29 C
Mumbai
March 7, 2026
Mumbai News Kannada
ಸುದ್ದಿ

ನೊಂದವರ ಬಾಳಿಗೆ ಬೆಳಕಾಗುವ ‘ನೆರವು’: 4 ಸಾವಿರ ಕುಟುಂಬಗಳಿಗೆ ₹9.5 ಕೋಟಿ ಆರ್ಥಿಕ ಸಹಾಯ ಹಸ್ತ





ಮಂಗಳೂರು: “ನಾನು ಕಳೆದ ಬಂದ ಹಾದಿಯಲ್ಲಿನ ಕಷ್ಟಗಳು ಮತ್ತೊಬ್ಬರಿಗೆ ಬರಬಾರದು. ಸಮಾಜ ನೀಡಿದ ಲಾಭವನ್ನು ಸಮಾಜಕ್ಕೇ ಮರಳಿಸುವುದು ನನ್ನ ಕರ್ತವ್ಯ. ಇಲ್ಲಿ ನೆರವು ಪಡೆದ ಮಕ್ಕಳು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಿ, ನನ್ನಂತೆಯೇ ಸಮಾಜದ ಶೋಷಿತರ ಪರವಾಗಿ ನಿಲ್ಲುವಂತಾಗಬೇಕು,” ಎಂದು ಎಂ.ಆರ್.ಜಿ. ಸಮೂಹದ ಚೇರ್ಮನ್ ಡಾ. ಪ್ರಕಾಶ್ ಶೆಟ್ಟಿ ಕರೆ ನೀಡಿದರು.

​ನಗರದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಗುರುವಾರ ಸಂಜೆ ನಡೆದ ಎಂ.ಆರ್.ಜಿ. ಗ್ರೂಪ್‌ನ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ‘ನೆರವು-2025’ ಮಹಾ ಸಮರ್ಪಣಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಒಟ್ಟು 4,000 ಕುಟುಂಬಗಳು ಹಾಗೂ 100ಕ್ಕೂ ಹೆಚ್ಚು ಸಂಘ-ಸಂಸ್ಥೆಗಳಿಗೆ ₹9.5 ಕೋಟಿಗೂ ಅಧಿಕ ಮೊತ್ತದ ಸಹಾಯಧನವನ್ನು ವಿತರಿಸಲಾಯಿತು.

​ಅಮ್ಮನ ಮಮತೆ, ತುಳುನಾಡ ಸಂಸ್ಕೃತಿಯೇ ನನ್ನ ಶಕ್ತಿ:

​ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದ ಡಾ. ಪ್ರಕಾಶ್ ಶೆಟ್ಟಿ, “ನಾನೊಬ್ಬ ಸಾಮಾನ್ಯ ಹಳ್ಳಿಯ ಬಡ ಕುಟುಂಬದಲ್ಲಿ ಜನಿಸಿದವನು. ತಂದೆ ಮಾಧವ ಶೆಟ್ಟಿ ಹಾಗೂ ತಾಯಿ ರತ್ನ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಬೆಳೆದೆ. ಶಾಲಾ ದಿನಗಳಲ್ಲಿ ಜಾತಿ-ಧರ್ಮದ ಭೇದವಿಲ್ಲದೆ ಎಲ್ಲರ ಮನೆಗಳಲ್ಲಿ ಉಂಡು, ಅವರ ಅಂಗಳದಲ್ಲಿ ಆಡಿದ್ದೇನೆ. ಅಮ್ಮನಿಗಿಂತ ಶ್ರೇಷ್ಠವಾದುದು ಈ ಜಗತ್ತಿನಲ್ಲಿ ಯಾವುದೂ ಇಲ್ಲ. 1983ರಲ್ಲಿ ಬೆಂಗಳೂರಿಗೆ ಹೋದಾಗ ಸಾಕಷ್ಟು ಅವಮಾನ, ಕಷ್ಟಗಳನ್ನು ಎದುರಿಸಿದೆ. ಆದರೆ ದೇವರ ಆಶೀರ್ವಾದ ಹಾಗೂ ಕಠಿಣ ಪರಿಶ್ರಮದಿಂದ ಉದ್ಯಮಿಯಾಗಿ ಬೆಳೆದಾಗ ನನಗೆ ಮೊದಲು ನೆನಪಾಗಿದ್ದೇ ನನ್ನ ಹುಟ್ಟೂರು ಮತ್ತು ಇಲ್ಲಿನ ಜನ. ಆ ಋಣ ತೀರಿಸಲು ಈ ‘ನೆರವು’ ಯೋಜನೆ ಆರಂಭಿಸಿದೆ,” ಎಂದು ಭಾವುಕರಾಗಿ ನುಡಿದರು.

​ಯೋಜನೆಯ ವಿಸ್ತರಣೆ ಮತ್ತು ದಶಮಾನೋತ್ಸವದ ಗುರಿ:

​”ನೆರವು ಯೋಜನೆ ಯಶಸ್ವಿಯಾಗಿ 7 ವರ್ಷ ಪೂರೈಸಿದೆ. ಮೊದಲ ವರ್ಷ 28 ಸಂಸ್ಥೆಗಳಿಗೆ ₹1.25 ಕೋಟಿ ನೀಡಿದ್ದೆವು. ಇಂದು ಅದು ₹9.5 ಕೋಟಿಗೆ ಏರಿದೆ. ಇನ್ನು ಮೂರು ವರ್ಷಗಳಲ್ಲಿ ಅಂದರೆ ದಶಮಾನೋತ್ಸವದ ವೇಳೆಗೆ ಈ ಯೋಜನೆಗೆ ಸಾಮೂಹಿಕ ರೂಪ ನೀಡಿ, ವರ್ಷಕ್ಕೆ ಕನಿಷ್ಠ 14 ಸಾವಿರ ಕುಟುಂಬಗಳಿಗೆ ಸಹಾಯ ತಲುಪಿಸುವ ಗುರಿ ಹೊಂದಿದ್ದೇವೆ. ಅದರಲ್ಲೂ ದುಬಾರಿ ವೈದ್ಯಕೀಯ ಚಿಕಿತ್ಸೆ ಬಡವರಿಗೆ ಸುಲಭವಾಗಿ ಸಿಗುವಂತೆ ಮಾಡುವುದು ನಮ್ಮ ಪ್ರಾಮಾಣಿಕ ಪ್ರಯತ್ನ,” ಎಂದು ಅವರು ವಿವರಿಸಿದರು.

​ಮಾನವೀಯತೆಯೇ ದೊಡ್ಡ ಧರ್ಮ: ಯು.ಟಿ. ಖಾದರ್

​ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, “ಹುಟ್ಟುವಾಗ ಹೆಸರು ಇರುವುದಿಲ್ಲ, ಉಸಿರು ಮಾತ್ರ ಇರುತ್ತದೆ. ಆದರೆ ಸಾಯುವಾಗ ಉಸಿರಿರುವುದಿಲ್ಲ, ನಾವು ಮಾಡಿದ ಕೆಲಸಗಳಿಂದ ಹೆಸರು ಮಾತ್ರ ಉಳಿಯುತ್ತದೆ. ಪ್ರಕಾಶ್ ಶೆಟ್ಟಿಯವರ ಬದುಕು ಇಂದಿನ ಯುವಪೀಳಿಗೆಗೆ ದೊಡ್ಡ ಪಾಠ. ಎಲ್ಲಾ ಸಮುದಾಯದ ಜನರನ್ನು ಒಂದೆಡೆ ಸೇರಿಸಿ, ನೋವಿನಲ್ಲಿರುವವರ ಜೊತೆ ನಾನಿದ್ದೇನೆ ಎಂದು ನಿಲ್ಲುವ ಅವರ ಮನೋಬಲ ಶ್ಲಾಘನೀಯ. ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಇಂತಹ ಕಾರ್ಯಕ್ರಮಗಳು ಅಡಿಪಾಯ,” ಎಂದರು.

​ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, “ಸಮಾಜದಲ್ಲಿ ಸಂಪತ್ತಿರುವವರು ಬಹಳ ಮಂದಿ ಇದ್ದಾರೆ, ಆದರೆ ಕೊಡುವ ಮನಸ್ಸಿರುವವರು ವಿರಳ. ಡಾ. ಪ್ರಕಾಶ್ ಶೆಟ್ಟಿ ಅವರು ಅಕ್ಷರ ಮತ್ತು ಆರೋಗ್ಯದ ಹಸಿವನ್ನು ನೀಗಿಸುವ ಮೂಲಕ ಮಹೋನ್ನತ ಕಾರ್ಯ ಮಾಡುತ್ತಿದ್ದಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

​ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, “ನೆರವು ಯೋಜನೆ ಕೇವಲ ಹಣ ಹಂಚುವ ಕಾರ್ಯಕ್ರಮವಲ್ಲ, ಇದು ಲಕ್ಷಾಂತರ ಜನರ ಬದುಕಿನಲ್ಲಿ ಭರವಸೆ ಮೂಡಿಸುವ ಸಂಕಲ್ಪ. ಪ್ರಕಾಶ್ ಶೆಟ್ಟಿಯವರ ಈ ಸಮಾಜಮುಖಿ ಚಿಂತನೆಗೆ ನಮ್ಮೆಲ್ಲರ ಬೆಂಬಲವಿದೆ,” ಎಂದು ಸ್ವಾಗತಿಸಿದರು.

ಸಮಾರಂಭದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಆಶಾ ಪ್ರಕಾಶ್ ಶೆಟ್ಟಿ, ಎಂ.ಆರ್.ಜಿ. ಗ್ರೂಪ್ ಆಡಳಿತ ನಿರ್ದೇಶಕ ಗೌರವ್ ಪಿ. ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತರಿದ್ದರು.

​ಅಲ್ಲದೆ ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಡಾ. ಭರತ್ ವೈ. ಶೆಟ್ಟಿ, ವೇದವ್ಯಾಸ ಕಾಮತ್, ದೇವಾನಂದ ಶೆಟ್ಟಿ, ರತ್ನಾಕರ್ ಶೆಟ್ಟಿ ಮುಂಡ್ಕೂರು ಸೇರಿದಂತೆ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದ ಹಲವಾರು ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.

​ದಾಮೋದರ ಶರ್ಮಾ ಹಾಗೂ ನಿತೇಶ್ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಸಮೀಕ್ಷಾ ಶೆಟ್ಟಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.



Related posts

ಪತ್ರಕರ್ತ ಗೋಪಾಲ ಅಂಚನ್ ಚಿಕಿತ್ಸೆಗೆ ಒಮಾನ್ ಬಿಲ್ಲವಾಸ್ ಸಂಘಟನೆಯಿಂದ ಆರ್ಥಿಕ ನೆರವು..

Mumbai News Desk

ಕುಲಶೇಖರ: ಶ್ರೀ ವೀರನಾರಾಯಣ ದೇವಸ್ಥಾನದ ಕುಂಭ ಮಹೋತ್ಸವ ಸಂಪನ್ನ

Mumbai News Desk

ಟ್ರಂಪ್ ಸುಂಕದ ಕ್ರಮಗಳ ಮೇಲಿನ ಸುಪ್ರೀಂ ಕೋರ್ಟ್ ತೀರ್ಪು ಮತ್ತು ಅದರ ಪರಿಣಾಮಗಳು

Mumbai News Desk

ಅಂಚೆ ಜನ ಸಂಪರ್ಕ ಅಭಿಯಾನ: ಕಂಬದ ಕೋಣೆ- ಕಾಲ್ತೊಡು

Mumbai News Desk

ರಹೀಂ ಹತ್ಯೆ ಘಟನೆ ನೆಪದಲ್ಲಿ ಹಿಂದೂ ನಾಯಕರ ಧ್ವನಿ ಅಡಗಿಸುವ ಷಡ್ಯಂತ್ರ, ರಾಜ್ಯ ಪೊಲೀಸ್ ಮಹಾನಿರ್ದೇಶ ರಿಗೆ ಮನವಿ

Mumbai News Desk

ಬೆಲ್ಜಿಯಂನಲ್ಲಿ ಭಾರತದಿಂದ ಪರಾರಿಯಾಗಿದ್ದ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬಂಧನ

Mumbai News Desk