
ಮುಂಬಯಿ (ಜ. 21):
ಸ್ಥಳೀಯ ಮಲಾಡ್ ಪೂರ್ವದ ‘ಉತ್ಕರ್ಷ ವಿದ್ಯಾ ಮಂದಿರ’ದ ಉತ್ಕರ್ಷ ಸಭಾಗೃಹದಲ್ಲಿ ಇತ್ತೀಚೆಗೆ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಅತ್ಯಂತ ವೈಭವದ ‘ಹಳದಿ ಕುಂಕುಮ’ ಮತ್ತು ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಜರುಗಿತು. ಸಮಿತಿಯ ಸದಸ್ಯೆಯರು ಮತ್ತು ಪರಿಸರದ ನೂರಾರು ಮಹಿಳೆಯರು ಅತ್ಯಂತ ಉತ್ಸಾಹದಿಂದ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಮಹಿಳೆಯರೇ ಸಮಿತಿಯ ಶಕ್ತಿ – ನ್ಯಾ| ಜಗನ್ನಾಥ್ ಎನ್. ಶೆಟ್ಟಿ ಪಣಿಯೂರು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷರಾದ ನ್ಯಾ| ಜಗನ್ನಾಥ್ ಎನ್. ಶೆಟ್ಟಿ ಪಣಿಯೂರು ಅವರು, “ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯು ಇಂದು ಹೆಮ್ಮರವಾಗಿ ಬೆಳೆಯಲು ಮಹಿಳಾ ವಿಭಾಗದ ನಿರಂತರ ಪರಿಶ್ರಮವೇ ಕಾರಣ. ಅವರು ಸಮಿತಿಯ ಭದ್ರ ಬುನಾದಿ ಮತ್ತು ಆಧಾರಸ್ತಂಭದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಸಮಿತಿಯ ಮಹಿಳೆಯರು ಕೇವಲ ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗದೆ, ಸಮರ್ಥ ವಾಗ್ಮಿಗಳಾಗಿ, ಕಲಾ ಪ್ರತಿಭೆಗಳಾಗಿ ಮತ್ತು ದಕ್ಷ ಸಂಘಟಕರಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ಸಂಗತಿ,” ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಂಟರ ಸಂಘ ಮುಂಬಯಿಯ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಅಮರ್‌ನಾಥ್ ಶೆಟ್ಟಿ ಮಾತನಾಡಿ, “ಹಳದಿ ಶುದ್ಧತೆಯ ಪ್ರತೀಕವಾದರೆ, ಕುಂಕುಮ ಸೌಭಾಗ್ಯದ ಸಂಕೇತ. ಈ ಎರಡೂ ಮಂಗಳದ್ರವ್ಯಗಳ ಮೂಲಕ ಮಹಿಳೆಯರನ್ನು ಒಗ್ಗೂಡಿಸುತ್ತಿರುವುದು ಅಭಿನಂದನೀಯ. ಇಲ್ಲಿನ ಮಹಿಳೆಯರಲ್ಲಿರುವ ಶಿಸ್ತು ಮತ್ತು ಏಕತೆ ಇತರ ಸಂಘಟನೆಗಳಿಗೆ ಮಾದರಿ,” ಎಂದರು.

ಗೌರವ ಅತಿಥಿ ಮಲಾಡ್ ಪೂರ್ವ ಅಂಚೆ ಇಲಾಖೆಯ ಮುಖ್ಯಸ್ಥೆ ಜಯ ಮೋಹನ್ ಬಂಗೇರ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು. ಮತ್ತೊಬ್ಬ ಗೌರವ ಅತಿಥಿ, ‘ಸಾಫಲ್ಯ’ ತ್ರೈಮಾಸಿಕದ ಸಂಪಾದಕಿ ಡಾ| ಜಿ. ಪಿ. ಕುಸುಮ ಮಾತನಾಡಿ, ಮುಂಬಯಿಯಂತಹ ಮಹಾನಗರದಲ್ಲಿ ನಾಡಿನ ಸಂಸ್ಕೃತಿಯನ್ನು ಉಳಿಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.

ಸಮಿತಿಯ ಹಿರಿಯ ಸದಸ್ಯೆ ಕುಸುಮಾ ಗೋಪಾಲ್ ಶೆಟ್ಟಿ ದಂಪತಿಯನ್ನು ಸಮಾಜಕ್ಕೆ ಅವರು ನೀಡಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ವಿಭಾಗದ ಸದಸ್ಯೆಯರಿಂದ ಸುಶ್ರಾವ್ಯ ಭಜನೆ ಹಾಗೂ ಯುವ ವಿಭಾಗದ ಸದಸ್ಯರಿಂದ ಆಕರ್ಷಕ ಸಾಂಸ್ಕೃತಿಕ ಪ್ರದರ್ಶನಗಳು ನೆರೆದವರ ಗಮನ ಸೆಳೆದವು.
ಮಹಿಳಾ ವಿಭಾಗದ ಕಾರ್ಯದರ್ಶಿ ಶೀಲಾ ಎಂ. ಪೂಜಾರಿ ಸ್ವಾಗತಿಸಿದರು. ಮಾಜಿ ಕಾರ್ಯಾಧ್ಯಕ್ಷೆ ರತ್ನ ಡಿ. ಕುಲಾಲ್ ಕಳೆದ ವರ್ಷದ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಶ್ವೇತ ಪಾಟ್ಕರ್ ಹಳದಿ ಕುಂಕುಮದ ವೈಜ್ಞಾನಿಕ ಮತ್ತು ಧಾರ್ಮಿಕ ಮಹತ್ವವನ್ನು ವಿವರಿಸಿದರು. ವಿದ್ಯಾ ನಾಯಕ್, ಶ್ರೀದೇವಿ ಆಚಾರ್ಯ ಮತ್ತು ಗೀತಾ ಮೆಂಡನ್ ಅತಿಥಿಗಳನ್ನು ಪರಿಚಯಿಸಿದರು. ದಾನಿಗಳ ಯಾದಿಯನ್ನು ಕೃಪಾ ಜೆ. ಮೂಲ್ಯ ಮತ್ತು ಹರಿಣಾಕ್ಷೀ ಕೆ. ಮೂಲ್ಯ ವಾಚಿಸಿದರು.

ಕಾರ್ಯಕ್ರಮದ ನಿರ್ವಹಣೆಯನ್ನು ಜೊತೆ ಕಾರ್ಯದರ್ಶಿಗಳಾದ ವಿಧ್ಯಾ ಡಿ. ಆಚಾರ್ಯ ಮತ್ತು ಭಾರತಿ ಎಸ್. ಆಚಾರ್ಯ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಶೋಭಾ ಎಲ್. ರಾವ್ ಧನ್ಯವಾದ ಸಮರ್ಪಿಸಿದರು.
ವೇದಿಕೆಯಲ್ಲಿ ಯುವ ವಿಭಾಗದ ಅಧ್ಯಕ್ಷ ಸುದೀಪ್ ಡಿ. ಪೂಜಾರಿ, ಉಪ ಕಾರ್ಯಾಧ್ಯಕ್ಷೆ ಗೀತಾ ಜೆ. ಮೆಂಡನ್, ಸಂಧ್ಯ ಪ್ರಭು, ಕೋಶಾಧಿಕಾರಿ ನಳಿನಿ ಕರ್ಕೇರ ಹಾಗೂ ಸಲಹಾ ಸಮಿತಿಯ ಮೋಹಿನಿ ಜೆ. ಶೆಟ್ಟಿ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಆಚಾರ್ಯ ಮಾತನಾಡಿ, “ಸಮಿತಿಗೆ 16 ವರ್ಷ ಹಾಗೂ ಮಹಿಳಾ ವಿಭಾಗಕ್ಕೆ 6 ವರ್ಷಗಳು ತುಂಬಿವೆ. ಪ್ರತಿ ವಾರ ನಡೆಯುವ ಭಜನೆ ಮತ್ತು ಸಂಘಟನಾ ಕಾರ್ಯಗಳಲ್ಲಿ ಪರಿಸರದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಕ್ತಿಯನ್ನು ತುಂಬಬೇಕು,” ಎಂದು ವಿನಂತಿಸಿದರು.




