
ಮುಂಬಯಿ: ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಆಯೋಜನೆಯಲ್ಲಿ ಲೇಖಕ, ನ್ಯಾಯವಾದಿ ಪ್ರಭಾಕರ ದೇವಾಡಿಗ ಆರೂರು ಅವರ ಚೊಚ್ಚಲ ಕೃತಿ ‘ಲಲಿತ ರಂಗ ಗುಣನಾಯಕ’ (ಗುಣಪಾಲ ಉಡುಪಿ ಅವರ ಬದುಕು-ಬರಹ) ಇದರ ಲೋಕಾರ್ಪಣಾ ಕಾರ್ಯಕ್ರಮವು ಮಾರ್ಚ್ 20ರ ಶುಕ್ರವಾರದಂದು ನಡೆಯಲಿದೆ.
ನಗರದ ಸಾಂತಾಕ್ರೂಸ್ ಪೂರ್ವದ ವಿದ್ಯಾನಗರಿ ಕಲೀನಾದಲ್ಲಿರುವ ಮುಂಬಯಿ ವಿಶ್ವವಿದ್ಯಾಲಯದ ಜೆ. ಪಿ. ನಾಯಕ್ ಭವನದಲ್ಲಿ ಮಾರ್ಚ್ 20 ರ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಈ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅಭಿಜಿತ್ ಪ್ರಕಾಶನ ಪ್ರಕಟಿಸಿರುವ ಈ ಕೃತಿಯನ್ನು ಖ್ಯಾತ ರಂಗತಜ್ಞ ಡಾ. ಭರತ್ ಕುಮಾರ್ ಪೊಲಿಪು ಬಿಡುಗಡೆ ಮಾಡಲಿದ್ದಾರೆ.
ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ಪ್ರಾಧ್ಯಾಪಕ ಪ್ರೊ. ಜಿ. ಎನ್. ಉಪಾಧ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಂಬಯಿಯ ಖ್ಯಾತ ಲೇಖಕಿ ಲತಾ ಸಂತೋಷ್ ಶೆಟ್ಟಿ ಕೃತಿ ಪರಿಚಯ ಮಾಡಲಿದ್ದು, ಮುಂಬಯಿಯ ಖ್ಯಾತ ಭಾಗವತರಾದ ಜಯಲಕ್ಷ್ಮಿ ದೇವಾಡಿಗ ಅವರು ಯಕ್ಷಗಾನ ಪದ್ಯಗಳ ಪ್ರಸ್ತುತಿ ನೀಡಲಿದ್ದಾರೆ. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಸುಧಾಕರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಲಿದ್ದಾರೆ.

ಸತತ ಪರಿಶ್ರಮ ಮತ್ತು ಸಾಧನೆಯ ಪ್ರತಿರೂಪ: ನ್ಯಾಯವಾದಿ ಪ್ರಭಾಕರ ದೇವಾಡಿಗ
ಮುಂಬಯಿ: ಯಾವುದೇ ಗಾಡ್ ಫಾದರ್ ಇಲ್ಲದೆ, ಕೇವಲ ಸ್ವ-ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದ ಮುಂಬಯಿಯಂತಹ ಮಹಾನಗರದಲ್ಲಿ ಗುರುತಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೆ, ಉಡುಪಿ ಜಿಲ್ಲೆಯ ಆರೂರಿನಿಂದ ಬರಿಗೈಲಿ ಬಂದು, ಇಂದು ಮುಂಬಯಿ ಕನ್ನಡಿಗರ ವಲಯದಲ್ಲಿ ಚಿರಪರಿಚಿತರಾಗಿರುವ ಪ್ರಭಾಕರ ದೇವಾಡಿಗ ಅವರ ಜೀವನ ಯುವ ಪೀಳಿಗೆಗೆ ಒಂದು ದೊಡ್ಡ ಪ್ರೇರಣೆ.
1979ರಲ್ಲಿ ಉದ್ಯೋಗದ ಹುಡುಕಾಟದಲ್ಲಿ ಮುಂಬಯಿಗೆ ಆಗಮಿಸಿದ ಪ್ರಭಾಕರ ಅವರು, ಹಗಲು ಕೆಲಸ ಮಾಡುತ್ತಾ ರಾತ್ರಿ ಶಾಲೆ ಮತ್ತು ಕಾಲೇಜುಗಳಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಿದರು. ಬಿ.ಕಾಂ. ಪದವಿ ಮುಗಿಸಿದ ನಂತರ ಪತ್ರಿಕೋದ್ಯಮದತ್ತ ಆಕರ್ಷಿತರಾಗಿ, ನವಿ ಮುಂಬಯಿಯ ಇಂಗ್ಲಿಷ್ ವಾರಪತ್ರಿಕೆಯೊಂದರಲ್ಲಿ ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದರು. ಜ್ಞಾನದ ಹಸಿವು ಅಲ್ಲಿಗೆ ನಿಲ್ಲಲಿಲ್ಲ; ಕಾನೂನು ಪದವಿ (LL.B) ಪಡೆದು ಯಶಸ್ವಿ ವಕೀಲರಾಗಿ ಹೊರಹೊಮ್ಮಿದರು. ವಕೀಲ ವೃತ್ತಿಯ ನಡುವೆಯೂ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ಎಂ.ಎ. ಪದವಿಯನ್ನು ಪೂರ್ಣಗೊಳಿಸಿರುವುದು ಅವರ ಸಾಹಿತ್ಯ ಪ್ರೇಮಕ್ಕೆ ಸಾಕ್ಷಿ.
ಕಳೆದ ನಾಲ್ಕೂವರೆ ದಶಕಗಳಿಂದ ಮುಂಬಯಿಯಲ್ಲಿ ನೆಲೆಸಿರುವ ಇವರು ಕೇವಲ ವೃತ್ತಿಗಷ್ಟೇ ಸೀಮಿತವಾಗದೆ, ಸಾಮಾಜಿಕ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನವಿಮುಂಬಯಿ ಕನ್ನಡ ಸಂಘ ಮತ್ತು ದೇವಾಡಿಗ ಸಂಘ ಮುಂಬಯಿಯಂತಹ ಪ್ರಮುಖ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದ್ದಾರೆ. ನ್ಯೂ ಸಿಟಿ ಜರ್ನಲಿಸ್ಟ್ ಅಸೋಸಿಯೇಷನ್ ಮತ್ತು ಜೈ ಅಂಬೇ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜದ ವಿವಿಧ ಸ್ತರದ ಜನರಿಗೆ ಸ್ಪಂದಿಸುತ್ತಿದ್ದಾರೆ. ಇವರ ನಿರಂತರ ಸಮಾಜ ಸೇವೆಯನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.
ಪ್ರಭಾಕರ ದೇವಾಡಿಗ ಅವರು ಕೇವಲ ಅಕ್ಷರ ಮತ್ತು ಕಾನೂನು ಲೋಕದವರಲ್ಲ, ಅವರು ಒಬ್ಬ ನುರಿತ ಕಲಾವಿದರೂ ಹೌದು. ಬಾಲ್ಯದಲ್ಲಿ ಪೇತ್ರಿ ಘೋರ್ಪಡೆ ಭಾಗವತರಿಂದ ಬಡಗುತಿಟ್ಟು ಯಕ್ಷಗಾನದ ನಾಟ್ಯ ಕಲಿತ ಇವರು, ನಂತರ ಗುರು ಸದಾನಂದ ಶೆಟ್ಟಿಯವರಿಂದ ತೆಂಕುತಿಟ್ಟು ಶೈಲಿಯನ್ನೂ ಅಭ್ಯಸಿಸಿದರು. ಪ್ರಸಿದ್ಧ ಭಾಗವತರಾದ ನಿಡ್ವಣ್ಣಾಯ ಮತ್ತು ರಾಮ ಸಾಲ್ಮಾನ್ ಅವರ ಮಾರ್ಗದರ್ಶನದಲ್ಲಿ ಭಾಗವತಿಕೆಯನ್ನೂ ಮೈಗೂಡಿಸಿಕೊಂಡಿದ್ದಾರೆ. ಭಜನೆ ಮತ್ತು ಯಕ್ಷಗಾನದ ಮೂಲಕ ಸಾಂಸ್ಕೃತಿಕ ಲೋಕದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಒಟ್ಟಾರೆಯಾಗಿ, ವಕೀಲರಾಗಿ, ಪತ್ರಕರ್ತರಾಗಿ, ಸಂಘಟಕರಾಗಿ ಮತ್ತು ಕಲಾವಿದರಾಗಿ ಬಹುಮುಖಿ ವ್ಯಕ್ತಿತ್ವ ಹೊಂದಿರುವ ಪ್ರಭಾಕರ ದೇವಾಡಿಗ ಅವರು ಮುಂಬಯಿ ಕನ್ನಡಿಗರ ಹೆಮ್ಮೆಯ ಸಾಧಕರಾಗಿದ್ದಾರೆ.
ಈ ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಪಾಲ್ಗೊಳ್ಳುವಂತೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ಲೇಖಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.




