October 17, 2026
Mumbai News Kannada
ಮುಂಬಯಿ

ಡೊಂಬಿವಲಿಯಲ್ಲಿ ಮರಾಠಿ ಭಾಷೆಯ ಚೊಚ್ಚಲ ಯಕ್ಷಗಾನ: ಪ್ರೇಕ್ಷಕರ ಮನಗೆದ್ದ ‘ಶ್ರೀದೇವಿ ಮಹಿಷಾಸುರ ಮರ್ದಿನಿ’



ಡೊಂಬಿವಲಿ: ಕರ್ನಾಟಕದ ಕರಾವಳಿಯ ಪರಂಪರಾಗತ ಗಂಡುಕಲೆ ಯಕ್ಷಗಾನವು ಮಹಾರಾಷ್ಟ್ರದ ನೆಲದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇಲ್ಲಿನ ದತ್ತನಗರದ ಡಿ.ಎನ್.ಸಿ. ಶಾಲಾ ಮೈದಾನದಲ್ಲಿ ಡಾ. ಶ್ರೀಕಾಂತ್ ಶಿಂದೆ ಫೌಂಡೇಶನ್ ಹಾಗೂ ಶ್ರೀ ನವದುರ್ಗಾ ಯುವ ಮಂಡಳ ವತಿಯಿಂದ ಆಯೋಜಿಸಲಾದ ಶಾರದೀಯ ನವರಾತ್ರಿ ಮಹೋತ್ಸವದಲ್ಲಿ ದಕ್ಷಿಣ ಭಾರತೀಯ ತಂಡವು ಪ್ರಸ್ತುತಪಡಿಸಿದ ಮರಾಠಿ ಭಾಷೆಯ ‘ಶ್ರೀದೇವಿ ಮಹಿಷಾಸುರ ಮರ್ದಿನಿ’ ಯಕ್ಷಗಾನ ಪ್ರದರ್ಶನವು ಕಲಾಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.

ಕಲ್ಯಾಣ್–ಡೊಂಬಿವ್ಲಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮರಾಠಿ ಭಾಷೆಯಲ್ಲಿ ಯಕ್ಷಗಾನ ಪ್ರಯೋಗಗೊಂಡಿದ್ದು, ಮುಂಬಯಿ ಯಕ್ಷಗಾನ ರಂಗಭೂಮಿಯಲ್ಲಿ ಹೊಚ್ಚ ಹೊಸ ದಾಖಲೆ ಬರೆದಿದೆ. ಶ್ರೀಮತಿ ಅನುಪಮಾ ಶೆಟ್ಟಿ, ಸುಭಾಶ್ ಶೆಟ್ಟಿ ಇನ್ನಂಜೆ ಹಾಗೂ ದಕ್ಷಿಣ ಭಾರತೀಯ ವಿಭಾಗದ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆದ ಈ ವಿನೂತನ ಸಾಂಸ್ಕೃತಿಕ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.

ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಕಲೆಗಳಿಗೆ ಪ್ರೋತ್ಸಾಹ ಅಗತ್ಯ: ಸಂಸದ ಡಾ. ಶ್ರೀಕಾಂತ್ ಏಕನಾಥ ಶಿಂದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದ ಡಾ. ಶ್ರೀಕಾಂತ್ ಏಕನಾಥ ಶಿಂದೆ, “ದೇವಿಯ ದೈವಿಕ ಶಕ್ತಿ, ಅಧರ್ಮದ ಮೇಲೆ ಧರ್ಮದ ವಿಜಯದ ಸಂಕೇತವಾಗಿರುವ ಇಂತಹ ಪೌರಾಣಿಕ ಕಲಾಪ್ರಕಾರಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಜೀವಂತವಾಗಿರಿಸಲು ಅತ್ಯಂತ ಮಹತ್ವದ್ದಾಗಿವೆ. ಭಾಷೆಯ ಗಡಿ ಮೀರಿ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕಲೆಗಳಿಗೆ ಸದಾ ಪ್ರೋತ್ಸಾಹ ಅಗತ್ಯ,” ಎಂದು ಸಂಘಟಕರಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ರಂಗವೇರಿದ ಪೌರಾಣಿಕ ವೈಭವ: ಶ್ರೀ ಭೈರವೀ ಯಕ್ಷಕಲಾಸದನ ಪ್ರಸ್ತುತಪಡಿಸಿದ, ಗಣೇಶ್ ಡಿ. ಶೆಟ್ಟಿ ಎಲಂಗೂರು ಗುತ್ತು ಅವರ ನಿರ್ದೇಶನ ಹಾಗೂ ಎಂ.ಟಿ. ಪೂಜಾರಿ ಅವರ ರಚನೆಯ ಈ ಪ್ರಸಂಗವು ಸಾಂಪ್ರದಾಯಿಕ ಕಲಾ ಶ್ರೀಮಂತಿಕೆಯನ್ನು ಬಿಂಬಿಸಿತು.

ಹಿಮ್ಮೇಳದಲ್ಲಿ ತೆಂಕು–ಬಡಗಿನ ಗಾನ ಸುರಭಿ ರಾಘವೇಂದ್ರ ಭಟ್ ಮಾಳ ಅವರ ಭಾಗವತಿಕೆ, ಹಿರಿಯ ಮದ್ದಳೆಯ ಮಾಂತ್ರಿಕ ಮಧುಸೂದನ್ ಪಾಲನ್ ಅವರ ಮದ್ದಳೆ, ಚೆಂಡೆಯ ಗಂಡುಗಲಿ ನಿಶಿತ್ ಸುವರ್ಣ ಅವರ ಚಂಡೆ ಹಾಗೂ ಯುವಪ್ರತಿಭೆ ರಕ್ಷಿತ್ ಶೆಟ್ಟಿ ಅವರ ಚಕ್ರತಾಳದ ನಿನಾದ ರಂಗಸ್ಥಳಕ್ಕೆ ಜೀವತುಂಬಿತು.

ಮುಮ್ಮೇಳದಲ್ಲಿ ಮಹಿಷಮರ್ದಿನಿಯಾಗಿ ತೆಂಕು-ಬಡಗಿನ ನಾಟ್ಯ ವಿಶಾರದ ಗಣೇಶ್ ಡಿ. ಶೆಟ್ಟಿ ಕಟೀಲು ಅವರ ಅಭಿನಯ ಹಾಗೂ ನರ್ತನ ನೆರೆದಿದ್ದವರ ಕಣ್ಮನ ಸೆಳೆಯಿತು. ಮಹಿಷಾಸುರನಾಗಿ ಪ್ರಸಾದ್ ಪೂಜಾರಿ ಅವರ ದಿಗಿಣವೀರ ನರ್ತನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ದೇವೇಂದ್ರನಾಗಿ ಮಾನಸ್ ಶೆಟ್ಟಿ, ಅಗ್ನಿಯಾಗಿ ವಂಶಿಕ್ ಪೂಜಾರಿ, ವರುಣನಾಗಿ ಶೌರ್ಯ ಪೂಜಾರಿ, ವಾಯುವಾಗಿ ಶ್ರೇಯಸ್ ಶೆಟ್ಟಿ, ಮಾಲಿನಿಯಾಗಿ ಪ್ರಕಾಶ್ ಶೆವ್ಡೆ, ಸುಪಾರ್ಶ್ವಕನಾಗಿ ಕೃಷ್ಣ ನಾಯಕ್ ಕಡ್ತಲ, ಮಾಲಿನಿ ದೂತನಾಗಿ ರಾಜಾ ತುಂಬೆ, ಬ್ರಹ್ಮನಾಗಿ ರಮೇಶ್ ಬಿರ್ತಿ, ವಿಷ್ಣುವಾಗಿ ಶೌರ್ಯ ಪೂಜಾರಿ, ಮಹೇಶ್ವರನಾಗಿ ವಂಶಿಕ್ ಪೂಜಾರಿ, ಶಂಕಾಸುರನಾಗಿ ದಿನೇಶ್ ಪೂಜಾರಿ, ದುರ್ಗಾಸುರನಾಗಿ ಚಿನ್ಮಯ್ ಸಾಲ್ಯಾನ್, ಬಿಡಲಾಸುರನಾಗಿ ಕೃಷ್ಣ ಪೂಜಾರಿ ಹಾಗೂ ಸಿಂಹದ ಪಾತ್ರದಲ್ಲಿ ಪ್ರದೀಪ್ ರೈ ಮತ್ತು ಹರೀಶ್ ಪೂಜಾರಿ ತಮ್ಮ ಪ್ರಬುದ್ಧ ಅಭಿನಯದಿಂದ ಪಾತ್ರಗಳಿಗೆ ನ್ಯಾಯ ಒದಗಿಸಿದರು.

ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿ ಮುಂಬಯಿಯ ರಾಜೇಶ್ ದೇವಾಡಿಗ, ಸುನೀಲ್ ಅಮೀನ್, ಸಂದೀಪ್ ಬುನ್ನನ್, ನಿಖಿಲ್ ದೇವಾಡಿಗ, ಸಾಕೇತ್ ಕದಮ್ ಮತ್ತಿತರರು ರಂಗ ಸಜ್ಜಿಕೆ, ಪ್ರಸಾದನ ಹಾಗೂ ಸಂಪೂರ್ಣ ಸಹಕಾರ ನೀಡಿದರು.

ನವಕುಂಡಾತ್ಮಕ ಸಹಸ್ರಚಂಡಿ ಮಹಾಯಾಗ, ಹರಿಪಾಠ, ಭಜನೆ ಮತ್ತು ಭಕ್ತಿ ಸಂಗೀತದೊಂದಿಗೆ ಕಳೆಗಟ್ಟಿದ ಈ ಉತ್ಸವದಲ್ಲಿ ಆಗಮಿಸಿದ ಸಮಸ್ತ ಸಾರ್ವಜನಿಕರಿಗೆ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನೆರವೇರಿತು. ಸಾಂಪ್ರದಾಯಿಕ ವೇಷಭೂಷಣ, ಆಕರ್ಷಕ ಹೆಜ್ಜೆಗಾರಿಕೆ ಹಾಗೂ ಭಕ್ತಿಭಾವಗಳ ಸಮ್ಮಿಲನವಾಗಿದ್ದ ಈ ಮರಾಠಿ ಯಕ್ಷಗಾನವು ಕಲೆಯ ಮೂಲಕ ಭಾವೈಕ್ಯತೆಯನ್ನು ಸಾರುವಲ್ಲಿ ಯಶಸ್ವಿಯಾಯಿತು.

ಮರಾಠಿ ಯಕ್ಷಗಾನಕ್ಕೆ ಅಭೂತಪೂರ್ವ ಯಶಸ್ಸು: ಕಿಕ್ಕಿರಿದು ತುಂಬಿದ ಪ್ರೇಕ್ಷಕರು

ಮಹಾನಗರ ಮುಂಬೈನಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ಮರಾಠಿ ಯಕ್ಷಗಾನ ಪ್ರದರ್ಶನವು ಅತ್ಯಂತ ವೈಭವದಿಂದ ಜರುಗಿದ್ದು, ಪ್ರೇಕ್ಷಕರ ಅಪಾರ ಮೆಚ್ಚುಗೆಯೊಂದಿಗೆ ಅಭೂತಪೂರ್ವ ಯಶಸ್ಸು ಕಂಡಿದೆ.
​ಕಾರ್ಯಕ್ರಮದ ರಂಗಸ್ಥಳ ಹಾಗೂ ಸಭಾಂಗಣವು ಸಂಪೂರ್ಣವಾಗಿ ಭರ್ತಿಯಾಗಿದ್ದು (ಹೌಸ್‌ಫುಲ್‌), ಮರಾಠಿ ಭಾಷಿಕರು ಸೇರಿದಂತೆ ನೆರೆದಿದ್ದ ಸಮಸ್ತ ಕಲಾಭಿಮಾನಿಗಳಿಗೆ ಇಂತಹ ಅದ್ಭುತ ಪ್ರದರ್ಶನವನ್ನು ಎಂದಿಗೂ ಮರೆಯಲಾಗದಂತೆ ಕಲಾವಿದರು ಕಟ್ಟಿ ಕೊಟ್ಟಿದ್ದಾರೆ.


​ಮುಂಬೈ ನಗರದಲ್ಲಿ ಮೊದಲ ಬಾರಿಗೆ ನಡೆದ ಈ ಮರಾಠಿ ಯಕ್ಷಗಾನಕ್ಕೆ ಸಿಕ್ಕಿರುವ ಅಗಾಧ ಪ್ರತಿಕ್ರಿಯೆ ಮತ್ತು ಯಶಸ್ಸಿನಿಂದಾಗಿ ಇಡೀ ಕಾರ್ಯಕ್ರಮವು ಸಂಭ್ರಮದ ಅಲೆಯಲ್ಲಿ ತೇಲಿತು. ಪ್ರದರ್ಶನದ ಯಶಸ್ಸು ರಂಗದ ಮೇಲಿದ್ದ ಕಲಾವಿದರಲ್ಲಿ ಮತ್ತು ವೀಕ್ಷಕರಲ್ಲಿದ್ದ ಜನರಲ್ಲಿ ಅಪಾರ ಸಂತಸ ಹಾಗೂ ಉತ್ಸಾಹವನ್ನು ತುಂಬಿತ್ತು.


​ರಾತ್ರಿ ಒಂದು ಗಂಟೆಯವರೆಗೂ ರಂಗಸ್ಥಳದ ಎದುರು ಕುಳಿತಿದ್ದ ಪ್ರೇಕ್ಷಕರು, ಕೊನೆಯವರೆಗೂ ಅಷ್ಟೇ ಉತ್ಸಾಹ ಹಾಗೂ ಖುಷಿಯಿಂದ ಪ್ರದರ್ಶನವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.

​ಈ ಕಾರ್ಯಕ್ರಮದ ಸಹಕಾರ ಹಾಗೂ ಸಂಯೋಜನೆಯನ್ನು ವಹಿಸಿದ್ದ ಶಿವಸೇನಾ ದಕ್ಷಿಣ ಭಾರತೀಯ ವಿಭಾಗದ ಅಧ್ಯಕ್ಷರಾದ ಸುಭಾಷ್ ಶೆಟ್ಟಿ ಇನ್ನಂಜೆ ಹಾಗೂ ಮಹಿಳಾ ಅಧ್ಯಕ್ಷರಾದ ಅನುಪಮಾ ಶೆಟ್ಟಿ ಅವರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.



Related posts

ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಅಂಧೇರಿ ಪಶ್ಚಿಮ – 35ನೇ ವಾರ್ಷಿಕ ಮಹಾಪೂಜೆ ಸಂಪನ್ನ, ಹಿರಿಯ ಸೇವಾ ಕರ್ತರಿಗೆ ಗೌರವ

Mumbai News Desk

ಮುಂಬೈ ಪೈಧೋನಿ ಕುಟುಂಬದ ಸಾವು: ಕಲ್ಲಂಗಡಿಯಲ್ಲಿ ಇಲಿ ವಿಷ ಪತ್ತೆಯಾಗಿರುವುದು ಜೆಜೆ ಆಸ್ಪತ್ರೆಯ ವರದಿಯಿಂದ ದೃಢ

Mumbai News Desk

ಶ್ರೀನಿವಾಸ ಫೌಂಡೇಶನ್, ಮುಂಬೈ ಹಾಗೂ ವಿಶ್ವ ಗಾಣಿಗರ ಚಾವಡಿ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 6 6ವಿದ್ಯಾರ್ಥಿಗಳಿಗೆ ₹11 ಲಕ್ಷ ವಿದ್ಯಾರ್ಥಿ ವೇತನ –26 ಬಡ ಕುಟುಂಬಗಳಿಗೆ ಅನ್ನಪೂರ್ಣ ಭಾಗ್ಯ

Mumbai News Desk

ಶ್ರೀ ಜೈ ಭವಾನಿ ಶನೀಶ್ವರ ಮಂದಿರ ಅಜ್ದೇಗಾಂವ್, ಡೊಂಬಿವಲಿ – 35 ನೇ ವಾರ್ಷಿಕ ಶ್ರೀ ಶನಿ ಮಹಾಪೂಜೆ.

Mumbai News Desk

ಪ್ರಣವ್ ಬಿ.ಕೋಟ್ಯಾನ್ ಗೆ ಶೇ. 95.60 ಅಂಕ.

Mumbai News Desk

ಕರ್ನಾಟಕ : ಎಸ್ ಎಸ್ ಎಲ್ ಸಿ ಫಲಿತಾಂಶ- ಪ್ರೇಕ್ಷಾ ವಿ ಪೂಜಾರಿ ಗೆ ಶೇ.94.80 ಅಂಕ

Mumbai News Desk