
ಮಂಜುನಾಥ ಮಹಾವಿದ್ಯಾಲಯ: ಗುಣಮಟ್ಟದ ಶಿಕ್ಷಣಕ್ಕೆ ಬದ್ಧ – ಸುಕುಮಾರ ಎನ್. ಶೆಟ್ಟಿ
ಡೊಂಬಿವಲಿ 19: ಹೊರನಾಡಿನಲ್ಲಿ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸುತ್ತಿರುವ ಕರ್ನಾಟಕ ಸಂಘ ಡೊಂಬಿವಲಿ, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಆಗಸ್ಟ್ 18ರಂದು, ಸಂಸ್ಥೆಯ ಮಂಜುನಾಥ ವಾಣಿಜ್ಯ ಮಹಾವಿದ್ಯಾಲಯದಲ್ಲಿ, ನೂತನ ಕಲಾ ಹಾಗೂ ವಿಜ್ಞಾನ ಪದವಿಪೂರ್ವ ವಿಭಾಗಗಳಿಗೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮ, ಜ್ಞಾನದ ಹೊಸ ದಿಗಂತವನ್ನು ತೆರೆದ ಸುಂದರ ಕ್ಷಣವಾಗಿತ್ತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಸಂಘ ಡೊಂಬಿವಲಿಯ ಅಧ್ಯಕ್ಷ ಸುಕುಮಾರ ಎನ್. ಶೆಟ್ಟಿ, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಂಸ್ಥೆ ಸದಾ ಬದ್ಧವಾಗಿದೆ ಎಂದು ಘೋಷಿಸಿದರು. “ಇಂದು ಪ್ರಾರಂಭವಾದ ಈ ವಿಭಾಗಗಳಲ್ಲಿ, ವಿಜ್ಞಾನ ವಿಭಾಗದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದು ಹೆಮ್ಮೆಯ ಸಂಗತಿ. ಇದು ಪ್ರಾಂಶುಪಾಲೆ ಡಾ. ಸುಶೀಲಾ ವಿಜಯಕುಮಾರ್ ಮತ್ತು ಶಿಕ್ಷಕೇತರ ಸಿಬ್ಬಂದಿಯ ಸಹಕಾರದ ಫಲ,” ಎಂದು ಅವರು ಶ್ಲಾಘಿಸಿದರು. ಇಲ್ಲಿ ಶಿಕ್ಷಣ ಪಡೆದ ಮಕ್ಕಳು ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುವುದಲ್ಲದೆ, ದೇಶದ ಸತ್ಪ್ರಜೆಗಳಾಗಿ, ಹೆತ್ತವರಿಗೆ, ಶಾಲೆಗೆ, ಹಾಗೂ ನಾಡಿಗೆ ಕೀರ್ತಿ ತರಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಸ್ವಾಗತ ಭಾಷಣ ಮಾಡಿದ ಸಂಘದ ಕಾರ್ಯಾಧ್ಯಕ್ಷ ಡಾ. ದಿವಾಕರ ಶೆಟ್ಟಿ ಇಂದ್ರಾಳಿ, ಈ ದಿನವನ್ನು ಡೊಂಬಿವಲಿ ಕರ್ನಾಟಕ ಸಂಘದ ಇತಿಹಾಸದಲ್ಲಿ ಅವಿಸ್ಮರಣೀಯ ದಿನ ಎಂದು ಬಣ್ಣಿಸಿದರು. “ಆರುವರೆ ದಶಕಗಳ ಹಿಂದೆ ಪುಟ್ಟ ಸಸಿಯಾಗಿ ಪ್ರಾರಂಭವಾದ ನಮ್ಮ ಸಂಘ, ಇಂದು ವಿಶಾಲವಾದ ಆಲದ ಮರವಾಗಿ ಬೆಳೆದು ನಿಂತಿದೆ. ಮಂಜುನಾಥ ವಿದ್ಯಾಲಯ ಮತ್ತು ಮಂಜುನಾಥ ವಾಣಿಜ್ಯ ಮಹಾವಿದ್ಯಾಲಯಕ್ಕೆ ಕಲಾ ಹಾಗೂ ವಿಜ್ಞಾನ ವಿಭಾಗಗಳು ಸೇರ್ಪಡೆಯಾಗುವುದರೊಂದಿಗೆ, ಅದರ ಕೀರ್ತಿ ಶಿಖರಕ್ಕೆ ಮತ್ತೊಂದು ಗರಿ ಮೂಡಿದಂತಾಗಿದೆ,” ಎಂದು ಹರ್ಷ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಜ್ಞಾನ ಕ್ಷೇತ್ರದ ದಿಗ್ಗಜ ನರೇಂದ್ರ ಜೋಶಿ ಮತ್ತು ಪರಿಸರ ಕ್ಷೇತ್ರದ ತಜ್ಞೆ ರಶ್ಮೀ ಜೋಶಿ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತ್ತು. ಡಾ. ಇಂದ್ರಾಳಿ ಅವರು ಕಳೆದ ವರ್ಷದ ಎಸ್.ಎಸ್.ಸಿ. ಫಲಿತಾಂಶದ ಶತಪ್ರತಿಶತ ಯಶಸ್ಸು ಮತ್ತು ಎಚ್.ಎಸ್.ಸಿ.ಯಲ್ಲಿನ 97% ಫಲಿತಾಂಶವನ್ನು ಹೆಮ್ಮೆಯಿಂದ ನೆನಪಿಸಿಕೊಂಡರು.

ಮುಖ್ಯ ಅತಿಥಿ, ಭಾಭಾ ಪರಮಾಣು ಸಂಶೋಧನಾ ಕೇಂದ್ರದ ವಿಜ್ಞಾನಿ ನರೇಂದ್ರ ಜೋಶಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, “ಯಾವುದೇ ಆತಂಕಕ್ಕೆ ಒಳಗಾಗದೆ, ನಿರಂತರ ಅಧ್ಯಯನ ಮತ್ತು ಸಕಾರಾತ್ಮಕ ಚಿಂತನೆಗಳ ಮೂಲಕ ಜೀವನದಲ್ಲಿ ಯಶಸ್ಸು ಪಡೆಯಬೇಕು,” ಎಂದು ಕರೆ ನೀಡಿದರು. “ಒಂದು ಬಾಗಿಲು ಮುಚ್ಚಿದರೆ ಇನ್ನೊಂದು ತೆರೆಯುತ್ತದೆ. ಅಬ್ದುಲ್ ಕಲಾಂ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಿ. ಕ್ರೀಡೆ, ಸಂಗೀತ ಮತ್ತು ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ,” ಎಂದು ಸಲಹೆ ನೀಡಿದರು. “ಇಂದು ಬೇರೆಯವರ ‘ಆಟೋಗ್ರಾಫ್’ ಪಡೆಯುವ ನೀವು, ನಾಳೆ ಬೇರೆಯವರಿಗೆ ‘ಆಟೋಗ್ರಾಫ್’ ನೀಡುವ ಮಹಾನ್ ಸಾಧಕರಾಗಿ ಬೆಳೆಯಿರಿ,” ಎಂದು ಹಾರೈಸಿದರು.
ನಿವೃತ್ತ ಪ್ರಾಧ್ಯಾಪಕಿ ಹಾಗೂ ಪರಿಸರ ಸಲಹೆಗಾರ್ತಿ ರಶ್ಮೀ ಜೋಶಿ ಮಾತನಾಡಿ, ಕರ್ನಾಟಕ ಸಂಘದ ಆಡಳಿತ ಮಂಡಳಿಯ ಕನಸು ಇಂದು ನನಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮಕ್ಕಳು ನಿರಂತರ ಅಧ್ಯಯನದ ಜೊತೆಗೆ ತಮ್ಮಲ್ಲಿರುವ ಸುಪ್ತ ಕಲೆಗಳಿಗೆ ಆದ್ಯತೆ ನೀಡಬೇಕೆಂದು ಕರೆ ನೀಡಿ, ಮಹಾವಿದ್ಯಾಲಯ ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಕೋರಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ನರೇಂದ್ರ ಜೋಶಿ, ರಶ್ಮೀ ಜೋಶಿ, ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ವಸಂತ ಕಲಕೋಟಿ ಮತ್ತು ವಿಠ್ಠಲ ಎ. ಶೆಟ್ಟಿ ಅವರನ್ನು ಶಾಲು, ಶ್ರೀಫಲ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ನಂತರ ಗಣ್ಯರು ರಿಬ್ಬನ್ ಕತ್ತರಿಸುವ ಮೂಲಕ ವಿಜ್ಞಾನ ಪ್ರಯೋಗಾಲಯ ಹಾಗೂ ತರಗತಿಗಳಿಗೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಸುಕುಮಾರ ಎನ್. ಶೆಟ್ಟಿ, ಡಾ. ದಿವಾಕರ ಶೆಟ್ಟಿ ಇಂದ್ರಾಳಿ, ನರೇಂದ್ರ ಜೋಶಿ, ರಶ್ಮೀ ಜೋಶಿ, ಲೋಕನಾಥ ಎ. ಶೆಟ್ಟಿ, ದೇವದಾಸ್ ಕುಲಾಲ್, ಪ್ರೊ. ಅಜೀತ್ ಉಮರಾಣಿ, ತಾರಾನಾಥ ಅಮೀನ್, ವಿಮಲಾ ವಿ. ಶೆಟ್ಟಿ, ಮತ್ತು ಡಾ. ಸುಶೀಲಾ ವಿಜಯಕುಮಾರ್ ಉಪಸ್ಥಿತರಿದ್ದರು.
ಸಮಾರಂಭವನ್ನು ಪ್ರೊ. ಸುಧಾ ದುಬೆ ನಿರೂಪಿಸಿದರು. ಪ್ರಾಂಶುಪಾಲೆ ಡಾ. ಸುಶೀಲಾ ವಿಜಯಕುಮಾರ್ ಅತಿಥಿಗಳನ್ನು ಪರಿಚಯಿಸಿ ಪುಷ್ಪಗುಚ್ಛ ನೀಡಿ ಗೌರವಿಸಿದರು. ಕು. ಯಶಸ್ವಿ ವಂದನಾರ್ಪಣೆ ಮಾಡಿದರು.
ಈ ಮಹತ್ವದ ಕಾರ್ಯಕ್ರಮದಲ್ಲಿ ಡಾ. ಗೋಪಾಲ ಮುಖರ್ಜಿ, ಸುನೀಲ್ ಪುಣತಾಂಬೇಕರ್, ಪ್ರಭಾಕರ ಆರ್. ಶೆಟ್ಟಿ, ನ್ಯಾಯವಾದಿ ಆರ್.ಎಂ. ಭಂಡಾರಿ, ರವಿ ಸನಿಲ್, ವಿಠ್ಠಲ ಎ. ಶೆಟ್ಟಿ, ವಸಂತ ಕಲಕೋಟಿ, ಸಂಜಯ್ ಪಟ್ಕಿ, ಚಂದ್ರಾ ನಾಯ್ಕ, ಜಗತ್ಪಾಲ್ ಶೆಟ್ಟಿ, ಜಗನ್ನಾಥ ಶೆಟ್ಟಿ, ರಾಜೀವ ಭಂಡಾರಿ, ಸುಷ್ಮಾ ಶೆಟ್ಟಿ, ಆಶಾ ಶೆಟ್ಟಿ ಮುಂತಾದ ಅನೇಕ ಗಣ್ಯರು ಮತ್ತು ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.




