
ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ – ಧರ್ಮೇಶ್ ಪುತ್ರನ್
ತುಳು ಭಾಷಿಕರಾದ ನಾವು ಉದರ ಪೋಷಣೆಗಾಗಿ ಹುಟ್ಟೂರನ್ನು ಬಿಟ್ಟು ಮುಂಬೈಗೆ ವಲಸೆ ಬಂದಿದ್ದರೂ, ನಮ್ಮ ಜೊತೆಯಲ್ಲಿ ತುಳು ಮಣ್ಣಿನ ಅಮೂಲ್ಯ ಸಂಸ್ಕೃತಿ, ಆಚಾರ ವಿಚಾರಗಳನ್ನು ತಂದು ಅವನ್ನು ಈ ನೆಲದಲ್ಲಿ ಪೋಷಿಸಿ ಬೆಳೆಸುತ್ತಿರುವುದು ಎಲ್ಲಾ ತುಳುವರು ಹೆಮ್ಮೆ ಪಡಬೇಕಾದ ಸಂಗತಿಯಾಗಿದೆ ಎಂದು ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ ಇದರ ಇನ್ಫ್ರಾಸ್ಟ್ರಕ್ಚರ್ ಸಮಿತಿಯ ಚೇರ್ಮೆನ್ ಧರ್ಮೇಶ್ ಪುತ್ರನ್ ನುಡಿದರು. ಅವರು ಮಂಡಳಿಯ ನವಿ ಮುಂಬೈ ಶಾಖೆಯ ವತಿಯಿಂದ ರವಿವಾರ ಆಗಸ್ಟ್ 10ರಂದು ಸಂಜೆ ನ್ಯೂ ಪನ್ವೆಲ್ ಖಾಂದ ಕಾಲನಿಯ ಸಾಯಿನಂದನ್ ಬ್ಯಾಂಕ್ವೆಟ್ ಹಾಲಲ್ಲಿ ಏರ್ಪಡಿಸಲಾಗಿದ್ದ ಅಟಿಡ್ ಒಂಜಿ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಿದ್ದರು.
ತುಳು ವರ್ಷದ 4ನೇ ತಿಂಗಳ ಆಟಿಯಲ್ಲಿ ಆಟಿಡೊಂಜಿ ಕೂಟದಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ನಮ್ಮ ಸಂಸ್ಕೃತಿ, ಭಾಷೆಯ ಸೊಗಡನ್ನು ಉಳಿಸಿ ಬೆಳೆಸುವುದು ಮಾತ್ರವಲ್ಲದೆ ಅದನ್ನು ನಮ್ಮ ಮುಂದಿನ ತಲೆಮಾರಿಗೆ ದಾಟಿಸಲು ಸಾಧ್ಯವಾಗುತ್ತದೆ. ನವಿಮುಂಬೈ ಪರಿಸರದಲ್ಲಿ ಸದಾ ಕ್ರಿಯಾಶೀಲವಾಗಿರುವ ನವಿ ಮುಂಬೈ ಶಾಖೆಯ ಚಟುವಟಿಕೆಗಳ ಬಗ್ಗೆ ತಿಳಿದು ತುಂಬಾ ಸಂತೋಷವಾಗುತ್ತಿದೆ ಎಂದು ನುಡಿದ ಅವರು ನವಿ ಮುಂಬೈ ಶಾಖೆಯು ತನ್ನದೇ ಆದ ವಿಶಾಲವಾದ ಸ್ವಂತ ಕಾರ್ಯಲಯವನ್ನು ಹೊಂದುವ ದಿನ ದೂರವಿಲ್ಲ, ಮಂಡಳಿಯು ಆ ದಿಸೆಯಲ್ಲಿ ಈಗಾಗಲೇ ಕಾರ್ಯೋನ್ಮುಖ ವಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ತಿತರಿದ್ದ ಮಂಡಳಿಯ ಮುಖ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ವಜ್ರಾಕಾಂತ ಕುಂದರ್, ಅರವಿಂದ ಪುತ್ರನ್, ರಾಜೇಶ್ ಪುತ್ರನ್, ಚಂದ್ರಕಾಂತ್ ಸಾಲಿಯನ್, ಮಾತ್ರವಲ್ಲದೆ ಮಹಿಳಾ ವಿಭಾಗದ ಅಧ್ಯಕ್ಷೇ ನಿವೇದಿತಾ ಸಾಲ್ಯಾನ್ ಶಾಖೆಯ ಉಪಾಧ್ಯಕ್ಷೆ ಸುರೇಖಾ ಪುತ್ರನ್ ಕೂಡ ಅಚ್ಚುಕಟ್ಟಾಗಿ ಏರ್ಪಡಿಸಲಾದ ಕಾರ್ಯಕ್ರಮದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಸದಾ ಕಾಲ ಮನಸ್ಸಿನಲ್ಲಿ ಉಳಿಯುವಂತಹ ಈ ಸುಂದರ ಕಾರ್ಯಕ್ರಮವನ್ನು ಆಯೋಜಿಸಿದ ಸಲುವಾಗಿ ಮುಖ್ಯತಃ ಮಹಿಳಾ ವಿಭಾಗದವರನ್ನು ಅಭಿನಂದಿಸಿದರು.

ಶಾಖೆಯ ವತಿಯಿಂದ ಎಲ್ಲಾ ಅತಿಥಿಗಳಿಗೆ ಪುಷ್ಪಗುಚ್ಚ ನೀಡಿ ಗೌರವಿಸಲಾಯಿತು. ಶಾಖೆಯ ಮಹಿಳಾ ವಿಭಾಗದ ಅಧ್ಯಕ್ಷೇ ಜಾನಕಿ ಬಂಗೇರ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದ ಎಲ್ಲಾ ಸದಸ್ಯರ ಉಪಕಾರವನ್ನು ಸ್ಮರಿಸಿದರು. ಬಳಿಕ ಶಾಖೆಯ ಉಪಾಧ್ಯಕ್ಷರಾದ ನಾರಾಯಣ ಕೋಟ್ಯಾನ್, ಹಿರಿಯ ಸದಸ್ಯ ಸಿದ್ದಾರ್ಥ ಕೋಟ್ಯಾನ್, ಕಾರ್ಯದರ್ಶಿ ಶೇಕರ್ ಮೈಂದನ್ ಹಾಗೂ ಸಲಹೆಗಾರರಾದ ಸೋಮನಾಥ್ ಎಸ್ ಕರ್ಕೇರ ಸಮಯೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಚೇರಿಯ ಮಹಿಳಾ ವಿಭಾಗದ ಕೋಶಾಧಿಕಾರಿ ಯಶೋಧ ಕರ್ಕೆರ, ಸದಸ್ಯೆ ರೇಖಾ, ಮಂಡಳಿಯ ಡೊಂಬಿವಲಿ ಶಾಖೆಯ ಮಹಿಳಾ ವಿಭಾಗದ ಅಧ್ಯಕ್ಷೇ ದಮಯಂತಿ ಕೋಟ್ಯಾನ್, ಸದಸ್ಯರಾದ ಗೀತಾ ಮೆಂಡನ್, ಸವಿತಾ ಸಾಲ್ಯಾನ್, ರೋಹಿಣಿ ಕರುಣಾಕರ, ಜಯಂತಿ ಬಂಗೇರ, ಪುಷ್ಪ ತಾಮ್ಸ, ಶುಭ ಪುತ್ರನ್ ಉಪಸ್ಥಿತರಿದ್ದರು.
ಶಾಖೆಯ ಮಹಿಳಾ ವಿಭಾಗದ ಸದಸ್ಯರು ತಮ್ಮ ತಮ್ಮ ಮನೆಯಲ್ಲಿ ತಯಾರಿಸಿ ತಂದಿದ್ದ ತುಳುನಾಡಿನ ವಿಶೇಷ ಅಡಿಗೆಯ ರುಚಿಯನ್ನು ನೆರೆದವರೆಲ್ಲರೂ ಸವಿದು ಆನಂದಿಸಿದರು.
ಬಳಿಕ ಸದಸ್ಯರಿಂದ ಹಾಡು, ನೃತ್ಯ, ತುಳು ಹಾಸ್ಯ ಕವನ ವಾಚನ, ಜಾನಕಿ ಬಂಗೇರ ಹಾಗೂ ತೇಜಸ್ವಿ ಮಲ್ಪೆಯವರಿಂದ ಕಿರು ಹಾಸ್ಯ ನಾಟಕ ಮುಂತಾದ ಮನರಂಜನಾ ಕಾರ್ಯಕ್ರಮ ಜರಗಿ ಇದರಲ್ಲಿ ನೆರೆದವರೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಬೆರೆತು ಸಂಭ್ರಮಿಸಿದರು.
ಅಶ್ವಿನಿ ಕೋಟ್ಯಾನ್ ಮತ್ತು ಜಾನಕಿ ಬಂಗೇರ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯದರ್ಶಿ ಶೇಖರ್ ಮೈಂದನ್ ವಂದನಾರ್ಪಣೆಗೈದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡರಿಗಾಗಿ ನಡೆಸಲಾದ ಲಕ್ಕಿ ಡ್ರಾ ಸ್ಪರ್ಧೆಯಲ್ಲಿ ಪ್ರತಿಭಾ ಸಾಲ್ಯಾನ್ ವಿಜೇತರಾಗಿ ಅವರು ಚಂದ್ರಕಾಂತ್ ಸಾಲ್ಯಾನ್ ಅವರಿಂದ ಬಹುಮಾನವನ್ನು ಸ್ವೀಕರಿಸಿದರು.
ವರದಿ : ಸೋಮನಾಥ್ ಎಸ್ ಕರ್ಕೇರ : 9818321186




