27.1 C
Mumbai
July 5, 2026
Mumbai News Kannada
ಕ್ರೀಡೆ

ರಾಜಸ್ತಾನ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಐತಿಹಾಸಿಕ ಐಪಿಎಲ್ ದಾಖಲೆ: ಲಕ್ನೋ ವಿರುದ್ಧ ರಾಜಸ್ತಾನಕ್ಕೆ ಭರ್ಜರಿ ಜಯ





ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ರಾಜಸ್ತಾನ ತಂಡದ 15 ವರ್ಷದ ಉದಯೋನ್ಮುಖ ಆಟಗಾರ ವೈಭವ್ ಸೂರ್ಯವಂಶಿ ಐತಿಹಾಸಿಕ ಸಾಧನೆ ಮಾಡುವ ಮೂಲಕ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ. ಲಕ್ನೋ ನೀಡಿದ 221 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಜಸ್ತಾನ ರಾಯಲ್ಸ್ ತಂಡ 19.1 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 225 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ರಾಜಸ್ತಾನ ಪರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್ ಸೂರ್ಯವಂಶಿ ಕೇವಲ 38 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಿತ 93 ರನ್ ಚಚ್ಚಿ ತಂಡದ ಗೆಲುವಿನ ರೂವಾರಿಯಾದರು. ಈ ಅದ್ಭುತ ಇನ್ನಿಂಗ್ಸ್ ಮೂಲಕ ಸೂರ್ಯವಂಶಿ ಹಲವು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ವೈಭವ್ ಸೂರ್ಯವಂಶಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಂದೇ ಸೀಸನ್‌ನಲ್ಲಿ 50 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೈಲಿಗಲ್ಲಿನ ಮೂಲಕ ಅವರು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಎಂಎಸ್ ಧೋನಿ ಮತ್ತು ಕೆಎಲ್ ರಾಹುಲ್ ಸೇರಿದಂತೆ ಭಾರತದ ಪ್ರಮುಖ ಸ್ಟಾರ್ ಬ್ಯಾಟರ್‌ಗಳನ್ನು ಹಿಂದಿಕ್ಕಿದ್ದಾರೆ. ಅಂತೆಯೇ ಹಾಲಿ ಐಪಿಎಲ್ ಸೀಸನ್‌ನಲ್ಲಿ ಫಿನ್ ಅಲೆನ್ ನಂತರ ಒಂದೇ ಸೀಸನ್‌ನಲ್ಲಿ ಎರಡು ಬಾರಿ 10ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೂ ಅವರು ಭಾಜನರಾಗಿದ್ದಾರೆ.
ಇಂದಿನ ಸ್ಮರಣೀಯ ಬ್ಯಾಟಿಂಗ್ ಪ್ರದರ್ಶನದ ಮೂಲಕ ವೈಭವ್ ಸೂರ್ಯವಂಶಿ ಮತ್ತೊಂದು ಅಪರೂಪದ ಹಿರಿಮೆಗೆ ಪಾತ್ರರಾಗಿದ್ದಾರೆ. ಒಂದೇ ಐಪಿಎಲ್ ಸೀಸನ್‌ನಲ್ಲಿ 500ಕ್ಕೂ ಅಧಿಕ ರನ್ ಸಿಡಿಸಿದ ಆಟಗಾರರ ಪೈಕಿ ಗರಿಷ್ಠ ಸ್ಟ್ರೈಕ್ ರೇಟ್ ಹೊಂದಿರುವ ಜಗತ್ತಿನ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ವೈಭವ್ ಹಾಲಿ ಐಪಿಎಲ್ ಸೀಸನ್‌ನಲ್ಲಿ ಬರೋಬ್ಬರಿ 236.3 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಪಟ್ಟಿಯಲ್ಲಿ 2019ರಲ್ಲಿ 204.8 ಸ್ಟ್ರೈಕ್ ರೇಟ್ ಹೊಂದಿದ್ದ ಆಂಡ್ರೆ ರಸೆಲ್ ಎರಡನೇ ಸ್ಥಾನದಲ್ಲಿದ್ದರೆ, ಅಭಿಷೇಕ್ ಶರ್ಮಾ (202.0), ನಿಕೋಲಸ್ ಪೂರನ್ (196.2) ಹಾಗೂ ಟ್ರಾವಿಸ್ ಹೆಡ್ (191.5) ನಂತರದ ಸ್ಥಾನಗಳಲ್ಲಿದ್ದಾರೆ.
ಒಂದೇ ಐಪಿಎಲ್ ಸೀಸನ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಆಟಗಾರರ ಪೈಕಿ ಪ್ರಸ್ತುತ ಸೂರ್ಯವಂಶಿ ಜಂಟಿ ಎರಡನೇ ಸ್ಥಾನಕ್ಕೇರಿದ್ದಾರೆ. ಇಂದು ಲಕ್ನೋ ವಿರುದ್ಧ ಸಿಡಿಸಿದ ಸಿಕ್ಸರ್‌ಗಳೂ ಸೇರಿದಂತೆ ಹಾಲಿ ಸೀಸನ್‌ನಲ್ಲಿ ಅವರ ಒಟ್ಟು ಸಿಕ್ಸರ್‌ಗಳ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. 2012ರಲ್ಲಿ 59 ಸಿಕ್ಸರ್ ಬಾರಿಸಿದ್ದ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಆಂಡ್ರೆ ರಸೆಲ್ (52) ಮತ್ತು ಜೋಸ್ ಬಟ್ಲರ್ (45) ಸೂರ್ಯವಂಶಿ ಅವರ ನಂತರದ ಸ್ಥಾನಗಳಲ್ಲಿದ್ದಾರೆ. ಇದರೊಂದಿಗೆ ಐಪಿಎಲ್ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಬಾರಿ 10ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿದ ಎರಡನೇ ಆಟಗಾರ ಎಂಬ ಹಿರಿಮೆಗೂ ವೈಭವ್ ಪಾತ್ರರಾಗಿದ್ದಾರೆ. ಕ್ರಿಸ್ ಗೇಯ್ಲ್ ನಾಲ್ಕು ಬಾರಿ ಈ ಸಾಧನೆ ಮಾಡಿದ್ದರೆ, ವೈಭವ್ ಸೂರ್ಯವಂಶಿ ಮೂರು ಬಾರಿ ಈ ಮೈಲಿಗಲ್ಲು ತಲುಪಿದ್ದು, ಅಭಿಷೇಕ್ ಶರ್ಮಾ ಮತ್ತು ಫಿನ್ ಅಲೆನ್ ತಲಾ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ತಮ್ಮ ಅಪ್ರತಿಮ ಪವರ್ ಹಿಟ್ಟಿಂಗ್ ಸಾಮರ್ಥ್ಯದ ಮೂಲಕ ನಿರಂತರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಸೂರ್ಯವಂಶಿ, ಐಪಿಎಲ್‌ನಲ್ಲಿ ಭಾರತೀಯ ಬ್ಯಾಟರ್‌ಗಳ ಆಕ್ರಮಣಕಾರಿ ಆಟದ ಹೊಸ ಯುಗದ ಸಂಕೇತವೆಂದು ಕ್ರಿಕೆಟ್ ವಿಶ್ಲೇಷಕರು ಶ್ಲಾಘಿಸಿದ್ದಾರೆ.



Related posts

ಮೂಡುಬಿದಿರೆ – ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಮತ್ತು ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊದ ಆಯೋಜನೆಯಲ್ಲಿ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ ಸ್ಪರ್ಧೆ : ಪ್ರಿನ್ಸೆಸ್ ಆಫ್ ಕರಾವಳಿ 2025 ಆಗಿ ವಿಯಾ ಸಾಯಿ ಆಯ್ಕೆ

Mumbai News Desk

ಭಾರತ – ಇಂಗ್ಲೆಂಡ್ 5ನೇ ಟೆಸ್ಟ್ : 6 ರನ್ ಗಳ ರೋಚಕ ಜಯಗಳಿಸಿದ ಭಾರತ, ಅಂಡರ್ಸನ್- ತೆಂಡೂಲ್ಕರ್ ಟ್ರೋಫಿ ಸಮಬಲ

Mumbai News Desk

ಬಹುಮುಖ ಪ್ರತಿಭೆಯ ಬಾಲ ಪ್ರತಿಭೆ ಬೆಳ್ತಂಗಂಡಿಯ ಶ್ರೇಯಸ್ ಯೋಗೇಶ್ ಪೂಜಾರಿ.

Mumbai News Desk

ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್: ಥಾಣೆಯ ಆರೋಹಿ ಎಸ್ ಪೂಜಾರಿಗೆ ಚಿನ್ನ ಮತ್ತು ಕಂಚಿನ ಪದಕಗಳ ಸಾಧನೆ

Mumbai News Desk

ಕಾಂದಿವಲಿ ಪಶ್ಚಿಮದ ರಂಜಿತ್ ಪೂಜಾರಿಗೆ ವಿಶ್ವ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ (ಮೀರಾ-ಭಾಯಂದರ್ ಶಾಖೆ): ಕ್ರೀಡಾಕೂಟ – 2026 ಸಂಭ್ರಮ

Mumbai News Desk