
ಅಸೋಸಿಯೇಶನಿನ ಉನ್ನತ ಯೋಜನೆಗಳಿಗೆ ಸರ್ವರ ಸಹಕಾರ ಅಗತ್ಯ – ಹರೀಶ್ ಜಿ.ಅಮೀನ್.
ಚಿತ್ರ,ವರದಿ: ಉಮೇಶ್ ಕೆ.ಅಂಚನ್.
ಭಾಯಂದರ್, ಎ.15- ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ಒಳ್ಳೆಯ ಸಮಿತಿ ರಚನೆಯಾಗಿದೆ. ಪ್ರಸ್ತುತ ನಮ್ಮ ಸಮಾಜದ ಮಹಿಳೆಯರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಸಮಿತಿಗಳಲ್ಲಿ ಮಹಿಳೆಯರೇ ಜವಾಬ್ದಾರಿಯುತ ಹುದ್ದೆಯನ್ನು ವಹಿಸಿಕೊಂಡಿದ್ದಾರೆ ಎನ್ನಲು ತುಂಬಾ ಸಂತೋಷವಾಗುತ್ತದೆ. ಸಮಾಜವನ್ನು ಬಲಪಡಿಸಲು ಹಲವಾರು ಯೋಜನೆಗಳು ನಮ್ಮ ಮುಂದಿದೆ. ಅದರಲ್ಲಿ ಮುಖ್ಯವಾಗಿ ಉನ್ನತ ಮಟ್ಟದ ಶಿಕ್ಷಣ ಸಂಸ್ಥೆ ಸ್ಥಾಪಿಸುವುದು ನಮ್ಮ ಮುಂದಿನ ಗುರಿ. ಅದಕ್ಕಾಗಿ ನಾವು ಪ್ರಯತ್ನಶೀಲರಾಗಿದ್ದೇವೆ. ಅಸೋಸಿಯೇಷನ್ ಗೆ ಆದಾಯ ಬರುವಂತಹ ಯೋಜನೆಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ. ಸಮಾಜದ ಉನ್ನತಿಗಾಗಿ ನಮ್ಮ ಹಿರಿಯರು ಭಾರತ್ ಬ್ಯಾಂಕ್ ಅನ್ನು ಸ್ಥಾಪನೆ ಮಾಡಿ ಅದನ್ನು ಬೆಳೆಸಿದ್ದಾರೆ. ಇತ್ತೀಚೆಗೆ ನವಿಮುಂಬಯಿ ಯಲ್ಲಿ ಬಿಲ್ಲವ ಸಮುದಾಯ ಭವನ ಲೋಕಾರ್ಪಣೆಗೊಂಡಿದೆ. ಗುರುಗಳ ಆಶೀರ್ವಾದದಿಂದ ಮುಂದೆ ನಮ್ಮ ಕನಸಿನ ಯೋಜನೆ ಉನ್ನತ ಮಟ್ಟದ ಶಿಕ್ಷಣ ಸಂಸ್ಥೆ ಸ್ಥಾಪನೆ ಆಗಬಹುದೆಂಬ ವಿಶ್ವಾಸವಿದೆ. ಶೈಕ್ಷಣಿಕ ಸೇವೆಯ ಮಹತ್ತರ ಯೋಜನೆಗೆ ಸಮಾಜ ಬಾಂಧವರು,ದಾನಿಗಳು ಸಹಕರಿಸ ಬೇಕೆಂದು ಬಿಲ್ಲವರ ಅಸೋಸಿಯೇಷನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ ಅಮೀನ್ ನುಡಿದರು.
ಅವರು ಎ. 14ರಂದು ಬಿಲ್ಲವರ ಅಸೋಸಿಯೇಶನಿನ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ಆಯೋಜಿಸಿದ್ದ ಶ್ರೀ ಸತ್ಯನಾರಾಯಣ ಮಹಾಪೂಜೆಯಲ್ಲಿ ಪಾಲ್ಗೊಂಡು ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಅಂದು ಬೆಳಿಗ್ಗೆ ಪುರೋಹಿತ್ ಹೆಜಮಾಡಿ ಹರೀಶ್ ಶಾಂತಿಯವರ ಪೌರೋಹಿತ್ಯದಲ್ಲಿ ಗಣೇಶ ಹೋಮ ಹಾಗೂ ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಿತು. ರಕ್ಷ ಮತ್ತು ರಾಕೇಶ್ ಪೂಜಾರಿ ದಂಪತಿಗಳು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. ಕೊನೆಯಲ್ಲಿ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಈ ಸಂಧರ್ಭದಲ್ಲಿ ಬಿಲ್ಲವರ ಅಸೋಸಿಯೇಶನಿನ ಅಧ್ಯಕ್ಷ ಹರೀಶ್ ಜಿ.ಅಮೀನ್ ದೇವರನ್ನು ಫಲಪುಷ್ಪ ಪ್ರಸಾದದೊಂದಿಗೆ ಸನ್ಮಾನಿಸಲಾಯಿತು. ಪರಿಸರದ ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು, ದಾನಿಗಳನ್ನು ಶಾಲು ಹೊದಿಸಿ ಪ್ರಸಾದ ನೀಡಿ ಗೌರವಿಸಲಾಯಿತು. ಸ್ಥಳೀಯ ಸಮಿತಿಯ ಕಾರ್ಯದರ್ಶಿ ಜ್ಯೋತಿ ಆರ್.ಪೂಜಾರಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಶೇಖರ್ ಆರ್ ಪೂಜಾರಿಯವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು. ಜಿ.ಕೆ.ಕೆಂಚನಕೆರೆ ಕಾರ್ಯಕ್ರಮ ನಿರೂಪಿಸಿದರು.

ಬಿಲ್ಲವರ ಅಸೋಸಿಯೇಶನಿನ ಗೌ.ಪ್ರಧಾನ ಕಾರ್ಯದರ್ಶಿ ಹರೀಶ್ ಜಿ.ಸಾಲ್ಯಾನ್, ಉಪಾಧ್ಯಕ್ಷ ಹಾಗೂ ಕೇಂದ್ರ ಕಚೇರಿಯ ಪ್ರಭಾರಿ ಮೋಹನ್ ಸಿ.ಕೋಟ್ಯಾನ್, ಜೊತೆ ಕಾರ್ಯದರ್ಶಿ ಕೇಶವ್ ಕೋಟ್ಯಾನ್,ಕೇಂದ್ರ ಕಚೇರಿಯ ಪ್ರತಿನಿಧಿ ಗೋಪಾಲಕೃಷ್ಣ ಆರ್. ಸಾಲ್ಯಾನ್ ಕೆಂಚನಕೆರೆ, ಸಾಮಾಜಿಕ ಮತ್ತು ಧಾರ್ಮಿಕ ಉಪಸಮಿತಿಯ ಕಾರ್ಯಾಧ್ಯಕ್ಷ ಧರ್ಮಪಾಲ್ ಜಿ.ಅಂಚನ್, ಯುವೋಭ್ಯುದಯ ಸಮಿತಿಯ ಕಾರ್ಯದರ್ಶಿ ಯೋಗೇಶ್ ಪೂಜಾರಿ, ಜೊತೆ ಕೋಶಾಧಿಕಾರಿ ಹರಿಶ್ಚಂದ್ರ ಜಿ. ಕುಂದರ್ ಕಾರ್ಯಕಾರಿ ಸಮಿತಿಯ ಸದಸ್ಯರಾದ ಹರೀಶ್ ಪೂಜಾರಿ ಕೊಕ್ಕರ್ಣೆ, ವಿಶ್ವನಾಥ್ ತೋನ್ಸೆ , ಭಾರತಿ ಎ.ಅಂಚನ್ ಭಾಯಂದರ್ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ಪ್ರಮೋದ್ ಕೆ. ಕೋಟ್ಯಾನ್, ಕಾರ್ಯಾಧ್ಯಕ್ಷ ಶೇಖರ ರಾಮ ಪೂಜಾರಿ, ಉಪ ಕಾರ್ಯಾಧ್ಯಕ್ಷರುಗಳಾದ ಸುಧಾಕರ್ ಜಿ.ಪೂಜಾರಿ ಮತ್ತು ಸತೀಶ್ ಜಿ.ಪೂಜಾರಿ, ಕಾರ್ಯದರ್ಶಿ ಜ್ಯೋತಿ ರತ್ನಾಕರ್ ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ಜಯಶ್ರೀ ಸಂತೋಷ್ ಕರ್ಕೇರ ಮತ್ತು ದೀಪಕ್ ಎಸ್.ಕರ್ಕೇರ, ಗೌರವ ಕೋಶಾಧಿಕಾರಿ ಪಲಿಮಾರು ಹರೀಶ್ ಎಂ.ಸಾಲ್ಯಾನ್, ಜೊತೆ ಕೋಶಾಧಿಕಾರಿಗಳಾದ ನಾಗೇಶ್ ಎಸ್.ಪೂಜಾರಿ ಮತ್ತು ಅಶೋಕ್ ಟಿ.ಪೂಜಾರಿ, ವಿಶೇಷ ಸಲಹೆಗಾರರಾದ ಚಿತ್ರಾಪು ಕೆ.ಎಮ್.ಕೋಟ್ಯಾನ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು , ವಿಶೇಷ ಆಮಂತ್ರಿತರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.