
ಭಕ್ತರಿಂದ ನಿರೀಕ್ಷೆಗೂ ಮೀರಿ ಭಗವತೀ ಮಾತೆಗೆ ಶ್ರಮದಾನ ನಡೆದಿದೆ – ಚಂದ್ರಶೇಖರ ಬೆಳ್ಚಡ
ಮಂಗಳೂರು : ಸಸಿಹಿತ್ಲು ಶ್ರೀ ಭಗವತೀ ಮಾತೆಯ ಸೇವೆ ಮಾಡುವ ಅವಕಾಶ ದೊರೆತ ಬಳಿಕ ಕೇವಲ ಕೆಲವೇ ತಿಂಗಳ ಅವಧಿಯಲ್ಲಿ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದ ತಯಾರಿ ನಡೆದಿದ್ದು ಈ ಸಲ ಅವಧಿಗೆ ಸರಿಯಾಗಿ ೧೨ ವರ್ಷಗಳ ನಂತರ ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಬ್ರಹ್ಮಕಲಶ ನಡೆಯುತ್ತಿದೆ. ಇದಕ್ಕೆ ಊರ ಪರವೂರ ಭಕ್ತಾದಿಗಳ ಸಹಕಾರ ಪ್ರೋತ್ಸಾಹವೂ ಮುಖ್ಯ ಕಾರಣ. ಹಗಲು ರಾತ್ರಿಯೆನ್ನದೆ ಭಕ್ತರು ತಮ್ಮ ದಿನ ನಿತ್ಯದ ಕೆಲಸದಿಂದ ಆಗಮಿಸಿ ಭಗವತೀ ಮಾತೆಯ ಸೇವೆ ಮಾಡಿದ್ದು ಇಲ್ಲಿ ನಿರೀಕ್ಷೆಗೂ ಮೀರಿ ಶ್ರಮದಾನ ನಡೆದಿದೆ ಎಂದು ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ಗಂಪಮನೆ ಕಟೀಲು ಚಂದ್ರಶೇಖರ ಬೆಳ್ಚಡ ನುಡಿದರು.

ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಾರಂಭದ ದ್ವಿತೀಯ ದಿನವಾದ ಮಾರ್ಚ್ 5 ರಂದು ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಮಾತನಾಡಿದ ಅವರು ರಜಾ ದಿನದಂದು ಆರುನೂರಕ್ಕಿಂತಲೂ ಅಧಿಕ ಭಕ್ತರು ತಡರಾತ್ರಿ ತನಕ ಕ್ಷೇತ್ರದಲ್ಲಿ ಶ್ರಮದಾನ ಮಾಡಿ ಮಾತೆ ಭಗವತಿಯ ಕೃಪೆಗೆ ಪಾತ್ರರಾಗಿದ್ದಾರೆ. ಬ್ರಹ್ಮಕಲಶೋತ್ಸವ ನಿಮಿತ್ತ ಭಕ್ತರಿಂದ ದೊಡ್ಡ ಮಟ್ಟದಲ್ಲಿ ಹೊರೆಕಾಣಿಕೆ ಸಮರ್ಪಣೆಗೊಂಡಿದ್ದು ಇಲ್ಲಿ ದಿನ ನಿತ್ಯ ಅನ್ನ ಸಂತರ್ಪಣೆ ಮಾಡುದಕ್ಕೂ ಅಸಾಧ್ಯವಾಗದು. ದೇವಸ್ಥಾನದಲ್ಲಿ ಈಗಾಗಲೇ ಹಲವಾರೂ ಅಭಿವೃದ್ದಿ ಕಾರ್ಯ ನಡೆದಿದ್ದು ಬ್ರಹ್ಮಕಲಶೋತ್ಸವದಂದು ಸಾವಿರಕ್ಕೂ ಮಿಕ್ಕಿ ವಾಹನ ಪಾರ್ಕ್ ಮಾಡುವ ಅವಕಾಶವನ್ನು ಕಲ್ಪಿಸಿದ್ದೇವೆ. ಎಲ್ಲಾ ಕಾರ್ಯಗಳು ಸುಗಮವಾಗಿ ಸಾಗಲು ಸಾವಿರಕ್ಕಿಂತಲೂ ಅಧಿಕ ಸದಸ್ಯರಿರುವ ೨೪ ಉಪಸಮಿತಿಗಳನ್ನು ಸ್ಥಾಪಿಸಿದ್ದೇವೆ ಎನ್ನುತ್ತಾ ಕಾರ್ಯಕ್ರಮಕ್ಕೆ ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ನತೆ ಸಮರ್ಪಿಸಿದರು. ಅಧೀರ್ ಬಜ್ಪೆ ಯವರ ಪ್ರಾರ್ಥನೆಯೊಂದಿಗೆ ವೇದಿಕೆಯ ಗಣ್ಯರು ಸ್ವಾಮೀಜಿಯವರೊಂದಿಗೆ ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆಯಿತ್ತರು.

ವೇದಿಕೆಯಲ್ಲಿ ಇತರ ಗಣ್ಯರೊಂದಿಗೆ ವಾಮನ್ ಇಡ್ಯಾ, ರಮೇಶ್ ಬಂಗೇರ ಕರಿತೋಟ, ನವೀನ್ ಚಂದ್ರ ಡಿ ಸುವರ್ಣ, ವೇದಪ್ರಕಾಶ್ ಶ್ರೀಯಾನ್, ಪ್ರಭಾಕರ ಪೂಜಾಗಿ, ನಂದಕುಮಾರ್ ವೇಲಾಯುದನ್ ಪಿಳ್ಳೆ, ವಿಶ್ವನಾಥ್ ಬೆಳ್ಚಡ ಪಂದು ಬೆಟ್ಟು ಆದಿಉಡುಪಿ, ವಿಜಯ ಗುರೂಜಿ, ಎಚ್ ಭಾಸ್ಕರ್ ಸಾಲ್ಯಾನ್, ಮಧುಸೂದನ ಎಂ. ಪ್ರಕಾಶ್ ನಿಸರ್ಗ, ನಾರಾಯಣ ಸುವರ್ಣ, ಉಮೇಶ್ ಬಂಗೇರ ಮಾಡುರು, ವಿಶ್ವನಾಥ ಕುದ್ರು ಕನಿಲ, ಪದ್ಮನಾಭ ಕಡಪ್ಪರ ಕನಿಲ, ಗೀತಾ ಪಿ ಕುಮಾರ್, ಕಸ್ತೂರಿ ಪಂಜಾ, ರಾಮ ಶೆಟ್ಟಿಗಾರ್ ಪೆರ್ಮುದೆ, ಪದ್ಮನಾಭ ಆರ್ ಪೂಜಾರಿ, ಚಿತ್ತರಂಜನ್, ಗುರುರಾಜ್ ಮಲ್ಲಿಗೆಗುಡ್ಡೆ, ಸುರೇಶ್ ಕೆ ಬಂಗೇರ, ಯಮುನಾ, ಸಂತೋಶ್ ಗುಜರನ್, ಮೋಹನ್ ಶೆಟ್ಟಿಗಾರ್, ನಿಶಾಂತ್ ಕೆಳಂಜೂರು, ಧೀರಜ್ ಶ್ರೀಯಾನ್ ಉಪಸ್ಥಿತರಿದ್ದರು.

ಬೆಳಿಗ್ಗೆ ಶ್ರೀ ಕ್ಷೇತ್ರದಲ್ಲಿ ಪೂರ್ಣ ನವಗ್ರಹ ಹೋಮ, ಮೃತ್ಯುಂಜಯ ಹೋಮ, ಗಣಯಾಗ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಭುವರಾಹ ಹೋಮ, ದಿಕ್ಷಾಲಕರ ಹೋಮ, ನಾಗ ಸನ್ನಿಧಿಯಲ್ಲಿ ಅಶ್ಲೇಷಾ ಬಲಿ, ಅಯುತ ಕದಳೀಯಾಗದ ಪ್ರಯುಕ್ತ ಅಗ್ನಿಜನನ. ಕಟೀಲು ಕ್ಷೇತ್ರದ ವೇದಮೂರ್ತಿ ಶ್ರೀ ಹರಿನಾರಾಯಣದಾಸ ಆಸ್ರಣ್ಣರು ದೀಪ ಪ್ರಜ್ವಲಿಸಿ ಮಾತನಾಡಿದರು. ಚಿತ್ರಪುರ ಮಠದ ಶ್ರೀ ವಿದ್ಯೆಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಕನಿಲ ಭಗವತೀ ಕ್ಷೇತ್ರದ ಮಂಜಪ್ಪ ಕಾರ್ನವರು ಮತ್ತು ದೇರುನ್ಹಿ ಕಾರ್ನವರು, ಬೊಲ್ನಾಡು ಭಗವತೀ ಕ್ಷೇತ್ರದ ಚಂದ್ರಶೇಖರ ಕಾರ್ನವರು ಇವರಿಗೆ ವಿಶೇಷ ಗೌರವಾರ್ಪಣೆ ಮತ್ತು ಸಸಿಹಿತ್ಲು ರಮೇಶ್ ಸಲಿಲ್ ಇವರಿಗೆ ಗೌರಾರ್ಪಣೆ ನಡೆಯಿತು. ಕಲಾವತಿ ಪ್ರೇಮ್ ನಾಥ್ ಬಳಗದವರಿಂದ ಗಾನಸುಧೆ, ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್, ಮಂಜೇಶ್ವರ ಇವರಿಂದ ತುಳು ನಾಟಕ “ಜೈ ಭಜರಂಗಬಲಿ” ಪ್ರದರ್ಶನ ನಡೆಯಿತು.

ಮಾರ್ಚ್ 4 ರಂದು ಬ್ರಹ್ಮಕಲಶೋತ್ಸವದ ಮೊದಲ ದಿನ ಭವ್ಯ ಹಸಿರು ಶೋಭಾಯಾತ್ರೆ ಹಾಗೂ ಅಪಾರ ಸಂಖ್ಯೆಯಲ್ಲಿ ಸಮರ್ಪಿಸಲಾದ ಹೋರಕಾಣಿಕೆಗಳಿಂದ ದೇವಸ್ಥಾನದ ವಾತಾವರಣವು ಭಕ್ತಿಭಾವದಿಂದ ಕಂಗೊಳಿಸಿತು. ಬೆಳಿಗ್ಗೆ ಋತ್ವಿಜರ ಸ್ವಾಗತ, ಮಹಾ ಪ್ರಾರ್ಥನೆ, ಪಂಚಗವ್ಯ, ಪುಣ್ಯಾಹ ನಾಂದಿ, ಅರಣೀಮಥನ, ದ್ವಾದಶ ನಾರೀಕೇಳ ಗಣಯಾಗ, ತೋರಣ ಮುಹೂರ್ತ ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣರಿಂದ ಉಗ್ರಾಣ ಮುಹೂರ್ತ ನಡೆಯಿತು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಸಂಜೆ ವಾಸ್ತು ಪೂಜೆ, ವಾಸ್ತು ಬಲಿ, ಪ್ರಸಾದ ಶುದ್ದಿ, ವಾಸ್ತು ಹೋಮ, ರಾಕ್ಷೋಘ್ಹ್ನ ಹೋಮ ಹಾಗೂ ಕದಿಕೆ ಭಂಡಾರ ಮಂದಿರದಿಂದ ಭಂಡಾರ ಆಗಮನ ನಂತರ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ವಾಮನ ಇಡ್ಯಾ ಇವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ಓಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಮತ್ತು ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಪ್ರಸಾದ್ ಶೆಟ್ಟಿ, ಹಳೆಯಂಗಡಿ ಗ್ರಾಪಂ ಅಧ್ಯಕ್ಷೆ ಪೂರ್ಣಿಮ, ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ, ಬಪ್ಪನಾಡು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಪಡುಪಣಂಬೂರು ಗ್ರಾಪಂ ಮಾಜೀ ಅಧ್ಯಕ್ಷೆ ಕುಸುಮಾ , ಸಸಿಹಿತ್ಲು ಕದಿಕೆ ಮೊಗವೀರ ಮಹಾಸಭಾದ ಕಿಶೋರ್ ಗುರಿಕಾರ, ಮುಲ್ಕಿ ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘದ ಅಧ್ಯಕ್ಷ ಜಗನ್ನಾಥ ಕೋಟ್ಯಾನ್, ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಅಣ್ಣಪ್ಪ ದೇವಾಡಿಗ, ಮಂಗಳೂರು ಶ್ರೀ ಭಗವತೀ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಅಧ್ಯಕ್ಷ ಬಿ. ಮಾಧವ, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಚಿದಾನಂದ ಗುರಿಕಾರ, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಆಡಳಿತ ಮೊಕ್ತಸರ ಶ್ರೀ ಸುರೇಶ್ ಭಟ್ನಗರ, ಲ. ಯಾದವ ದೇವಾಡಿಗ ಉಪಸ್ತಿತರಿದ್ದರು. ಶ್ರೀ ಭಗವತೀ ಕ್ಷೇತ್ರ ಉಳ್ಳಾಲದ ರವಿ ಯಾನೆ ಕಂಡಪ್ಪ ಕಾರ್ನವರು ಮತ್ತು ಬಾಲಕೃಷ್ಣ ಯಾನೆ ಮಂಜಪ್ಪ ಕಾರ್ನವರು, ಶ್ರೀ ಭಗವತಿ ಕ್ಷೇತ್ರ ಅಡ್ಕ ಮಂಗಲಪಾಡಿಯ ಕೃಷ್ಣ ಕಾರ್ನವರು, ಸುಬ್ರಹ್ಮಣ್ಯ ಭಟ್ ಸಸಿಹಿತ್ಲು ವರಿಗೆ ವಿಶೇಷ ಗೌರವಾರ್ಪಣೆ ಮತ್ತು ಶ್ರೀಮತಿ ವೀಣಾ ಸಸಿಹಿತ್ಲು ಮತ್ತು ರಾಘು ಪೂಜಾರಿ ಇವರಿಗೆ ಗೌರವಾರ್ಪಣೆ ನಡೆಯಿತು.
ನವೀನ್ ಶೆಟ್ಟಿ ಎಡ್ಡೆಮಾರ್ ಸ್ವಾಗತಿಸಿದರು ಪ್ರವೀಣ್ ಎಸ್. ಕುಂಪಲ ನಿರೂಪಿಸಿ ಧನ್ಯವಾದ ಅರ್ಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಕೇಳ ಸುಧಾಕರ ಮತ್ತು ಬಳಗ ಮಂಗಳಾದೇವಿ ರವರಿಂದ ಸ್ಯಾಕ್ರೋಫೋನ್ ವಾದನ, ಶ್ರೀ ಶಿರಿಡಿ ಸಾಯಿಬಾಬ ಮಂದಿರ ಆಶ್ರಿತ ಸಾಯಿ ಶಕ್ತಿ ಕಲಾಬಳಗ ಅರ್ಪಿಸುವ ತುಳು ಪೌರಾಣಿಕ ನಾಟಕ ಬೊಳ್ಳಿ ಮಲೆತ ಶಿವಶಕ್ತಿಲು ನಡೆಯಿತು.
ಚಿತ್ರ/ವರದಿ : ಈಶ್ವರ ಎಂ. ಐಲ್




