
ಮುಂಬಯಿ: ಚಾರ್ಕೋಪ್ ಕನ್ನಡಿಗರ ಬಳಗದ ವತಿಯಿಂದ ಕಳೆದ ನವೆಂಬರ್ 16ರಂದು ಬಳಗದ ಮಹಿಳಾ ಮಂಡಳಿಯು ಮಹಿಳೆಯರು ಮತ್ತು ಮಕ್ಕಳಿಗೆ ರಂಗೋಲಿ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿತ್ತು.
ಮಹಿಳಾ ಕಾರ್ಯಾಧ್ಯಕ್ಷೆ ಪದ್ಮಾವತಿ ಬಿ. ಶೆಟ್ಟಿ ಹಾಗೂ ಸಂಚಾಲಕಿ ಶಾಂತ ಭಟ್ ಅವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಬಳಗದ ಸದಸ್ಯ ಮಹಿಳೆಯರು ಮತ್ತು ಮಕ್ಕಳು ಅತ್ಯುತ್ಸಾಹದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ಪರ್ಧೆಗೆ ಮೆರುಗು ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಯಾಧ್ಯಕ್ಷೆ ಪದ್ಮಾವತಿ ಬಿ. ಶೆಟ್ಟಿ ಅವರು, “ಯಾವುದೇ ಸ್ಪರ್ಧೆಯಲ್ಲಿ ಬಹುಮಾನದ ಅಪೇಕ್ಷೆಗಿಂತಲೂ ಭಾಗವಹಿಸುವ ಮನೋಭಾವ ಮುಖ್ಯ. ಇದು ನಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಒದಗಿಸುತ್ತದೆ” ಎಂದು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪ್ರೋತ್ಸಾಹದ ಮಾತು ಹೇಳಿದರು. ಮುಂದಿನ ತಿಂಗಳು ನಡೆಯಲಿರುವ ಅಡುಗೆ ಪಾಕಶಾಸ್ತ್ರ ಸ್ಪರ್ಧೆ ಹಾಗೂ ಆರತಿ ತಟ್ಟೆ ಶೃಂಗಾರ ಸ್ಪರ್ಧೆಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.
ಸಂಚಾಲಕಿ ಶಾಂತ ಭಟ್ ಅವರು ಸ್ಪರ್ಧೆಯಲ್ಲಿ ವಿಜೇತರಾದವರ ಹೆಸರನ್ನು ಪ್ರಕಟಿಸಿದರು.
ವಿಜೇತರ ವಿವರ:
ಮಕ್ಕಳ ವಿಭಾಗದಲ್ಲಿ:
- ಪ್ರಥಮ: ಕುಮಾರಿ ನಮಿತ ಶೇರಿಗಾರ್
- ದ್ವಿತೀಯ: ಕುಮಾರಿ ಲಕ್ಷ್ ಶೇರಿಗಾರ್
- ತೃತೀಯ: ಕುಮಾರಿ ಸಂಜನ ಕೋಡ್ಲೇಕರ
- ಆಕರ್ಷಕ: ಕುಮಾರಿ ಭೂಮಿ ಗಾಣಿಗ
ಮಹಿಳೆಯರ ವಿಭಾಗದಲ್ಲಿ:
- ಪ್ರಥಮ: ಕುಮಾರಿ ರೋಶನಿ ಆಚಾರ್ಯ
- ದ್ವಿತೀಯ: ಶ್ರೀಮತಿ ರಾಜೇಶ್ವರಿ ಗಾಯತ್ರಿ
- ತೃತೀಯ: ಶ್ರೀಮತಿ ಮಲ್ಲಿಕಾ ರಾಮಕ್ಷತ್ರಿಯ
- ಆಕರ್ಷಕ: ಶ್ರೀಮತಿ ನಿರ್ಮಲ ಶೆಟ್ಟಿ

ಶ್ರೀಮತಿ ಲೋಹಿತ ರಾವ್, ಕುಮಾರಿ ದಿವ್ಯಾ ಬಾಲ್ಗುಡೆ, ಮತ್ತು ಶ್ರೀಮತಿ ಉಮಾ ಜೋಶಿ ಅವರು ಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಬಳಗದ ಸದಸ್ಯೆಯರಾದ ರೂಪ ಭಟ್, ಶ್ರೀಮತಿ ತನುಜಾ ಭಟ್, ಶ್ರೀಮತಿ ರಶ್ಮಿ ಆಚಾರ್ಯ, ಮತ್ತು ಶ್ರೀಮತಿ ಪದ್ಮಾವತಿ ನಾಯಕ್ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಬಳಗದ ಅಧ್ಯಕ್ಷರಾದ ಶ್ರೀ ರವೀಂದ್ರ ಶೆಟ್ಟಿ ಹಾಗೂ ಪೂಜಾ ಸಮಿತಿಯ ಸಂಚಾಲಕ ಶ್ರೀ ಹರೀಶ್ ಚೇವಾರ್ ಅವರು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




