ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಶ್ರೀ ಗಾಯತ್ರೀ ದೇವಿಯ ಭಗವಾನ್ ಶ್ರೀ ನಿತ್ಯಾನಂದ ಗುರುದೇವರ ಪ್ರತಿಷ್ಠಾ ವರ್ಧಂತಿ , “ನವಚಂಡಿಕಾ ಯಾಗ“ ವೇದಮಾತೆ ಶ್ರೀ ಗಾಯತ್ರೀ ದೇವಿಯ ಗರ್ಭಗೃಹದ ಜೀರ್ಣೋದ್ದಾರಕ್ಕೆ ನಿಧಿ ಸಮರ್ಪಣೆ ಕಾರ್ಯಕ್ರಮವು ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕರಾದ ಬ್ರಹ್ಮಶ್ರೀ ಕಮಲಾದೇವೀ ಪ್ರಸಾದ ಆಸ್ರಣ್ಣನವರ ಆಚಾರ್ಯತ್ವದಲ್ಲಿ, ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಫೆ 22 ರಂದು ಸಂಪನ್ನಗೊಂಡಿತು.
ಇದೇ ಸಂದರ್ಭದಲ್ಲಿ ಪೂಜ್ಯ ಶ್ರೀಗಳು ಮತ್ತು ಕಟೀಲಿನ ಪ್ರಧಾನ ಅರ್ಚಕರಾದ ಅನಂತ ಪದ್ಮನಾಭ ಆಸ್ರಣ್ಣರ ಮತ್ತು ಗಣ್ಯರ ದಿವ್ಯ ಉಪಸ್ಥಿತಿಯಲ್ಲಿ ಮಾಜಿ ರಾಜ್ಯ ಸಭಾಸದಸ್ಯರಾದ ಕೆ.ಸಿ ರಾಮಮೂರ್ತಿ I.P.S. (Retd.) ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶ್ರೀಗಳವರ ಧಾರ್ಮಿಕ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿದ್ದಲ್ಲದೆ, ಮುಂದಿನ ಯೋಜನೆ ಗಾಗಿ ಎಲ್ಲರೂ ಬೆಂಬಲಿಸಬೇಕೆಂದು ಆಗ್ರಹಿಸಿದರು.
ಪರಮಪೂಜ್ಯ ಶ್ರೀಗಳು ಆಶೀರ್ವಚಿಸುತ್ತಾ ಅನಾಥ ಆಶ್ರಮವಾಗಿ ಆರಂಭವಾದ ಈ ಆಶ್ರಮವು ಮರವಾಗಿ ಬೆಳೆದು ದೀನ ದುಃಖಿತರ ಕಣ್ಣೀರು ಒರೆಸುವ ಕೆಲಸ ಮಾಡುತ್ತಾ ಇದ್ದೇವೆ, ಆಶ್ರಮದ ಆಶ್ರಯ ಯೋಜನೆ ಮೂಲಕ 47 ಮಂದಿಗೆ ಈಗಾಗಲೇ ಗೃಹ ನಿರ್ಮಾಣ ಮಾಡಿ ಹಸ್ತಾಂತರಿಸಿದ್ದೇವೆ. 5 ಮಂದಿ ಅರ್ಹ ಫಲಾನುಭವಿಗಳಿಗೆ ದಾನಿಗಳ ಸಹಕಾರದಿಂದ ಗೃಹ ನಿರ್ಮಾಣ ಮಾಡಿ ಹಸ್ತಾಂತರಿಸಲಿದ್ದೇವೆ ಎಂದು ತಿಳಿಸುತ್ತಾ ಶ್ರೀ ಗಾಯತ್ರೀ ದೇವಿಯ ಗರ್ಭಗೃಹ ಜೀರ್ಣೋದ್ಧಾರದ ಸಮಿತಿಯನ್ನು ಘೋಷಿಸಿದರು.
ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಮಾನ್ಯರಾಜ್ಯಸಭಾ ಸದಸ್ಯರಾದ ಕೆ ನಾರಾಯಣ ಬೆಂಗಳೂರು ಮಾತನಾಡುತ್ತಾ ಪರಮಪೂಜ್ಯ ಸ್ವಾಮೀಜಿಯವರು ತನ್ನ ಸ್ವಂತಕ್ಕಾಗಿ ಯಾವ ಕಾರ್ಯಗಳನ್ನು ಮಾಡುವುದಿಲ್ಲ ಮುಂದಿನ ಪೀಳಿಗೆಗೆ ಬೇಕಾಗಿ ಮಾಡುತ್ತಾರೆ ನಾವೆಲ್ಲರೂ ಮರದ ಬೇರುಗಳಾಗಿ ಕೆಲಸ ಮಾಡಿ ಪರಮಪೂಜ್ಯರು ಕೈಗೆತ್ತಿಗೊಂಡ ಯೋಜನೆ ಮುಂದಿನ ವರ್ಷ ಪೂರ್ತಿಯಾಗುವಂತೆ ಸಹಕರಿಸಬೇಕೆಂದು ನುಡಿದರು.
ಡಾ. ಎಸ್.ಎನ್.ವಿ.ಎಲ್ ನರಸಿಂಹರಾಜು ಅಧ್ಯಕ್ಷರು,The Oxford Educational Institutions, ಬೆಂಗಳೂರು ರವರು ವೇದ ಮಾತೆ ಶ್ರೀ ಗಾಯತ್ರೀ ದೇವಿಯ ನೂತನ ಗರ್ಭಗೃಹಕ್ಕೆ ನಿಧಿ ಸಮರ್ಪಣೆಯ ಕೂಪನ್ನುಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಬಳಿಕ ಪರಮಪೂಜ್ಯರು ಅತಿಥಿಗಳ ಸಮಕ್ಷತ್ವದಲ್ಲಿ 2026 ರ ಪದ್ಮಶ್ರೀ ಪುರಸ್ಕೃತೆ ಬೆಂಗಳೂರು ಸುಮಂಗಲಿ ಸೇವಾಶ್ರಮದ ಸಂಸ್ಥಾಪಕಿ ಶ್ರೀಮತಿ ಎಸ್ .ಜಿ ಸುಶೀಲಮ್ಮರವರನ್ನು ಸನ್ಮಾನಿಸಲಾಯಿತು. ಆಶ್ರಮದ ಆಶ್ರಯ ಯೋಜನೆಯಡಿಯಲ್ಲಿ ನವೀಕರಣಗೊಳಿಸಿದ ಮನೆಯನ್ನು ಶ್ರೀ ಚಂದ್ರಶೇಖರ ಶೆಟ್ಟಿ ಮುಂಡ್ಕೂರು (CF Founder President ) ಹಸ್ತಾಂತರಿಸಿದರು. ಮಾತ್ರವಲ್ಲದೆ CAPS Foundation ಸಹಕಾರದೊಂದಿಗೆ ನಿರ್ಮಾಣಗೊಳ್ಳಲಿರುವ 3 ಮನೆಯ ಫಲಾನುಭವಿಗಳಿಗೆ ಆಯ್ಕೆ ಪತ್ರ ವಿತರಣೆ ಮಾಡಿ ಮಾತನಾಡಿದರು. ರಘುರಾಮ.ಕೆ.ಶೆಟ್ಟಿ ಕುಳೂರು ಕನ್ಯಾನ, ಎಂ. ಡಿ. ಹೇರಂಬಾ ಇಂಡಸ್ಟರೀಸ್ ಮುಂಬೈ ರವರು ಇನ್ನೊಂದು ಮನೆಯ ಕೊಡುಗೆ ನೀಡಿ ಅದರ ಆಯ್ಕೆ ಪತ್ರವನ್ನು ಹಸ್ತಾಂತರಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಗಳಾಗಿ ಉಪಸ್ಥಿತರಿದ್ದ ಬಿ.ನಾಗರಾಜ (ನಿವೃತ್ತ ಜಿಲ್ಲಾಧಿಕಾರಿಗಳು ಬೆಂಗಳೂರು ) ಮೋಹನಶೆಟ್ಟಿ ಮಜ್ಜಾರು (ಉದ್ಯಮಿ ಮುಂಬೈ ) ರವರು ಸದಾಶಯದ ಮಾತುಗಳನ್ನಾಡಿದರು . ಶಶಿಧರ ಶೆಟ್ಟಿ ಗ್ರಾಮ ಚಾವಡಿ (ವಿಶ್ವಸ್ತರು ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ (ರಿ), ರಾಜೇಶ್ ಕೆ.ರೈ (ಅಧ್ಯಕ್ಷರು ಶ್ರೀ ನಿತ್ಯಾನಂದ ಯೋಗಾಶ್ರಮ ಮುಂಬೈ ಸಮಿತಿ ), ಬಾಲಕೃಷ್ಣ ಬೆಂಗಳೂರು, ಅನುಜ್ ವೀರೇಂದ್ರಸಿಂಗ್ ಕಾರ್ಡಿಯಾನ್, ಸುಪ್ರೀಮ್ ಕೋರ್ಟಿನ ವಕೀಲರು, ಪುಷ್ಪಕುಮಾರ್ ಕೊಚ್ಚಿ. ಇವರಲ್ಲದೆ ಮಧ್ಯಪ್ರದೇಶದ ಯತಿ ವಿನಯಸಾಗರ್ ಸ್ವಾಮೀಜಿಯವರು ಉಪಸ್ಥಿತರಿದ್ದರು
ತಸ್ಮಯ್ ಆಚಾರ್ಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದ ಸ್ವಾಗತವನ್ನು ಪುರುಷೋತ್ತಮ ಅಡ್ಯಾರ್ ನಿರ್ವಹಿಸಿದರು. ಕೆ.ಎಂ ಗಂಗಾಧರ್ ಕೊಂಡೆವೂರು, ಕಾರ್ಯಕ್ರಮದ ನಿರೋಪಣೆ ಮಾಡಿ ವಂದಿಸಿದರು
ಸಂಜೆ 6.30ಕ್ಕೆ ನಕ್ಷತ್ರವನದಲ್ಲಿ ನವಗ್ರಹ ಪೂಜೆ ಮತ್ತು ದೀಪೋತ್ಸವ ಜರಗಿತು. ಸೂರ್ಯಾಸ್ತ 6.37 ಕ್ಕೆ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು 20 ನೇ ವರ್ಷದ ಅಖಂಡ ಭಜನಾಸಪ್ತಾಹಕ್ಕೆ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಚಾಲನೆ ನೀಡಿದರು.




