ಖ್ಯಾತ ಕಂಬಳ ಸಂಘಟಕ ಮತ್ತು ಉದ್ಯಮಿ ನವೀನ್ ಚಂದ್ರ ಆಳ್ವ ಅವರ ಪುತ್ರ ಅಭಿಷೇಕ್ ಆಳ್ವ ಅವರ ಮೃತದೇಹ ನದಿ ತೀರದಲ್ಲಿ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಬಪ್ಪನಾಡು ಗ್ರಾಮದಲ್ಲಿ ಈ ದುರಂತ ಘಟನೆ ನಡೆದಿದೆ. ಖ್ಯಾತ ಉದ್ಯಮಿ ಮತ್ತು ಕರಾವಳಿ ಕಂಬಳ ಸಂಘಟಕರಾದ ತಿರುವೈಲು ಗುತ್ತು ನವೀನ್ ಚಂದ್ರ ಆಳ್ವ ಅವರ ಪುತ್ರ ಅಭಿಷೇಕ್ ಆಳ್ವ (29) ಅವರ ಮೃತದೇಹ ಶಾಂಭವಿ ನದಿ ತೀರದಲ್ಲಿಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ.
ನವೆಂಬರ್ 5ರ ರಾತ್ರಿ ನಾಪತ್ತೆಯಾಗಿದ್ದ ಅಭಿಷೇಕ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆಯಿಂದ ಸ್ಥಳೀಯ ಸಮುದಾಯದಲ್ಲಿ ಆಘಾತ ಮತ್ತು ಶೋಕ ಉಂಟಾಗಿದೆ.
ಮಾಹಿತಿ ಪ್ರಕಾರ, ಅಭಿಷೇಕ್ ಆಳ್ವ ನವೆಂಬರ್ 5ರ ರಾತ್ರಿ ಸುಮಾರು 10 ಗಂಟೆಗೆ ಮುಲ್ಕಿ ಬಪ್ಪನಾಡು ಬ್ರಿಡ್ಜ್ ಬಳಿ ತಮ್ಮ ಕಾರ್‌ನ್ನು ನಿಲ್ಲಿಸಿ ನಾಪತ್ತೆಯಾಗಿದ್ದರು. ಕಾರ್‌ನಲ್ಲಿ ಅವರ ವೈಯಕ್ತಿಕ ವಸ್ತುಗಳು ಕಂಡುಬಂದಿದ್ದರಿಂದ ಕುಟುಂಬಸ್ಥರು ಆತಂಕಗೊಂಡು ತಕ್ಷಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆಗಿನಿಂದಲೇ ಪೊಲೀಸ್ ತಂಡ, ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ನದಿಯಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು.
ಆದರೆ ಈಗ ಬಪ್ಪನಾಡು ಸಮೀಪದ ಶಾಂಭವಿ ನದಿ ತೀರದಲ್ಲಿ ಅಭಿಷೇಕ್ ಅವರ ಮೃತದೇಹ ಪತ್ತೆಯಾಗಿದೆ. ನದಿಯಲ್ಲಿ ತೇಲುತ್ತಿದ್ದ ಮೃತದೇಹವನ್ನು ಸ್ಥಳೀಯರು ಗುರುತಿಸಿ ಪೊಲೀಸ್‌ಗೆ ಮಾಹಿತಿ ನೀಡಿದ್ದರು. ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧಿಸಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಯ ಶಂಕೆಯ ಮೇಲೆ ತನಿಖೆ ಆರಂಭವಾಗಿದೆ.




