
ಪೊಲೀಸ್ ಮತ್ತು ಸಾರ್ವಜನಿಕರ ನಡುವಿನ ಬಾಂಧವ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯು ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಪ್ರತಿ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ನಾಗರಿಕರಿಗಾಗಿ “ಅತ್ಯುತ್ತಮ ಪೊಲೀಸ್ ಸಲಹೆಗಾರ” ಮತ್ತು “ಅತ್ಯುತ್ತಮ ಪೊಲೀಸ್ ಸ್ನೇಹಿತ” ಎಂಬ ಎರಡು ವಿಶೇಷ ಪ್ರಶಸ್ತಿಗಳನ್ನು ಘೋಷಿಸಿದೆ. ಸಾರ್ವಜನಿಕರು ಕೇವಲ ದೂರುದಾರರಾಗಿ ಉಳಿಯದೆ, ಅಪರಾಧ ತಡೆ ಮತ್ತು ಸಮಾಜದ ಶಾಂತಿ ಕಾಪಾಡುವಲ್ಲಿ ಇಲಾಖೆಯೊಂದಿಗೆ ಸಕ್ರಿಯವಾಗಿ ಕೈಜೋಡಿಸಬೇಕು ಎಂಬುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಪ್ರತಿ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಈ ಪ್ರಕ್ರಿಯೆಯನ್ನು ಮುನ್ನಡೆಸಲಿದ್ದು, ಜನರಿಂದ ಉತ್ತಮ ಸಲಹೆಗಳನ್ನು ನೀಡುವ, ಸಮಯೋಚಿತ ಹಾಗೂ ಚತುರ ಮಾಹಿತಿಯನ್ನು ಹಂಚಿಕೊಳ್ಳುವ ಮತ್ತು ಪೊಲೀಸರೊಂದಿಗೆ ಅತ್ಯುತ್ತಮ ಒಡನಾಟ ಹೊಂದಿರುವ ವ್ಯಕ್ತಿಗಳ ನಾಮನಿರ್ದೇಶನಗಳನ್ನು ಜಿಲ್ಲಾವಾರು ಮಟ್ಟದಲ್ಲಿ ಆಹ್ವಾನಿಸಲಾಗುತ್ತದೆ. ಸ್ವೀಕೃತವಾದ ಅರ್ಜಿಗಳಲ್ಲಿ ಅತ್ಯಂತ ಅರ್ಹರಾದ ಇಬ್ಬರು ವ್ಯಕ್ತಿಗಳನ್ನು ವಾರ್ಷಿಕವಾಗಿ ಆಯ್ಕೆ ಮಾಡಲಾಗುವುದು. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಪ್ರತಿ ವರ್ಷದ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ ಅಥವಾ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಜರುಗುತ್ತದೆ.

ಇಂದು(ಜ. 26) ಗಣರಾಜ್ಯೋತ್ಸವದ ಸಂದರ್ಭದಲ್ಲಿ ಉಡುಪಿಯ ಪೊಲೀಸ್ ಆಯುಕ್ತರ ಕಛೇರಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ಜಿಲ್ಲೆಯಲ್ಲಿ ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು ಶ್ರಮಿಸಿದ ಕಾಪು ಲವ ಕರ್ಕೇರ ಅವರಿಗೆ ಈ ಪ್ರಶಂಸನಾ ಪತ್ರವನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಅವರು ತೋರಿದ ಸೇವಾಭಾವ, ಶ್ರಮ ಹಾಗೂ ಸಹಕಾರವನ್ನು ಮೆಚ್ಚಿ ಈ ಗೌರವ ಸಲ್ಲಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ಪರವಾಗಿ ಇವರಿಗೆ “ಅತ್ಯುತ್ತಮ ಪೊಲೀಸ್ ಸಲಹೆಗಾರರು ಮತ್ತು ಅತ್ಯುತ್ತಮ ಪೊಲೀಸ್ ಸ್ನೇಹಿತರು” ಎಂಬ ಪ್ರಶಂಸನಾ ಪ್ರಮಾಣ ಪತ್ರವನ್ನು ನೀಡಿ ಪುರಸ್ಕರಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಮ್ ಶಂಕರ್ ಐ.ಪಿ.ಎಸ್ ಅವರು ಲವ ಕರ್ಕೇರ ಅವರಿಗೆ ಪ್ರಮಾಣ ಪತ್ರ ನೀಡಿ, ಅಭಿನಂದಿಸಿದರು.




