕೆಗಳ ಒಂದು ಗ್ರಂಥವನ್ನು ಬಿಡುಗಡೆ ಮಾಡುವ ಪ್ರಯತ್ನ ನಮ್ಮದು ಎನ್ನುತ್ತಾ ಬೆಳ್ಳಿಹಬ್ಬ ಸಮಾರಂಭದ ಚಟುವಟಿಕೆಗಳ ಬಗ್ಗೆ ತಿಳಿಸಿದರು.

ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕ್ರಷ್ಣ ಎ ಶೆಟ್ಟಿ ಮಾತನಾಡುತ್ತಾ “ಕರಾವಳಿಯ ಉಭಯ ಜಿಲ್ಲೆಗಳಲ್ಲಿ ನಿರಂತರ ವಿದ್ಯುತ್ ಪೂರೈಸುವಂತೆ ಬೆಂಗಳೂರಿಗೆ ತೆರಳಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ವಿಧಾನ ಸಭಾ ಸಭಾಪತಿ ಯು ಟಿ. ಖಾದರ್ ಅವರನ್ನು ಭೇಟಿಯಾಗಿ ನಡೆಸಿದ ಮಾತುಕತೆ ಯಶಸ್ವಿಯಾಗಿ ನಡೆದಿದ್ದು, ನಿರಂತರ ವಿದ್ಯುತ್ ಪೂರೈಕೆಯ ಸಮಿತಿಯ ಬೇಡಿಕೆ ಖಂಡಿತ ನೆರವೇರಬಹುದು ಎಂದರು. ಬಲ್ಕುಂಜೆಯಲ್ಲಿ ಆರಂಭವಾಗಲಿರುವ ಕೈಗಾರಿಕೋದ್ಯಮದಲ್ಲಿ ವಿದೇಶಿ ಉದ್ದಿಮೆಗಳು ಇಲ್ಲಿ ಬಂದರೆ ಉತ್ತಮ, ಅದೇ ರೀತಿ ಒಂದು ಮನೆಗೆ ಒಬ್ಬರಿಗೆ ಉದ್ಯೋಗ , ಧಾರ್ಮಿಕ ಕೇಂದ್ರಗಳ ರಕ್ಷಣೆ, ಬಾಡಿಗೆ ಮನೆಯವರಿಗೂ ಪುನರ್ವಸತಿ, ಶೇ. 30 ಪ್ರತಿಷತ ಹಸಿರು ವಲಯ, ಇತ್ಯಾದಿ ಬೇಡಿಕೆಗಳನ್ನು ಸಮಿತಿಯು ಸರಕಾರಕ್ಕೆ ಸಲ್ಲಿಸಲಿದೆ. ಬೆಂಗಳೂರಿನಲ್ಲಿ ಸಮಿತಿಯ ಉಪ ಸಮಿತಿ ರಚನೆ ಬಗ್ಗೆ ಬೇಡಿಕೆಯಿದ್ದು, ಈ ಬಗ್ಗೆ ನಿರ್ಧಾರ ಶೀಘ್ರದಲ್ಲಿ ತೆಗೆದುಕೊಳ್ಳೋಣ. ನೇತ್ರಾವತಿ ನದಿ ನೀರು ಕಲುಷಿತಗೊಂಡಿದ್ದು, ಇದರ ಕುರಿತು ಸಮಿತಿ ಕ್ರಮಕೈಗೊಳ್ಳಲಿದೆ. ಅದೇ ರೀತಿ ಸಮುದ್ರ ಕಿನಾರೆಯಲ್ಲಿ ಸ್ವಚ್ಛತಾ ಅಭಿಯಾನ, ವನಮಹೋತ್ಸವ ಇತ್ಯಾದಿ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಸಮಿತಿ ಹಮ್ಮಿಕೊಳ್ಳಲಿದೆ ಎಂದರು.

ಈ ಸಂದರ್ಭ ಸಮಿತಿಯ ಸಲಹೆಗಾರರಾಗಿ ನಿಯುಕ್ತಿಗೊಂಡ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು. ಸಂಸ್ಥಾಪಕರಾದ ತೋನ್ಸೆ ಜಯಕ್ರಷ್ಣ ಶೆಟ್ಟಿ ಅವರು ಸಮಿತಿಯ ಮುಂದಿನ ಕಾರ್ಯ ಯೋಜನೆಗೆ ದೊಡ್ಡ ಮೊತ್ತವನ್ನು ದೇಣಿಗೆ ನೀಡಿದರು.
ಪ್ರಾರಂಭದಲ್ಲಿ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ ಕೋಟ್ಯಾನ್ ಎಲ್ಲರನ್ನು ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಗತ ಸಭೆಯ ವರದಿ ವಾಚಿಸಿದರು. ಗೌರವ ಕೋಶಾಧಿಕಾರಿ ಸದಾನಂದ ಆಚಾರ್ಯ ಲೆಕ್ಕಪತ್ರ ಮಂಡಿಸಿದರು.
ಸಭೆಯಲ್ಲಿ ಧರ್ಮಪಾಲ್ ಯು.ದೇವಾಡಿಗ, ಸಿಎ. ಐ.ಆರ್. ಶೆಟ್ಟಿ, ಶ್ಯಾಮ್ ಎನ್ ಶೆಟ್ಟಿ, ಡಾ.ಸುರೇಂದ್ರಕುಮಾರ್ ಹೆಗ್ಡೆ, ನ್ಯಾ. ಆರ್.ಎಂ.ಭಂಡಾರಿ, ಹಿರಿಯಡ್ಕ ಮೋಹನದಾಸ್, ಶ್ರೀನಿವಾಸ್ ಪಿ. ಸಾಫಲ್ಯ, ಸಿ.ಎಸ್. ಗಣೇಶ್ ಶೆಟ್ಟಿ, ಜಿತೇಂದ್ರ ಗೌಡ, ಡಾ. ಪ್ರಭಾಕರ ಶೆಟ್ಟಿ ಬೋಳ, ಕರುಣಾಕರ ಹೆಜಮಾಡಿ, ಎಂ.ಎನ್. ಕರ್ಕೇರ, ಚಿತ್ರಾಪು ಕೆ.ಎಂ.ಕೋಟ್ಯಾನ್, ನ್ಯಾ. ದಯಾನಂದ ಶೆಟ್ಟಿ, ಹ್ಯಾರಿ ಸಿಕ್ವೇರಾ, , ನ್ಯಾ. ಸಂತೋಷ್ ಕುಮಾರ್ ಹೆಗ್ಡೆ, ರವಿ ಎಸ್. ದೇವಾಡಿಗ, ಉತ್ತಮ್ ಶೆಟ್ಟಿಗಾರ್, ರಾಕೇಶ್ ಭಂಡಾರಿ, ತುಳಸಿದಾಸ್ ಎಲ್.ಅಮಿನ್, ತೋನ್ಸೆ ಅಶೋಕ್ ಎ ಶೆಟ್ಟಿ, ನ್ಯಾ. ಮೋರ್ಲ ರತ್ನಾಕರ ಶೆಟ್ಟಿ, ಸಂತೋಷ್ ರೈ ಬೆಳ್ಳಿಪಾಡಿ, ಟಿ ಅಶೋಕ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕೊನೆಯಲ್ಲಿ ಜೊತೆ ಕಾರ್ಯದರ್ಶಿ ಸಿ ಎಸ್ ಗಣೇಶ್ ಶೆಟ್ಟಿ ವಂದಿಸಿದರು.