
ಕಾಪು: ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಆರನೇ ದಿನ ಮಾತೃ ವೈಭವ ಸೇವಾ ಸಮಿತಿ ಮುಂಬೈ ವಲಯದ ವತಿಯಿಂದ ಚಂಡಿಕಾಯಾಗ, ಘಂಟಾನಾದ ಸೇವೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮಾತೃ ವೈಭವ ಸೇವಾ ಸಮಿತಿಯ ಉಪಾಧ್ಯಕ್ಷ ಉದಯ ಸುಂದರ್ ಶೆಟ್ಟಿ ಅವರ ನೇತೃತ್ವದಲ್ಲಿ ಮುಂಬೈ ಸಮಿತಿಯ ಸದಸ್ಯರು ಮತ್ತು ಮುಂಬೈನ ಅಮ್ಮನ ಭಕ್ತರ ಪರವಾಗಿ ವಿವಿಧ ಸೇವೆಗಳನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಆಹ್ವಾನಿತ ತಂಡಗಳ ಕುಣಿತ ಭಜನಾ ಸ್ಪರ್ಧೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 15 ತಂಡಗಳು ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ಹೊಸಬೆಟ್ಟು ಕುಳಾಯಿಯ ಬಾಲ ವಿಕಾಸ ಕುಣಿತ ಭಜನಾ ಮಂಡಳಿ ಪ್ರಥಮ, ಉಜಿರೆ ಬೆಳ್ತಂಗಡಿಯ ಶ್ರೀ ಜನಾರ್ದನ ಸ್ವಾಮಿ ಕುಣಿತ ಭಜನಾ ಮಂಡಳಿ ದ್ವಿತೀಯ, ಪೊಳಲಿ ಕಾಂಜಲಕೋಡಿಯ ಈಶ್ವರಿ ಭಜನಾ ಮಂಡಳಿ ತೃತೀಯ ಹಾಗೂ ಬೈಕಂಪಾಡಿ ಮಂಗಳೂರಿನ ಶ್ರೀ ಶೇಷಶಯನ ಭಜನಾ ತಂಡ ಚತುರ್ಥ ಸ್ಥಾನ ಪಡೆದುಕೊಂಡವು.
ಬಹುಮಾನ ವಿತರಣೆ ಮತ್ತು ಸಮಾರೋಪ ಸಭೆಯಲ್ಲಿ ದೇವಳದ ಪ್ರಧಾನ ತಂತ್ರಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿಗಳು ಸ್ಪರ್ಧಾಳುಗಳಿಗೆ ಹಾಗೂ ಭಕ್ತರಿಗೆ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಕುಣಿತ ಭಜನಾ ಸ್ಪರ್ಧೆಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿ ಮಾತೃ ವೈಭವ ಸೇವಾ ಸಮಿತಿ ಮುಂಬೈ ವಲಯದ ನವಿಮುಂಬೈ ಘಟಕದ ಮುಖ್ಯ ಸಂಚಾಲಕ ಖಾಂದೇಶ್ ಭಾಸ್ಕರ್ ಶೆಟ್ಟಿ, ಮಂಗಳೂರು ಮೀನುಗಾರಿಕಾ ಅಭಿವೃದ್ಧಿ ನಿಗಮ ಮತ್ತು ಮಂಗಳೂರು ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಜಿ. ಸಂತೋಷ್ ಕುಮಾರ್ (ಕೆಎಎಸ್), ಡಾ. ಹೇಮಲತಾ ಹಾಗೂ ಕುಣಿತ ಭಜನಾ ಸ್ಪರ್ಧೆಯ ನಿರ್ವಹಣೆ ವಹಿಸಿದ್ದ ರಮೇಶ್ ಕಲ್ಮಾಡಿ, ಸಾವಿತ್ರಿ ಗಣೇಶ್, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ ಮತ್ತು ರೇಣುಕಾ ಜೋಗಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನವರಾತ್ರಿಯ ಆರನೇ ದಿನದ ಕಾರ್ಯಕ್ರಮಗಳ ಪ್ರಾಯೋಜಕರಾದ ಮುಂಬೈ ಸಮಿತಿಯ ಉದಯ ಸುಂದರ್ ಶೆಟ್ಟಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಶಿವಣ್ಣ ಬಾಯಾರ್ ಕಾರ್ಯಕ್ರಮ ನಿರೂಪಿಸಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಹಾಗೂ ಸಾಂಸ್ಕೃತಿಕ ನಿರ್ದೇಶಕ ಮಾಧವ ಆರ್. ಪಾಲನ್ ಧನ್ಯವಾದ ಸಮರ್ಪಿಸಿದರು.



