
ಮಳೆಗಾಲದ ವಿರಾಮದ ನಂತರ ಮೀನುಗಾರಿಕೆ ಚಟುವಟಿಕೆಗಳನ್ನು ಪುನರಾರಂಭಿಸುವ ಮೊದಲು ಮೀನುಗಾರರು ಸಮುದ್ರ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ.
ಅದರಂತೆ ಇಂದು (ಆಗಸ್ಟ್ 9) ಶನಿವಾರ, ಬೆಳಿಗ್ಗೆ ಪಡುಬಿದ್ರಿ ನಡಿಪಟ್ಣದಲ್ಲಿಸಮುದ್ರಕ್ಕೆ ದನದ ಹಾಲು ಮತ್ತು ತೆಂಗಿನಕಾಯಿಯನ್ನು ಅರ್ಪಿಸುವ ಮೂಲಕ ಸಮುದ್ರ ಪೂಜೆ ನಡೆಸಲಾಯಿತು. ಇದು ಪ್ರತಿ ವರ್ಷ ಮಳೆಗಾಲ ಮುಗಿದು ಸಮುದ್ರದಲ್ಲಿ ಮೀನು ಹಿಡಿಯುವ ಮುನ್ನ ಮಾಡುವ ದೇವತಾ ಕಾರ್ಯ.

ಶ್ರೀ ವಿಷ್ಣು ಮಂದಿರ ನಡಿಪಟ್ಣ ಇದರ ಅರ್ಚಕರಾದ ಸತೀಶ್ ಮೆಂಡನ್, ಶ್ರೀ ವಿಷ್ಣು ದೇವರಿಗೆ ,ವಾಯುದೇವರಿಗೆ ಪೂಜೆಯನ್ನು ಸಲ್ಲಿಸಿ, ಸಮುದ್ರ ಕಿನಾರೆಗೆ ತೆರಳಿ, ಅಲ್ಲಿ ಪ್ರಸ್ತುತ ಅಧ್ಯಕ್ಷರಾದ ಹರೀಶ್ ಪುತ್ರನ್ ದೀಪ ಪ್ರಜ್ವಲಿಸಿದರೆ ,ಮಾಜಿ ಅಧ್ಯಕ್ಷರಾದ ಗಂಗಾಧರ್ ಕರ್ಕೇರ ಸಮುದ್ರ ಪೂಜೆ ಮಾಡುವ ಉದ್ದೇಶದ ಬಗ್ಗೆ ವಿಸ್ತಾರವಾಗಿ ಮುಂದಿನ ಜನಾಂಗಕ್ಕೆ ತಿಳಿಯ ಹೇಳಿದರು.
ಪಡುಬಿದ್ರಿ ನಡಿಪಟ್ಣ ಮೊಗವೀರ ಸಭಾ ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಕಾಂಚನ್ ,ಕಾಡಿಪಟ್ಣ ನಡಿಪಟ್ಣ ವಿದ್ಯಾ ಪ್ರಚಾರಕ ಸಂಘದ ಅಧ್ಯಕ್ಷರಾದ ಸುಕುಮಾರ್ ಶ್ರೀಯಾನ್,ವಿಜಯ ಬ್ಯಾಂಕ್ ನ ಮಾಜಿ ಉದ್ಯೋಗಿ ಕೆ ಎನ್ ಚಂದ್ರಶೇಖರ್ಹಾಗೂ ಕಾರ್ಯಕರ್ತರು, ಸದಸ್ಯರು ಉಪಸ್ಥಿತರಿದ್ದರು.
ಪ್ರತಿ ವರ್ಷ ಋಗುಪಕರ್ಮ ದಿನದಂದು ಮೀನುಗಾರರು ಮತ್ಸ್ಯ ಸಂಪತ್ತು ವೃದ್ಧಿ, ಮೀನುಗಾರಿಕೆಯಲ್ಲಿ ಯಶಸ್ಸು, ಹಾಗೂ ಸುರಕ್ಷತೆಗಾಗಿ ಸಮುದ್ರಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥಿಸುವುದು, ಮೀನುಗಾರ ಸಮುದಾಯದಲ್ಲಿ ಒಂದು ಸಾಂಪ್ರದಾಯವಾಗಿದೆ.





