ಮೂಲ್ಕಿ ಸಸಿಹಿತ್ಲು ಭಗವತಿ ಕ್ಷೇತ್ರದ ಭಗವತಿ ಅಮ್ಮನವರು ಮತ್ತು ಮೂಲ್ಕಿ ಬಪ್ಪನಾಡು ಕ್ಷೇತ್ರದ ದುರ್ಗಾಪರಮೇಶ್ವರಿ ಅಮ್ಮನವರು ಪರಸ್ಪರ ಸಹೋದರಿಯರಾಗಿದ್ದಾರೆ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಬಪ್ಪನಾಡು ದೇವಾಲಯದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸಸಿಹಿತ್ಲು ಕ್ಷೇತ್ರದಿಂದ ಶ್ರೀ ಭಗವತಿಯು ಸಪರಿವಾರವಾಗಿ ಆಗಮಿಸಿ ಭೇಟಿ ನೀಡುವ ಸುದೀರ್ಘ ಸಂಪ್ರದಾಯ ಬೆಳೆದುಬಂದಿದೆ.
ಪ್ರಸಕ್ತ ಸಾಲಿನಲ್ಲಿ ಮಾರ್ಚ್ 4ರಿಂದ 8ರವರೆಗೆ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವವು ನಡೆಯಲಿದೆ. ಈ ಪವಿತ್ರ ಕಾರ್ಯಕ್ರಮದ ಪ್ರಯುಕ್ತ, ಶ್ರೀ ಕ್ಷೇತ್ರ ಬಪ್ಪನಾಡು ಹಾಗೂ ದೇವಳದ ಒಂಬತ್ತು ಮಾಗಣೆಯ ಭಕ್ತವೃಂದದ ವತಿಯಿಂದ ಹಸಿರು ವಾಣಿ ಹೊರೆ ಕಾಣಿಕೆಯನ್ನು ಮಾರ್ಚ್ 6ರಂದು ಅರ್ಪಿಸಲು ನಿರ್ಧರಿಸಲಾಗಿದೆ.
ಈಗಾಗಲೇ ಶ್ರೀ ಕ್ಷೇತ್ರ ಬಪ್ಪನಾಡಿನಲ್ಲಿ ಹೊರೆ ಕಾಣಿಕೆಯನ್ನು ಸ್ವೀಕರಿಸಲು ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಮಾರ್ಚ್ 6ರಂದು ಸಂಜೆ 4 ಗಂಟೆಗೆ ಶ್ರೀ ಬಪ್ಪನಾಡು ಕ್ಷೇತ್ರದಿಂದ ಸಸಿಹಿತ್ಲು ಭಗವತಿ ಕ್ಷೇತ್ರದವರೆಗೆ ಭವ್ಯ ಮೆರವಣಿಗೆಯ ಮೂಲಕ ಸಾಗಿ ಹಸಿರು ವಾಣಿ ಹೊರೆ ಕಾಣಿಕೆಯನ್ನು ಸಮರ್ಪಿಸಲಾಗುವುದು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
ಸಮಸ್ತ ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಾಯಿಯ ಕೃಪೆಗೆ ಪಾತ್ರರಾಗಬೇಕೆಂದು ಹಾಗೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಡಳಿತ ಮಂಡಳಿ, ಶ್ರೀ ಕ್ಷೇತ್ರ ಬಪ್ಪನಾಡು ದೇವಸ್ಥಾನ ಮತ್ತು 9 ಮಾಗಣೆಯ ಸರ್ವ ಭಕ್ತವೃಂದ ವಿನಂತಿಸಿದ್ದಾರೆ.




