30.9 C
Mumbai
June 8, 2026
Mumbai News Kannada
ಸುದ್ದಿ

ಮಂಗಳೂರು-ಮುಂಬೈ ರೈಲುಗಳ ನಿರಂತರ ವಿಳಂಬ: ಪ್ರಯಾಣಿಕರ ಪರದಾಟ





ಮಂಗಳೂರು ಮತ್ತು ಮುಂಬೈ ನಡುವೆ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ಮತ್ತು ಮಂಗಳೂರು ಜಂಕ್ಷನ್-ಸಿಎಸ್‌ಎಂಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳು ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ವಿಳಂಬವಾಗಿ ಸಂಚರಿಸುತ್ತಿದ್ದು, ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಮಂಗಳೂರಿನಿಂದ ಮುಂಬೈ ಎಲ್‌ಟಿಟಿಗೆ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ (12620) ರೈಲು ಬೆಳಿಗ್ಗೆ 5.57ಕ್ಕೆ ಥಾಣೆ ತಲುಪಬೇಕಿದ್ದರೂ, ಫೆಬ್ರವರಿ 14 ರಂದು 6.41ಕ್ಕೆ, ಫೆಬ್ರವರಿ 15 ರಂದು ಮಧ್ಯಾಹ್ನ 12.27ಕ್ಕೆ ಮತ್ತು ಫೆಬ್ರವರಿ 16 ರಂದು ಬೆಳಿಗ್ಗೆ 7.05ಕ್ಕೆ ತಲುಪಿದೆ. ಕಳೆದ ಒಂದು ವಾರದಲ್ಲಿ ಈ ರೈಲು ಸರಾಸರಿ 1 ಗಂಟೆ 36 ನಿಮಿಷಗಳ ವಿಳಂಬ ದಾಖಲಿಸಿದೆ. ಅದೇ ರೀತಿ ಮುಂಬೈನಿಂದ ಮಂಗಳೂರಿಗೆ ಬರುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ (12619) ರೈಲು ಉಡುಪಿಯನ್ನು ಬೆಳಿಗ್ಗೆ 5.18ಕ್ಕೆ ತಲುಪಬೇಕಿದ್ದರೂ, ಕಳೆದ ವಾರ ಸರಾಸರಿ 2 ಗಂಟೆ 30 ನಿಮಿಷಗಳಷ್ಟು ತಡವಾಗಿ ಸಂಚರಿಸಿದೆ. ಇನ್ನು ಮಂಗಳೂರು ಜಂಕ್ಷನ್-ಸಿಎಸ್‌ಎಂಟಿ ಎಕ್ಸ್‌ಪ್ರೆಸ್ (12134) ರೈಲಿನ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಫೆಬ್ರವರಿ 14 ರಂದು ನಿಗದಿತ ಸಮಯಕ್ಕಿಂತ ಎಂಟು ಗಂಟೆಗೂ ಹೆಚ್ಚು ಕಾಲ ವಿಳಂಬವಾಗಿ ಮಧ್ಯಾಹ್ನ 12.22ಕ್ಕೆ ಥಾಣೆ ತಲುಪಿದೆ.
12133 ಸಂಖ್ಯೆಯ ಸಿ.ಎಸ್.ಎಂ.ಟಿ–ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲು ಉಡುಪಿಗೆ ತಲುಪಬೇಕಾದ ನಿಗದಿತ ಸಮಯ ಬೆಳಿಗ್ಗೆ 11.26 ಆಗಿದ್ದರೂ, ಫೆಬ್ರವರಿ 14 ರಂದು ಮಧ್ಯಾಹ್ನ 12.36ಕ್ಕೆ, ಫೆಬ್ರವರಿ 15 ರಂದು ಮಧ್ಯಾಹ್ನ 3.06ಕ್ಕೆ ಮತ್ತು ಫೆಬ್ರವರಿ 16 ರಂದು ಮಧ್ಯಾಹ್ನ 2.17ಕ್ಕೆ ತಲುಪಿದೆ. ಕಳೆದ ಒಂದು ವಾರದಲ್ಲಿ ಈ ರೈಲು ಉಡುಪಿಗೆ ಸರಾಸರಿ 2 ಗಂಟೆ 10 ನಿಮಿಷ ಹಾಗೂ ಮಂಗಳೂರು ಜಂಕ್ಷನ್‌ಗೆ 1 ಗಂಟೆ 42 ನಿಮಿಷ ವಿಳಂಬವಾಗಿ ಬಂದಿದೆ.
ಕಳೆದ ಆರು ತಿಂಗಳಿನಿಂದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ಮತ್ತು ಮಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳು ವಿಳಂಬವಾಗುತ್ತಿವೆ ಎಂದು ಮುಂಬೈ ರೈಲು ಯಾತ್ರಿ ಸಂಘದ ಕಾರ್ಯದರ್ಶಿ ಆಲಿವರ್ ಡಿಸೋಜಾ ತಿಳಿಸಿದ್ದಾರೆ. ಒಂದು ವರದಿಯ ಪ್ರಕಾರ, ರೈಲೊಂದು ಥಾಣೆ ನಿಲ್ದಾಣಕ್ಕೆ ಬರಲು ಬರೋಬ್ಬರಿ 6 ಗಂಟೆ 4 ನಿಮಿಷ ತಡವಾಗಿದೆ. ಈ ನಿರಂತರ ವಿಳಂಬದ ಕುರಿತು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಸಂಬಂಧ ರೈಲು ಯಾತ್ರಿ ಸಂಘವು ಕೊಂಕಣ ರೈಲ್ವೆ ಅಧಿಕಾರಿಗಳಿಗೆ ಈಗಾಗಲೇ ಅಧಿಕೃತವಾಗಿ ಮನವಿ ಸಲ್ಲಿಸಿದೆ.
ರತ್ನಗಿರಿ ಮತ್ತು ಕಾರವಾರ ವಿಭಾಗಗಳಲ್ಲಿ ಹಳಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕೊಂಕಣ ರೈಲ್ವೆ ಕಾರ್ಪೊರೇಶನ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನಿಲ್ ನಾರ್ಕರ್ ಅವರು, ಹಳಿ ದುರಸ್ತಿ ಕಾರ್ಯದಿಂದಾಗಿ ಮಂಗಳೂರು ಮತ್ತು ಮುಂಬೈ ನಡುವೆ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ಸೇರಿದಂತೆ ಪ್ರಮುಖ ರೈಲುಗಳು ವಿಳಂಬವಾಗಿ ಸಂಚರಿಸುತ್ತಿವೆ ಎಂದು ತಿಳಿಸಿದ್ದಾರೆ. ಪ್ರಯಾಣಿಕರು ನಿಲ್ದಾಣಕ್ಕೆ ಬರುವ ಮುನ್ನ ರೈಲಿನ ಇತ್ತೀಚಿನ ವೇಳಾಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಕೋರಲಾಗಿದೆ.



Related posts

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿ1981-82 ಸಾಲಿನ ಹಳೆವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ, ಉಪನ್ಯಾಸಕರಿಗೆ ಸನ್ಮಾನ

Mumbai News Desk

ಉಡುಪಿ : ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ – ಸಂಸದ ಕೋಟ ಶ್ರೀನಿವಾಸ ಪೂಜಾರಿ

Mumbai News Desk

ದ್ವಾರಕಾಮಯಿ ಮಠ ಶ್ರೀ ಕ್ಷೇತ್ರ ಶಂಕರಪುರದ ವತಿಯಿಂದ ಪುಲ್ವಾಮ ದಾಳಿಯಲ್ಲಿ ಮಡಿದ ಯೋಧರಿಗೆ ನುಡಿ -ನಮನ

Mumbai News Desk

ತಿರುಮಲದಲ್ಲಿ ವಿಜೃಂಭಣೆಯಿಂದ ನಡೆದ ಪುರಂದರ ದಾಸರ ಆರಾಧನ ಮಹೋತ್ಸವ

Mumbai News Desk

ನಗರದ ಪ್ರಸಿದ್ದ ಹೃದ್ರೋಗ ತಜ್ಞ ಡಾ. ಸದಾನಂದ ಶೆಟ್ಟಿ ಅವರಿಗೆ ಬೆಸ್ಟ್ ಡಾಕ್ಟರ್ ಮುಂಬೈ – 2024 ಪುರಸ್ಕಾರ.

Mumbai News Desk

ಉಭಯ ಜಿಲ್ಲೆಗಳ ಹೆದ್ದಾರಿ ಸಮಸ್ಯೆಯ ಪರಿಹಾರಕ್ಕೆ ಕೇಂದ್ರ ಸಚಿವರನ್ನು ಭೇಟಿಯಾದ ಉಡುಪಿ/ ಮಂಗಳೂರು ಸಂಸದರು

Mumbai News Desk