ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ ಕಲೇಸಂ: ಕೊಡಮಾಡುವ 2025ನೆಯ ಸಾಲಿನ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಏ. 9ರಂದು ನಯನ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷೆ ಡಾ. ಆರ್. ಸುನಂದಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕವಿಯಾಗಿ, ಕಥೆಗಾರರಾಗಿ, ಅಂಕಣಕಾರರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವ ಅನಿತಾ ಅವರು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನು ಪ್ರಥಮ ರ್ಯಾಂಕ್ನೊಂದಿಗೆ ಪಡೆಯುವುದರ ಮೂಲಕ ಎಂ.ಬಿ.ಕುಕ್ಯಾನ್ ಬಂಗಾರದ ಪದಕದ ಅರ್ಹತೆಯನ್ನು ಸಾಧಿಸಿದ್ದಾರೆ. ಇವರು 2019ರಲ್ಲಿ ಮೈಸೂರು ಅರಮನೆಯ ವಿಶ್ವವಿಖ್ಯಾತ ದಸರಾ ಕವಿಗೋಷ್ಠಿಯಲ್ಲೂ ಭಾಗವಹಿಸಿ ಗೌರವ ಪುರಸ್ಕಾರವನ್ನು ಪಡೆದಿದ್ದಾರೆ.
ಇವರ ಒಂಬತ್ತು ಕೃತಿಗಳು ಲೋಕಾರ್ಪಣೆಗೊಂಡಿವೆ. ಪಿಎಚ್.ಡಿ ಕೋರ್ಸ್ ವರ್ಕ್ ನ ಸಲುವಾಗಿ ಜಯ ಸಿ. ಸುವರ್ಣರ ಕುರಿತು ಸಿದ್ಧಪಡಿಸಿದ ‘ಸುವರ್ಣಯುಗ’ ಶೋಧ ಪ್ರಬಂಧಕ್ಕೆ ಮುಂಬಯಿ ವಿಶ್ವವಿದ್ಯಾಲಯದ ವತಿಯಿದ ಸಂಶೋಧಕಿ ಡಾ.ಲೀಲಾ ಬಿ. ಅವರು ಕೊಡಮಾಡುವ ‘ಶೋಧಸಿರಿ’ ಪುರಸ್ಕಾರ, ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನದ ವತಿಯಿಂದ ವಿಕಾಸ ಪುಸ್ತಕ ಬಹುಮಾನ ಲಭಿಸಿದೆ. ನಿವಾಳಿಸಿಬಿಟ್ಟ ಕೋಳಿ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕೊಡಮಾಡುವ 2022ನೆಯ ಸಾಲಿನ ಕೆ. ವಸುದೇವಾಚಾರ್ಯ ದತ್ತಿ ಪ್ರಶಸ್ತಿ, ಮಾಣಿಕ್ಯ ಪ್ರಕಾಶನ ಹಾಸನದಿಂದ ‘ಪದ್ಮಾವತಿ ವೆಂಕಟೇಶ ದತ್ತಿ ಪುರಸ್ಕಾರ’ ಲಭಿಸಿದೆ. ‘ಮೋಹನ ತರಂಗ’ ಕೃತಿಗೆ 2019-20ನೆಯ ಸಾಲಿನ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಗದು ಪುರಸ್ಕಾರ ಪ್ರಾಪ್ತಿಯಾಗಿದೆ.
“ಅಂತರಂಗದ ಮೃದಂಗ”ದ ಹಸ್ತಪ್ರತಿಗೆ, ಜಗಜ್ಯೋತಿ ಕಲಾವೃಂದ ಮುಂಬಯಿ ವತಿಯಿಂದ “ಶ್ರೀಮತಿ ಸುಶೀಲಾ ಎಸ್ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ” ಹಾಗೂ “ಜನಸ್ಪಂದನ ಟ್ರಸ್ಟ್(ರಿ) ಸುವ್ವಿ ಪಬ್ಲಿಕೇಷನ್ಸ್, ಶಿಕಾರಿಪುರ” ಕೊಡಮಾಡುವ “ಅಲ್ಲಮ ಸಾಹಿತ್ಯ ಪ್ರಶಸ್ತಿ” ಲಭಿಸಿದೆ. 2025ರಲ್ಲಿ ಚೆಂಬೂರು ಕರ್ನಾಟಕ ಸಂಘದ ವತಿಯಿಂದ ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಕ ಪ್ರಶಸ್ತಿ ಲಭಿಸಿದೆ.
ಮಹಿಳಾ ಸಾಹಿತ್ಯ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದ ಸಂಕಲನಗಳಲ್ಲಿಯೂ ಇವರ ಕವಿತೆಗಳು ಪ್ರಕಟಗೊಂಡಿವೆ. ಅನಿತಾ ಅವರ ಸಾಹಿತ್ಯ ಸಾಧನೆಗೆ ಹಲವಾರು ಪುರಸ್ಕಾರಗಳು ಲಭಿಸಿವೆ. ಇವರು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಡಾ. ಜಿ.ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ) ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರುವ ಇವರು ಸ್ವಿಟ್ಜರ್ಲ್ಯಾಂಡ್ ನ ಜ್ಯೂರಿಚ್ ಯೂನಿವರ್ಸಿಟಿಯಲ್ಲಿ ಸಹಾಯಕ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.




