26.3 C
Mumbai
March 7, 2026
Mumbai News Kannada
ಮುಂಬಯಿ

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 25ನೇ ವಾರ್ಷಿಕ ಮಹಾಸಭೆ





‘ಸಹಬಾಳ್ವೆ ಮತ್ತು ಒಗ್ಗಟ್ಟಿನಿಂದ ಸಂಘಟನೆಯನ್ನು ಮುನ್ನಡೆಸೋಣ’ – ನಿತ್ಯಾನಂದ ಡಿ. ಕೋಟ್ಯಾನ್

ವರದಿ: ದಿನೇಶ್ ಕುಲಾಲ್, ಚಿತ್ರ: ಭಾಸ್ಕರ್ ಕಾಂಚನ್

ಮುಂಬಯಿ, ಅಕ್ಟೋಬರ್ 11:

​ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 25ನೇ ವಾರ್ಷಿಕ ಮಹಾಸಭೆಯು ಮುಂಬಯಿಯ ಸಾಕಿನಾಕಾದ ‘ಪೆನಿನ್ಸುಲಾ ಗ್ರಾಂಡ್ ಹೋಟೆಲ್‌’ನಲ್ಲಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರ ಉಪಸ್ಥಿತಿಯಲ್ಲಿ, ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

​ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, “ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಎಲ್ಲ ಕಾರ್ಯಕರ್ತರು ತಮ್ಮ ಜವಾಬ್ದಾರಿಯನ್ನು ನಿಸ್ವಾರ್ಥವಾಗಿ ನಿರ್ವಹಿಸುತ್ತಿದ್ದಾರೆ. ಜಿಲ್ಲಾ ಸಮಿತಿಯ ಎಲ್ಲರೂ ತಮ್ಮ ಕಾರ್ಯವನ್ನು ಸಮಿತಿಯ ಹೆಸರಿಗೆ ಧಕ್ಕೆಯಾಗದ ರೀತಿಯಲ್ಲಿ ಯಶಸ್ವಿಯಾಗಿ ನೆರವೇರಿಸುತ್ತಿರುವುದು ಅಭಿನಂದನೀಯ. ಇದೇ ರೀತಿ ಎಲ್ಲರೊಂದಿಗೆ ಸಹಬಾಳ್ವೆ ಮತ್ತು ಒಗ್ಗಟ್ಟಿನಿಂದ ನಮ್ಮ ಸಂಘಟನೆಯನ್ನು ಮುನ್ನಡೆಸೋಣ. ಕೆಲವೊಮ್ಮೆ ಅನಿವಾರ್ಯ ಸಂದರ್ಭದಲ್ಲಿ ಕೆಲವು ನಿರ್ಧಾರಗಳನ್ನು ಸಂಸ್ಥಾಪಕರ ಮಾರ್ಗದರ್ಶನದಂತೆ ಕೈಗೊಂಡಿರುವ ಸಾಧ್ಯತೆಯಿದೆ. ಆದರೂ ನಮಗೆ ನಮ್ಮ ಹಿರಿಯ ಸದಸ್ಯರು ಸಲಹೆ-ಸೂಚನೆಗಳನ್ನು ನೀಡುವುದಾದರೆ ಸ್ವಾಗತಾರ್ಹ. ಕಳೆದ 25 ವರ್ಷಗಳಿಂದ ಸಮಿತಿಯು ಜಿಲ್ಲೆಗಳಿಗೆ ವಿದ್ಯುತ್, ಹೆದ್ದಾರಿ, ರೈಲು, ಉದ್ಯೋಗಾವಕಾಶ ನೀಡಿದ್ದು, ಜನರು ಇದನ್ನು ಗಮನಿಸಬೇಕು. ನಮ್ಮ ಕಾರ್ಯಚಟುವಟಿಕೆಗಳು ಹೆಚ್ಚುತ್ತಿದ್ದು, ಸಮಿತಿಯ ನಿಯಮಾವಳಿಗಳ (ಘಟನೆ) ತಿದ್ದುಪಡಿಯ ಅಗತ್ಯವಿದೆ,” ಎಂದು ನುಡಿದರು.

​ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಅವರು ಗತವರ್ಷದ ವಾರ್ಷಿಕ ಮಹಾಸಭೆಯ ವರದಿಯನ್ನು ಮತ್ತು ಗೌರವ ಕೋಶಾಧಿಕಾರಿ ಸದಾನಂದ ಆಚಾರ್ಯ ಅವರು ಗತ ವರ್ಷದ ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಿದರು.

​ಸಮಿತಿಯ ಸಲಹೆಗಾರರಾದ ಪ್ರವೀಣ್ ಭೋಜ ಶೆಟ್ಟಿ, ಸೂರ್ಯಕಾಂತ್ ಜಯ ಸುವರ್ಣ ಮತ್ತು ಲಕ್ಷ್ಮಣ್ ಪೂಜಾರಿ, ಸಮಿತಿಯ ಉಪಾಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ವಿವಿಧ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಈ ಮಹಾಸಭೆಯಲ್ಲಿ ಉಪಸ್ಥಿತರಿದ್ದರು.

​ಸಭಿಕರ ಪರವಾಗಿ ಮಾತನಾಡಿದ ಸಮಿತಿಯ ಉಪಾಧ್ಯಕ್ಷ ಹಾಗೂ ಸಮಿತಿಯ ನಿಯಮಾವಳಿ ತಿದ್ದುಪಡಿ ಪ್ರಮುಖರಾದ ಶ್ರೀನಿವಾಸ ಸಾಫಲ್ಯ ಅವರು, “ಎಲ್ಲ ಸಮುದಾಯದವರನ್ನು ಒಂದೆಡೆ ಸೇರಿಸಿ, ಒಂದು ಸಂಘಟನೆಯನ್ನು ರೂಪಿಸಿ, ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲರನ್ನು ಒಗ್ಗಟ್ಟಿನಿಂದ ಮುಂದಕ್ಕೆ ಕೊಂಡೊಯ್ಯುವ ನಮ್ಮ ಸಮಿತಿಯ ಕಾರ್ಯ ನಿಜಕ್ಕೂ ಪ್ರಶಂಸನೀಯ. ಇದಕ್ಕೆ ಪ್ರಮುಖ ಕಾರಣರಾಗಿರುವವರು ನಮ್ಮ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರು. ಸಮಿತಿಯು ಯಾವುದೇ ನಿರ್ಣಯವನ್ನು ಕೈಗೊಳ್ಳುವಾಗ, ಅದನ್ನು ಸಮಿತಿಯ ಸಭೆಯಲ್ಲಿ ಮಂಜೂರು ಮಾಡುವ ಸಂಪ್ರದಾಯವಿದ್ದು, ಇದರ ಮೂಲಕ ಎಲ್ಲ ಸದಸ್ಯರು ಅದರ ಬಗ್ಗೆ ಪೂರ್ವ ಮಾಹಿತಿ ಹೊಂದಿರುತ್ತಾರೆ. ಸಮಿತಿಯ ನಿಯಮಾವಳಿಯ ತಿದ್ದುಪಡಿಯ ಉದ್ದೇಶ ಹಾಗೂ ಅವಶ್ಯಕತೆ ಕುರಿತು ಸೂಕ್ತವಾದ ಮಾಹಿತಿಯನ್ನು ಸಭೆಯಲ್ಲಿ ನೀಡಿದರು.

​ರಾಜ್ಯ ಸಮನ್ವಯಕ ಹಾಗೂ ಹಿರಿಯ ರಾಜಕಾರಣಿ ಕೆ. ಪಿ. ಜಗದೀಶ್ ಅಧಿಕಾರಿಯವರು ಮಾತನಾಡುತ್ತಾ, “ಜಿಲ್ಲೆಗಳ ಅಭಿವೃದ್ಧಿಯಲ್ಲಿ ಧಾರ್ಮಿಕ ಕೇಂದ್ರಗಳು ಮಹತ್ತರವಾದ ಕಾರ್ಯ ನಿರ್ವಹಿಸುತ್ತವೆ. ಅದಕ್ಕಾಗಿ ಧಾರ್ಮಿಕ ಕೇಂದ್ರಗಳಿಗೆ ಯಾವುದೇ ರೀತಿಯಲ್ಲಿ ಮಾರಕವಾಗಬಾರದು. ನಮ್ಮ ಜಿಲ್ಲಾ ಸಮಿತಿಯು ಜಿಲ್ಲೆಗಳ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದು, ಜಿಲ್ಲಾ ಸಮಿತಿಯ ಕಾರ್ಯ ಪ್ರಶಂಸನೀಯ,” ಎಂದರು.

​ಸಭಿಕರ ಪರವಾಗಿ ಸಮಿತಿಯ ಉಪಾಧ್ಯಕ್ಷರಾದ ಸಿಎ ಐ. ಆರ್. ಶೆಟ್ಟಿ, ನ್ಯಾಯವಾದಿ ಶಶಿಧರ ಕಾಪು, ಸಮಿತಿಯ ಮಾಜಿ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ, ಉಪಾಧ್ಯಕ್ಷರಾದ ಹಿರಿಯಡ್ಕ ಮೋಹನ್ ದಾಸ್, ಡಾ. ಸುರೇಂದ್ರ ಕುಮಾರ್ ಹೆಗ್ಡೆ, ಚಂದ್ರಶೇಖರ್ ಬೆಳ್ಚಡ್, ಸಮಿತಿಯ ವಕ್ತಾರ ದಯಾಸಾಗರ ಚೌಟ ಮತ್ತು ಗೌರವ ಕಾರ್ಯದರ್ಶಿ ಸಿಎಸ್ ಗಣೇಶ್ ಶೆಟ್ಟಿ ಅವರುಗಳು ಮಾತನಾಡಿದರು. ಸಮಿತಿಯ ಬೆಳ್ಳಿಹಬ್ಬ ಸಮಾರಂಭ ಹಾಗೂ ಮುಂದಿನ ಯೋಜನೆಗಳ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಿದರು.

​ಗೌರವ ಕಾರ್ಯದರ್ಶಿ ದೇವದಾಸ ಕುಲಾಲ್ ಅವರು ಸರ್ವ ಸದಸ್ಯರನ್ನು ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಸಿಎಸ್. ಗಣೇಶ್ ಶೆಟ್ಟಿ ವಂದನಾರ್ಪಣೆ ಮಾಡಿದರು.

​ಕಾರ್ಯಕ್ರಮದಲ್ಲಿ ಸಮಿತಿಯ ಉಪಾಧ್ಯಕ್ಷರಾದ ಪಿ. ಧನಂಜಯ ಶೆಟ್ಟಿ, ಶಾಮ್ ಎನ್. ಶೆಟ್ಟಿ, ಗಿರೀಶ್ ಬಿ. ಸಾಲಿಯಾನ್, ನ್ಯಾಯವಾದಿ ಆರ್‌ಎಂ ಭಂಡಾರಿ, ಗೌರವ ಕಾರ್ಯದರ್ಶಿ ಹ್ಯಾರಿ ಸ್ವೀಕಾರ, ಜೊತೆ ಕೋಶಾಧಿಕಾರಿಗಳಾದ ತೋನ್ಸೆ ಸಂಜೀವ ಪೂಜಾರಿ, ರಾಕೇಶ್ ಭಂಡಾರಿ, ಸಲಹೆಗಾರರಾದ ಸೂರ್ಯಕಾಂತ್ ಜಯ ಸುವರ್ಣ, ಲಕ್ಷ್ಮಣ್ ಪೂಜಾರಿ ಚಿತ್ರಪು, ಸಮಿತಿಯ ಸದಸ್ಯರಾದ ಅಡ್ವಕೇಟ್ ಗುಣಾಕಾಂತ್ ಶೆಟ್ಟಿ, ಸಂತೋಷ್ ರೈ ಬೆಳೆಪಾಡಿ, ಪದ್ಮನಾಭ ಸಸಿಹಿತ್ಲು, ಡಾ. ಪ್ರಭಾಕರ್ ಶೆಟ್ಟಿ ಬೋಳ, ಉದಯ ಅಧಿಕಾರಿ, ಅಡ್ವಕೇಟ್ ದಯಾನಂದ್ ಶೆಟ್ಟಿ, ಉತ್ತಮ್ ಶೆಟ್ಟಿಗಾರ್, ಕೃಷ್ಣಕುಮಾರ್ ಬಂಗೇರ, ದಿವಾಕರ್ ಶೆಟ್ಟಿ ಪೋಸ್ರೋಲ್, ಅಡ್ವಕೇಟ್ ರತ್ನಾಕರ್ ಮೊರ್ಲಾ, ಗಂಗಾಧರ್ ಗೌಡ ಹಾಗೂ ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.

‘ಎಲ್ಲರನ್ನು ಸಂಘಟಿಸಿ ಜಿಲ್ಲೆಯಲ್ಲಿ ಶಾಂತಿ ಕಾಪಾಡುವುದರೊಂದಿಗೆ ಅಭಿವೃದ್ಧಿಗೊಳಿಸುವುದೇ ನಮ್ಮ ಮೂಲ ಉದ್ದೇಶ’ – ತೋನ್ಸೆ ಜಯಕೃಷ್ಣ ಎ. ಶೆಟ್ಟಿ

​ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು ಮಾತನಾಡಿ, “ನಮ್ಮ ಸಮಿತಿಯಲ್ಲಿರುವವರೆಲ್ಲರೂ ಅವರವರ ಸಮಾಜದ ಸಂಘಟನೆಗಳಲ್ಲಿ ಉನ್ನತ ಪದವಿಯನ್ನು ಅಲಂಕರಿಸಿದವರು. ಮಾತ್ರವಲ್ಲದೆ, ನಮ್ಮ ಸಮಿತಿಯ ಎಲ್ಲಾ ಸದಸ್ಯರು ಉನ್ನತ ಮಟ್ಟದ ವ್ಯಾಸಂಗ ಮಾಡಿ ಸುಪ್ರೀಂ ಕೋರ್ಟಿನ ವಕೀಲರಂತಹ ಉನ್ನತ ಹುದ್ದೆಯಲ್ಲಿರುವವರು. ಎಲ್ಲಾ ಸಮುದಾಯದವರಿಂದಾಗಿ ಸಮಿತಿಯು ಇಂದು ಗಟ್ಟಿಯಾಗಿದೆ. ಜಿಲ್ಲೆಗಳಲ್ಲಿ ಕೋಮುವಾದ ನಿರ್ಮಾಣದ ಬಗ್ಗೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಸಂಪೂರ್ಣ ಬೆಂಬಲ ನಮಗಿದೆ. ಜಿಲ್ಲೆಗಳ ಅಭಿವೃದ್ಧಿಗೆ ನಾವು ಹಲವಾರು ಯೋಜನೆಗಳನ್ನು ಕೈಗೊಂಡಿದ್ದು, ಅದನ್ನು ಕಾರ್ಯರೂಪಕ್ಕೆ ತರಲು ಕ್ರಿಯಾಶೀಲರಾಗಿದ್ದೇವೆ. ಸಮಿತಿಯು ಯಾವುದೇ ಅಭಿವೃದ್ಧಿ ಕಾರ್ಯಕ್ರಮದಲ್ಲಿ ತೊಡಗಿದಲ್ಲಿ ಅದನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಿದೆ. ಇನ್ನು ಮುಂದೆಯೂ ನಾವೆಲ್ಲರೂ ಒಂದಾಗಿ ಜಿಲ್ಲೆಗಳ ಅಭಿವೃದ್ಧಿಗೆ ಶ್ರಮಿಸೋಣ,” ಎಂದು ನುಡಿದರು.

‘ಪರಿಸರ ಪ್ರೇಮಿ ಬುದ್ಧಿವಂತರ ಸಂಘಟನೆ. ನಾನು ಸಂಘಟನೆಯೊಂದಿಗೆ ಸದಾ ಇರುವೆನು’ – ಪ್ರವೀಣ್ ಭೋಜ ಶೆಟ್ಟಿ

​ಸಮಿತಿಯ ಸಲಹೆಗಾರರು ಹಾಗೂ ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರು ಮಾತನಾಡಿ, “ಪರಿಸರ ಪ್ರೇಮಿಯಲ್ಲಿರುವ ನಾವು ಪರಿಸರವನ್ನು ಪ್ರೀತಿಸುವವರು, ಹಾಳು ಮಾಡುವವರಲ್ಲ. ಆದುದರಿಂದ ಇಲ್ಲಿ ಉನ್ನತ ಮಟ್ಟದ ಶಿಕ್ಷಣವನ್ನು ಹೊಂದಿದವರು ಇದ್ದಾರೆ. ಇಲ್ಲಿರುವವರೆಲ್ಲರೂ ಅವರವರ ಕ್ಷೇತ್ರದಲ್ಲಿ ಉನ್ನತ ಮಟ್ಟದಲ್ಲಿದ್ದು, ಇದು ಬುದ್ಧಿವಂತರ ಸಂಘಟನೆ. ನಾನು ಈ ಸಮಿತಿಯೊಂದಿಗೆ ಸದಾ ಇರುವೆನು,” ಎಂದು ನುಡಿದರು.

‘ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಕೆಲವು ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು, ಕಾರ್ಯರೂಪಕ್ಕೆ ಎಲ್ಲರ ಸಹಕಾರ ಅಗತ್ಯ’ – ಹರೀಶ್ ಕುಮಾರ್ ಶೆಟ್ಟಿ

​ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷರಾದ ಹರೀಶ್ ಕುಮಾರ್ ಶೆಟ್ಟಿಯವರು ಮಾತನಾಡುತ್ತಾ, “ಜಿಲ್ಲಾ ಸಮಿತಿಯಲ್ಲಿ ನಾನು ಅಧಿಕಾರ ವಹಿಸಿದ ನಂತರ ಈಗಾಗಲೇ ಮಂಗಳೂರು ವಿಮಾನ ನಿಲ್ದಾಣದಿಂದ ಬಸ್ಸಿನ ವ್ಯವಸ್ಥೆ, ನೇತ್ರಾವತಿ ನೀರು ಸೇರಿ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಕೆಲವು ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು, ಅದೆಲ್ಲವನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಇದಲ್ಲದೆ ಇನ್ನೂ ಹಲವಾರು ಯೋಜನೆಗಳನ್ನು ಈಡೇರಿಸುವಲ್ಲಿ ನಿಮ್ಮೆಲ್ಲರ ಸಹಕಾರದಿಂದ ನಮ್ಮ ಸಮಿತಿಯು ಮುನ್ನಡೆಯುತ್ತಿದೆ,” ಎಂದರು.

‘ಯಾರಿಗೂ ಅಸಮಾಧಾನವಾಗದ ರೀತಿಯಲ್ಲಿ ಸಂಘಟನೆಯನ್ನು ಮುಂದುವರಿಸೋಣ’ – ಧರ್ಮಪಾಲ್ ಯು. ದೇವಾಡಿಗ

​ಸಮಿತಿಯ ಮಾಜಿ ಅಧ್ಯಕ್ಷರಾದ ಧರ್ಮಪಾಲ್ ಯು. ದೇವಾಡಿಗ ಅವರು ಮಾತನಾಡಿ, “ನಮ್ಮ ಸಮಿತಿಗೆ ಬಹಳ ಪ್ರಾಮುಖ್ಯತೆ ಇದೆ. ಜಿಲ್ಲೆಗಳಲ್ಲಿ ಯಾವುದೇ ಸಮಸ್ಯೆಯಾದರೂ ಅದನ್ನು ನಮ್ಮ ಸಮಿತಿಯ ಗಮನಕ್ಕೆ ತಂದು ಬಗೆಹರಿಸುವ ಪ್ರಯತ್ನ ನಡೆಯುತ್ತಿದ್ದು, ಸಮಿತಿಯು ತನ್ನ ಕಾರ್ಯದಲ್ಲಿ ಜನಪ್ರಿಯವಾಗಿದೆ. ಸಮಿತಿಯ ಚಟುವಟಿಕೆಗಳ ಬಗ್ಗೆ ಸರಿಯಾದ ಸಮಯದಲ್ಲಿ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರ ಗಮನಕ್ಕೆ ಬಾರದೆ ಇದ್ದಲ್ಲಿ ಸದಸ್ಯರಿಗೆ ಅನನುಕೂಲವಾಗಲು ಸಾಧ್ಯವಿದೆ. ಎಲ್ಲರನ್ನೂ ಸೇರಿಸಿ ಯಾರಿಗೂ ಅಸಮಾಧಾನವಾಗದ ರೀತಿಯಲ್ಲಿ ನಾವು ಮುಂದುವರಿಯೋಣ. ನಮ್ಮ ಸಮಿತಿಯಲ್ಲಿ ಅನುಭವೀ ಅಧ್ಯಕ್ಷರಿದ್ದು, ನಮ್ಮ ಸಂಸ್ಥಾಪಕರು ತಮ್ಮ ವ್ಯಕ್ತಿತ್ವದಿಂದ ಎಲ್ಲರೊಂದಿಗೆ ಬೆರೆಯುವಂತಹ ಗುಣವನ್ನು ಹೊಂದಿದ್ದು, ನಮ್ಮ ಸಮಿತಿಯ ಮುಂದಿನ ಪ್ರಗತಿಗೆ ಯಾವುದೇ ಮಾರಕವಿಲ್ಲ,” ಎಂದು ಹೇಳಿದರು.



Related posts

ಬಿಲ್ಲವರ ಅಸೋಸಿಯೇಶನಿನ ಭಾಂಡುಪ್ ಸ್ಥಳೀಯ ಕಚೇರಿಯ ವತಿಯಿಂದ ಶೈಕ್ಷಣಿಕ ನೆರವು, ಸನ್ಮಾನ.

Mumbai News Desk

ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಯತಿವರ್ಯರಾದ   ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗೆ ಧಾಣೆಯಲ್ಲಿ ಗುರುವಂದನೆ.

Mumbai News Desk

ಮುಂಬಯಿ : ಫೆ. 1ರಿಂದ ಆಟೋರಿಕ್ಷಾ, ಟ್ಯಾಕ್ಸಿ ದರ 3ರೂ. ಏರಿಕೆ.

Mumbai News Desk

ಬಿಲ್ಲವರ ಅಸೋಸಿಯೇಶನಿನ ಮೀರಾ ರೋಡ್ ಸ್ಥಳೀಯ ಕಚೇರಿಯ ವತಿಯಿಂದ ಆಟಿಡೊಂಜಿ ದಿನ, ವಿದ್ಯಾರ್ಥಿ ವೇತನ ವಿತರಣೆ.

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ, ಕಿಸಾನ್ ನಗರ ಥಾಣೆ ಇವರ ಇರುಮುಡಿ ಪೂಜೆ ಸಂಪನ್ನ

Mumbai News Desk

ಮುಂಬಯಿ : ಹೋಟೆಲ್ ಉದ್ಯಮಿಗೆ ಕೊಲೆ ಬೆದರಿಕೆ ಗ್ಯಾಂಗ್ ಸ್ಟರ್ ಡಿ. ಕೆ ರಾವ್ ಬಂಧನ

Mumbai News Desk