ನವದೆಹಲಿಯ ವಸಂತ್ ಕುಂಜ್‌ನಲ್ಲಿರುವ ವೇದವ್ಯಾಸ ಗುರುಕುಲದಲ್ಲಿ 39ನೇ ಚಾತುರ್ಮಾಸ್ಯ ವ್ರತದಲ್ಲಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ವೇಳೆ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ಜನರ ಆತಂಕ ಮತ್ತು ಗೊಂದಲಗಳನ್ನು ಕಸ್ತೂರಿ ರಂಗನ್ ವರದಿ ಜಾರಿಯ ಹಿನ್ನೆಲೆಯಲ್ಲಿ ಶೀಘ್ರವಾಗಿ ನಿವಾರಿಸಲು ಆದ್ಯತೆ ನೀಡಬೇಕೆಂದು ಶ್ರೀಗಳು ಕೇಂದ್ರ ಸಚಿವರಿಗೆ ಲಿಖಿತ ಪ್ರಸ್ತಾವನೆಯ ಮೂಲಕ ಸಲಹೆ ನೀಡಿದ್ದಾರೆ. ಗುರುಕುಲಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ವೇದಘೋಷ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಬಳಿಕ ಶ್ರೀ ಕೃಷ್ಣ ದೇವರ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದ ಸಚಿವರಿಗೆ ಶ್ರೀಗಳು ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಶ್ರೀಗಳ ಪ್ರಸ್ತಾವನೆಗೆ ಧನಾತ್ಮಕವಾಗಿ ಸ್ಪಂದಿಸಿದ ಅಮಿತ್ ಶಾ, ಈ ವಿಷಯದ ಬಗ್ಗೆ ಖಂಡಿತವಾಗಿಯೂ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಈ ಸೌಹಾರ್ದಯುತ ಭೇಟಿಯ ಸಂದರ್ಭದಲ್ಲಿ ಸಂಸದರಾದ ಬಾನ್ಸುರಿ ಸ್ವರಾಜ್, ರಾಮ್‌ವೀರ್ ಸಿಂಗ್ ಬಿದೂರಿ, ಶಾಸಕರಾದ ಅನಿಲ್ ಶರ್ಮಾ, ಕೈಲಾಶ್ ಗೆಹ್ಲೋಟ್ ಸೇರಿದಂತೆ ಹಲವು ಗಣ್ಯರು ಹಾಗೂ ಮಠದ ಪ್ರಮುಖರು ಉಪಸ್ಥಿತರಿದ್ದರು.



