ತಮಿಳುನಾಡಿನ ಕರೂರ್‌ನಲ್ಲಿ ನಟ-ರಾಜಕಾರಣಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಸಮಾವೇಶದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 31 ಮಂದಿ ಸಾವನ್ನಪ್ಪಿದ್ದಾರೆ. 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ವಿಜಯ್ ತಡವಾಗಿ ಬಂದಿದ್ದರಿಂದ ಮತ್ತು ವಿಪರೀತ ಜನಸಂದಣಿಯಿಂದ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.
ತಮಿಳುನಾಡು ಆರೋಗ್ಯ ಸಚಿವ ಎಂ. ಸುಬ್ರಮಣಿಯನ್ ಅವರು ಸಾವಿನ ಸಂಖ್ಯೆಯನ್ನು ದೃಢಪಡಿಸಿದ್ದು, ಮೃತರರಲ್ಲಿ 6 ಮಕ್ಕಳು, 9 ಪುರುಷರು ಮತ್ತು 16 ಮಹಿಳೆಯರು ಸೇರಿದ್ದಾರೆ ಎಂದು ತಿಳಿಸಿದ್ದಾರೆ. ವಿಜಯ್ ಅವರ ರಾಜ್ಯಾದ್ಯಂತ ಪ್ರವಾಸದ ಭಾಗವಾಗಿ ಈ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ತಮ್ಮ ನೆಚ್ಚಿನ ನಾಯಕನನ್ನು ನೋಡಲು ಸುಮಾರು 30,000ಕ್ಕೂ ಹೆಚ್ಚು ಜನರು ಕರೂರ್‌ನಲ್ಲಿ ಸೇರಿದ್ದರು. ಆದರೆ, ವಿಜಯ್ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದರಿಂದ, ವಿಪರೀತ ಬಿಸಿಲು ಮತ್ತು ಜನಸಂದಣಿಯ ಕಾರಣದಿಂದಾಗಿ ಹಲವರು ಮೊದಲೇ ಅಸ್ವಸ್ಥಗೊಂಡು ಮೂರ್ಛೆ ಹೋಗಿದ್ದರು.
ಪರಿಸ್ಥಿತಿ ಕೈಮೀರುತ್ತಿದ್ದಂತೆ, ವಿಜಯ್ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ, ನೆರವಿಗೆ ಧಾವಿಸುವಂತೆ ಪೊಲೀಸರಲ್ಲಿ ಮನವಿ ಮಾಡಿದರು. ವೇದಿಕೆಯಿಂದಲೇ ಜನರಿಗೆ ನೀರಿನ ಬಾಟಲಿಗಳನ್ನು ಎಸೆದು ಸಹಾಯ ಮಾಡಲು ಪ್ರಯತ್ನಿಸಿದರು. ಆದರೆ, ಇದೇ ವೇಳೆ ಕಾಲ್ತುಳಿತ ಸಂಭವಿಸಿದ್ದು, ನೂಕುನುಗ್ಗಲಿನಲ್ಲಿ ಸಿಲುಕಿ ಹಲವರು ಪ್ರಾಣ ಕಳೆದುಕೊಂಡರು. ಬೃಹತ್ ಜನಸ್ತೋಮದ ಕಾರಣ ಆಂಬುಲೆನ್ಸ್‌ಗಳು ಸಹ ಸ್ಥಳಕ್ಕೆ ತಲುಪಲು ಪರದಾಡುವಂತಾಯಿತು.
10 ಸಾವಿರ ಮಂದಿ ಸೇರುವ ನಿರೀಕ್ಷೆ ಇತ್ತು. ಹೀಗಾಗಿ ಪೊಲೀಸರಿಗೆ ಭದ್ರತೆ ನೀಡುವಂತೆ ವಿಜಯ್ ಕೇಳಿಕೊಂಡಿದ್ದರು. ಆದರೆ ಅಂದಾಜಿನ ಪ್ರಕಾರ ಸುಮಾರು 30,000 ಜನರು ರ‍್ಯಾಲಿಗೆ ಸೇರಿದ್ದು ಹೀಗಾಗಿ ಕಾಲ್ತುಳಿತ ಸಂಭವಿಸಿದೆ. ಇನ್ನು ಡಿಎಂಕೆ ಪಕ್ಷ ಈ ಕಾಲ್ತುಳಿತಕ್ಕೆ ವಿಜಯ್ ಅವರ ನಿರ್ಲಕ್ಷ್ಯಕ್ಕೆ ಕಾರಣ ಎಂದು ದೂಷಿಸಿದ್ದು, ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದೆ.




