
ಡೊಂಬಿವಲಿ: ಇಲ್ಲಿನ ಅಜ್ದೇಗಾಂವ್ ತಿಲಕ್ ಕಾಲೇಜು ಸಮೀಪವಿರುವ ಶ್ರೀ ಜೈ ಭವಾನಿ ಶನೀಶ್ವರ ಮಂದಿರದ 36ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನಿ ಮಹಾಪೂಜಾ ಮಹೋತ್ಸವವು ಫೆಬ್ರವರಿ 14, ಶನಿವಾರದಂದು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ನೆರವೇರಿತು.

ವಿಶ್ವಾವಸು ನಾಮ ಸಂವತ್ಸರದ ಮಾಘ ಮಾಸದ ಪುಣ್ಯಕಾಲದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮಗಳು ಮಂದಿರದ ಪ್ರಧಾನ ಅರ್ಚಕರಾದ ಶ್ರೀ ಪ್ರಕಾಶ್ ಭಟ್ ಕಾನಂಗಿ ಅವರ ಪೌರೋಹಿತ್ಯದಲ್ಲಿ ಶಾಸ್ತ್ರೋಕ್ತವಾಗಿ ಜರುಗಿದವು.

ಶನಿವಾರ ಮುಂಜಾನೆ 6.00 ಗಂಟೆಗೆ ತೋರಣ ಮುಹೂರ್ತ ಹಾಗೂ ಗಣಹೋಮದೊಂದಿಗೆ ಧಾರ್ಮಿಕ ವಿಧಿಗಳು ಆರಂಭಗೊಂಡವು. ಬೆಳಿಗ್ಗೆ 10.30ಕ್ಕೆ ಲೋಕಕಲ್ಯಾಣಾರ್ಥವಾಗಿ ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಿತು. ಮಧ್ಯಾಹ್ನ 1.30ಕ್ಕೆ ಶ್ರೀ ಶನಿದೇವರ ಕಲಶ ಪ್ರತಿಷ್ಠೆ ಹಾಗೂ ಗ್ರಂಥ ಪಾರಾಯಣ ಸೇವೆ ಜರುಗಿತು.

ಈ ಸಂದರ್ಭದಲ್ಲಿ ಭಕ್ತಾದಿಗಳ ವಿಶೇಷ ಆಕರ್ಷಣೆಯಾಗಿ ‘ಯಕ್ಷಗಾನ ತಾಳಮದ್ದಳೆ’ ರೂಪದಲ್ಲಿ ನಡೆದ ಪಾರಾಯಣ ಸೇವೆಯು ಆಧ್ಯಾತ್ಮಿಕ ರಸದೌತಣ ನೀಡಿತು.

ನಗರದ ಖ್ಯಾತ ವಾಚಕರು, ಅರ್ಥದಾರಿಗಳು, ಭಾಗವತರು ಹಾಗೂ ಹಿಮ್ಮೇಳ ಕಲಾವಿದರು ಈ ಕಲಾ ಸೇವೆಯಲ್ಲಿ ಪಾಲ್ಗೊಂಡಿದ್ದರು.

ರಾತ್ರಿ 8.30ಕ್ಕೆ ಮಹಾಮಂಗಳಾರತಿ ನೆರವೇರಿತು. ತದನಂತರ 9.00 ಗಂಟೆಗೆ ತೀರ್ಥಪ್ರಸಾದ ವಿತರಣೆ ಹಾಗೂ ಸಾವಿರಾರು ಭಕ್ತಾದಿಗಳಿಗೆ ಮಹಾಪ್ರಸಾದವಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಮಂದಿರದ ಗೌರವಾಧ್ಯಕ್ಷ ರವಿ ಎಂ. ಸುವರ್ಣ, ಅಧ್ಯಕ್ಷ ಸೂರಜ್ ಡಿ. ಸಪಲಿಗ, ಉಪಾಧ್ಯಕ್ಷ ಸಂಜೀವ ಪಿ. ಪಾಲನ್, ಕಾರ್ಯದರ್ಶಿ ಸಂತೋಷ್ ಜಿ. ಪೂಜಾರಿ, ಕೋಶಾಧಿಕಾರಿ ಜೈಕಿಶ್ ಆರ್. ಸನಿಲ್, ಜೊತೆ ಕಾರ್ಯದರ್ಶಿ ಪ್ರದೀಪ್ ಎಸ್. ಸಾಲ್ಯಾನ್ ಹಾಗೂ ಜೊತೆ ಕೋಶಾಧಿಕಾರಿ ರಕ್ಷಣ್ ಸಾಲ್ಯಾನ್ ಉಪಸ್ಥಿತರಿದ್ದರು.

ಅರ್ಚಕ ಪ್ರಕಾಶ ಭಟ್ ಕಾನಂಗಿ ಅವರಿಗೆ ಸಹ ಅರ್ಚಕ ಪ್ರವೀಣ್ ಪೂಜಾರಿ ಸಹಕರಿಸಿದರು. ಮಹಿಳಾ ವಿಭಾಗದ ಅಧ್ಯಕ್ಷೆ ಪಾರ್ವತಿ ಸಾಲ್ಯಾನ್ ಹಾಗೂ ಪದಾಧಿಕಾರಿಗಳು, ಯುವ ವಿಭಾಗದ ಸದಸ್ಯರು ಮತ್ತು ಸಮಸ್ತ ಭಕ್ತಾದಿಗಳು ಈ ಭಕ್ತಿಪೂರ್ವಕ ಸಮಾರಂಭದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.





