
”ಪರಿಸರವನ್ನು ಶುದ್ಧೀಕರಿಸುವುದರೊಂದಿಗೆ, ಸ್ವಚ್ಛ ರಾಷ್ಟ್ರ ನಿರ್ಮಿಸುವ ಜವಾಬ್ದಾರಿ ಎಲ್ಲಾ ನಾಗರಿಕರದ್ದು” – ಹರೀಶ್ ಮೈಂದನ್
ಮುಂಬಯಿ ಡಿ. 6: ಪ್ರತಿಯೊಬ್ಬ ನಾಗರಿಕನೂ ಪರಿಸರವನ್ನು ಸ್ವಚ್ಛಗೊಳಿಸಿ, ಸ್ವಚ್ಛ ರಾಷ್ಟ್ರವನ್ನು ನಿರ್ಮಿಸುವ ಮಹತ್ತರ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಪರಿಸರವನ್ನು ಶುದ್ಧವಾಗಿ ಇರಿಸುವುದು ಪ್ರತಿಯೊಬ್ಬನ ಆದ್ಯ ಕರ್ತವ್ಯವಾಗಿದೆ ಎಂದು ತುಳು ಸಂಘ ಬೋರಿವಲಿಯ ಅಧ್ಯಕ್ಷರಾದ ಹರೀಶ್ ಮೈಂದನ್ ನುಡಿದರು.
ತುಳು ಸಂಘ ಬೋರಿವಲಿಯು ಯಶಸ್ವಿಯಾಗಿ ಸ್ವಚ್ಛತಾ ಅಭಿಯಾನವನ್ನು ನಡೆಸಿ, ಪರಿಸರವನ್ನು ಶುದ್ಧೀಕರಿಸುವುದರ ಜೊತೆಗೆ ಸ್ವಚ್ಛ ರಾಷ್ಟ್ರ ನಿರ್ಮಾಣದ ಜವಾಬ್ದಾರಿಯ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸಿದೆ ಎಂದು ಅವರು ಪ್ರಶಂಸಿಸಿದರು.

ನವೆಂಬರ್ 16 ರಂದು ಬೆಳಿಗ್ಗೆ ತುಳು ಸಂಘ ಬೋರಿವಲಿಯ ಯುವ ವಿಭಾಗದ ವತಿಯಿಂದ ಈ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೋರಿವಲಿ ಪಶ್ಚಿಮ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಅಭಿಯಾನಕ್ಕೆ ರೋಟರಿ ಕ್ಲಬ್ ಬೋರಿವಲಿ, ಬೋರಿವಲಿ ಅಡ್ವೋಕೇಟ್ಸ್ ಬಾರ್ ಅಸೋಸಿಯೇಷನ್, ಮುಂಬಯಿ ಮಾರ್ಚ್ ತಂಡ, ಭಾರತ ದೇಶ ಪ್ರಥಮ್ ಮತ್ತು ಇತರ ಎನ್ಜಿಓಗಳು ಸಹಕಾರ ನೀಡಿದ್ದವು. ವಿಶೇಷವಾಗಿ ಮಹಾನಗರ ಪಾಲಿಕೆಯ ಸಹಾಯಕ ಇಂಜಿನಿಯರ್ ಸಂದೀಪ್ ಮಹಲುಂಕರ್ ಅವರು ಸಹಯೋಗ ನೀಡಿದರು.
ಬಿಎಂಸಿ ಆರ್ ಸೆಂಟ್ರಲ್ ವಾರ್ಡ್ನ ಸಹಾಯಕ ಆಯುಕ್ತರಾದ ಡಾ. ಪ್ರಫುಲ್ ತಾಂಬೆ ಮಾತನಾಡಿ, ನಗರದಲ್ಲಿ ಸ್ವಚ್ಛತೆಯನ್ನು ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಇದು ಪರಿಸರ ಸಂರಕ್ಷಣೆಗೆ ಪೂರಕವಾಗಿದೆ ಎಂದರು. ಪರಿಸರ ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ ತುಳು ಸಂಘ ಬೋರಿವಲಿಯ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.
ಮಾರ್ಕ್ 10ರ ಅವಿನಾಶ್ ತವಾನಿ, ಸ್ಮಾರ್ಟಾಡ್ಸ್ನ ವಿಜಯಾ ಬಬಾರಿಯಾ, ಭಾರತ್ ದೇಶ್ ಪ್ರಥಮ್ನ ದಿಲೀಪ್ ಪಟೇಲ್, ರೋಟರಿ ಕ್ಲಬ್ನ ಕಾಮೇಶ್ ಪಿಪಲಿಯಾ, ಸೆಲೆಬ್ರಿಟಿ ಅಥ್ಲೀಟ್ ಮತ್ತು ಕೋಚ್ ಮೆಲ್ವಿನ್ ಕ್ರಾಸ್ಟೊ, ಬೋರಿವಲಿ ಅಡ್ವೋಕೇಟ್ಸ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾದ ಕೆ.ಎಂ. ಗಿರಿ, ಯುವ ತುಳು ಬೋರಿವಲಿಯ ನ್ಯಾ. ರಾಘವ ಎಂ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರತಿನಿಧಿಗಳು, ತುಳು ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಅನೇಕರು ಸೇರಿದಂತೆ 600ಕ್ಕೂ ಹೆಚ್ಚು ಮಂದಿ ಈ ಸ್ವಚ್ಛತಾ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಬಿಎಂಸಿ ಕನ್ನಡ ಮಾಧ್ಯಮ ಶಾಲೆ ಸೇರಿದಂತೆ ಪರಿಸರದ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಸಹಯೋಗ ಮಹಿಳಾ ಮಂಡಳಿ, ಎಸ್ಜಿಎನ್ಪಿ ರನ್ನರ್ಸ್ ಬೋರಿವಲಿ, ಸ್ಕೆಚರ್ಸ್ ಬಿಎನ್ಪಿ ತಂಡದ ಪ್ರತಿನಿಧಿಗಳು ಸಹ ಈ ಅಭಿಯಾನದಲ್ಲಿ ಭಾಗವಹಿಸಿದರು. ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮತ್ತು ಯೂಟ್ಯೂಬರ್ ಚಿತ್ರಾ ಪೂಜಾರಿ ಅವರು ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಿದರು. ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಹರೀಶ್ ಮೈಂದನ್, ಕೋಶಾಧಿಕಾರಿ ದಿವಾಕರ ಕರ್ಕೇರ, ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ, ಜೊತೆ ಕಾರ್ಯದರ್ಶಿ ತಿಲೋತ್ತಮ ವೈದ್ಯ, ಮಹಿಳಾ ಕಾರ್ಯದರ್ಶಿ ವಿಜಯಲಕ್ಷ್ಮಿ ದೇವಾಡಿಗ, ಜೊತೆ ಕೋಶಾಧಿಕಾರಿ ಟಿ. ವಿ. ಪೂಜಾರಿ, ಮಾಜಿ ಕೋಶಾಧಿಕಾರಿ ಚಂದ್ರಹಾಸ ಬೆಳ್ಚಡ, ಅನಿಲ್ ಕುಮಾರ್ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ಪೂನಂ ದಿಲೀಪ್ ಪಟೇಲ್ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾ. ರಾಘವ ಎಂ. ಅವರು ನಿರೂಪಿಸಿದರು. ಆಯೋಜಕರು ಅಭಿಯಾನದಲ್ಲಿ ಭಾಗವಹಿಸಿದವರಿಗೆ ಟೀ ಶರ್ಟ್ಗಳು, ಕೈಗವಸುಗಳು (ಗ್ಲೌಸ್ಗಳು), ಕಸದ ಚೀಲಗಳು ಮತ್ತು ಹೋರ್ಡಿಂಗ್ಗಳನ್ನು ಒದಗಿಸಿದರು. ಲಘು ಉಪಾಹಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಯುವ ತುಳು, ಬೋರಿವಲಿ, ಎಂಬ ತುಳು ಸಂಘದ ಉಪಸಮಿತಿಯು ಪರಿಸರದ ಯುವ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡುವ ವೇದಿಕೆಯಾಗಿದೆ. ಈ ಹಿಂದೆ ಯುವ ವಿಭಾಗವು ಮ್ಯಾರಥಾನ್ಗಳು, ಟರ್ಫ್ ಕ್ರಿಕೆಟ್ ಪಂದ್ಯಾವಳಿ, ತುಳು ಪ್ರೀಮಿಯರ್ ಲೀಗ್, ಬೋರಿವಲಿ ಫ್ರೆಂಡ್ಶಿಪ್ ಪ್ರೀಮಿಯರ್ ಲೀಗ್ ಮುಂತಾದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದೆ.




