
ಕಲೆ, ಕಲಾವಿದರನ್ನು ಸದಾ ಪ್ರೋತ್ಸಾಹಿಸೋಣ – ಶಿವ ಪ್ರಸಾದ್ ಪೂಜಾರಿ ಪುತ್ತೂರು
ಚಿತ್ರ: ಸಿದ್ದೇಶ್ ನಾಯ್ಕ್, ವರದಿ: ಇನ್ನಂಜೆ ಜಯರಾಮ್
ಮುಂಬಯಿ: ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಸಾವರ್ಕರ್ ನಗರ, ಥಾಣೆಯ ದೈವ ಭಕ್ತ ಶಿವ ಪ್ರಸಾದ್ ಪೂಜಾರಿ ಅವರ ಮುಂದಾಳತ್ವದಲ್ಲಿ, ಯಕ್ಷಗಾನ ಕಲಾವಿದ ಮೊಹಮ್ಮದ್ ಗೌಸ್ ನೇತೃತ್ವದ ಯಕ್ಷ ಸೌರಭ ಪ್ರವಾಸಿ ಮೇಳ ಕುಂದಾಪುರ ತಂಡದ ಮುಂಬಯಿ ಪ್ರವಾಸವು ಅದ್ದೂರಿ ಕಾರ್ಯಕ್ರಮದೊಂದಿಗೆ ಉದ್ಘಾಟನೆಗೊಂಡಿತು. ಸೆಪ್ಟೆಂಬರ್ 7ರಂದು ಮುಂಬಯಿ – ಥಾಣೆಯ ನವೋದಯ ಜೂನಿಯರ್ ಕಾಲೇಜು ಸಭಾಗೃಹದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ‘ರಾಮಾಂಜನೇಯ’ ಯಕ್ಷಗಾನ ಪ್ರದರ್ಶನವು ಭಕ್ತರು ಮತ್ತು ಕಲಾಪ್ರೀಮಿಗಳ ಮನ ಗೆದ್ದಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಏಷ್ಯಾಟಿಕ್ ಇನ್ಸಾಟೆಕ್ ಕೈನ್ಸ್ ಪ್ರೈ. ಲಿ.ನ ಆಡಳಿತ ನಿರ್ದೇಶಕ ಗಣೇಶ್ ಆರ್. ಪೂಜಾರಿ ಅವರು ಮಾತನಾಡಿ, ಇಂದಿನ ಪೀಳಿಗೆಗೆ ವಿದ್ಯೆಯ ಜೊತೆಗೆ ಸಂಸ್ಕಾರ, ಸಂಸ್ಕೃತಿ ಮತ್ತು ಗುರು-ಶಿಕ್ಷಕರಿಗೆ ಗೌರವ ನೀಡುವ ಮೌಲ್ಯಗಳನ್ನು ಕಲಿಸುವುದು ಅಗತ್ಯ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜಗದೀಶ್ ತಂತ್ರಿ ಅವರು ನವೋದಯ ಶಾಲೆಯಲ್ಲಿ ತಮ್ಮ ಧಾರ್ಮಿಕ ಸೇವೆಗಳ ಅನುಭವ ಹಂಚಿಕೊಂಡರು ಮತ್ತು ಶಿವ ಪ್ರಸಾದ್ ಪೂಜಾರಿ ಅವರ ಸಮಾಜಪರ ಕಾರ್ಯವನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಮೇಯರ್ ಹಾಗೂ ಸಮಾಜಸೇವಕಿ ಮೀನಾಕ್ಷಿ ಶಿಂದೆ (ಪೂಜಾರಿ) ಮಾತನಾಡಿ, ತಮ್ಮ ತವರಾದ ತುಳುನಾಡನ್ನು ತೊರೆದು ಬಂದರೂ ಕಲೆ ಮತ್ತು ಸಂಸ್ಕೃತಿಯನ್ನು ಮರೆಯದಿರುವುದಕ್ಕೆ ಇಂತಹ ಕಾರ್ಯಕ್ರಮಗಳು ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ, ರಘುಚಂದ್ರ ಆಚಾರ್ಯ ಕಾರಿಂಜ ಮತ್ತು ರಾಧಾಕೃಷ್ಣ ಗುರುಸ್ವಾಮಿ ಅವರು ಆಶೀರ್ವಚನ ನೀಡಿ ಕಾರ್ಯಕ್ರಮದ ಮಹತ್ವವನ್ನು ಹೆಚ್ಚಿಸಿದರು. ನವೋದಯ ಕನ್ನಡ ಸೇವಾ ಸಂಘ (ರಿ.) ಥಾಣೆಯ ಅಧ್ಯಕ್ಷ ಎಳತ್ತೂರುಗುತ್ತು ದಯಾನಂದ ಎಸ್. ಶೆಟ್ಟಿ ಅವರು ಶಿವ ಪ್ರಸಾದ್ ಪೂಜಾರಿಯವರ ಉದಾರ ಮನೋಭಾವವನ್ನು ಹೊಗಳಿದರು. ಉದ್ಯಮಿ ಮತ್ತು ಕಲಾಪೋಷಕ ಸುಧಾಕರ್ ನಾಯ್ಕ ಅವರು ಶ್ರೀ ಕ್ಷೇತ್ರದ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಳನ್ನು ಶ್ಲಾಘಿಸಿದರು. ಪ್ರದೀಪ್ ಪೂಜಾರಿ ಸಹ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಯಕ್ಷ ಸೌರಭ ಪ್ರವಾಸಿ ಮೇಳದ ಸಂಚಾಲಕ ಮೊಹಮ್ಮದ್ ಗೌಸ್ ಅವರು ಮಾತನಾಡಿ, ದೇಶದಲ್ಲಿ ಭೇದಭಾವಗಳು ಹೆಚ್ಚುತ್ತಿರುವ ಸಂದರ್ಭದಲ್ಲಿಯೂ ಶಿವ ಪ್ರಸಾದ್ ಪೂಜಾರಿಯವರು ನೀಡಿದ ಪ್ರೀತಿ, ಗೌರವ ಮತ್ತು ಚಾಮುಂಡೇಶ್ವರಿ ತಾಯಿಯ ಪ್ರಸಾದವು ತಮ್ಮ ಪಾಲಿನ ಅದೃಷ್ಟ ಎಂದು ಹೇಳಿದರು. ಶ್ರೀ ಕ್ಷೇತ್ರ ಚಾಮುಂಡೇಶ್ವರಿಯ ಮುಖ್ಯಸ್ಥ ಶಿವ ಪ್ರಸಾದ್ ಪೂಜಾರಿ ಪುತ್ತೂರು ಅವರು ಕ್ಷೇತ್ರದ ಬೆಳವಣಿಗೆ, ದೈವಕೋಲದ ಅದ್ದೂರಿ ಆಚರಣೆ ಮತ್ತು ಯಕ್ಷಗಾನಕ್ಕೆ ನೀಡಿದ ಪ್ರೋತ್ಸಾಹದ ಬಗ್ಗೆ ಸಂತೋಷ ಹಂಚಿಕೊಂಡರಲ್ಲದೆ ಕಲೆ, ಕಲಾವಿದರನ್ನು ಸದಾ ಪ್ರೋತ್ಸಾಹಿಸೋಣ ಎಂದರು.

ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿಯ ಥಾಣೆ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಹರೀಶ್ ಟಿ. ಪೂಜಾರಿ, ಕೋಶಾಧಿಕಾರಿ ನಾರಾಯಣ ಎಸ್. ಪೂಜಾರಿ, ನಿವೃತ್ತ ಹಿರಿಯ ಶಿಕ್ಷಕಿ ಡಾ. ವಾಣಿ ಉಚ್ಚಿಲ್ಕರ್, ಕಾರ್ಯದರ್ಶಿ ಪೂರ್ಣಿಮಾ ಅಮೀನ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ, ಯಕ್ಷಗಾನ ಭಾಗವತ ಮುದ್ದು ಅಂಚನ್, ಭಾರತ್ ಕೋ-ಆಪರೇಟಿವ್ ಬ್ಯಾಂಕ್ನ ಸಹಾಯಕ ಪ್ರಬಂಧಕ ಭಾಸ್ಕರ್ ಸುವರ್ಣ ಸಸಿಹಿತ್ಲು, ವಾಮನ್ ಕ್ಯಾಟರಿಂಗ್ನ ಮಹೇಶ್ ಪೈ ಮತ್ತು ಪೂರ್ಣಿಮಾ ಅಮೀನ್ ಅವರನ್ನು ಕಲಾ-ಸಮಾಜ ಸೇವೆಗಾಗಿ ಸನ್ಮಾನಿಸಲಾಯಿತು. ಅಲ್ಲದೆ, ಶೇಖರ್ ಸಾಲ್ಯಾನ್ ಅವರ ಪತ್ನಿ ಶ್ರೀಲತಾ ಶೇಖರ್ ಸಾಲ್ಯಾನ್, ಅರ್ಚಕ ಮೋಹನ್ ಭಟ್ ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವಿಜಯ ಶೆಟ್ಟಿಯವರಿಗೆ ನೆರವು ನೀಡಿ ಗೌರವಿಸಲಾಯಿತು.
ಅತಿಥಿ ಗಣ್ಯರನ್ನು ಶಿವ ಪ್ರಸಾದ್ ಪೂಜಾರಿ ಮತ್ತು ಆಶಾ ಶಿವ ಪ್ರಸಾದ್ ಪೂಜಾರಿ ಅವರು ಶಾಲು ಹೊದಿಸಿ ಗೌರವಿಸಿದರು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕಲಾ ಪೋಷಕರಿಗೂ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮವನ್ನು ಸದಾನಂದ ಅಮೀನ್ ಅವರು ನಿರೂಪಿಸಿದರು. ಜಗದೀಶ್ ತಂತ್ರಿ, ರಘುಚಂದ್ರ ಆಚಾರ್ಯ, ರಾಧಾಕೃಷ್ಣ ಗುರುಸ್ವಾಮಿ, ಎಳತ್ತೂರುಗುತ್ತು ದಯಾನಂದ ಎಸ್. ಶೆಟ್ಟಿ, ಶಿವ ಪ್ರಸಾದ್ ಪೂಜಾರಿ ಮತ್ತು ಆಶಾ ಶಿವ ಪ್ರಸಾದ್ ಪೂಜಾರಿ ಅವರು ದೀಪ ಬೆಳಗಿಸಿ ಯಕ್ಷಗಾನ ಪ್ರವಾಸಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಸಮಾಜಸೇವೆ, ಧಾರ್ಮಿಕ ಕಾರ್ಯ, ಸಂಸ್ಕೃತಿ ಮತ್ತು ಕಲೆಗಳ ಸಂಗಮವಾಗಿದ್ದ ಈ ಕಾರ್ಯಕ್ರಮವು ಥಾಣೆಯ ಜನತೆಯ ಮನಸೂರೆಗೊಂಡಿತು.




