ಮುಂಬಯಿ: ನಗರದ ಪ್ರಸಿದ್ಧ ಧಾರ್ಮಿಕ ಮುಖಂಡರೂ, ಪರಮಪೂಜ್ಯ ಪೇಜಾವರ ಶ್ರೀ ವಿಶ್ವೇಶ ತೀರ್ಥರಿಂದ ‘ವಿಶ್ವೇಶ ದಾಸ’ ಎಂಬ ಬಿರುದು ಪಡೆದವರೂ ಆದ ಹರಿಕಥಾ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರು, ಸೆಪ್ಟೆಂಬರ್ 5, ಶುಕ್ರವಾರದಂದು ಸಂಜೆ 4 ಗಂಟೆಗೆ ‘ಸತಿ ಸಾವಿತ್ರಿ’ ಎಂಬ ವಿಷಯದ ಕುರಿತು ತುಳು ಭಕ್ತಿ ಸಂಗೀತಮಯ ಹರಿಕಥಾ ಸಂಕೀರ್ತನೆಯನ್ನು ನಡೆಸಿಕೊಡಲಿದ್ದಾರೆ.
ಈ ಪವಿತ್ರ ಸತ್ಸಂಗ ಕಾರ್ಯಕ್ರಮವು ಅಂಧೇರಿ ಪಶ್ಚಿಮದ ವಿರದೇಸಾಯಿ ರಸ್ತೆಯಲ್ಲಿರುವ ಮಹಾಲಕ್ಷ್ಮಿ ಕಾಲೊನಿಯ ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಶ್ರೀಮತಿ ವಸಂತಿ ಜಗನ್ನಾಥ್ ಪುತ್ರನ್ ಮತ್ತು ಶ್ರೀಮತಿ ಸುನೀತಾ ಜಗನ್ನಾಥ್ ಕಾಂಚನ್ ಅವರು ಪ್ರಾಯೋಜಿಸಿದ್ದಾರೆ.
ಸಂಗೀತ ಕಾರ್ಯಕ್ರಮಕ್ಕೆ ಹಾರ್ಮೋನಿಯಂನಲ್ಲಿ ಶೇಖರ್ ಸಸಿಹಿತ್ಲು, ತಬಲಾದಲ್ಲಿ ಜನಾರ್ಧನ ಸಾಲಿಯಾನ್ ಹಾಗೂ ತಾಳದಲ್ಲಿ ಪ್ರಶಾಂತ್ ಜತ್ತನ್ ಅವರು ಸಹಕಾರ ನೀಡಲಿದ್ದಾರೆ. ಶ್ರೀ ಲಕ್ಷ್ಮೀ ನಾರಾಯಣ ಮಂದಿರವು ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದೆ.
ಎಲ್ಲ ಹರಿಕಥಾಭಿಮಾನಿಗಳು ಸಕುಟುಂಬ ಸಮೇತರಾಗಿ ಆಗಮಿಸಿ, ಹರಿಕಥೆಯನ್ನು ಆಲಿಸಿ, ಶ್ರೀ ಲಕ್ಷ್ಮೀ ನಾರಾಯಣ ದೇವರ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.




