25 C
Mumbai
March 7, 2026
Mumbai News Kannada
ಪ್ರಕಟಣೆ

ಶ್ರೀ ದುರ್ಗಾಪರಮೇಶ್ವರೀ – ಶನೀಶ್ವರ ದೇವಸ್ಥಾನ ದಹಿಸರ್: ಫೆ.14  ಮತ್ತು 15 ರಂದು 40ನೇ ವರ್ಷದ ವಾರ್ಷಿಕ ಮಹಾಪೂಜಾ ಮಹೋತ್ಸವ ; ಬಲಿ ಉತ್ಸವ, ಸಾಧಕರಿಗೆ ಸನ್ಮಾನ ; ಯಕ್ಷಗಾನ ಪ್ರದರ್ಶನ.





ಮುಂಬಯಿ, ಫೆ. 12. ತುಳುನಾಡಿನ ಸಂಸ್ಕೃತಿ,ಆಚಾರ, ವಿಚಾರ,ಧಾರ್ಮಿಕ ಚಿಂತನೆ, ವಿವಿಧ ರೀತಿಯ ಪೂಜಾ ವಿಧಿ ವಿಧಾನಗಳೊಂದಿಗೆ ಈ ಮಹಾರಾಷ್ಟ್ರದ ಮಣ್ಣಿನಲ್ಲಿ ಕಾರ್ಯರೂಪದಲ್ಲಿರುವ ಅನೇಕ ಪುಣ್ಯ ಕ್ಷೇತ್ರಗಳಲ್ಲಿ ಶ್ರೀ ದುರ್ಗಾ ಪರಮೇಶ್ವರೀ – ಶನೀಶ್ವರ ದೇವಸ್ಥಾನ, ದಹಿಸರ್ ಕೂಡ ಒಂದಾಗಿದೆ. ದಹಿಸರ್ ಪರಿಸರದ ಕ್ಯಾಂಟೀನ್, ಹೊಟೇಲ್ ಹಾಗೂ ಸಣ್ಣ ಪುಟ್ಟ ಕಂಪನಿ ಕಾರ್ಮಿಕ ಉದ್ಯೋಗಸ್ಥ ತುಳು ಕನ್ನಡಿಗರ ಕೂಡುವಿಕೆಯಲ್ಲಿ ಶ್ರೀ ಶನಿಮಹಾತ್ಮಾ ಸೇವಾ ಸಮಿತಿ ( ರಿ. ) ಸಂಸ್ಥೆಯ ಮುಖಾಂತರ ದಹಿಸರ್ ಪೂರ್ವ ರಾವಲ್ಪಾಡ, ಗೋಕುಲ್ ನಗರದ ಶನಿ ಮಂದಿರ ಚೌಕ್‌ನಲ್ಲಿ ನೆಲೆ ಕಂಡು ಮುಂದೆ ದಿನದಿಂದ ದಿನಕ್ಕೆ ಪ್ರಗತಿ ಪಥದತ್ತ ಸಾಗಿ ಪ್ರಜ್ವಲಿಸುತ್ತಾ, ಅಸಂಖ್ಯ ಭಕ್ತಾಭಿಮಾನಿಗಳ ಇಷ್ಟಾರ್ಥವನ್ನು ಪೂರೈಸುತ್ತಾ, ಬೃಹತ್ ಧಾರ್ಮಿಕ ಕೇಂದ್ರ ವಾಗಿ ಪರಿಸರದ ಬಹು ಜನಪ್ರಿಯಾ ದೇವಾಲಯವಾಗಿ ಪುಣ್ಯ ಕ್ಷೇತ್ರವಾಗಿ ಬೆಳೆದು ನಿಂತಿರುವುದು ಶ್ರೀ ದುರ್ಗಾಪರಮೇಶ್ವರಿ-ಶ್ರೀ ಶನೀಶ್ವರ ದೇವಾಲಯದ ಇತಿಹಾಸವಾಗಿದೆ.

ಅದರಂತೆ ಅಸಂಖ್ಯ ಭಕ್ತಾಭಿಮಾನಿಗಳ ಶ್ರದ್ಧಾ – ಭಕ್ತಿಯ ಕೇಂದ್ರವಾಗಿ ಬೆಳೆದು ಬಹು ಪ್ರಸಿದ್ಧಿಯನ್ನು ಪಡೆದಿರುವ ಈ ದೇವಾಲಯದ ಮಧ್ಯದಲ್ಲಿ ಆರಾಧ್ಯ ದೇವತೆ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಸಾನಿಧ್ಯ, ಎಡ-ಬಲಗಳಲ್ಲಿ ವಿಘ್ನ ವಿನಾಯಕ ಮಹಾಗಣಪತಿ ಹಾಗೂ ಶನೀಶ್ವರ ದೇವರ ಗುಡಿ,  ಮತ್ತು ಈಶಾನ್ಯ ಭಾಗದಲ್ಲಿ ನಾಗದೇವರ ಗುಡಿ ಹಾಗೂ ಬಾಹ್ಯ ಭಾಗದಲ್ಲಿ ಗುಳಿಗ ದೈವದ ಗುಡಿಯೊಂದಿಗೆ ನಿರ್ಮಿಸಲ್ಪಟ್ಟು ದಹಿಸ‌ರ್ ಪರಿಸರದಲ್ಲಿಯೇ ಬಹುದೊಡ್ಡ ಕಾರ್ಣಿಕದ ಕ್ಷೇತವಾಗಿ ಕಂಗೊಳಿಸುತ್ತಿರುವುದನ್ನು ನಾವಿಂದು ಸ್ಮರಿಸುವಂತಿದೆ.

ಅಂತೆಯೇ ಈ ದೇವಾಲಯದಲ್ಲಿ ಪ್ರತಿನಿತ್ಯ ವಿವಿಧ ರೀತಿಯ ಪೂಜಾ ಪುರಸ್ಕಾರದ ಜೊತೆಗೆ ಪ್ರತೀ ಶನಿವಾರ ಶ್ರೀ ಶನೀಶ್ವರ ಗ್ರಂಥ ಪಾರಾಯಣ, ಭಜನೆ, ಚೆಂಡೆ ಮಾದ್ಧಲೆಯೊಂದಿಗೆ ಮಂಗಳಾರತಿ, ವಿಶೇಷ ಪೂಜೆಯು ಜರಗುತ್ತಿದೆ.

ಪ್ರತಿ ಶನಿವಾರ ಹರಕೆಯ ರಂಗ ಪೂಜೆ, ಪ್ರತಿ ಸಂಕಷ್ಟಿಯಂದು ಭಜನೆ ಹಾಗೂ  ಮಹಾಗಣಪತಿ ದೇವರಿಗೆ ವಿಶೇಷ ನೈವೇದ್ಯ ಹಾಗೂ ಮಹಾಪೂಜೆ,ಪಂಚಮಿಯಂದು ನಾಗದೇವರಿಗೆ ಪಂಚಾಮೃತ ಅಭಿಷೇಕ ನಾಗತಂಬಿಲ, ತನು, ಹುಣ್ಣಿಮೆಯ ದಿವಸ ಸಾರ್ವಜನಿಕ ದೀಪಾಲಂಕಾರ ಸೇವೆ,  ಕೊನೆಯ ಶನಿವಾರ ಸಾರ್ವಜನಿಕ ರಂಗ ಪೂಜೆ, ಪ್ರತಿ ವರ್ಷ ವಿವಿಧ ರಾಜ್ಯಗಳ ಹೆಸರಾಂತ ತೀರ್ಥಸ್ಥಳಗಳಿಗೆ ಯಾತ್ರೆ ಕೈಗೊಂಡು, ಆ ನಿಮಿತ್ತ ವಿಶೇಷ ರಂಗ ಪೂಜೆ, ಇತ್ಯಾದಿ ವಿಶೇಷ ಪೂಜೆಯು ಜರಗುತ್ತಲಿದೆ. 

ವಿಶೇಷ ಪರ್ವಗಳಾದ ಗಣೇಶ ಚತುರ್ಥಿ, ನಾಗರ ಪಂಚಮಿ, ದೀಪಾವಳಿ ಮಹಾಲಕ್ಷ್ಮಿ ಪೂಜೆ , ಶ್ರೀ ಕೃಷ್ಣ ಜನ್ಮಾಷ್ಟಮಿ, ಪುಟಾಣಿಯರಿಗೆ ಛದ್ಮವೇಷ ಸ್ಪರ್ಧೆ, ಶ್ರೀ ಶನಿ ಜಯಂತಿಯಂದು ಹಾಗೂ ಸೋನಾ ತಿಂಗಳಲ್ಲಿ ವಿಶೇಷವಾಗಿ ಸಂಪೂರ್ಣ ಶ್ರೀ ಶನಿ ಗ್ರಂಥ ಪಾರಾಯಣ , ಸಾರ್ವಜನಿಕ ಶ್ರೀ ಸತ್ಯನಾರಾಯಣ ಮಹಾಪೂಜೆ, ಪ್ರತಿಭಾ ಪುರಸ್ಕಾರ, ಅನ್ನ ಸಂತರ್ಪಣೆ , ಮಕರ ಸಂಕ್ರಮಣದಂದು 500 ಕ್ಕಿಂತಲೂ ಹೆಚ್ಚು ಮಹಿಳೆಯರಿಂದ ಹಳದಿ ಕುಂಕುಮ ಕಾರ್ಯಕ್ರಮ, ವಿಶೇಷ ಪೂಜೆ – ಭಜನಾ ಕಾರ್ಯಕ್ರಮಗಳು ಪ್ರತೀವರ್ಷ ನಡೆಯುತ್ತಾ ಬರುತ್ತಿದೆ.

ಹಾಗೆಯೇ , ನವರಾತ್ರಿ ಉತ್ಸವ ನಿಮಿತ್ತ ಸಾವಿರಾರು ಭಕ್ತಾಭಿಮಾನಿಗಳ ಕೂಡುವಿಕೆಯಲ್ಲಿ ನವರಾತ್ರಿ ಉತ್ಸವ ಆಚರಣೆ , ಲಲಿತ ಸಹಸ್ರ ನಾಮಾರ್ಚನೆ, ದುರ್ಗಾ ಹೋಮ, ಕುಣಿತ ಭಜನೆ, ಸಾರ್ವಜನಿಕ ಅನ್ನ ಸಂತರ್ಪಣೆ , ವಿಜಯ ದಶಮಿಯಂದು ತೆನೆ ಹಾಕುವ ಸಂಪ್ರದಾಯವು ನಡೆಯುತ್ತಾ ಬಂದಿರುವುದು ವಿಶೇಷತೆಯಾಗಿದೆ .

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸನ್ನಿಧಾನದ ಆವರಣದಲ್ಲಿ ಪ್ರತೀ ವರ್ಷ ಯಕ್ಷಗಾನ, ತಾಳ ಮದ್ದಳೆ, ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವುದೇ ಅಲ್ಲದೆ ಸಮಾಜಪರ ಸೇವಾ ಕಾರ್ಯಗಳಲ್ಲೂ ಗುರುತಿಸಿ ಕೊಂಡಿದ್ದು ಯಾವುದೇ ಜಾತಿ, ಮತ, ಭೇದವಿಲ್ಲದೆ ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಆರ್ಥಿಕ ಧನ ಸಹಾಯ ವಿದ್ಯಾರ್ಥಿ ವೇತನ, ಉಚಿತ ಪುಸ್ತಕ ವಿತರಣೆ ಇತ್ಯಾದಿ ಕಾರ್ಯಕ್ರಮಗಳೊಂದಿಗೆ ಜನಮನ ಗೆದ್ದಿರುವ ಹಿರಿಮೆ ಈ ದೇವಾಲಯದ ಆಡಳಿತ ಮಂಡಳಿಯವರ ಪಾಲಿಗೆ ಸಲ್ಲುವಂತಿದೆ.

ಈ ರೀತಿಯ ಹಿನ್ನೆಲೆಯನ್ನು ಹೊಂದಿದ ಈ ದೇವಾಲಯಕ್ಕೆ ಇದೀಗ 40 ವರ್ಷ ಸಂದಿದೆ. ಅದರಂತೆ ಈ ಧಾರ್ಮಿಕ ಕ್ಷೇತ್ರದ 4೦ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವವನ್ನು ಆಡಳಿತ

ಮಂಡಳಿಯವರು ಹಮ್ಮಿಕೊಂಡಿದ್ದು, ಈ ಪುಣ್ಯ ಕಾರ್ಯವು ಫೆ. 14 ಶನಿವಾರದಂದು ಮೊದಲ್ಗೊಂಡು ಫೆ 15 ರ ರವಿವಾರ ಬೆಳಿಗ್ಗೆಯವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ದೇವಾಲಯದ ಆವರಣದಲ್ಲಿ ಜರಗಲಿದೆ .

ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಶಂಕರನಾರಾಯಣ ತಂತ್ರಿ ಮತ್ತು ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ವಿಜಯ ಉಪಾಧ್ಯಯ ಹಾಗೂ ಸಹ ಅರ್ಚಕರಾದ ತೇಜಸ್ ಭಟ್ ಇವರ ನೇತೃತ್ವ ದಲ್ಲಿ ಜರಗಲಿರುವ ಈ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಫೆ.14 ರ ಶನಿವಾರ ಬೆಳಿಗ್ಗೆ 8ಕ್ಕೆ ಸಾಮೂಹಿಕ ಪ್ರಾರ್ಥನೆ, ಗಣಹೋಮ ಹಾಗೂ ಶ್ರೀ ಶನಿದೇವರಿಗೆ ನವಕಲಶ ಪ್ರಧಾನ ಹೋಮ, ಶನಿಶಾಂತಿ, ನಾಗದೇವರ ಸನ್ನಿಧಾನದಲ್ಲಿ ಪವಮಾನ ಕಲಶಾಭಿಷೇಕ , ಗುಳಿಗ ದೈವಕ್ಕೆ ಪಂಚ ಕಲಶಾಭಿಷೇಕ ,ಶ್ರೀ ದೇವಿಯ ಸನ್ನಿಧಾನದಲ್ಲಿ 25 ಕಲಶಾರಾಧನೆ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಸ್ವರ್ಣಾಲಂಕಾರ ಸೇವೆ, ಪಲ್ಲ ಪೂಜೆ, ಮಧ್ಯಾಹ್ನ 1ರಿಂದ 3 ರವರೆಗೆ ಬಾಲಾಜಿ ಅರ್ಥ್ ಮೂವರ್ಸ್ ನ ಮಾಲಕರಾದ ಇ. ಭಾಸ್ಕರ್ ನಾಯ್ಡು ಇವರ ವತಿಯಿಂದ ಸಾರ್ವಜನಿಕ ಅನ್ನಸಂತರ್ಪಣೆ, ಮಧ್ಯಾಹ್ನ  ಮಂದಿರದ ಸದಸ್ಯರಿಂದ ಭಜನೆ, ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ಶ್ರೀ ಶನಿಗ್ರಂಥ ಪಾರಾಯಣ, ಸಂಜೆ 6 ರಿಂದ ಕುಂಕುಮಾರ್ಚಣೆ, ಬಲಿ ಉತ್ಸವ, ಕಟ್ಟೆ ಪೂಜೆ, ವಿವಿಧ ವೇಷ ಭೂಷಣ, ವಾದ್ಯ, ಚೆಂಡೆ, ಡೋಲು ಕುಣಿತ ಭಜನೆಗಳೊಂದಿಗೆ  ಮೆರವಣಿಗೆ, ತೀರ್ಥ ಪ್ರಸಾದ ವಿತರಣೆ, ರಾತ್ರಿ 9.30 ರಿಂದ ಮರುದಿನ ಫೆ. 15 ರ ರವಿವಾರ ಬೆಳಿಗ್ಗೆ 5.30 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ  ಮಲ್ಲಿಕಾ ಶೇಖರ್ ಟಿ.ಪೂಜಾರಿ ಮತ್ತು  ವಿಶಾಲ ಸಂತೋಷ್ ಪೂಜಾರಿ ಹಾಗೂ ಮಕ್ಕಳು ಇವರ ಪ್ರಾಯೋಜಕತ್ವದಲ್ಲಿ

 ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ ಇದರ ಕಲಾವಿದರಿಂದ ‘ಸಂಪೂರ್ಣ ದೇವಿ ಮಹಾತ್ಮೆ ‘ಪೌರಾಣಿಕ ಯಕ್ಷಗಾನವು ಪ್ರದರ್ಶಿಸಲ್ಪಡಲಿದೆ . ಇದೇ ಸಂದರ್ಭದಲ್ಲಿ ಶ್ರೀ ಶನಿಮಹಾತ್ಮಾ ಸೇವಾ ಸಮಿತಿಯ ಅಧ್ಯಕ್ಷರಾದ  ಸಂತೋಷ್ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಜರಗಲಿರುವ ಧಾರ್ಮಿಕ ಸಭಾಕಾರ್ಯಕ್ರಮವು ಜರಗಲಿದ್ದು,

ಈ ಕಾರ್ಯಕ್ರಮದಲ್ಲಿ ಯಶಸ್ವಿ ಉದ್ಯಮಿ ಹಾಗೂ ಕೊಡುಗೈ ದಾನಿಯರಾದ ಶ್ರೀ ಜಯ ಪೂಜಾರಿ, ದಹಿಸರ್ ಹಾಗು ಸಮಿತಿಯ ಸದಸ್ಯರಾದ  ಶ್ರೀಮತಿ ಪದ್ಮಾವತಿ ಎಸ್.ಶೆಟ್ಟಿ  ಇವರು ದೇವಸ್ಥಾನಕ್ಕೆ ನೀಡಿದ ನಿಸ್ವಾರ್ಥ ಸೇವೆಗಳನ್ನು ಗುರುತಿಸಿ  ದೇವಾಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಗುವುದು. 

ರವಿವಾರ ಬೆಳಿಗ್ಗೆ 7 ರಿಂದ ಬೆಳಿಗ್ಗೆ 9ರವರೆಗೆ ಸಂಪ್ರೋಕ್ಷಣೆ ಮಹಾಪೂಜೆ, ಮಹಾಮಂತ್ರಾಕ್ಷತೆ ಮತ್ತು ತೀರ್ಥ ಪ್ರಸಾದ ವಿತರಣಾ ಕಾರ್ಯಕ್ರಮವು ಜರಗಲಿದೆ.

ಈ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಕುಟುಂಬ ಸಮೇತರಾಗಿ ಬಂದು ತನು,ಮನ, ಧನದಿಂದ ಸಹಕರಿಸಿ, ತೀರ್ಥ ಪ್ರಸಾದ, ಅನ್ನ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದುರ್ಗಾಪರಮೇಶ್ವರೀ  ಅಮ್ಮನವರ, ಶ್ರೀ ಶನಿದೇವರ ಹಾಗೂ ಪರಿವಾರ ದೇವರ ಕೃಪೆಗೆ ಪಾತ್ರರಾಗುವಂತೆ ಶ್ರೀ ಶನಿಮಹಾತ್ಮಾ ಸೇವಾ ಸಮಿತಿಯ ವತಿಯಿಂದ ಅಧ್ಯಕ್ಷ  ಸಂತೋಷ್ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ  ಜಯರಾಮ ಎನ್. ಮೆಂಡನ್ , ಗೌ.ಕೋಶಾಧಿಕಾರಿ . ದೀಪಕ್ ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿ ಕೊಂಡಿದ್ದಾರೆ.



Related posts

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ : ಮಾ. 9ರಂದು ಮೊಗವೀರ ಮಾಸಿಕದ 85ರ ಸಂಭ್ರಮ

Mumbai News Desk

ಇತಿಹಾಸ ಪ್ರಸಿದ್ಧ ಕಾಪು ಪಿಲಿಕೋಲಕ್ಕೆ ದಿನ ನಿಗದಿ

Mumbai News Desk

ಶ್ರೀ ಮಹಿಷಮರ್ಧಿನಿ ದೇವಸ್ಥಾನ ಬೊರಿವಿಲಿ 35ನೇ ವಾರ್ಷಿಕ ಶರನ್ನವರಾತ್ರಿ ಉತ್ಸವ.

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿಡಿ. 3 ರಂದು 35 ನೇ ವಾರ್ಷಿಕ ಮಹಾಸಭೆ

Mumbai News Desk

ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಕೋಟೆ; ನಾಲಾಸೋಪಾರ ಮೇ 27. ಶ್ರೀ ಶನಿ ಜಯಂತಿ ಉತ್ಸವ.

Mumbai News Desk

ಶ್ರೀ ಮಹಾವಿಷ್ಣು ಮಂದಿರದಲ್ಲಿ ಮಾರ್ಚ್ 16 ಶನಿವಾರ ವಾರ್ಷಿಕ ಸತ್ಯನಾರಾಯಣ ಮಹಾಪೂಜೆ ಹಾಗೂ ಸಾಮೂಹಿಕ ಶನಿ ಪೂಜೆ

Mumbai News Desk